ಮಂಗಳೂರು: ವಿವಾದಾತ್ಮಕ ಸುರತ್ಕಲ್ ಟೋಲ್‌ಗೇಟ್ ತೆರವುಗೊಳಿಸಿಯೇ ಸಿದ್ಧ ಎಂದು ಅಖಾಡಕ್ಕೆ ಇಳಿದ ಟೋಲ್‌ಗೇಟ್ ಹೋರಾಟಗಾರರನ್ನು ಪೊಲೀಸರು ಇಂದು ವಶಕ್ಕೆ ತೆಗೆದುಕೊಳ್ಳುವ ಮೂಲಕ ವಿವಾದಾತ್ಮಕ ಟೋಲ್‌ಗೇಟ್ ವಿರುದ್ಧದ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಕಳೆದ 7 ವರ್ಷಗಳಿಂದ ವಿವಾದಾತ್ಮಕ ಟೋಲ್‌ಗೇಟ್ ಆಗಿ ರೂಪುಗೊಂಡಿರುವ ಟೋಲ್‌ಗೇಟನ್ನು ತೆರವುಗೊಳಿಸಲು ಹಲವು ಹೋರಾಟದ ಬಳಿಕ ಇಂದು ಬೆಳಿಗ್ಗೆ ದೊಡ್ಡ ಮಟ್ಟದ ಹೋರಾಟ ಆಯೋಜಿಸಿತ್ತು.
ಸಂಸದ ನಳಿನ್ ಕುಮಾರ್ ಮತ್ತೆ 20 ದಿನಗಳ ಕಾಲಾವಕಾಶ ಕೇಳಿದ್ದರೂ ಪಟ್ಟು ಬಿಡದ ಪ್ರತಿಭಟನಾಕಾರರು ಟೋಲ್‌ಗೇಟ್ ತೆರವು ಮಾಡದೇ ಮಾಡ್ತೀವಿ, ಇವತ್ತಿನಿಂದಲೇ ಶುಲ್ಕ ವಸೂಲಾತಿ ಕೈಬಿಡಿ ಎಂದು ಆಗ್ರಹಿಸಿದ್ದರು.
ಈ ನಡುವೆ ಪೊಲೀಸರು ರಾತೋರಾತ್ರಿ ಪ್ರತಿಭಟನಾಕಾರರ ಮನೆಗೆ ನುಗ್ಗಿ ನೊಟೀಸ್ ನೀಡಿ ಹೋರಾಟ ಹತ್ತಿಕ್ಕಲು ಯತ್ನಿಸಿದ್ದರು. ಇದರಿಂದ ಪ್ರತಿಭಟನಾಕಾರರ ಆಕ್ರೋಶ ಇನ್ನುಷ್ಟ ಹೆಚ್ಚಾಗಿತ್ತು.
ಇಂದು ಬೆಳಿಗ್ಗೆಯಿಂದಲೇ ಟೋಲ್‌ಗೇಟ್ ಬಳಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರೂ ಕ್ಯಾರೇ ಅನ್ನದೇ ಪ್ರತಿಭಟನಾಕಾರರು ಜಮಾಯಿಸಿ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸತೊಡಗಿದ್ದರು. ಸರಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಧಿಕ್ಕಾರ ಕೂಗುತ್ತಾ ಶಾಂತಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದರು.
ಈ ನಡುವೆ ಏಕಾಏಕಿ ಟೋಲ್‌ಗೇಟ್ ಬಳಿಗೆ ಹೊರಟ ಪ್ರತಿಭಟನಾಕಾರರಿಗೆ ಪೊಲೀಸರು ತಡೆಯೊಡ್ಡಿ ಅವರನ್ನು ದರದರನೇ ಎಳೆದೊಯ್ದು ವಶಕ್ಕೆ ಪಡೆದಿದ್ದಾರೆ.
ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಐವನ್ ಡಿ ಸೋಜಾ, ಮಿಥುನ್ ರೈ, ವಿನಯಕುಮಾರ್ ಸೊರಕೆ, ಜೆ ಆರ್ ಲೋಬೋ, ಯಶವಂತ ಮರೋಳಿ, ಅಕ್ಷಿತ್ ಸುವರ್ಣ, ದಿನೇಶ್ ಹೆಗ್ಡೆ ಉಳೇಪಾಡಿ, ಆರ್ ಪದ್ಮರಾಜ್ ಸಹಿತ ಹಲವು ಮಂದಿ ನಾಯಕರನ್ನು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲದೇ, ಉಡುಪಿ ಭಾಗದಿಂದಲೂ ಆಗಮಿಸಿದ್ದ ಹೋರಾಟಗಾರರು ಟೋಲ್‌ಹೆಸರಿನಲ್ಲಿ ವಸೂಲಿ ಮಾಡುತ್ತಿರುವ ಸರಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಕೂಡಾ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ವಾಗ್ದಾಳಿ ನಡೆಸಿದರು.
ಪೊಲೀಸರು ಬಿಗು ಬಂದೋಬಸ್ತ್ ಕ್ರಮ ಕೈಗೊಂಡಿದ್ದು, ಬಳಿಕ ಹೆದ್ದಾರಿಯನ್ನು ತೆರವುಗೊಳಿಸಿದರು.
ಸುರತ್ಕಲ್ ಟೋಲ್‌ಗೇಟ್‌ನ್ನು ತೆರವುಗೊಳಿಸಲು ಇಂದು ಮುಂಜಾನೆಯಿಂದಲೇ ಹೋರಾಟಗಾರರು ಸ್ಥಳಕ್ಕೆ ಆಗಮಿಸಿದ್ದು ಆಕ್ರೋಶಭರಿತರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿಯನ್ನು ನಿಯಂತ್ರಿಸಲಾಗದೆ ಪೊಲೀಸರು ಎತ್ತಿಕೊಂಡು ಹೋಗುವ ದೃಶ್ಯ ಕೂಡಾ ಕಂಡುಬಂದಿತ್ತು.
ಇನ್ನು ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಟೋಲ್‌ಗೇಟ್ ಮೇಲೇರಿ ಘೋಷಣೆ ಕೂಗಿದರು, ಏಕಾಏಕಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೋರಾಟಗಾರರನ್ನು ಎಳೆದುಕೊಂಡು ಹೋಗುವ ಪರಿಸ್ಥಿತಿಯೂ ನಿರ್ಮಾಣವಾಯಿತು.
ಈ ಸಂದರ್ಭ ಓರ್ವ ಮಹಿಳೆಯೂ ಸೇರಿದಂತೆ ಅನೇಕರು ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಿದರು. ‘ಇದೇನಾ ಹೆಣ್ಣು ಮಕ್ಕಳಿಗೆ ಬಿಜೆಪಿ ಸರ್ಕಾರ ಕೊಡುವ ಗೌರವ’ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಸುರತ್ಕಲ್ ಟೋಲ್‌ಗೇಟ್ ಹೋರಾಟಗಾರರನ್ನು ಹತ್ತಿಕ್ಕಲು ಪೊಲೀಸರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು , ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಕಾರ್ಯಾಚರಣೆ ತಡೆಯಲು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಾಗೂ ಜಿಲ್ಲೆಯ ಹೆಚ್ಚುವರಿ ಪೊಲೀಸರನ್ನು ಸೋಮವಾರದ ಸಂಜೆಯಿಂದಲೇ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಸುಮಾರು 400ಕ್ಕೂ ಅಧಿಕ ಹೆಚ್ಚು ಪೊಲೀಸರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಮಂಗಳೂರು : ಮಂಗಳೂರು ನಗರದ ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ 15 ನೇ ವರ್ಷದ ಹೊನಲು ಬೆಳಕಿನ ಜಯ ವಿಜಯ ಜೋಡುಕರೆ ಕಂಬಳಕ್ಕೆ ಇಂದು ಬೆಳಗ್ಗೆ ಚಾಲನೆ ದೊರೆತಿದೆ.
ದಿವಂಗತ ಜೆ. ಜಯಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಸ್ಮರಣಾರ್ಥ ನಡೆಯುವ ಕಂಬಳದ ಉದ್ಘಾಟನೆ ಬೆಳಗ್ಗೆ ನೆರವೇರಿತು. ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆಯಲ್ಲಿ ದೇರೆಬೈಲ್ ವಿಠಲದಾಸ ತಂತ್ರಿ ಅವರು 15 ನೇ ವರ್ಷದ ಜಯ ವಿಜಯ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಗೌರವ ಅಧ್ಯಕ್ಷ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಕಂಬಳಕ್ಕೆ ಪಾಲಿಕೆಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಕಂಬಳ ಸಂಸ್ಕೃತಿಯನ್ನು ಉಳಿಸಿ ಬೆಳೆಸ ಬೇಕು. ತನ್ನಿಂದ ಸಾಧ್ಯವಿರುವ ಎಲ್ಲಾ ಸಹಕಾರ ನೀಡುತ್ತೇನೆ ಎಂದರು.
ಪೊಲೀಸ್ ಅಧಿಕಾರಿ ಟಿ.ಡಿ. ನಾಗರಾಜ್, ಜಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮತ್ತಿತರ ವಿವಿಧ ಕ್ಷೇತ್ರಗಳ ಪ್ರಮುಖರು ಅತಿಥಿಗಳಾಗಿ ಉಪಸ್ಥಿತರಿದ್ದರು. ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಜೆ. ಅನಿಲ್ ಶೆಟ್ಟಿ ಮನ್ಕುತೋಟ, ಮಾರ್ಗದರ್ಶಕ ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜೆ. ಉಮೇಶ್ ಅತಿಕಾರಿ, ಕೋಶಾಧಿಕಾರಿ ಜೆ. ಬಾಲಕೃಷ್ಣ ಶೆಟ್ಟಿ, ಪ್ರಕಾಶ್ ಮೇಲಂಟ, ಶೇಖರ ಕಿಲ್ಲೆ ಪಡುಹಿತ್ಲು, ಗುರುರಾಜ್ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು. ಮನೋಜ್ ಶೆಟ್ಟಿ ವಂದಿಸಿದರು. ಅಭಿಷೇಕ್ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರು: ಭಾರತದ ಅತ್ಯುತ್ತಮ ಆಹಾರ ಮತ್ತು ಪಾನೀಯಗಳನ್ನು ಗುರುತಿಸುವ *ಫುಡ್ “ಕನೋಸರ್ಸ್ ಇಂಡಿಯಾ ಅವಾರ್ಡ್ಸ್ (FCIA)* ನ ಏಳನೇ ಆವೃತ್ತಿಯಲ್ಲಿ ಮಂಗಳೂರಿನ ಮಾಸ್ಟರ್ ಚೆಫ್ *ಮಹಮ್ಮದ್ ಆಶಿಕ್* ಅವರಿಗೆ *’ಸೌತ್ ಇಂಡಿಯಾ ಯಂಗ್ ಚೆಫ್ ಆಫ್ ದಿ ಇಯರ್’* ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನ *ತಾಜ್ ಯಶವಂತಪುರ ಹೋಟೆಲ್* ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಅತ್ಯುತ್ತಮ ಶೆಫ್ಗಳು, ರೆಸ್ಟೋರೆಂಟ್ಗಳು ಮತ್ತು ಫುಡ್ ಬ್ರಾಂಡ್ಗಳು ಪಾಲ್ಗೊಂಡಿದ್ದರು. ಮಂಗಳೂರಿನ ಪ್ರತಿಭೆ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಈ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹೆಗ್ಗಳಿಸಿದ್ದಾರೆ.
ಪ್ರಶಸ್ತಿ ಪಡೆದ ನಂತರ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರು ಮಾತನಾಡುತ್ತಾ, “ಈ ಪ್ರಶಸ್ತಿಯನ್ನು ಪ್ರಮುಖವಾಗಿ ಆಹಾರದ ಗುಣಮಟ್ಟ, ಸೃಜನಾತ್ಮಕತೆ ಮತ್ತು ಅನುಭವಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಬಾರಿ ಕನ್ನಡನಾಡಿನ ಹಲವಾರು ರೆಸ್ಟೋರೆಂಟ್ಗಳು ಮತ್ತು ಶೆಫ್ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನನಗೆ ಈ ಪ್ರಶಸ್ತಿ ಲಭಿಸಿದ್ದು ಗೌರವದ ಸಂಗತಿ. ಇದು ನನ್ನ ಕುಟುಂಬ, ಸ್ನೇಹಿತರು ಮತ್ತು ಜಿಲ್ಲೆಯ ಜನರ ಸಹಕಾರದ ಫಲವಾಗಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡಿದೆ” ಎಂದರು.
ಈ ಕಾರ್ಯಕ್ರಮದ ಮೂಲಕ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿ ಮತ್ತು ಪ್ರತಿಭಾವಂತ ಶೆಫ್ಗಳ ಸಾಧನೆಗಳನ್ನು ಗುರುತಿಸಲಾಯಿತು. ಮಂಗಳೂರಿನ ಮಾಸ್ಟರ್ ಚೆಫ್ ಮಹಮ್ಮದ್ ಆಶಿಕ್ ಅವರ ಈ ಸಾಧನೆ ಜಿಲ್ಲೆಯ ಆಹಾರ ಕ್ಷೇತ್ರದ ಹೆಮ್ಮೆಯಾಗಿದೆ.