ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಅವರ ಪತ್ನಿ ಕಮಲಮ್ಮ ಅವರನ್ನು ಕೊಲೆ ಮಾಡಿ ನಗದು ದೋಚಿದ್ದ ಆರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, 33,74,800 ನಗದು ಸೇರಿದಂತೆ 2 ಬೈಕ್, ಒಂದು ಕಾರು ಹಾಗೂ 7 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ: ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಅವರ ಪತ್ನಿ ಕಮಲಮ್ಮ ಅವರನ್ನು ಕೊಲೆ ಮಾಡಿ ನಗದು ದೋಚಿದ್ದ ಆರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, 33,74,800 ನಗದು ಸೇರಿದಂತೆ 2 ಬೈಕ್, ಒಂದು ಕಾರು ಹಾಗೂ 7 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. 
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮಲ್ಲಿಕಾರ್ಜುನ್ ಅವರ ಕಾರು ಚಾಲಕನಾಗಿದ್ದ ಹುಣಸೋಡು ತಾಂಡಾದ ಹನುಮಂತನಾಯ್ಕ (22), ಗುಂಡಪ್ಪ ಶೆಡ್ನ ಪ್ರದೀಪ್ ವಿ. ಯಾನೆ ಮೊದಲಿಯಾರ್ (21), ಅನುಪಿನಕಟ್ಟೆ ತಾಂಡಾದ ಅಪ್ಪುನಾಯ್ಕ ಸಿ. ಯಾನೆ ಅಪ್ಪು (21), ಗುಂಡಪ್ಪ ಶೆಡ್‌ನ ಸತೀಶ್ ವಿ. (26), ಅನುಪಿನಕಟ್ಟೆ ತಾಂಡಾದ ರಾಜು ವೈ. ಯಾನೆ ತೀತಾ(24) ಬಂಧಿತ ಆರೋಪಿಗಳಾಗಿದ್ದಾರೆ.
ಈ ಕೃತ್ಯಕ್ಕೆ ಕಾರು ನೀಡಿದ್ದ ಕೌಶಿಕ್ ಎಂಬ 7ನೇ ಆರೋಪಿಯನ್ನು ಕೂಡ ಬಂಧಿಸಲಾಗಿದೆ ಎಂದು ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಎಂಜಿನಿಯರ್ ಕೆ.ವಿ. ಮಲ್ಲಿಕಾರ್ಜುನ ಅವರು ತಮ್ಮ ಮಗನ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಕಟ್ಟುವ ಸಲುವಾಗಿ 37 ಲಕ್ಷ ರೂ. ಕೈ ಸಾಲ ಪಡೆದು ಮನೆಯಲ್ಲಿ ತಂದಿಟ್ಟಿದ್ದರು.
ಈ ಎಲ್ಲಾ ಹಣವನ್ನು ಚಾಲಕ ಹನುಮಂತನಾಯ್ಕ ಮೂಲಕವೇ ಸ್ನೇಹಿತರ ಬಳಿಯಿಂದ ತರಿಸಿ ಮನೆಯಲ್ಲಿಟ್ಟಿದ್ದರು.
ಹೀಗಾಗಿ ಈ ಹಣ ಲಪಟಾಯಿಸುವ ಉದ್ದೇಶದಿಂದ ಹನುಮಂತನಾಯ್ಕ ಸ್ನೇಹಿತರೊಂದಿಗೆ ಸೇರಿ ತಂತ್ರ ರೂಪಿಸಿದ್ದ ಎಂದು ವಿವರಿಸಿದರು.
ಮಲ್ಲಿಕಾರ್ಜುನ ಅವರು ಗೋವಾಕ್ಕೆ ತೆರಳಿದ ಸಂದರ್ಭ ನೋಡಿಕೊಂಡ ಆರೋಪಿ ಹನುಮಂತನಾಯ್ಕ ತನ್ನ ಸೋದರನಿಗೆ ಅಪಘಾತವಾಗಿದ್ದು, ಆತನ ಚಿಕಿತ್ಸೆಗೆ 2 ಸಾವಿರ ಹಣ ಬೇಕೆಂದು ಜೂನ್ 16 ರ ರಾತ್ರಿ ಮಲ್ಲಿಕಾರ್ಜುನ ಅವರ ಮನೆಗೆ ಹೋಗಿ ಕಮಲಮ್ಮನವರ ಬಳಿ ಕೇಳಿದ್ದ.
ಆ ಸಂದರ್ಭದಲ್ಲಿ ಅವರು ಹಣ ನೀಡದೆ ಮಾರನೇ ದಿನ ಬರುವಂತೆ ಹೇಳಿದ್ದರು.
ಇದನ್ನು ತನ್ನ ಸ್ನೇಹಿತರಿಗೆ ತಿಳಿಸಿದ ಆರೋಪಿ ಹನುಮಂತನಾಯ್ಕ ಜೂನ್ 17 ರಂದು ರೆಮ್ಯಾಟೋ ಕಂಪನಿಯ ಟೀ ಶರ್ಟ್ ಖರೀದಿಸಿ ಮೂವರೂ ಧರಿಸಿಕೊಂಡು ಮನೆಯ ಬಳಿ ಹೋಗಿ ಚಿಕಿತ್ಸೆಗೆ ಹಣ ಕೇಳಿದ್ದಾರೆ.

ಕೊಲೆಯಾದ ಕಮಲಮ್ಮ
ಕೊಡಲು ಅವರು ನಿರಾಕರಿಸಿದ್ದಾರೆ, ಬಳಿಕ ಆರೋಪಿಗಳು ನೀರು ಕೇಳಿದ್ದಾರೆ, ನೀರು ಕೊಡಲು ಕಮಲಮ್ಮ ಒಳಗೆ ಹೋಗಲು ತಿರುಗುತ್ತಿದ್ದಂತೆ ಅಪ್ಪುನಾಯ್ಕ ಹಿಂದೆಯೇ ಒಳಗೆ ಹೋಗಿ ಬಾಯಿ ಒತ್ತಿ ಹಿಡಿಯಲು ಮುಂದಾದಾಗ ಕಮಲಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಆಗ ಕಬ್ಬಿಣದ ಚೂಪಾದ ರಾಡಿನಿಂದ ಕುತ್ತಿಗೆಗೆ ಹೊಡೆದು ಸಾಯಿಸಿದ್ದಾನೆ. ಬಳಿಕ ಹಣ ತೆಗೆದುಕೊಂಡು ಎಲ್ಲರೂ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು.
ಬಳಿಕ ಎಲ್ಲರೂ ಬೇರೆ ಬೇರೆ ಕಡೆ ತೆರಳಿದ್ದರು. ಹೋಟೆಲ್‌ನಲ್ಲಿ ಉಳಿದುಕೊಂಡು ಹೊಸ ಮೊಬೈಲ್‌ಗಳನ್ನು ಖರೀದಿ ಮಾಡಿದ್ದರು.
ಇನ್ನೋರ್ವ ಆರೋಪಿ ಕೌಶಿಕ್ ಎಂಬಾತ ಇವರಿಗೆ ಕಾರು ನೀಡಿ ಸಹಾಯ ಮಾಡಿದ್ದು, ಆತನ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಎಂದರು.
ಲಪಟಾಯಿಸಿದ್ದ 35 ಲಕ್ಷ ರೂಪಾಯಿಯಲ್ಲಿ 33,74,800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೊತೆಗೆ ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರು, 7 ಮೊಬೈಲ್, 3 ಬೈಕ್, ಕೊಲೆ ಮಾಡಿದ ಆಯುಧ ಸೇರಿದಂತೆ ಸುಮಾರು 41,14,800 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ತುಂಗಾ ನಗರ ಪೊಲೀಸರು ಮತ್ತು ಅಧಿಕಾರಿಗಳ ತನಿಖಾ ತಂಡ ಉತ್ತಮವಾಗಿ ಕೆಲಸ ನಿರ್ವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಗುವುದು ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಬಾಲರಾಜು, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್, ಪಿಎಸ್ಐ ಕುಮಾರ್, ರಘುವೀರ್, ಸಿಬ್ಬಂದಿಗಳಾದ ಕಿರಣ್, ರಾಜು, ಅರುಣ್‌ಕುಮಾರ್, ಅಶೋಕ್, ಮೋಹನ್, ಕೇಶವ್ ಕುಮಾರ್, ಕಾಂತರಾಜ್, ನಾಗಪ್ಪ, ಹರೀಶ್ ನಾಯ್ಕ ಮತ್ತಿತರರು ಇದ್ದರು.
ನಂಬಿಕಸ್ಥ ಮನೆ ಕಾರು ಚಾಲಕನೇ ಹಂತಕನಾದ..!
ಪ್ರಕರಣದ ಮುಖ್ಯ ಆರೋಪಿ ಹನುಮಂತನಾಯ್ಕ್, ಕಳೆದ ಒಂದು ವರ್ಷದಿಂದ ಮಲ್ಲಿಕಾರ್ಜುನ್ ಅವರ ಮನೆಯ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.

ಡ್ರೈವರ್ ಹನುಮಂತ ನಾಯ್ಕ್
ಪ್ರತಿನಿತ್ಯ ಮಲ್ಲಿಕಾರ್ಜುನ್ ಅವರನ್ನು ಶಿವಮೊಗ್ಗದಿಂದ ಅವರು ಕರ್ತವ್ಯನಿರ್ವಹಿಸುತ್ತಿದ್ದ ಹೊಸದುರ್ಗ ಪಟ್ಟಣಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ.
ಆತನ ಬಗ್ಗೆ ಕುಟುಂಬ ಸದಸ್ಯರಿಗೂ ಒಳ್ಳೆಯ ಅಭಿಪ್ರಾಯವಿತ್ತು.
ಈ ನಡುವೆ ಮಲ್ಲಿಕಾರ್ಜುನ್ ಅವರ ಪುತ್ರ ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳಿಸಿದ್ದು, ಎಂಡಿ ವಿದ್ಯಾಭ್ಯಾಸ ಮಾಡಲು ನಿರ್ಧರಿಸಿದ್ದರು.
ಇದಕ್ಕಾಗಿ ಮಲ್ಲಿಕಾರ್ಜುನ್ ಅವರು ಸ್ನೇಹಿತರು, ಸಂಬಂಧಿಗಳಿಂದ 35 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು.
ಈ ಹಣದ ಬ್ಯಾಗ್ ನ್ನು ಆರೋಪಿ ಹನುಮಂತನಾಯ್ಕ್ ನೇ ಕಾರಿನಲ್ಲಿ ಮನೆಗೆ ತಂದು, ಬೆಡ್ ರೂಂನ ವಾರ್ಡ್ ರೋಬ್ ನಲ್ಲಿಟ್ಟಿದ್ದ.
ಆದ್ರೆ ಈ ಭಾರೀ ದೊಡ್ಡ ಹಣವು ಆರೋಪಿಯ ಚಿತ್ತ ಕೆಡಿಸಿತ್ತು ಮಾತ್ರವಲ್ಲ ಈ ಕುರಿತಂತೆ ಇತರೆ ಆರೋಪಿಗಳಿಗೆ ಮಾಹಿತಿ ನೀಡಿದ್ದ.
ತದನಂತರ ಎಲ್ಲರೂ 35 ಲಕ್ಷ ಹಣ ದೋಚಲು ಸಂಚು ರೂಪಿಸಿದ್ದರು.
ಮಲ್ಲಿಕಾರ್ಜುನ್ ಅವರು ಮನೆಯಲ್ಲಿರದ ವೇಳೆ ಜೂ. 17 ರಂದು ಮಧ್ಯಾಹ್ನ ಸರಿಸುಮಾರು 3.30 ರ ವೇಳೆಗೆ ಹನುಮಂತನಾಯ್ಕ್ ವಿಜಯನಗರದಲ್ಲಿರುವ ಮನೆಗೆ ಇತರೆ ಆರೋಪಿಗಳಾದ ಪ್ರದೀಪ್ ಮತ್ತು ಅಪ್ಪುನಾಯ್ಕ್ ಜೊತೆ ಆಗಮಿಸಿದ್ದ.
ತನ್ನ ಅಣ್ಣನಿಗೆ ಅಪಘಾತವಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ.
ಇದಕ್ಕಾಗಿ 3000 ರೂ. ನೀಡುವಂತೆ ಕೇಳಿಕೊಂಡಿದ್ದ. ಹಣ ನೀಡಲು ಕಮಲಮ್ಮ ನಿರಾಕರಿಸಿದ್ದರು.
ನಂತರ ಆರೋಪಿಗಳು ಕುಡಿಯಲು ನೀರು ಕೊಡುವಂತೆ ಕೇಳಿದ್ದರು.
ಅವರು ನೀರು ತರಲು ಅಡುಗೆ ಮನೆಗೆ ತೆರಳಿದಾಗ, ಮೂರು ಜನ ಆರೋಪಿಗಳು ಬಟ್ಟೆಯಿಂದ ಬಾಯಿ ಮುಚ್ಚಿದ್ದರು.
ನಂತರ ತೆಂಗಿನಕಾಯಿ ಸುಲಿಯುವ ಆಯುಧದಿಂದ ಕುತ್ತಿಗೆಗೆ ಚುಚ್ಚಿ ಹತ್ಯೆ ಮಾಡಿದ್ದರು.
ನಂತರ ಮನೆಯಲ್ಲಿದ್ದ 35 ಲಕ್ಷ ರೂ.ಗಳನ್ನು ದೋಚಿದ್ದರು. ತದನಂತರ ಗೋಪಾಳದಲ್ಲಿದ್ದ ಇತರೆ ಮೂವರು ಆರೋಪಿಗಳಾದ ಪ್ರಭುನಾಯ್ಕ್, ರಾಜ ಯಾನೆ ತೀತಾ ಮತ್ತು ಸತೀಶ್ ಜೊತೆ ಕಾರಿನಲ್ಲಿ ಪರಾರಿಯಾಗಿದ್ದರು.
ದೋಚಿದ ಹಣದಲ್ಲಿ ಎಲ್ಲರೂ ಒಂದೊಂದು ಹೊಸ ಮೊಬೈಲ್ ತೆಗೆದುಕೊಂಡು ಬೇರೆ ಬೇರೆ ಕಡೆ ಪರಾರಿಯಾಗಿ ಲಾಡ್ಜ್‌ಗಳಲ್ಲಿ ವಾಸವಾಗಿದ್ದರು.
ತುಂಗಾ ನಗರ ಪೊಲೀಸರು ಮತ್ತು ಅಧಿಕಾರಿಗಳ ತನಿಖಾ ತಂಡ ಉತ್ತಮವಾಗಿ ಕೆಲಸ ನಿರ್ವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.