ಮಂಗಳೂರು : ಹಿರಿಯ ವಿದ್ವಾಂಸ ಡಾ.ವಾಮನ ನಂದಾವರ(81) ಇಂದು(ಮಾ.15) ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದವರಾದ ವಾಮನ ಅವರು ಕನ್ನಡ ಹಾಗೂ ತುಳು ಭಾಷಾ ವಿದ್ವಾಂಸರಾಗಿ ಸಾಧನೆ ಮೆರೆದಿದ್ದಾರೆ.

ನವೆಂಬರ್ 15, 1944 ರಲ್ಲಿ ವಾಮನ ನಂದಾವರ ಜನಿಸಿದರು. ಅವರ ತಂದೆ ಬಾಬು ಬಾಳೆಪುಣಿ, ತಾಯಿ ಪೂವಮ್ಮ. ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ ಸರಿಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್‌ವಿಎಸ್ ಹೈಯರ್ ಎಲಿಮೆಂಟರಿ ಶಾಲೆ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಬೋರ್ಡ್ ಹೈಸ್ಕೂಲ್ ಕುರ್ನಾಡ್, ಆನಂದಾಶ್ರಮ ಪ್ರೌಢಶಾಲೆ ಕೋಟೆಕಾರ್‌ನಲ್ಲಿ ಪಡೆದರು.
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ ಎಸ್‌ಸಿ ಪದವಿ ಪಡೆದ ಅವರು ಮಂಗಳೂರು ಸರಕಾರಿ ಮಹಾವಿದ್ಯಾನಿಯದಲ್ಲಿ ಬಿ.ಇಡಿ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಪದವಿ ಪಡೆದರು. ಮಂಗಳೂರು ವಿಶ್ವವಿದ್ಯಾನಿಯದ ಬಿ.ಎ ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ‘ ಕೋಟಿ ಚೆನ್ನಯ ಜಾನಪದೀಯ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಗಳಿಸಿದರು.
ಬೆಂಗಳೂರು ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕರಾಗಿ ಶಿಕ್ಷಣ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸೇಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ, ಸೇಂಟ್ ಆನ್ಸ್ ಮಹಿಳಾ ಶಿಕ್ಷಕ-ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿ, ಸಹ್ಯಾದ್ರಿ ಶಿಕ್ಣಣ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
ಇಂದಿರಾ ಗಾಂಧಿ ರಾಷ್ತ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿದ್ದ ಅವರು ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿ ಹಾಗೂ ಮಂಗಳೂರು ದರ್ಶನ ಯೋಜನೆಯಲ್ಲಿ ಸಹಾಯಕ ಸಂಪಾದಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ : ಕೊನೆಗೂ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್
ಕೃತಿ ವಿವರ :
ತಾಳಮೇಳ (ಕನ್ನಡ ಕವನ ಸಂಕಲನ) ೧೯೭೫, ಓಲೆಪಟಾಕಿ (ಸ್ವತಂತ್ರ ತುಳು ಕನ್ನಡ ಒಗಟುಗಳ ಸಂಕಲನ)೧೯೮೦, ತುಳುವೆರೆ ಕುಸಾಲ್ ಕುಸೆಲ್ (ತುಳು ಜಾನಪದ ಪ್ರಬಂಧ) ೧೯೮೭/೧೯೮೮, ಸಿಂಗದನ (ತುಳು ಜಾನಪದ ಅಧ್ಯಯನ ಪ್ರಬಂಧ) ೧೯೮೭/೧೯೮೮, ತುಳುಟು ಪನಿಕತೆ (ತುಳುತ್ತ ದಂತ ಕತೆಕುಲು) ೧೯೮೮, ಅವಳಿ ವೀರರೆ ಕುರಿತ ಜಾನಪದ ಮಹಾಕಾವ್ಯ ‘ಕೋಟಿ ಚೆನ್ನಯ’, ‘ಜಾನಪದ ಸುತ್ತಮುತ್ತ’, ಡಿ.ವಿ.ಜಿ.ಯವರ ಸಾಹಿತ್ಯ ವಿಮರ್ಶೆ ‘ನಂಬಿಕೆ’, ಅಭಿನಂದನ ಗ್ರಂಥ ‘ಕಾಕಾನ ಅಭಿನಂದನೆ’, ಸ್ಮರಣ ಸಂಚಿಕೆ ‘ಪೆಂಗದೂಮ’, ಬರಹಗಾರರ ಕೈಪಿಡಿ ‘ತುಳು ಸಾಹಿತಿ ಕಲಾವಿದರ ಮಾಹಿತಿ’, ಕನ್ನಡ ಸಾಹಿತ್ಯ ಸಮ್ಮೇಳನದ ‘ಪೊನ್ನ ಕಂಠಿ’, ‘ಅಜ್ಜಿ ತಾಂಕಿನ ಪುಳ್ಳಿ’, ‘ನೆತ್ತರಾ ನೀರಾ’, ಇಂಚಿತ್ತಿ ತುಳು ನಾಟಕೊಲು, ತುಳು ಸಾಹಿತ್ಯ ಚರಿತ್ರೆ, ತುಳು ಜಾನಪದದ ಆಚರಣೆ, ತುಳು ಭಾಷಾ ಸಾಹಿತ್ಯ ಡಿ.ಕೆ. ಚೌಟ ಇಂಚಿತಿ ವ್ಯಕ್ತಿ ಚಿತ್ರ, ಮನಶಾಸ್ತ್ರ ವಿಜ್ಞಾನಿಯ ಜೀವನ – ಸಾಧನೆ ಕುರಿತ ‘ಸರ್ ಜೀಮ್ಸ್ ಜಾರ್ಜ್ ಫ್ರೆಜರ್’, ‘ಬೀರ’(ತುಳು ಕವನ ಸಂಕಲನ), ತುಳು ದಂತಕತೆ ‘ತುಳುಟು ಪನಿಕತೆ’ ಮತ್ತು ‘ಒಂಜಿ ಕೋಪೆ ಕತೆಕುಲು’, ‘ಕಿಡಿಗೇಡಿಯ ಕೀಟಲೆ’(ತುಳು ಜಾನಪದ ಕತೆ), ‘ಕೋಟಿ ಚೆನ್ನಯ’ (ಮಕ್ಕಳ ಕಥೆ).
ಪ್ರಶಸ್ತಿ ವಿವರ :
ಡಾ.ವಾಮನ ನಂದಾವರ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಬಂಟ್ವಾಳ ತಾಲ್ಲೂಕು 12ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರ ಸಾಧನೆಗೆ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಪುರಸ್ಕಾರ ದೊರೆತಿವೆ.