ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಎನ್ಐಟಿಕೆ, ನೇತ್ರಾವತಿ ಸೇತುವೆ, ಅದೆಷ್ಟೋ ಹೈವೇಗಳು…ಅದೆಷ್ಟೋ ಶಾಲಾ-ಕಾಲೇಜುಗಳು… ಇದರೆಲ್ಲದರ ಹಿಂದೆ ಇರುವ ಒಂದೇ ಒಂದು ಹೆಸರು ಉಳ್ಳಾಲ ಶ್ರೀನಿವಾಸ ಮಲ್ಯ.

ಯು.ಎಸ್ ಮಲ್ಯ 1902 ರಲ್ಲಿ ನಮ್ಮ ಮಂಗಳೂರಿನ ಕಾರ್ ಸ್ಟ್ರೀಟ್ ಹತ್ತಿರದ ಗೌಡ ಸಾರಸ್ವತಿ ಕುಟುಂಬದಲ್ಲಿ ಹುಟ್ಟಿದರು. ಸೈಂಟ್ ಅಲೋಶಿಯಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಲಿತು ಬಳಿಕ ಕೆನರಾ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದರು. ಸ್ವಾತಂತ್ರ್ಯ ಹೋರಾಟದ ಆ ಸಮಯದಲ್ಲಿ ಕಾರ್ನಾಡ್ ಸದಾಶಿವ ರಾವ್ ಅವರ ದೇಶಭಕ್ತರ ತ್ಯಾಗವನ್ನು ನೋಡಿ ಪ್ರೇರಿತರಾದ ಶ್ರೀನಿವಾಸ ಮಲ್ಯ ಇವರೂ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುತ್ತಾರೆ.
ಕ್ವಿಟ್ ಇಂಡಿಯಾ, ದಂಡಿಯಾತ್ರೆ ಇದರೆಲ್ಲದರಲ್ಲೂ ಪಾಲು ಪಡೆಯುತ್ತಾರೆ. ಹೀಗೆ ಹೋರಾಟದಲ್ಲೇ ಮುಂದೆ ಹೋದಂತಹ ಮಲ್ಯರಿಗೆ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ ಇವರೆಲ್ಲರೂ ಆಪ್ತರಾಗುತ್ತಾರೆ. ಭಾರತ ಸ್ವಾತಂತ್ರ್ಯ ಆದ ನಂತರ ಆದಂತಹ ಚುನಾವಣೆಯಲ್ಲಿ 1952, 1957 ಮತ್ತು 1962 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾರೆ.
ಜನಪ್ರತಿನಿಧಿ ಒಬ್ಬನಿಗೆ ಕೆಲಸ ಮಾಡುವ ಇಚ್ಛಾಶಕ್ತಿ ಒಂದಿದ್ದರೆ ಯಾವ ರೀತಿಯ ಕ್ರಾಂತಿಯನ್ನು ಮಾಡಬಹುದು ಎಂಬುದಕ್ಕೆ ಯು.ಎಸ್ ಮಲ್ಯರು ದೊಡ್ಡ ಉದಾಹರಣೆ. ಹೌದು, ಯು. ಎಸ್ ಮಲ್ಯರು ಸಂಸದರಾಗಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು-ಹಾಸನ-ಬೆಂಗಳೂರು ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಸುರತ್ಕಲ್ನಲ್ಲಿರುವ ಎನ್ಐಟಿಕೆ, ನವಮಂಗಳೂರು ಬಂದರು, ಆಕಾಶವಾಣಿ, ಎಂ.ಸಿ.ಎಫ್, ಮಂಗಳೂರಿನ ಸಕ್ಯೂಟ್ ಹೌಸ್, ಮಂಗಳೂರು ಪುರಭವನ, ವೆನ್ಲಾಕ್ ಆಸ್ಪತ್ರೆಯ ಅಭಿವೃದ್ಧಿ, ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಗಂಗೊಳ್ಳಿ ಈ ಎಲ್ಲದರ ಸೇತುವೆ ನಿರ್ಮಾಣ, ಆಲ್ ಇಂಡಿಯಾ ಹ್ಯಾಂಡಿ ಕ್ಯಾಪ್ ಬೋರ್ಡ್, ಇಂಡಿಯಾ ಕಾರ್ಪೋರೇಟರ್ ಯೂನಿಯನ್ ಮುಖೇನ ಲಕ್ಷಾಂತರ ಜನರಿಗೆ ಉದ್ಯೋಗ ಹೀಗೆ ಹೇಳಿಕೊಂಡು ಹೋದರೆ ಅದೆಷ್ಟೋ ಇವೆ.
ಇಂತಹ ಮಹಾನ್ ವ್ಯಕ್ತಿ 1965 ರಲ್ಲಿ ಡಿಸೆಂಬರ್ 19 ರಂದು ದೆಹಲಿಯಿಂದ ಮಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಸಮಯದಲ್ಲಿ ಹೃದಯಾ*ಘಾತವಾಗುತ್ತದೆ. ಈ ಸುದ್ದಿಯನ್ನು ಕೇಳಿದಂತಹ ಅಂದಿನ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ದೆಹಲಿಗೆ ಅವರು ಇದ್ದಂತಹ ಸ್ಥಳಕ್ಕೆ ಓಡಿ ಬರುತ್ತಾರೆ. ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕಳುಹಿಸುತ್ತಾರೆ.
ಒಂದು ಕಡೆಯಲ್ಲಿ ಭಾರತ-ಪಾಕಿಸ್ತಾನ ಯುದ್ಧ ಆಗುತ್ತಿದ್ದಂತಹ ಸಮಯ ಅದು. ಮಂಗಳೂರಿನ ನೆಹರೂ ಮೈದಾನದಲ್ಲಿ ಸ್ಪಲ್ಪ ಹೊತ್ತು ಸಾರ್ವಜನಿಕ ವೀಕ್ಷಣೆಗಾಗಿ ಅವರ ಶರೀರವನ್ನು ಇಡುತ್ತಾರೆ. ಆ ಮೂಲಕವಾಗಿ ಯು.ಎಸ್. ಮಲ್ಯ ಎನ್ನುವ ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾಗುತ್ತಾರೆ.
ನಮ್ಮ ಜಿಲ್ಲೆಯ ಅಭಿವೃದ್ಧಿಯ ವಿಷಯ ಬರುವಾಗ ಉಳ್ಳಾಲ ಶ್ರೀನಿವಾಸ ಮಲ್ಯ ಎನ್ನುವ ಹೆಸರು ಯಾವಾಗಲೂ ಚಿರಸ್ಥಾಯಿ. ಇವತ್ತಿಗೂ ನಾವು ನವ ಮಂಗಳೂರು ಬಂದರಿನ ಪ್ರವೇಶ ದ್ವಾರ, ಪದುವ ಹೈಸ್ಕೂಲ್ನ ಎದುರುಗಡೆ, ಸುರತ್ಕಲ್ ಎನ್ಐಟಿಕೆ ಸ್ಮಾರಕ ಭವನ, ಪಡೀಲ್ ಸರ್ಕಲ್ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಅವರ ಶಾಶ್ವತ ಪ್ರತಿಮೆ ಹಾಗೂ ಹೆಸರನ್ನು
ನಾವು ಕಾಣಬಹುದು. ಮಂಗಳೂರಿನ ಕಾರ್ಸ್ಟ್ರೀಟ್ ನಲ್ಲಿರುವ ಒಂದು ಅಶ್ವಥ ಮರವಿದೆ. ಇದು ಯು.ಎಸ್ ಮಲ್ಯರಿಗೆ 60 ವರ್ಷ ಆದಾಗ ಅವರು ನೆಟ್ಟಂತಹ ಸಸಿ. ಒಂದು ರೀತಿಯಲ್ಲಿ ಈ ಮರವನ್ನು ಅವರ ಪ್ರತಿನಿಧಿ ಎಂದು ಹೇಳಬಹುದು.
ತನ್ನ ಸ್ವಂತಕ್ಕಾಗಿ ಯಾವುದನ್ನೂ ಮಾಡದೆ ಈ ಊರು ಒಳ್ಳೆಯದಾಗಬೇಕು, ಊರಿನ ಜನರಿಗೆ ಒಳ್ಳೆಯದಾಗಬೇಕು ಎನ್ನುವ ಭಾವನೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶಾಶ್ವತವಾದಂತಹ ಕೊಡುಗೆಯನ್ನು ನೀಡಿದಂತಹ ಮಹಾನ್ ವ್ಯಕ್ತಿ ಉಳ್ಳಾಲ ಶ್ರೀನಿವಾಸ ಮಲ್ಯ ನಮ್ಮ ಮಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ ಎನ್ನುವಂತದ್ದೇ ಹೆಮ್ಮೆ ಪಡುವ ಸಂಗತಿ.