ತಾ.ಪಂ.ಅಧ್ಯಕ್ಷರಿಗೆ ಕಾರ್ಯಕ್ರಮಕ್ಕೆ ಆಮಂತ್ರಣವಿಲ್ಲ .ಕುಕ್ಕೆ ದೇವಳದ ನಾಮಫಲಕದಲ್ಲಿ ಸುಳ್ಯ ತಾಲೂಕಿನ ಹೆಸರು!ಸ್ಥಳೀಯರ ಆಕ್ರೋಶ
ಕಡಬ: ರಾಜ್ಯದ ಪ್ರಸಿದ್ದ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಳ್ಯ ತಾಲೂಕಿಗೆ ಸೇರಿದೆಯೋ ಅಥಾವ ಸರಕಾರ ಅನುಷ್ಠಾನಗೊಳಿಸಿದ ಕಡಬ ತಾಲೂಕಿಗೆ ಸೇರ್ಪಡೆಗೊಂಡಿದೆಯೋ ಅನ್ನೋ ಪ್ರಶ್ನೆ ಉದ್ಬವಿಸಿದೆ,
ಯಾಕೆಂದರೆ ಕಡಬ ತಾಲೂಕು ಅನುಷ್ಠಾನಗೊಂಡು ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ಬಳಿಕ ಕಡಬದಲ್ಲಿ ಹೊಸ ತಾಲೂಕು ಪಂಚಾಯತ್ ರಚನೆಗೊಂಡು ಎರಡು ಮೂರು ಸಭೆಗಳು ನಡೆದಿವೆ. ಆ ಸಭೆಗೆ ಕಡಬ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದಾರೆ, ಇಷ್ಟಾದರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗಳು ಮಾತ್ರ ಇನ್ನೂ ಸುಳ್ಯ ತಾಲೂಕಿನಲ್ಲ್ಲೇ ಬಾಕಿಯಾಗಿದ್ದಾರೆ..
ಅನಘ ವಸತಿಗೃಹ ಉದ್ಘಾಟನಾ ಕಾರ್‍ಯಕ್ರಮದಲ್ಲಿ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷರ ಹೆಸರು ನಾಪತ್ತೆ!
ಇಂದು(ನ.22) ಮಧ್ಯಾಹ್ನ ನಡೆಯುವ ಕುಕ್ಕೆಶ್ರೀ ದೇವಳದ ಸಮಗ್ರ ಅಭಿವೃದ್ದಿಯ ಮಾಸ್ಟರ್ ಪ್ಲಾನ್ ಯೋಜನೆಯಡಿಯಲ್ಲಿ
ಆದಿ ಸುಬ್ರಹ್ಮಣ್ಯದಲ್ಲಿ ನಿರ್ಮಿಸಿರುವ ಅನಘ ವಸತಿಗೃಹ ಉದ್ಘಾಟನಾ ಕಾರ್ಯಕ್ರಮ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಂದ ಉದ್ಘಾಟನೆಗೊಂಡಿದ್ದು, ಕ್ಷೇತ್ರದ ಶಾಸಕ ಎಸ್. ಅಂಗಾರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಉಳಿದಂತೆ ಪ್ರೊಟೋಕಾಲ್ ಪ್ರಕಾರ ಸಂಸದರು, ಜಿ.ಪಂ. ಅಧ್ಯಕ್ಷರು ಜಿಲ್ಲಾ ಮಟ್ಟದ ಅಧಿಕಾರಿಗಳು, ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿದೆ. ಆದರೆ ವಿಶೇಷತೆಯೆಂದರೆ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷರ ಹೆಸರನ್ನೇ ಉಲ್ಲೇಖಿಸಲಾಗಿಲ್ಲ ಮತ್ತು ಕಾರ್ಯಕ್ರಮಕ್ಕೆ ಅವರನ್ನು ಆಮಂತ್ರಿಸಿಲ್ಲ. ಈ ಬಗ್ಗೆ ಈಗಾಗಲೇ ದೇವಸ್ಥಾನದ ಆಡಳಿತ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು ಅಪರಾಹ್ನ ಈ ವಿಚಾರವನ್ನು ಸಚಿವರ ಗಮನಕ್ಕೂ ತರಲಾಗುತ್ತಿದೆ.
ದೇವಸ್ಥಾನದ ಮುಖ್ಯ ದ್ವಾರದಲ್ಲಿ ಅಳವಡಿಸಲಾಗಿರುವ ನಾಮಫಲಕದಲ್ಲಿ ದೇವಸ್ಥಾನ ಇನ್ನೂ ಸುಳ್ಯ ತಾಲೂಕಿನಲ್ಲಿಯೇ ಇರುವುದು ಸ್ವಷ್ಟವಾಗುತ್ತಿದೆ, ಈ ನಾಮಫಲಕದಲ್ಲಿ ತಾಲೂಕು ಹೆಸರು ಬದಲಾವಣೆ ಮಾಡಬೇಕೆಂದು ತಾ.ಪಂ. ಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಲಾಗಿತ್ತು, ಆದರೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳಿಗೆ ಮಾತ್ರ ಈ ನಿರ್ಣಯಗಳು ತಲುಪದಿರುವುದು ಮಾತ್ರ ಆಶ್ಚರ್ಯವೇ ಸರಿ
ಈ ಬಗ್ಗೆ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್.ಅವರನ್ನು ಸಂಪರ್ಕಿಸಿದಾಗ ಕೂಡಲೇ ಮಾತನಾಡಿದ ಅವರು, ನಮ್ಮಿಂದ ತಪ್ಪಾಗಿದೆ, ಕೂಡಲೇ ಕಡಬ ತಾ.ಪಂ. ಅಧ್ಯಕ್ಷರ ಹೆಸರನ್ನು ಸೇರ್ಪಡೆಗೊಳಿಸುತ್ತೇವೆ, ಎಂದು ಉತ್ತರ ನೀಡಿ, ಬದಲಿ ಆಮಂತ್ರಣ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿ ಅಧ್ಯಕ್ಷರ ಹೆಸರನ್ನು ಸೇರಿಸಿದ್ದಾರೆ.
ಈ ಬಗ್ಗೆ ಆಡಳಿತಾಧಿಕಾರಿ ಎಂ.ಜೆ. ರೂಪ ಅವರಿಗೂ ಮಾಹಿತಿ ನೀಡಲಾಗಿತ್ತು ಈ ಬಗ್ಗೆ ವಿಚಾರಿಸುತ್ತೇನೆ ಎಂದಷ್ಟೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ, ಸರಕಾರದ ಆದೇಶ ಪಾಲಿಸಿ
ಸರಕಾರ ಯಾವ ಆದೇಶಗಳನ್ನು ಮಾಡಿದರೂ ಅದನ್ನು ಕಾರ್ಯರೂಪಕ್ಕೆ ತರುವವರು ಅಧಿಕಾರಿಗಳು, ಆದರೇ ಅಧಿಕಾರಿಗಳು ಇಂತಹ ಘೋರ ನಿದ್ದೆಯಲ್ಲಿದ್ದರೆ ಸರಕಾರದ ಕಾರ್ಯಕ್ರಮಗಳು ಯಾವಗ ಜಾರಿಗೆ ಬರುವುದು ಎಂಬ ಪ್ರಶ್ನೆ ಉದ್ಘವಿಸಿದೆ,
ಇನ್ನಾದರೂ ಸರಕಾರದ ಆದೇಶವನ್ನು ಪಾಲಿಸಿ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರವನ್ನು ಸಚಿವರು, ಶಾಸಕರ ಗಮನಕ್ಕೆ ತರಲಾಗುತ್ತದೆ ಎಂದು ಸುಬ್ರಹ್ಮಣ್ಯ ನಾಗರಿಕರು ತಿಳಿಸಿದ್ದಾರೆ.
ಈ ಬಗ್ಗೆ ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರನ್ನು ಸಂಪರ್ಕಿಸಿದಾಗ, ಸುಬ್ರಹ್ಮಣ್ಯದ ಕಾರ್ಯಕ್ರಮದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.