ಮಂಗಳೂರು/ನವದೆಹಲಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ನಾಳೆ (ಜೂ.11) ಅಮೆರಿಕದಿಂದ ಅಕ್ಸಿಯಮ್ ಮಿಷನ್-4 ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ.
ಹೌದು, ಭಾರತೀಯ ವಾಯುಪಡೆ ಪೈಲಟ್ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ನಾಲ್ಕು ಮಂದಿ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಸಜ್ಜಾಗಿದ್ದಾರೆ.

ಅಮೆರಿಕದ ಫ್ಲೋರಿಡಾದಲ್ಲಿರುವ ಕೆನೆಡಿ ಸ್ಪೇಸ್ ಸೆಂಟರ್ನಿಂದ ಸ್ಪೇಸ್ಎಕ್ಸ್ ಡ್ರ್ಯಾಗನ್ ನೌಕೆ ಗಗನಕ್ಕೆ ಹಾರಲಿದೆ. ಸ್ಪೇಸ್ಎಕ್ಸ್ಗೆ ಸೇರಿದ ಫಾಲ್ಕನ್- 9 ರಾಕೆಟ್ ಈ ಗಗನನೌಕೆಯನ್ನು ಆಗಸಕ್ಕೆ ಹೊತ್ತಯ್ಯಲಿದೆ.
‘ಆ್ಯಕ್ಸಿಯಂ-4’ ಕಾರ್ಯಕ್ರಮದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿರುವ ಶುಕ್ಲಾ ಅವರೊಂದಿಗೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೊರ್ ಕಾಪು ಹಾಗೂ ಪೋಲಂಡ್‌ನ ಸ್ಲಾವೋಸ್ ವಿಸ್ನಿವೆಸ್ಕಿ ಕೂಡ ಪಯಣಿಸಲಿದ್ದಾರೆ. ಭಾರತೀಯ ಕಾಲಮಾನ ಬುಧವಾರ ಸಂಜೆ 5.30ಕ್ಕೆ ಆಕ್ಸಿಮ್-4 ರಾಕೆಟ್ ಉಡಾವಣೆ ಆಗುತ್ತಿದೆ.

ದಾಖಲೆ ಬರೆಯಲಿರುವ ಶುಭಾಂಶು ಶುಕ್ಲಾ
ಶುಭಾಂಶು ಶುಕ್ಲಾ ಅವರು ಕಮರ್ಷಿಯಲ್ ಸ್ಪೇಸ್ಫ್ಲೈಟ್ನಲ್ಲಿ ಪ್ರಯಾಣಿಸುವ ಮೊದಲ ಭಾರತೀಯ ವ್ಯಕ್ತಿ. ಐಎಎಸ್ಗೆ ಹೋಗುವ ಮೊದಲ ಭಾರತೀಯ ಪ್ರಜೆ. ಸ್ಪೇಸ್ಫ್ಲೈಟ್ನ ಪೈಲಟ್ ಆದ ಮೊದಲ ಭಾರತೀಯ ವ್ಯಕ್ತಿ ಎನ್ನುವ ಗರಿಮೆಯೂ ಅವರಿಗಿದೆ.
14 ದಿನಗಳ ಬಾಹ್ಯಾಕಾಶ ವಾಸ, 60 ವೈಜ್ಞಾನಿಕ ಪ್ರಯೋಗ
ನಾಲ್ವರು ಗಗನಯಾತ್ರಿಗಳು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳಲಿದ್ದಾರೆ.
ಶುಭಾಂಶು ಶುಕ್ಲಾ ಅವರು ಆಹಾರ ಮತ್ತು ಪೌಷ್ಟಿಕಾಂಶ ಸಂಬಂಧಿತ ಪ್ರಯೋಗಗಳನ್ನು ಮಾಡಲಿದ್ದಾರೆ. ತೀರಾ ನಗಣ್ಯ ಗುರುತ್ವಾಕರ್ಷಣ ಶಕ್ತಿ ಇರುವ ಪರಿಸರದಲ್ಲಿ ಕಾಳುಗಳನ್ನು ಮೊಳಕೆ ಬರಿಸುವುದು ಇತ್ಯಾದಿ ಪ್ರಯೋಗಗಳು ಇದರಲ್ಲಿ ಒಳಗೊಂಡಿರುತ್ತವೆ. ಇಸ್ರೋ ಸಂಸ್ಥೆಯಿಂದ ಏಳು ಪ್ರಯೋಗಗಳಿದ್ದರೆ, ನಾಸಾ ಜೊತೆಗೂಡಿ ಐದು ಜಂಟಿ ಪ್ರಯೋಗಗಳು ಇದರಲ್ಲಿ ನಡೆಯಲಿವೆ.

ಬಾಹ್ಯಾಕಾಶದಲ್ಲಿ ಶುಭಾಂಶುಗೆ ಮನೆಯೂಟ
ಸಾಮಾನ್ಯವಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಸೇವಿಸುವ ಹೆಚ್ಚಿನ ಆಹಾರವನ್ನು ನಾಸಾ ಸಂಸ್ಥೆಯೇ ಸಿದ್ಧಪಡಿಸುತ್ತದೆ. ಆದಾಗ್ಯೂಇಸ್ರೋ ಪ್ರಯತ್ನದಿಂದಾಗಿ ಶುಭಾಂಶು ಅವರು ಹೆಸರು ಬೇಳೆ ಹಲ್ವಾ, ಕ್ಯಾರೆಟ್ ಹಲ್ವಾ, ಮಾವಿನ ಹಣ್ಣಿನ ರಸ ಹಾಗೂ ಅನ್ನವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದಾರೆ. 2006ರಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ವಿಶೇಷವಾಗಿ ತಯಾರಿಸಿದ್ದ ಸಮೋಸಗಳನ್ನು ತಮ್ಮೊಂದಿಗೆ ತಗೆದುಕೊಂಡು ಹೋಗಿರುವುದು ಇಲ್ಲಿ ನೆನಪಿಸಬಹುದಾಗಿದೆ.
ಇದನ್ನೂ ಓದಿ: ಕೇರಳದ ವಿಳಿಂಜಂ ಬಂದರಿನಲ್ಲಿ ಲಂಗರು ಹಾಕಿದ ವಿಶ್ವದ ಅತಿ ದೊಡ್ಡ ಸರಕು ಸಾಗಣೆ ಹಡಗು
ಶುಭಾಂಶು ಶುಕ್ಲಾ ಯಾರು?
ಉತ್ತರಪ್ರದೇಶದ ಲಕ್ನೋ ಸಂಜಾತರಾದ ಶುಭಾಂಶು ಶುಕ್ಲಾ ಹುಟ್ಟಿದ್ದು 1985, ಅಕ್ಟೋಬರ್ 10ರಂದು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಓದಿದ ಅವರು ಇಂಡಿಯನ್ ಏರ್ಫೋರ್ಸ್ ಪೈಲಟ್ ಆಗಿ ಸಾಕಷ್ಟು ಅನುಭವ ಪಡೆದಿದ್ಧಾರೆ. ಸುಖೋಯ್ 30, ಜಾಗ್ವರ್, ಹಾಕ್, ಡಾರ್ನಿಯರ್ ಇತ್ಯಾದಿ ಜೆಟ್ ವಿಮಾನಗಳನ್ನು 2,000 ಗಂಟೆ ಹಾರಾಟ ಮಾಡಿದ ಅನುಭವಿ.
ಜೀವನಪೂರ್ತಿ ಆಗಸದಲ್ಲಿ ಹಾರುವುದು ನನ್ನ ಕನಸು
ನಾನು ಭಾಗಿಯಾಗಿರುವ ಯೋಜನೆ ನನ್ನ ಜೀವಮಾನದ ಕನಸಾಗಿತ್ತು. ಎಲ್ಲಿಂದಲೋ ಆರಂಭವಾಗಿದ್ದ ನನ್ನ ಪ್ರಯಾಣ, ಎಲ್ಲಿಗೆ ಬಂದು ತಲುಪಲಿದೆ ಎಂಬ ಅಂದಾಜಿರಲಿಲ್ಲ. ಜೀವನಪೂರ್ತಿ ಆಗಸದಲ್ಲಿ ಹಾರುವುದು ನನ್ನ ಕನಸು, ಅಂತಹ ಅವಕಾಶ ನನಗೆ ಸಿಕ್ಕಿದೆ ಎಂದು ಶುಭಾಂಶು ಹೇಳಿದ್ದಾರೆ.
