Connect with us

ಪಚ್ಚನಾಡಿಯ ತ್ಯಾಜ್ಯ ಸಮಸ್ಯೆಯಿಂದ ಮುಕ್ತಿ ಕೊಡಿ : ಸರ್ಕಾರಕ್ಕೆ ಪಚ್ಚನಾಡಿ ತ್ಯಾಜ್ಯ ಸಂತ್ರಸ್ಥರ ಮನವಿ

Published

on

ಪಚ್ಚನಾಡಿಯ ತ್ಯಾಜ್ಯ ಸಮಸ್ಯೆಯಿಂದ ಮುಕ್ತಿ ಕೊಡಿ :

ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಲು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪಚ್ಚನಾಡಿಯನ್ನು ವಾಸಯೋಗ್ಯ ಪ್ರದೇಶವನ್ನಾಗಿ ಮಾಡಲು, ಪ್ರಧಾನಿಯವರ ಕನಸಾದ ಸ್ಮಾರ್ಟ್ ಸಿಟಿ ಯೋಜನೆಯ ನಿಜವಾದ ಅನುಷ್ಠಾನ ಆಗುವಂತೆ ಮಾಡುವ ಮೂಲಕ ಪಚ್ಚನಾಡಿಯನ್ನು ಶೂನ್ಯ ತ್ಯಾಜ್ಯ ವಲಯವನ್ನಾಗಿ ಮಾಡಲು ಪಣತೊಟ್ಟು ಇಂದು ಪಚ್ಚನಾಡಿಯ ಮತ್ತು ತ್ಯಾಜ್ಯ ಘಟಕದಿಂದ ಬಾಧಿತವಾಗಿರುವ ಪ್ರದೇಶದ ಅನೇಕ ಪ್ರಮುಖರು ಪಚ್ಚನಾಡಿಯ ದೇವಿನಗರದ ಮೈದಾನದ ಸಭಾಂಗಣದಲ್ಲಿ ಸೇರಿದರು.

ಈ ಸಭೆಯಲ್ಲಿ ತ್ಯಾಜ್ಯ ನಿರ್ವಹಣೆ ಘಟಕದ ವೈಫಲ್ಯತೆ, ಅದರಿಂದ ಜನರಿಗಾಗುವಂತಹ ತೊಂದರೆ, ಪರಿಸರ ಮತ್ತು ಜೀವನದಿ ಫಾಲ್ಗುಣಿಗಾಗುವಂತಹ ಮಲಿನತೆ ಬಗ್ಗೆ ಜನರಿಗೆ ಮನದಟ್ಟು ಮಾಡಲಾಯಿತು. ಮತ್ತು ಒಂದು ಸಂಚಾಲನ ಸಮಿತಿ ರಚಿಸಿ, ಸಮಿತಿಯಲ್ಲಿ ಎಲ್ಲಾ ಬಾಧಿತ ಪ್ರದೇಶದ ಪ್ರಮುಖರನ್ನು ಸ್ವಯಂ ಪ್ರೇರಿತ ಸಂಚಾಲಕರಾಗಿ ನೇಮಿಸಿ ಸಾಮೂಹಿಕ ನೇತೃತ್ವ ಮುಂದಾಳತ್ವವನ್ನು ಎಂ ಜಿ ಹೆಗಡೆ ವಹಿಸಿಕೊಂಡರು. ಬಾಧಿತ ಪ್ರದೇಶದ ಇನ್ನು ಅನೇಕರನ್ನು ಮುಂದೆ ಸೇರಿಸಲಾಗುವುದೆಂದು ತೀರ್ಮಾನಿಸಲಾಯಿತು.

ವರದಿಯನ್ನು ಜಿಲ್ಲಾಧಿಕಾರಿ, ಆಯುಕ್ತರಿಗೆ ಈಗಾಗಲೇ ನೀಡಲಾಗಿದ್ದು ಇಂದಿನ ಸರಕಾರ ಮತ್ತು ಅಧಿಕಾರಿಗಳು ನಮ್ಮ ಕೂಗಿಗೆ ಮನ್ನಣೆ ಕೊಡುವರೆಂಬ ಭರವಸೆ ಇಟ್ಟು ಮನವಿ ಕೊಡುವುದಾಗಿ ತೀರ್ಮಾನಿಸಲಾಯಿತು ಈ ಬಾರಿಯಾದರೂ ಪಚ್ಚನಾಡಿ ಸ್ವಚ್ಛ ನಗರ ಪ್ರದೇಶವಾಗಿ ಮಾರ್ಪಾಡಾಗುತ್ತದೆ ಎನ್ನುವ ಆಶಾಭಾವನೆಯಿಂದ ನಮ್ಮ ಮನವಿಯನ್ನು ಸ್ಥಳೀಯ ಜನಪ್ರತಿನಿಧಿ, ಮಾನ್ಯ ಶಾಸಕರು, ಸಂಸದರು, ಉಸ್ತುವಾರಿ ಮಂತ್ರಿಗಳು, ಮಾನ್ಯ ಮುಖ್ಯ ಮಂತ್ರಿಗಳು, ಘನತೆವೆತ್ತ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಪ್ರಥಮ ಪ್ರಜೆ ಘನತೆವೆತ್ತ ರಾಷ್ಟ್ರಪತಿಗಳಿಗೆ ಮತ್ತು ಮಾಧ್ಯಮಗಳಿಗೆ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದು ಯಾವುದೇ ವ್ಯಕ್ತಿ, ಸಂಸ್ಥೆ, ಧರ್ಮ ಹಾಗೂ ಪಕ್ಷದ ವಿರೋಧವಾಗಿರದೆ ಕೇವಲ ಪಚ್ಚನಾಡಿಯನ್ನು ದೇಶದ ಉಳಿದ ನಗರಗಳಂತೆ ಶೂನ್ಯ ತ್ಯಾಜ್ಯ ನಗರವನ್ನಾಗಿಸುವಲ್ಲಿ ನಮ್ಮ ಹೋರಾಟ ಎಂದು ಎಲ್ಲರೂ ಧ್ವನಿಗೂಡಿಸಿದರು. ಡಾ ರೀಟಾ ನೊರೋನ್ಹಾ ಈ ಸಭೆಯನ್ನು ಉದ್ದೇಶಿಸಿ ನಾಲ್ಕು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ನಡೆಸಿದ ಸರ್ವೆಯ ರಿಪೋರ್ಟ್ ನ ಆಧಾರದಲ್ಲಿ ಪಚ್ಚನಾಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಸುಮಾರು 40% ಜನರು ಅಸ್ತಮಾದಿಂದ ಉಸಿರಾಟದ ತೊoದರೆ ಬಳಲುತ್ತಿದ್ದಾರೆ. ಇಲ್ಲಿ ಸುರಿಯುತ್ತಿರುವ ರಾಸಾಯನಿಕದಿಂದಾಗಿ ಬಹಳಷ್ಟು ಜನ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಬಹಳಷ್ಟು ಜನರಿಗೆ ಚರ್ಮರೋಗದ ವ್ಯಾಧಿ ಇದೆ. ಅದಕ್ಕಾಗಿ ಆರೋಗ್ಯಯುಕ್ತ ಸಮಾಜಕ್ಕಾಗಿ ಸೇರಿರುವ ಎಲ್ಲರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು.

ಸಮಿತಿಯ ಸಂಚಾಲಕರಾಗಿ ಆಯ್ಕೆಗೊಂಡ ಎಮ್ ಜಿ ಹೆಗಡೆ ಮಾತನಾಡಿ ಕಸದಿಂದ ರಸವೆಂಬ ನಾಣ್ಣುಡಿಯಂತೆ ಜನ ರೋಗ ಪೀಡಿತರಾದರೂ ಪರವಾಗಿಲ್ಲ ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಕಸದಿಂದ ರಸ ಹೀರುತ್ತಿದ್ದಾರೆ ಎಂದು ನುಡಿದರು. ಕಸ ವಿಲೇವಾರಿಯಲ್ಲಿ ಜನರು ಕೂಡ ಜಾಗ್ರತರಾಗಿ ನಮ್ಮ ನಮ್ಮ ಮನೆಯಲ್ಲಿಯ ಕಸವನ್ನು ವಿಂಗಡಿಸಿ ಹಸಿ ತ್ಯಾಜ್ಯವನ್ನು ಮಣ್ಣಿನೊಂದಿಗೆ ಬೆರೆಸಿ ಮನೆಯ ಕೈತೋಟದ ಗಿಡಗಳಿಗೆ ಗೊಬ್ಬರವಾಗಿ ಬಳಸುವ ಮೂಲಕ ಸಾವಯವ ಗೊಬ್ಬರಕ್ಕೆ ಉತ್ತೇಜನ ಕೊಡುವ ಜೊತೆಗೆ ರಾಸಾಯನಿಕ ಗೊಬ್ಬರವನ್ನು ಕಡಿಮೆ ಮಾಡಬಹುದು ಎಂದರು. ಮನೆಮನೆಯಲ್ಲಿ ವಿಂಗಡಿಸಿದ ಕಸಗಳಲ್ಲಿ ಪೇಪರ್ ಒಣಗಿದ ಎಲೆ ಮುಂತಾದ ಉರಿಯುವ ವಸ್ತುಗಳನ್ನು ನಮ್ಮ ನಮ್ಮ ಮನೆಯಲ್ಲಿ ಉರಿಸಿ ಬಿಸಿನೀರು ಕಾಯಿಸಬಹುದು ಎಂದರು. ಉಳಿದ ಗಾಜಿನ, ಕಬ್ಬಿಣದ ಚೂರುಗಳನ್ನು ಗುಜಿರಿಗೆ ನೀಡುವ ಮೂಲಕ ನಮ್ಮ ಮನೆಯಲ್ಲೇ ವಿಲೇವಾರಿ ಮಾಡಬಹುದು ಎಂದರು. ಈ ಮೂಲಕ ಬುದ್ದಿವಂತರ ಜಿಲ್ಲೆಯ ಜನರು ಈ ಮೂಲಕ ಬುದ್ದಿವಂತರಾಗಬಹುದು ಎಂದು ನುಡಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅವರ ಮನೆಯ ಪಕ್ಕದ ರಸ್ತೆಯ ಕಾಂಕ್ರೀಟೀಕರಣವು ಎರಡೂವರೆ ಲಕ್ಷ ವಿನಿಯೋಗಿಸಿ ಐದು ಲಕ್ಷ ಬಿಲ್ ಮಾಡಿರುವ ಬಗ್ಗೆ ಗುತ್ತಿಗೆದಾರರು ನೀಡಿರುವ ಮಾಹಿತಿ ಪ್ರಸ್ತಾಪಿಸಿ ಭ್ರಷ್ಟಾಚಾರದ ವಿರುದ್ಧ ಜನರು ಹದ್ದಿನ ಕಣ್ಣಿಡುವ ಮೂಲಕ ತಮ್ಮ ತಮ್ಮ ತೆರಿಗೆಯ ಹಣವನ್ನು ಪೋಲಾಗದಂತೆ ನಿಗಾವಹಿಸಬೇಕು ಎಂದರು. ತ್ಯಾಜ್ಯ ಘಟಕವು ಎತ್ತರ ಪ್ರದೇಶದಲ್ಲಿದ್ದು ಮಳೆಗಾಲದಲ್ಲಿ ಕೊಳಚೆ ನೀರು ತಗ್ಗು ಪ್ರದೇಶಗಳಿಗೆ ಹರಿದು ಮುಂದಿನ ಕೆಲವೇ ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಬಾವಿಗಳು ಉಪಯೋಗಿಸದ ಸ್ಥಿತಿಗೆ ಬರಬಹುದು ಎಂದರು.

ಇವತ್ತು ಪಚ್ಚನಾಡಿ ಹಾಗೂ ಆಸುಪಾಸಿನ ಬಹಳಷ್ಟು ಪ್ರಮುಖರು ಸೇರಿದ್ದೀರಿ, ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಜನ ರಸ್ತೆಗಿಳಿಯುವ ಸಂದರ್ಭ ಬಂದರೆ ನಾವೆಲ್ಲರೂ ಸೇರಿ ಜನರನ್ನು ಅಣಿಗೊಳಿಸೋಣ ಎಂದರು. ಪ್ರಮುಖ ಸಮಾಜಸೇವಕರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ ಎಪ್ಪತ್ತರ ಹರೆಯದಲ್ಲೂ ಯುವಕಯುವತಿಯರನ್ನು ನಾಚಿಸುವಂತೆ ಈ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಡಾ ರೀಟಾ ನೊರೊನ್ಹಾನವರನ್ನು ಅಭಿನಂದಿಸುತ್ತಾ ಸೇರಿರುವ ನಾವೆಲ್ಲರೂ ಈ ಸಮಿತಿಯ ಆಧಾರ ಸ್ಥoಬಗಳಾಗಿರುತ್ತೇವೆ ಎಂದರು.

ಮನವಿಯಲ್ಲಿರುವ ಬೇಡಿಕೆಗಳು: 

1. ಈಗಿರುವ ತ್ಯಾಜ್ಯವನ್ನು ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿ ಶೂನ್ಯ ತ್ಯಾಜ್ಯವನ್ನಾಗಿಸುವುದು.

2. ಇನ್ನುಮುಂದೆ ದಿನದಿನದ ತ್ಯಾಜ್ಯವನ್ನು ಆಯಾಯ ದಿನವೇ ವಿಲೇವಾರಿ ಮಾಡುವುದು

3. ತ್ಯಾಜ್ಯ ಘಟಕದ ನಿರ್ವಹಣಾ ಮೇಲುಸ್ತವಾರಿಯಲ್ಲಿ ಸಮಿತಿಯ ಕೆಲವರನ್ನು ನೇಮಿಸುವುದು

4. ಡಂಪಿಂಗ್ ಯಾರ್ಡ್ ಇರುವ ಜಾಗದಲ್ಲಿ ಹಸಿರು ಉದ್ಯಾನವನ ನಿರ್ಮಿಸಿ ಸ್ಥಳೀಯರಿಗೆ ಉದ್ಯೋಗ ನೀಡುವುದು.

5. ಕಳೆದ ಬಾರಿಯ ಸಂತ್ರಸ್ತರಿಗೆ ಸರಿಯಾದ ಪರಿಹಾರವನ್ನು ವಿತರಿಸುವುದು.

6. ಸ್ವಚ್ಚ ಭಾರತ ಯೋಜನೆಯ ಪ್ರಕಾರ ಆಯಾಯ ವಾರ್ಡುಗಳಲ್ಲಿ ತ್ಯಾಜ್ಯವಿಲೇವಾರಿ ಘಟಕವನ್ನು ನಿರ್ಮಿಸುವುದು. ಮನವಿಯ ಈ ಎಲ್ಲಾ ಬೇಡಿಕೆಗಳಿಗೆ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಾರೆ ಎನ್ನುವ ಭರವಸೆಯೊಂದಿಗೆ ವಂದಿಸುತ್ತಾ  ಈ ಸಂದೇಶವನ್ನು ಜಿಲ್ಲೆಯ ಎಲ್ಲಾ ಸಾಮಾಜಿಕ ಕಳಕಳಿ ಇರುವ ಕಾರ್ಯಕರ್ತರು ಪರಸ್ಪರ ಹಂಚಿಕೊಳ್ಳಬೇಕಾಗಿ ವಿನಂತಿ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉಡುಪಿ: ಮಹಿಳಾ, ಮಕ್ಕಳ ಆಸ್ಪತ್ರೆಯಲ್ಲಿ ಎನ್‌ ಆರ್‌ಸಿ ಕೇಂದ್ರ ಇಲ್ಲದಕ್ಕೆ ಗರಂ ಆದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

Published

on

ಉಡುಪಿ:  ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ  ಶಶಿಧರ್ ಕೋಸಂಬೆ ಅವರು ಶುಕ್ರವಾರ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆಹಾರ, ಚಿಕಿತ್ಸೆ ಮತ್ತು ಆರೈಕೆ ನೀಡಿ ಆರೋಗ್ಯವನ್ನು ಸುಧಾರಿಸುವ ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ ಉಡುಪಿ ಜಿಲ್ಲಾ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಲ್ಲದೆ ಇರುವುದು ಖೇಧಕರ ಹೇಳಿದರು.

ಪ್ರತಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಈ ಕೇಂದ್ರ ಇದೆ. ಆದರೆ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರಕಾರದ ಸುಪರ್ದಿಗೆ ಬಂದು  ನಾಲ್ಕು ವರ್ಷಗಳಾದರೂ ಇನ್ನೂ ಎನ್‌ ಆರ್‌ ಸಿಯನ್ನು ಆರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬಹಳ ಬೇಸರದ ಸಂಗತಿ. ಈ ಬಗ್ಗೆ ಜಿಲ್ಲಾಡಳಿತ, ಡಿಎಚ್‌ಓ, ಜಿಲ್ಲಾ ಸರ್ಜನ್ ಯಾವ ಕಾರಣಕ್ಕಾಗಿ ಇದನ್ನು ಇನ್ನೂ ಆರಂಭಿಸಿಲ್ಲ ಎಂಬುದರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಮಕ್ಕಳು ದಾಖಲಾದ ಮೇಲೆ ಪ್ರತಿಯೊಂದು ಹೆಸರು, ತಾಯಿ ಹೆಸರು ದಾಖಲೆ ಮಾಡಿ, ಬಳಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ ಇಲ್ಲಿ ಕೇಸ್ ಶೀಟ್ ನೋಡಿದರೆ ಹಿನ್ನೆಲೆಯಲ್ಲಿ ಬರೆಯಲಾಗಿದೆ. ವಿವರ ಮಗುವಿನ ತಂದೆ ತಾಯಿ ಹೆಸರು ವಿಳಾಸ ಕೂಡ ಇಲ್ಲ. ಇದರಿಂದ ತಪ್ಪಾದ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚು ಇರುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಅನಾವಶ್ಯಕವಾಗಿ ಆ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಆದುದರಿಂದ ವೈದ್ಯರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.

Continue Reading

BELTHANGADY

ಶಿರಾಡಿ ಘಾಟ್ ರಸ್ತೆಯಲ್ಲಿ ಭೀಕರ ಅಪಘಾತ, ಮೂವರು ದುರ್ಮರಣ

Published

on

ಶಿರಾಡಿ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ನಡೆದಿದೆ.

 

ಕೊಕ್ಕಡ ನಿವಾಸಿ ಚಂದ್ರಶೇಖರ್ ಗೌಡ ,  ಉಜಿರೆ ನಿವಾಸಿಗಳಾದ ಶ್ರೀಧರ್ , ಜನಾರ್ದನ ಕೆರಿಮಾರ್ ಮೃತ ದುರ್ದೈವಿಗಳು. ಧರ್ಮಸ್ಥಳದಿಂದ ಮದ್ಯಾಹ್ನ 1.30ಕ್ಕೆ ಬೆಂಗಳೂರು ಮೂಲಕ ತಿರುಪತಿಗೆ ಹೊರಟಿದ್ದ ಕೆ.ಎಸ್. ಆರ್.ಟಿ.ಸಿ ರಾಜಹಂಸ ಬಸ್ ಮತ್ತು ಬೆಂಗಳೂರಿನಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕಡೆಗೆ ಬರುತ್ತಿದ್ದ ಕಾರು ಶಿರಾಡಿ ಘಾಟ್ ಗಡಿ ಸಮೀಪ ಮುಖಾಮುಖಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

 

ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜು ಗುಜಗುಜ್ಜಾಗಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ ಮತ್ತೋರ್ವರು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.  ಘಟನೆಯಲ್ಲಿ ಸುರೇಶ್ ಎಂಬವರಿಗೂ ಕೂಡಾ ಗಾಯಗಳಾಗಿವೆ ಎಂದು ತಿಳಿದುಬಂದಿದೆ.  ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

ಸಿಲಿಂಡರ್ ಅಭಾವ: ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

Published

on

ಬೆಂಗಳೂರು: ಇಸ್ರೇಲ್‌, ಅಮೇರಿಕ ಮತ್ತು ಇರಾನ್‌ ಯುದ್ಧದ ಕಿಚ್ಚು ಈಗಾಗಲೇ ಭಾರತದ ಅಡುಗೆ ಮನೆಯ ಬಾಗಿಲು ತಟ್ಟಿದೆ. ಇದೀಗ ಗ್ಯಾಸ್ ಸಿಲಿಂಡರ್ ಕೊರತೆಯ ನಡುವೆ, ಗ್ರಾಹಕರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ಈಗ ಬೆಲೆ ಏರಿಕೆಯ ಬಿಸಿ ಮತ್ತೊಂದು ಶಾಕ್ ನೀಡುವ ಸಾಧ್ಯತೆಯಿದೆ.


ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದ್ದು, ಹೋಟೆಲ್​ ಮಾಲೀಕರ ಸ್ಥಿತಿ ಅಯೋಮಯವಾಗಿದೆ. ಬೆಂಗಳೂರಿನಲ್ಲಿ ಕೆಲ ಹೋಟೆಲ್​​ಗಳು ಸಹ ಬಂದ್‌ ಆಗಿವೆ. ಹೀಗಿರುವಾಗ ಅಡುಗೆ ಎಣ್ಣೆ ಅಂಗಡಿಯ ಸರದಿ ಶುರುವಾಗಿದೆ. ಕಮರ್ಷಿಯಲ್ ಗ್ಯಾಸ್​ನಂತೆ ಅಡುಗೆ ಆಯಿಲ್ ಅಂಗಡಿಗಳು ಕೂಡ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ಅಡುಗೆ ಎಣ್ಣೆ ಮಾಲಿಕರೊಬ್ಬರು ಪ್ರತಿಕ್ರಿಯಿಸಿದ್ದು, ಕಳೆದ 1 ವಾರದಿಂದ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ. 100-200 ಬಾಕ್ಸ್‌ ಎಣ್ಣೆ ಬುಕ್‌ ಮಾಡಿದರೆ 20-50 ಬಾಕ್ಸ್‌ ಮಾತ್ರ ಕಳುಹಿಸುತ್ತಾರೆ. ಏಜೆಂಟರಲ್ಲಿ ಕೇಳಿದರೆ, ಸಪ್ಲೈ ಆಗುತ್ತಿಲ್ಲ. ಹೆಚ್ಚು ಬಾಕ್ಸ್‌ ನೀಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ 15-20 ರೂ. ದರ ಜಾಸ್ತಿ ಆಗಿರುವುದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸೀಮೆಎಣ್ಣೆ ಹಂಚಿಕೆ ಮತ್ತು ಆಮದು ನೀತಿಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದ ಹೊಸ ನಿರ್ಧಾರ

ಗ್ಯಾಸ್ ಅಭಾವ ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಖರೀದಿಸಬೇಕಾದ ಅನಿವಾರ್ಯತೆಯಿಂದಾಗಿ ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಭೀತಿ ಎದುರಾಗಿದೆ. ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಕಾಡುತ್ತಿದೆ. ನಗರದ ಕೆಲವು ಹೋಟೆಲ್‌ಗಳು ಮತ್ತು ಪಿಜಿಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದೆ ಮತ್ತೆ ಹಳೆಯ ಪದ್ಧತಿಯಂತೆ ಸೌದೆ ಒಲೆಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page