ಪುತ್ತೂರು : ಸಂಪತ್ತು ಮೌಲ್ಯವರ್ಧನೆ ಆಗುವುದು ದಾನ ಮಾಡಿದಾಗ ಮಾತ್ರ. ಮಾನವೀಯತೆ ಇದ್ದಲ್ಲಿ ಬದುಕು ಬಂಗಾರವಾಗಲು ಸಾಧ್ಯ. ಇವೆರಡು ಇಂದಿನ ಕಾರ್ಯಕ್ರಮದಲ್ಲಿ ಮೇಳೈಸಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಕೊಂಬೆಟ್ಟು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ ಎಜ್ಯುಕೇಶಬಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ನಡೆದ ವಸ್ತ್ರ ವಿತರಣೆ, ಸಹಭೋಜನ ಕಾರ್ಯಕ್ರಮ ‘ಸೇವಾ ಸೌರಭ’ವನ್ನು ಕಲ್ಪವೃಕ್ಷದ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇದೊಂದು ಸೇವಾ ಸಂಭ್ರಮವಾಗಿದ್ದು, ಅತಿಥಿ ದೇವೋಭವ ಎಂಬ ಅರ್ಥ ಇಲ್ಲಿ ಸಂಪನ್ನಗೊಂಡಿದೆ. ಈ ನಿಟ್ಟಿನಲ್ಲಿ ಲೋಕದ ಜನರನ್ನು ಪ್ರೀತಿಯಿಂದ ಸೆಳೆದು ಅವರಲ್ಲಿ ಪ್ರೀತಿಯನ್ನು ತುಂಬಿಸುವ ಕೆಲಸ ಆಗಬೇಕಾಗಿ. ಆ ಕೆಲಸವನ್ನು ಟ್ರಸ್ಟ್ ರೂವಾರಿ ಅಶೋಕ್ ರೈ ಅವರಿಂದ ಆಗಿದೆ ಎಂದು ನುಡಿದರು.
ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಪುತ್ತೂರಿನ ಸಂಸ್ಕೃತಿಯ ಸಾರವನ್ನು ಎತ್ತಿಹಿಡಿದಿದೆ. ಸಾಂಸ್ಕೃತಿಯ ಸಾರ ಹೊಂದಿರುವ ಸ್ಥಾನವನ್ನು ದ.ಕ.ಜಿಲ್ಲೆ ಹೊಂದಿದ್ದು, ಅದನ್ನು ಪುತ್ತೂರಿನಲ್ಲಿ ಕಾಣುವಂತಾಗಿದೆ.
ಜತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಬಡ 20 ಮಂದಿಯನ್ನು ಸನ್ಮಾನಿಸಲಾಗಿದೆ ಎಂದ ಅವರು, ಕಂಬಳ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ಆಯೋಜಿಸಿ ಮತ್ತೊಮ್ಮೆ ಪುತ್ತೂರಿನ ಜನತೆಗೆ ಗೌರವ ತಂದು ಕೊಡುವ ಕೆಲಸ ಅಶೋಕ್ ರೈ ಅವರಿಂದ ಆಗಲಿದೆ. ಮುಂದೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಿ ಎಂದು ವಿನಂತಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದೇವರು ಮೆಚ್ಚುವ ಕೆಲಸವನ್ನು ಅಶೋಕ್ ರೈಗಳು ಮಾಡುತ್ತಿದ್ದಾರೆ. ಶಾಸಕರಾಗಲು ದೇವರು ಅವರ ಜತೆ ನಿಂತಿದ್ದಾರೆ ಎಂದರು.
ರೈ ಏಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ತಂದೆ-ತಾಯಿ ಮಾಡಿಕೊಂಡ ಬಂದಿರುವ ವಸ್ತ್ರ ವಿತರಣೆಯನ್ನು ಸಂಪ್ರದಾಯವಾಗಿ ಮಾಡಿಕೊಂಡಿ ಬರುತ್ತಿದ್ದೇನೆ.
ಮುಂದಿನ ದಿನಗಳಲ್ಲಿ 94ಸಿ, 94ಸಿಸಿ ಕಾನೂನು ರೀತಿಯಲ್ಲಿ ಭ್ರಷ್ಟಾಚಾರಮುಕ್ತವಾಗಿ ಪ್ರತಿಯೊಬ್ಬ ಫಲಾನುಭವಿಯ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಈಗಾಗಲೇ 600 ಮಂದಿ ಮಹಿಳೆಯರು ಮನೆಯಿಲ್ಲದೆ ನಿರ್ಗತಿಕರಾಗಿ ಬದುಕುತ್ತಿದ್ದಾರೆ. ಅವರಿಗೆ ಮೂರು ಸೆಂಟ್ಸ್ ಜಾಗ ನೀಡುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.
ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಟ್ರಸ್ಟ್ ಮುಖ್ಯಸ್ಥೆ ಸುಮಾ ಅಶೋಕ್ ರೈ, ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ , ಕೆಪಿಸಿಸಿ ವಕ್ತಾರ ಮಹಮ್ಮದ್ ಬಡಗನ್ನೂರು, ಪುತ್ತೂರು ಮಾಯಿದೇ ದೇವುಸ್‍ಚರ್ಚ್ ಧರ್ಮಗುರು ವಿ.ರೆ.ಫಾ.ಲಾರೆನ್ಸ್ ಮಸ್ಕರೇನಸ್, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಧಾರ್ಮಿಕ ಮುಖಂಡ ಜ.ಹುಸೈನ್ ದಾರಿಮಿ ರೆಂಜಿಲಾಡಿ,
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ ಎಂ.ಬಿ., ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ., ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,
ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಟ್ರಸ್ಟ್ ನ ನಿಹಾಲ್ ರೈ, ಸುಬ್ರಹ್ಮಣ್ಯ ರೈ ದಂಪತಿ, ಡಾ.ರಘು ಬೆಳ್ಳಿಪ್ಪಾಡಿ, ಬೇಬಿ ಕುಂದರ್, ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಜಿಪಂ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ಟ್ರಸ್ಟ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಕೃಷ್ಣ ಪ್ರಸಾದ್ ಬೊಲ್ಲಾವು ಉಪಸ್ಥಿತರಿದ್ದರು.