ಜಗತ್ತಿನಲ್ಲಿ ಇದೀಗ ಎಪ್‌ಸ್ಟೀನ್ ಫೈಲ್ಸ್ ಬಿರುಗಾಳಿ ಎದ್ದಿದೆ. ಈ ದಂಧೆಯಲ್ಲಿ ದೊಡ್ಡ ದೊಡ್ಡವರ ಬಂಡವಾಳ ಬಯಳಾಗುತ್ತಿದೆ. ಹಾಗಾದರೆ ಏನಿದು ಎಫ್‌ಸ್ಟೀನ್ ಫೈಲ್ಸ್ ರಾಜಕೀಯ ಬಿರುಗಾಳಿ…?

ಹೌದು.. ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ದಾಖಲೆಗಳು (ಫೈಲ್ಸ್) ಜನವರಿ 30 ರಂದು ಬಹಿರಂಗವಾಗಿತ್ತು. ನಂತರ ಜಾಗತಿಕ ಮಟ್ಟದಲ್ಲಿ ತಲ್ಲಣ ಉಂಟಾಗಿದೆ. ಇದರಲ್ಲಿ ರಾಜಕಾರಣ, ಉದ್ದಿಮೆ, ಮನರಂಜನೆ ಮತ್ತು ಶೈಕ್ಷಣಿಕ ವಲಯದ ಘಟಾನುಘಟಿಗಳ ಹೆಸರುಗಳು ಎಪ್ಸ್ಟೀನ್ ಫೈಲ್ಸ್‌ನಲ್ಲಿ ಸ್ಥಾನ ಪಡೆದಿವೆ.
ಎಪ್ಸ್ಟೀನ್ ಫೈಲ್ಸ್ ಅಂದ್ರೆ ಏನು?
ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ದಾಖಲೆಗಳ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಸಂಬಂಧಿಸಿದ 35 ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಅಮೆರಿದ ನ್ಯಾಯಾಂಗ ಇಲಾಖೆ ಸಾರ್ವಜನಿಕಗೊಳಿಸಿದೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳಿಗಾಗಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಕೂಪಕ್ಕೆ ತಳ್ಳಿದ ಆರೋಪ ಜೆಫ್ರಿ ಎಪ್ಸ್ಟೀನ್ ಮೇಲಿದೆ.
ತನಿಖಾ ವರದಿಯಲ್ಲೇನಿದೆ?
ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ಸಂಗ್ರಹಿಸಿದ ದೂರುಗಳ ಪಟ್ಟಿಯಲ್ಲಿ ಟ್ರಂಪ್ ಹೆಸರು ಕಂಡುಬಂದಿದೆ. ಇದರಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳನ್ನು ಸಾರ್ವಜನಿಕರು ಮತ್ತು ಸಂತ್ರಸ್ತರು ನೀಡಿದ್ದಾರೆ ಎಂದು ದಾಖಲೆಗಳಾಗಿವೆ.
ಎಪ್ಸ್ಟೀನ್ ಹೇಯ ಕೃತ್ಯಗಳು
ಮಹಿಳೆಯರ ಕಳ್ಳಸಾಗಣೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರದಂಥ ಅನೇಕ ಹೇಯ ಕೃತ್ಯಗಳನ್ನು ಎಸಗಿದ್ದ ಎಪ್ಸ್ಟೀನ್, ಇಂಥ ಸರಣಿ ಅಪರಾಧಗಳಲ್ಲಿ ತೊಡಗಿದ್ದ. ತನ್ನ ಐಷಾರಾಮಿ ಮನೆಗಳಲ್ಲಿ ಬಾಲಕಿಯರನ್ನು ಕೂಡಿಹಾಕಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯಲು ಕಾರಣನಾಗಿದ್ದ. ವಿವಿಧ ದೇಶಗಳ ಜನಪ್ರತಿನಿಧಿಗಳು, ಪ್ರಭಾವಶಾಲಿಗಳು, ಉದ್ಯಮಿಗಳು ಎಪ್ಸ್ಟೀನ್ ಜತೆಗೆ ನಂಟು ಹೊಂದಿದ್ದರು. ಈ ಪೈಕಿ ಅನೇಕರು ಅವನ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದ್ದರು. ತನ್ನ ವಿರುದ್ದದ ಪ್ರಕರಣಗಳ ಕಾರಣದಿಂದ ಜೈಲು ಸೇರಿದ್ದ ಎಪ್ಸ್ಟೀನ್, 2019ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದಾನೆ.
ಆನಂತರ ತನಿಖೆಯ ವೇಳೆ ಪತ್ತೆಯಾಗಿದ್ದ ಇಮೇಲ್‌ಗಳು, ವೀಡಿಯೋಗಳು ಮತ್ತಿತರ ದಾಖಲೆಗಳನ್ನು ಬಹಿರಂಗ ಮಾಡುವಂತೆ ಜನ ಒತ್ತಾಯ ಹೇರತೊಡಗಿದರು. ಡೊನಾಲ್ಡ್ ಟ್ರಂಪ್ ಸರ್ಕಾರವು ಅವುಗಳನ್ನು ಹಂತಹಂತವಾಗಿ ಬಹಿರಂಗ ಮಾಡುತ್ತಿದೆ.
ಟ್ರಂಪ್ ಮೇಲಿರುವ ಆರೋಪವೇನು?
ಈ ಫೈಲ್‌ಗಳಲ್ಲಿ ಟ್ರಂಪ್ ಹೆಸರು ಹಲವು ಕಡೆ ಪ್ರಸ್ತಾಪವಾಗಿದೆ. ಹಾಗಾದರೆ ಟ್ರಂಪ್ ಲೈಂಗಿಕ ದಂಧೆಯಲ್ಲಿ ಭಾಗಿಯಾಗಿದ್ದರಾ? ಸದ್ಯಕ್ಕೆ ಲಭ್ಯವಿರುವ ಮಾಹಿತಿಯಂತೆ, ಟ್ರಂಪ್ ಅವರು ಎಪ್‌ಸ್ಟೀನ್‌ನ ಖಾಸಗಿ ವಿಮಾನದಲ್ಲಿ ಹಲವು ಬಾರಿ ಪ್ರಯಾಣಿಸಿದ್ದಾರೆ. ಕೆಲವು ಸಾಕ್ಷಿಗಳ ಪ್ರಕಾರ, ಟ್ರಂಪ್ ಅವರು ಎಪ್‌ಸ್ಟೀನ್‌ನ ಕ್ಲಬ್‌ಗಳಿಗೆ ಭೇಟಿ ನೀಡುತ್ತಿದ್ದರು. ಜೊತೆಗೆ ಎಪ್‌ಸ್ಟೀನ್ ಒಮ್ಮೆ ಟ್ರಂಪ್ ಬಗ್ಗೆ ಹೀಯಾಳಿಸಿ ಮಾತನಾಡಿದ ಉಲ್ಲೇಖಗಳೂ ಇಲ್ಲಿವೆ. ಆದರೆ, ಟ್ರಂಪ್ ಈ ದಂಧೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಈ ಫೈಲ್‌ಗಳಲ್ಲಿ ಸ್ಪಷ್ಟವಾದ ಕ್ರಿಮಿನಲ್ ಪುರಾವೆಗಳು ಇನ್ನೂ ಸಿಕ್ಕಿಲ್ಲ. ಆದರೆ ಎಪ್‌ಸ್ಟೀನ್‌ನೊಂದಿಗೆ ಅವರಿಗಿದ್ದ ನಿಕಟ ಸ್ನೇಹ ಈಗ ರಾಜಕೀಯವಾಗಿ ಅವರಿಗೆ ಮುಳ್ಳಾಗಿ ಪರಿಣಮಿಸಿದೆ.
ಟ್ರಂಪ್ ಸ್ಪಷ್ಟನೆ
ಟ್ರಂಪ್ ಈ ಮೊದಲೇ ಸ್ಪಷ್ಟಪಡಿಸಿದಂತೆ, ಎಪ್‌ಸ್ಟೀನ್‌ನೊಂದಿಗೆ ತಮಗೆ ಕೇವಲ ಪರಿಚಯವಿತ್ತೇ ಹೊರತು, ಆತನ ವೈಯಕ್ತಿಕ ದಂಧೆಗಳ ಬಗ್ಗೆ ಏನೂ ತಿಳಿದಿರಲಿಲ್ಲ ಎಂದಿದ್ದಾರೆ. ಆದರೆ ಈ ಫೈಲ್‌ಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಟ್ರಂಪ್‌ರನ್ನು ಕಟ್ಟಿಹಾಕಲು ಯತ್ನಿಸುತ್ತಿವೆ. ಅದರಂತೆ, ಇದು ಬರಿ ಫೈಲ್ ಅಲ್ಲ, ಟ್ರಂಪ್ ವ್ಯಕ್ತಿತ್ವಕ್ಕೆ ತಗುಲಿದ ಕಳಂಕ ಎನ್ನುತ್ತಿವೆ ವಿರೋಧಿ ಬಣಗಳು.
ಹಲವು ಗಣ್ಯರ ಹೆಸರುಗಳು
ಎಪ್ಸ್ಟೀನ್ ಫೈಲ್ಸ್‌ನಲ್ಲಿ ಜಗತ್ತಿನ ಖ್ಯಾತನಾಮರ ಹೆಸರುಗಳು ಮುನ್ನಲೆಗೆ ಬಂದಿವೆ. ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಅವರ ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯ ಮಾಜಿ ಅಧ್ಯಕ್ಷ ಲ್ಯಾರಿ ಸಮರ್ಸ್, ಟ್ರಂಪ್ ಸರ್ಕಾರದ ಹಣಕಾಸು ಕಾರ್ಯದರ್ಶಿ ಹೊವಾರ್ಡ್ ಲುಟ್ಟಿಕ್, ಟ್ರಂಪ್ ಅವರ ಮಾಜಿ ಸಲಹೆಗಾರ ಸ್ಟೀವ್ ಬ್ಯಾನನ್ ಸೇರಿದಂತೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಮತ್ತು ಈಗಲೂ ಸಕ್ರಿಯವಾಗಿರುವ ಅನೇಕರು ಎಪ್‌ಸ್ಟೈನ್ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ. ಈ ಪೈಕಿ ಬಹುತೇಕರು, ಎಪ್ಸ್ಟೀನ್ ಜತೆಗೆ ನಂಟು ಹೊಂದಿರುವುದು ಪತ್ತೆಯಾಗಿದೆ.