ಮಂಗಳೂರು/ನವದೆಹಲಿ: ಪಬ್‌ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಅದಕ್ಕೆ ಕಾರಣ ಭಾರತ ಸರ್ಕಾರ ನಿನ್ನೆ ಕೈಗೊಂಡ ಆ ಒಂದು ಕಠಿಣ ಕ್ರಮ.

ಹೌದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಉಗ್ರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಸರ್ಕಾರ ಅನುಮಾನ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಮಿತಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಇದರ ಪ್ರಕಾರ ಪಾಕಿಸ್ತಾನಕ್ಕೆ ಹೋಗಿರುವ ಭಾರತ ಪ್ರಜೆಗಳು ಮೇ.1ರ ಒಳಗಾಗಿ ಭಾರತಕ್ಕೆ ಮರಳಬೇಕು. ಅಲ್ಲದೇ ಭಾರತದಲ್ಲಿರೋ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ. ಹೀಗಾಗಿ ಅನಧಿಕೃತವಾಗಿ ಭಾರತಕ್ಕೆ ಬಂದು ಇಲ್ಲಿಯೇ ಮತ್ತೊಂದು ಮದುವೆಯಾಗಿ ಮಗುವನ್ನು ಕೂಡ ಹೆತ್ತಿರುವ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಚರ್ಚೆಯಾಗುತ್ತಿದೆ.
ಈ ಬಗ್ಗೆ ನೆಟ್ಟಿಗರು ಅಕ್ರಮವಾಗಿ ಭಾರತಕ್ಕೆ ಬಂದ ಆಕೆಯನ್ನು ವಾಪಸ್ ಪಾಕಿಸ್ತಾನಕ್ಕೆ ಕಳುಹಿಸುವಂತೆ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗಲೇ ಪಾಕಿಸ್ತಾನದಲ್ಲಿರುವ ಆಕೆಯ ಮಾಜಿ ಪತಿ ಗುಲಾಂ ಹೈದರ್ ಅವರ ವೀಡಿಯೋವೊಂದು ವೈರಲ್ ಆಗಿದೆ.
ಸೀಮಾ ಹೈದರ್ ಮಾಜಿ ಪತಿ ಹೇಳಿದ್ದೇನು?
ಸೀಮಾ ಹೈದರ್ ಅವರ ಮೊದಲ ಪತಿ ಗುಲಾಮ್ ಹೈದರ್ ವೀಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ಅವರು ಹೀಗೆ ಹೇಳಿದ್ದಾರೆ. ‘ಇಂದಿಗೂ ನಾನು ಸೀಮಾ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕೆಂದು ಹೇಳಲು ಬಯಸುತ್ತೇನೆ. ಕಳೆದ ಎರಡು ವರ್ಷಗಳಿಂದ ನಾನು ನನ್ನ ಮಕ್ಕಳಿಗಾಗಿ ಹಾತೊರೆಯುತ್ತಿದ್ದೇನೆ. ಭಾರತ ಸರ್ಕಾರ ನನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಬೇಕು. ಸೀಮಾಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಾಧ್ಯವಾಗದಿದ್ದರೆ, ಅವಳನ್ನು ಅಲ್ಲಿಯೇ ಶಿಕ್ಷಿಸಿ. ಅವಳಿಗೆ ಸಹಾಯ ಮಾಡುತ್ತಿರುವವನಿಗೆ, ಅಂದರೆ ಅವಳ ದತ್ತು ಸಹೋದರ ಎಪಿ ಸಿಂಗ್‌ಗೆ ನಾಚಿಕೆಯಾಗಬೇಕು ಎಂದು ಸೀಮಾ ಹೈದರ್‌ಳ ಪಾಕಿಸ್ತಾನಿ ಪತಿ ವೀಡಿಯೋದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಪಾಕ್ ಟು ಭಾರತ ಲವ್ ಸ್ಟೋರಿ; ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್
ಇನ್ನು ಸೀಮಾ ಹೈದರ್‌ನ್ನು ದತ್ತು ತಂಗಿಯಾಗಿ ಪಡೆದಿರುವ ಸುಪ್ರೀಂಕೋರ್ಟ್ ವಕೀಲ ಎಪಿ ಸಿಂಗ್ ವಿರುದ್ದ ಗುಲಾಮ್ ಹೈದರ್ ಕಿಡಿಕಾರಿದ್ದಾರೆ. ‘ವಕೀಲ ಎಪಿ ಸಿಂಗ್‌ಗೆ ನಾಚಿಕೆಯಾಗಬೇಕು. ಅವನೊಳಗೆ ಮಾನವೀಯತೆ ಸತ್ತುಹೋಗಿದೆ. ಅವನು ಮನುಷ್ಯ ಎಂದು ಕರೆಯಲು ಅರ್ಹನಲ್ಲ. ಸೀಮಾ ಅವನಿಗಿಂತಲೂ ಹೆಚ್ಚು ನಾಚಿಕೆಯಿಲ್ಲದವಳು. ನನ್ನ ಮಕ್ಕಳಿಗೆ ರಕ್ತಸಂಬಂಧವೂ ಇಲ್ಲದ ಸಚಿನ್ ಮತ್ತು ನೇತ್ರಪಾಲ್ ಅವರೊಂದಿಗೆ ಆಕೆ ಇದ್ದಾಳೆ. ಆದರೆ, ನನಗೆ ನನ್ನ ಮಕ್ಕಳೊಂದಿಗೆ ರಕ್ತಸಂಬಂಧವಿದೆ ಮತ್ತು ನನ್ನ ಮಕ್ಕಳಿಂದ ದೂರವಿರುವವನು ನಾನೇ’ ಎಂದು ಸೀಮಾಳ ಪಾಕಿಸ್ತಾನಿ ಪತಿ ಗುಲಾಂ ಹೈದರ್ ಬೇಸರ ವ್ಯಕ್ತಪಡಿಸಿದ್ದಾನೆ.
‘ನನ್ನ ಮಕ್ಕಳನ್ನು ಮರಳಿ ಕಳುಹಿಸುವಂತೆ ಬೇಡಿಕೆ ಇಟ್ಟಿರುವ ಆತ ಕಾಲಿನಲ್ಲಿದ್ದ ಚಪ್ಪಲಿಯನ್ನು ವೀಡಿಯೋದಲ್ಲಿ ತೋರಿಸಿದ್ದು, ಸೀಮಾ ಹಾಗೂ ವಕೀಲ ಎಪಿ ಸಿಂಗ್ ನನ್ನ ಮುಂದೆ ಬಂದರೆ ನಾನು ಅವರನ್ನು ಕೆಟ್ಟದಾಗಿ ಹೊಡೆಯುತ್ತೇನೆ’ ಎಂದು ಹೇಳಿದ್ದಾನೆ.
ಸೀಮಾ ಹೈದರ್ ಹಾಗೂ ಲಾಯರ್ ಎಪಿ ಸಿಂಗ್ ವಿರುದ್ದ ಆಕ್ರೋಶಗೊಂಡಿರುವ ಮಾಜಿ ಪತಿ ಗುಲಾಂ ಹೈದರ್, ತನ್ನ ಮಕ್ಕಳನ್ನು ನೋಡಬೇಕು ಎಂದು ಹಂಬಲಿಸುತ್ತಿದ್ದಾನೆ. ಇನ್ನೊಂದೆಡೆ ಭಾರತ ಸರ್ಕಾರದ ಹೊಸ ಆದೇಶ ಸೀಮಾ ಹೈದರ್ ಮತ್ತು ಪತಿ ಸಚಿನ್ ಮೀನಾ ತಲೆನೋವಿಗೆ ಕಾರಣವಾಗಿದೆ.