ಯು.ಎ.ಇ ಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಅನಿವಾಸಿ ಕನ್ನಡಿಗರ ಸಹಾಯಕ್ಕೆ ಧಾವಿಸಿದ ‘ಕನ್ನಡಿಗಾಸ್ ಹೆಲ್ಪ್ ಲೈನ್’
ಯು.ಎ.ಇ: ಕೊರೊನಾ ವೈರಸ್ ಸೋಂಕಿನಿಂದ ಇಡೀ ಜಗತ್ತೇ ತತ್ತರಿಸುತ್ತಿದ್ದ ಸಂದರ್ಭದಲ್ಲಿ ಯು.ಎ.ಇ ಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡ ಸಹಾಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅನಿವಾಸಿ ಉದ್ಯಮಿಗಳಾದ ನವೀದ್ ಮಾಗುಂಡಿ ಮತ್ತು ಹಿದಾಯತ್ ಅಡ್ಡೂರ್ ಅವರ ‘ಕನ್ನಡಿಗಾಸ್ ಹೆಲ್ಪ್ ಲೈನ್’ಗೆ ಕರ್ನಾಟಕ ಎನ್ ಆರ್ ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸೇರಿದಂತೆ ಚಂದ್ರಶೇಖರ್ ಲಿಂಗದಹಳ್ಳಿ,
ಇಮ್ರಾನ್ ಖಾನ್, ದಯಾ ಕಿರೋಡಿಯನ್, ಹರೀಶ್ ಶೇರಿಗಾರ್, ಸುನೀಲ್ ಅಂಬಲವೆಲೀಲ್, ಅಶ್ರಫ್ ಕೆ.ಎಂ, ಯೂಸುಫ್ ಬರ್ಮಾವರ್ ಸೇರಿದಂತೆ ಇನ್ನಿತರ 20 ಸಮಾನ ಮನಸ್ಕರೊಂದಿಗೆ ತಂಡವಾಗಿ ರೂಪುಗೊಂಡು ನಿರಂತರವಾಗಿ ಅನಿವಾಸಿ ಕನ್ನಡಿಗರಿಗೆ ಸಹಾಯ ಹಸ್ತ ಚಾಚಿದೆ.
ಮಾತ್ರವಲ್ಲ ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಫುಡ್ ಕಿಟ್ ಮೂಲಕ ಸಾವಿರಾರು ಕನ್ನಡಿಗರ ಹಸಿವನ್ನು ನೀಗಿಸುವ ಪುಣ್ಯದ ಕೆಲಸ ನಡೆದಿದೆ.

ಇನ್ನು ಕೇಂದ್ರ ಸರ್ಕಾರ ಅನಿವಾಸಿ ಭಾರತೀಯರನ್ನು ವಾಪಸ್ ಕರೆತರಲು ಉದ್ದೇಶಿಸಿ ವಿಮಾನ ಪ್ರಯಾಣದ ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಕರ್ನಾಟಕಕ್ಕೆ ಒಂದೂ ವಿಮಾನವಿಲ್ಲದ್ದನ್ನು ಕಂಡು,
ಕೇಂದ್ರ ಸರ್ಕಾರದಿಂದ ಕನ್ನಡಿಗರ ನಿರ್ಲಕ್ಷ್ಯತೆಯ ಬಗ್ಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಗಮನ ಸೆಳೆದು ಕರ್ನಾಟಕಕ್ಕೆ ಒಂದು ವಿಮಾನವನ್ನು ಸೇರಿಸಲು ಒತ್ತಾಯಿಸಿದರು.
ನಂತರ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಜೊತೆ ಮಾತುಕತೆ ನಡೆಸಿ, ಗರ್ಭಿಣಿಯರು ಹಾಗೂ ವೈದ್ಯಕೀಯ ಚಿಕಿತ್ಸೆಗೆ ತೆರಳುವವರ ಬಗ್ಗೆ ವಿವರಿಸಿದಾಗ,
12ನೇ ತಾರೀಕಿನಂದು ದುಬೈನಿಂದ ಮಂಗಳೂರಿಗೆ ವಿಮಾನದ ಮೂಲಕ ಅನಿವಾಸಿ ಕನ್ನಡಿಗರನ್ನ ರಾಜ್ಯಕ್ಕೆ ಕರೆ ತರುವಲ್ಲಿ ‘ಯುಎಈಯ ಕನ್ನಡಿಗಾಸ್ ಹೆಲ್ಪ್ ಲೈನ್’ ಮಹತ್ವದ ಪಾತ್ರ ವಹಿಸಿದೆ.
ತಮ್ಮ ಕೈಲಾದ ಸಹಾಯ ಮಾಡುವ ಹಂಬಲದೊಂದಿಗೆ ಹುಟ್ಟಿಕೊಂಡ ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡ ಮಾಡಿದ ಕನ್ನಡಿಗರ ಸೇವೆ ಹಾಗೂ ಸತತ ಪ್ರಯತ್ನದಿಂದ ಸಾಧಿಸಿದ ಕೆಲವು ಸಫಲತೆಯಿಂದ,
ಕೇಂದ್ರ ಸಚಿವರೇ,’ನಿಮ್ಮ ಸೇವೆಯನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತರುವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುವ ಮಟ್ಟಕ್ಕೆ ಬೆಳೆದು ಪ್ರಪಂಚದಾದ್ಯಂತ ಎಲ್ಲಾ ಅನಿವಾಸಿ ಸಂಘಟನೆಗಳಿಗೂ ಮಾದರಿಯಾಗಿದೆ.
ಯುಎಈಯಲ್ಲಿರುವ ಕನ್ನಡಿಗರ ಸ್ಥಿತಿಗತಿಗಳ ಕುರಿತು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಆರತಿ ಕೃಷ್ಣ ಅವರ ಜೊತೆಗೂಡಿ ದುಬೈ ಕಾನ್ಸುಲೇಟ್ ಜನರಲ್ ವಿಪುಲ್ ಷಾ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ,
ಈ ಸಂಘದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದಾಗ, ಈ ಸಂಕಷ್ಟದ ಸಮಯದಲ್ಲಿ ಇಂತಹ ಸಮುದಾಯ ಸೇವೆ ಪ್ರಶಂಸನೀಯ ಎಂದು ಹುರಿದುಂಬಿಸಿದ್ದಾರೆ.
www.uaekannadahelpline.club ಎಂಬ ವೆಬ್ ಸೈಟ್ ಮೂಲಕ ಕನ್ನಡಿಗರಿಗೆ ನೇರವಾಗಿ ತಲುಪಿದ ‘ಕನ್ನಡಿಗಾಸ್ ಹೆಲ್ಪ್ ಲೈನ್’,
ಅದರಲ್ಲಿ ರಿಜಿಸ್ಟರ್ ಮಾಡಿದ ಸುಮಾರು 5000ಕ್ಕೂ ಹೆಚ್ಚಿನ ಕನ್ನಡಿಗರಿಗೆ ಹಿದಾಯತ್ ಅಡ್ಡೂರ್ ನೇತೃತ್ವದಲ್ಲಿ ಆಹಾರದ ಅವಶ್ಯಕತೆ ಪೂರೈಕೆ, ವೈದ್ಯಕೀಯ ಸೌಲಭ್ಯ ಕುರಿತು ಮಾಹಿತಿ ದಯಾ ಕಿರೋಡಿಯನ್,
ಹಾಗೂ ಅಡ್ವೋಕೇಟ್ ಸುನೀಲ್ ಅಂಬಲವೆಲೀಲ್ ನೇತೃತ್ವದಲ್ಲಿ ಕಾನೂನಾತ್ಮಕ ಸಮಸ್ಯೆಗೆ ಸಲಹೆ ಹಾಗೂ ಪರಿಹಾರ ಹೀಗೆ ವಿವಿಧ ರೀತಿಯಲ್ಲಿ ಕಾರ್ಯಪ್ರವೃತ್ತರಾಯಿತು.
ನೂರಾರು ಸಂಖ್ಯೆಯಲ್ಲಿ ಬರುವ ಎಲ್ಲಾ ಎಮರ್ಜೆನ್ಸಿ ಸಮಸ್ಯೆಗಳ ಕುರಿತಾದ ಫೋನ್ ಕರೆಗಳಿಗೆ ಪ್ರವೀಣ್ ಶೆಟ್ಟಿ ಮತ್ತು ನವೀದ್ ಮಾಗುಂಡಿ, ಹರೀಶ್ ಶೇರಿಗಾರ್, ಯೂಸುಫ್ ಬರ್ಮಾವೆರ್ ಸ್ಪಂದಿಸಿ ಸೂಕ್ತ ಸಲಹೆ ನೀಡುತ್ತಿದ್ದರು.
ದೈನಂದಿನವಾಗಿ ರಿಜಿಸ್ಟರ್ ಮಾಡುತ್ತಿದ್ದವರ ಪಟ್ಟಿಯಲ್ಲಿದ್ದ ಪ್ರತಿಯೊಬ್ಬ ಕನ್ನಡಿಗರಿಗೂ ನವೀದ್, ಹಿದಾಯತ್, ಇಮ್ರಾನ್ ಕರೆ ಮಾಡಿ ಅವರ ಕುಶಲೋಪರಿ ವಿಚಾರಿಸಿ,
ಧೈರ್ಯ ತುಂಬಿ, ವಿಳಾಸ ಪಡೆದು ನಂತರ ಯುಎಈಯ ಎಲ್ಲಾ 7 ರಾಜ್ಯಗಳಿಗೂ ತಂಡದ ಸ್ವಯಂಸೇವಕರ ಮೂಲಕ ‘ಫುಡ್ ಕಿಟ್’ ತಲುಪಿಸಲಾಗುತ್ತಿತ್ತು.
ಅಫ್ಜಲ್ ಭಟ್ಕಳ್, ನೋಯೆಲ್ ಅಲ್ಮೇಡಾ, ಅಶ್ರಫ್ ಕೆ ಎಂ ನೇತೃತ್ವದಲ್ಲಿ ದುಬೈನಲ್ಲಿ ಫುಡ್ ಕಿಟ್ ಪೂರೈಕೆ ನಡೆದರೆ, ಶಶಿಧರ ನಾಗರಾಜಪ್ಪ, ಇಮ್ರಾನ್ ನೇತೃತ್ವದಲ್ಲಿ ಶಾರ್ಜಾದಲ್ಲಿ,
ಯಶವಂತ್ ಕರ್ಕೇರಾ ಅಜ್ಮಾನ್ ನಲ್ಲಿ, ಸಿರಾಜ್ ಪರ್ಲಡ್ಕ ಅಬುಧಾಬಿಯಲ್ಲಿ, ಜಾನ್ಸನ್ ಫುಜೇರಾದಲ್ಲಿ, ಅಲ್ತಾಫ್ ಹುಸೇನ್ ರಾಸ್ ಅಲ್ ಖೈಮಾದಲ್ಲಿ ಫುಡ್ ಕಿಟ್ ಪೂರೈಕೆ ಬಹಳಷ್ಟು ವ್ಯವಸ್ಥಿತವಾಗಿ ಈಗಲೂ ನಿರಂತರವಾಗಿ ನಡೆಯುತ್ತಿದ್ದು, ಸಾವಿರಾರು ಕನ್ನಡಿಗರ ಹಸಿವನ್ನು ನೀಗಿಸಿದೆ.
ಕನ್ನಡಿಗರ ಸಮಸ್ಯೆಗಳ ಕುರಿತು ಕರ್ನಾಟಕ ಸರ್ಕಾರಕ್ಕೂ ಮನದಟ್ಟು ಮಾಡಬೇಕಾಗಿತ್ತು, ಹಾಗಾಗಿ ಬಸವ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಲಿಂಗದಹಳ್ಳಿ ಮೂಲಕ,
ಡಿಸಿಎಂ ಡಾ.ಸಿ.ಎನ್ ಅಶ್ವಥನಾರಾಯಣ್ ರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ,
ಶೀಘ್ರವೇ ಯುಎಇ ಯಿಂದ ರಾಜ್ಯಕ್ಕೆ ವಿಮಾನ ಪ್ರಯಾಣ, ಅಶಕ್ತರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ, ಕೆಲಸ ಕಳೆದುಕೊಂಡ ಅನಿವಾಸಿಗಳ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸ, ಉದ್ಯೋಗ ಸೌಲಭ್ಯ ಮುಂತಾದ ಬೇಡಿಕೆ ಇಟ್ಟರು.
ಈ ಎಲ್ಲಾ ಬೇಡಿಕೆಗೆ ಡಿಸಿಂ ಸಕಾರಾತ್ಮಕವಾಗಿ ಸ್ಪಂದಿಸಿ, ಈಡೇರಿಸುವ ಭರವಸೆ ನೀಡಿದರು.
ಸದ್ಯ ಈ ತಂಡದ ಸಾಧನೆಯಲ್ಲಿ ಪ್ರತಿಯೊಬ್ಬರೂ ಸಮಾನವಾದ ಪಾಲುದಾರರು, ಕಾನ್ಸುಲೇಟ್ ಮತ್ತು ಸರ್ಕಾರದೊಂದಿಗೆ ಪತ್ರ ಬರೆಯುವ ಕೆಲಸವನ್ನು ಪ್ರವೀಣ್ ಶೆಟ್ಟಿ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಬಸವ ಸಮಿತಿಯ ಚಂದ್ರಶೇಖರ್ ಲಿಂಗದಹಳ್ಳಿಯವರು ಕೇಂದ್ರ ಮತ್ತು ರಾಜ್ಯ ಸಚಿವರನ್ನು ನಿರಂತರ ಸಂಪರ್ಕಿದಲ್ಲಿದ್ದರು.
ಫುಡ್ ಕಿಟ್ ನೀಡುವಾಗ ಯಾವುದೇ ಫೋಟೋ ತೆಗೆಯೋದಿಲ್ಲ, ಅವರ ಮಾಹಿತಿಯನ್ನು ಸಾರ್ವಜನಿಕಗೊಳಿಸಿ ಮುಜುಗರಗೊಳಿಸಲ್ಲ.
ಎಲ್ಲಿಯವರೆಗೆ ಲಾಕ್ ಡೌನ್ ಮುಂದುವರೆಯಲಿದೆಯೋ ಅಲ್ಲಿಯವರೆಗೂ ಕನ್ನಡಿಗಾಸ್ ಹೆಲ್ಪ್ ಲೈನ್ ತಮ್ಮ ಸೇವೆಯನ್ನು ಮುಂದುವರೆಸಲಿದೆ ಎಂದು ದುಬೈ ಅನಿವಾಸಿ ಕನ್ನಡಿಗರು ಅಧ್ಯಕ್ಷ ನವೀದ್ ಮಾಗುಂಡಿ ಹೇಳಿದ್ದಾರೆ.