ಮಂಗಳೂರು/ವಾಷಿಂಗ್ಟನ್: ಅಮೆರಿಕದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಮತ್ತೊಮ್ಮೆ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಟ್ರಂಪ್ ವಿರುದ್ದ ಗುಡುಗಿದ್ದಾರೆ. ಒಂದೊಮ್ಮೆ ಅಮೆರಿಕದಲ್ಲಿ ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ಗೆ ಅನುಮೋದನೆ ಸಿಕ್ಕರೆ ಮರುದಿನವೇ ಹೊಸ ಪಕ್ಷವನ್ನು ಕಟ್ಟುವುದಾಗಿ ಎಲಾನ್ ಮಸ್ಕ್ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್ ಎಕ್ಸ್, ಟೆಸ್ಲಾ ಕಂಪನಿಗಳ ಮಾಲೀಕ ಎಲಾನ್ ಮಸ್ಕ್ ಅವರನ್ನು ಅಪರೂಪದ ಜೋಡಿ ಎಂದೇ ಕರೆಯಲಾಗುತ್ತಿತ್ತು. ಒಬ್ಬರು ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾದರೆ, ಮತ್ತೊಬ್ಬರು ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರದ ಅಧ್ಯಕ್ಷ. ಆದರೆ, ಇಬ್ಬರ ನಡುವಿನ ಸ್ನೇಹಕ್ಕೆ ಒಂದು ವರ್ಷ ತುಂಬುವುದರ ಒಳಗಾಗಿ ಜೋಡಿಯ ನಡುವೆ ಮನಸ್ತಾಪ ಹುಟ್ಟಿಕೊಂಡಿದ್ದು, ಅದು ಈಗ ದ್ವೇಷ ಸಾಧಿಸುವ ಮಟ್ಟಕ್ಕೆ ಹೋಗಿದೆ.
ಇದೀಗ ಬಿಲಿಯನೇರ್ ಎಲಾನ್ ಮಸ್ಕ್ ಟ್ರಂಪ್ ವಿರುದ್ದ ಮತ್ತೊಮ್ಮೆ ತಿರುಗಿ ಬಿದ್ದಿದ್ದಾರೆ. ಈ ಮೂಲಕ ಅಮೆರಿಕ ಪಕ್ಷ ಎಂಬ ಹೊಸ ರಾಜಕೀಯ ಪಾರ್ಟಿ ಕಟ್ಟುವುದಾಗಿ ಟ್ರಂಪ್‌ಗೆ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಟ್ರಂಪ್ ವಿರುದ್ದ ಮಸ್ಕ್ ರೊಚ್ಚಿಗೆಳಲು ಕಾರಣವೇನೆಂದರೆ ಒನ್ ಬಿಗ್ ಬ್ಯೂಟಿಫುಲ್ ಹಣಕಾಸು ವಿಧೇಯಕ.
‘ಒನ್ ಬಿಗ್ ಬ್ಯೂಟಿಫುಲ್’ ಹಣಕಾಸು ವಿಧೇಯಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೆಚ್ಚಿನ ‘ಬಿಗ್ ಬ್ಯೂಟಿಫುಲ್’ ಹಣಕಾಸು ವಿಧೇಯಕಕ್ಕೆ ಅಮೆರಿಕದ ಸೆನೆಟ್‌ನಲ್ಲಿ ಅಲ್ಪ ಮತದ ಅನುಮೋದನೆ ದೊರೆತಿದೆ. ಮತದಾನದ ವೇಳೆ ಒಂದಿಷ್ಟು ನಾಟಕೀಯ ಬೆಳವಣಿಗೆಗೆಳು ನಡೆದಿದ್ದವು. ಅಂತಿಮವಾಗಿ 51-49 ಮತದಲ್ಲಿ ಬಿಗ್ ಬ್ಯೂಟಿಫುಲ್ ವಿಧೇಯಕಕ್ಕೆ ಒಪ್ಪಿಗೆ ದೊರೆಯಿತು. ಒಂದೊಮ್ಮೆ ಟೈ ಆದರೆ ವಿಧೇಯಕ ಪರವಾಗಿ ಮತ ಚಲಾಯಿಸುವುದಕ್ಕಾಗಿ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಸೆನೆಟ್‌ನಲ್ಲಿ ಹಾಜರಿದ್ದರು. ಈ ವೇಳೆ ಕೊಂಚ ಗದ್ದಲವೂ ನಡೆಯಿತು. ವಿಶೇಷ ಎಂದರೆ, ನಿರ್ಣಯದ ವಿರುದ್ದ ಡೆಮಾಕ್ರೆಟ್‌ಗಳ ಪರ ಇಬ್ಬರು ರಿಪಬ್ಲಿಕನ್ನರು ಸೇರಿದ್ದರಿಂದ ಇನ್ನಷ್ಟು ಕಗ್ಗಂಟಾಯಿತು. ಆದರೆ, ಅಂತಿಮವಾಗಿ ನಿರ್ಣಯಕ್ಕೆ ಗೆಲುವು ದೊರೆಯಿತು.
ಇದನ್ನೂ ಓದಿ: ವೆನಿಸ್ ನಗರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೆಜಾನ್ ಸಂಸ್ಥಾಪಕ
ವಿಧೇಯಕಕ್ಕೆ ಮಸ್ಕ್ ವಿರೋಧ, ಹೊಸ ಪಕ್ಷ ಕಟ್ಟುವ ಎಚ್ಚರಿಕೆ
ಈ ಮಸೂದೆ ತೆರಿಗೆದಾರರ ಮೇಲೆ ಭಾರಿ ಹೊರೆಯಾಗಲಿದೆ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಈ ಬಿಲ್‌ಗೆ ಅನುಮೋದನೆ ಸಿಕ್ಕರೆ ಜನರ ಹಿತಾಸಕ್ತಿಗಳಿಗೆ ನಿಜವಾಗಿಯೂ ಆದ್ಯತೆ ನೀಡುವ ಹೊಸ ಪಕ್ಷವನ್ನು ರಚಿಸುವುದಾಗಿ ಹೇಳಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ‘ಸಾಲದ ಮಿತಿಯನ್ನು ಐದು ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸುವ ಈ ಮಸೂದೆಯ ಹುಚ್ಚುತನದ ಖರ್ಚಿನಿಂದ ನಾವು ಏಕಪಕ್ಷೀಯ ದೇಶದಲ್ಲಿ ವಾಸಿಸುತ್ತಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಹೊಸ ರಾಜಕೀಯ ಪಕ್ಷಕ್ಕೆ ಸಮಯ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಸ್ಕ್ ರಾಜಕೀಯ ಪಕ್ಷ ಆರಂಭಿಸುತ್ತಾರೆ ಎಂಬ ವಿಚಾರ ಹೊಸದೇನಲ್ಲ. ಈ ಹಿಂದೆಯೂ ಇಂತಹ ಚರ್ಚೆಯೊಂದು ಅಮೆರಿಕದಲ್ಲಿ ನಡೆದಿತ್ತು. ಟ್ರಂಪ್ ಜೊತೆಗೆ ಸಂಬಂಧ ಹಳಸಿದ ನಂತರ ಮಸ್ಕ್ ಅವರು ‘ಎಕ್ಸ್’ನಲ್ಲಿ ತಮ್ಮ ಫಾಲೊವರ್ಸ್‌ಗೆ ಈ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದರು.
‘ಅಮೆರಿಕದ ಶೇ 80ರಷ್ಟು ಜನರನ್ನು ಪ್ರತಿನಿಧಿಸುವ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಇದು ಸರಿಯಾದ ಸಮಯವೇ’ ಎಂಬ ಪ್ರಶ್ನೆಗೆ, ‘ಎಕ್ಸ್’ನಲ್ಲಿ ಮಸ್ಕ್ ಅವರನ್ನು ಹಿಂಬಾಲಿಸುವ ಶೇ 80 ರಷ್ಟು ಮಂದಿ ‘ಹೌದು’ ಎಂದು ಉತ್ತರಿಸಿದ್ದರು. ಇದೀಗ ಮತ್ತೊಮ್ಮೆ ಹೊಸ ಪಕ್ಷದ ಕುರಿತು ಮಸ್ಕ್ ಪ್ರಸ್ತಾಪಿಸಿದ್ದು, ಈ ವಿವಾದವು 2026ರ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಬಹುಮತಕ್ಕೆ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತಿದೆ.