ಮಂಗಳೂರು: ಬಾರ್ಕೂರಿನಿಂದ ಕಾಸರಗೋಡಿನ ಚಂದ್ರಗಿರಿಯವರೆಗೆ ವ್ಯಾಪಿಸಿಕೊಂಡಿರುವ ಪರಶುರಾಮ ಸೃಷ್ಠಿ ತುಳುನಾಡಿನಲ್ಲಿ ಇಂದು ಪತ್ತನಾಜೆ ಸಂಭ್ರಮ.
ಕೋಲ, ನೇಮ,ಅಂಕ ಆಯನ, ಆಚರಣೆಗಳಿಗೆ ತೆರೆ ಬೀಳುವ ವಿಶೇಷ ದಿನವೇ ಈ “ಪತ್ತನಾಜೆ”. ಪತ್ತನಾಜೆಯಿಂದ ಹಿಡಿದು ದೀಪಾವಳಿವರೆಗೂ ತುಳುನಾಡಿನಲ್ಲಿ ಧಾರ್ಮಿಕ ಉತ್ಸವಗಳ ಆಚರಣೆ ನಡೆಯುವುದಿಲ್ಲ. ಒಂದರ್ಥದಲ್ಲಿ ಈ ಎಲ್ಲಾ ಆಚರಣೆಗಳಿಗೆ ಒಪೂರ್ಣವಿರಾಮ ನೀಡುವುದೇ ಈ ಪತ್ತನಾಜೆ ಎಂದರೆ ತಪ್ಪಾಗಲ್ಲ.

ಪತ್ತನಾಜೆ ಎಂದರೇನು?
ತುಳು ಪಂಚಾಂಗದಲ್ಲಿ ವೃಷಭ ಮಾಸಕ್ಕೆ ಬೇಶ ತಿಂಗಳು ಎಂದು ಕರೆಯುತ್ತಾರೆ. ಬೇಶ ತಿಂಗಳಿನಲ್ಲಿ ಬರುವ 10ನೇ ದಿನಕ್ಕೆ ಪತ್ತನಾಜೆ ಎಂದು ಕರೆಯುತ್ತಾರೆ.
ಹಿಂದಿನ ಕಾಲದಲ್ಲಿ ಪತ್ತನಾಜೆಯಿಂದ ಗದ್ದೆ ಉಳುವ ಮೂಲಕ ಕೃಷಿ ಕೆಲಸ ಮೊದಲ್ಗೊಂಡು 18ನೇ ದಿನ ನೇಜಿ ನೆಡುವ ಸಂಪ್ರದಾಯವಿತ್ತು. ಮೊದಲೆಲ್ಲ ಆರು ತಿಂಗಳು ಮಳೆಗಾಲ, ಆರು ತಿಂಗಳು ಸೆಕೆಗಾಲವಿದ್ದು ಮೇ ತಿಂಗಳಿಂದ ನವೆಂಬರ್ ತಿಂಗಳವರೆಗೆ ಗದ್ದೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಯಕ್ಷಗಾನ, ನೇಮ, ಕೋಲ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗಲು ಪುರುಷೋತ್ತು ಸಿಗುತ್ತಿರಲಿಲ್ಲ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಕೆಲವೊಮ್ಮೆ ಸ್ಥಗಿತಗೊಳ್ಳುತ್ತಿತ್ತು.
ನವೆಂಬರ್ ತಿಂಗಳಿನಲ್ಲಿ ಎರ್ಮಾಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಮೂಲಕ ಕರಾವಳಿಯಲ್ಲಿ ಉತ್ಸವವಗಳು ಮೊದಲ್ಗೊಂಡು ಮೇ ತಿಂಗಳ ಮೇಷ ಸಂಕ್ರಮಣದಂದು ಪಾವಂಜೆ ಸಮೀಪದ ಖಂಡೇವಿನಲ್ಲಿ ನಡೆಯುವ ಜಾತ್ರೆ ಮೂಲಕ ಸಂಪನ್ನಗೊಳ್ಳುತ್ತದೆ ಎಂಬ ಮಾತಿದೆ.
ಆದರೆ ಅವಿಭಜಿತ ದ.ಕ ಜಿಲ್ಲೆಯಲ್ಲಿ ಕೊಡಿ ಏರಿ ನಡೆಸುವ ಧಾರ್ಮಿಕ ಉತ್ಸವಗಳಲ್ಲಿ ಕೊಂಡಾಣ ಜಾತ್ರೆಯು ಪತ್ತನಾಜೆಯ ಹಿಂದಿನ ದಿನ ಸಂಪನ್ನಗೊಳ್ಳುವುದು ಪ್ರತೀತಿ.
ಪತ್ತನಾಜೆ ವಿಶೇಷತೆ:
ಪತ್ತನಾಜೆ ದಿನದಂದು ಮಳೆ ಬಂದೇ ಬರುತ್ತದೆ ಎಂಬುವುದು ಪೂರ್ವಜರ ನಂಬಿಕೆ. ಈ ದಿನ ಎರಡು ಮಳೆ ಹನಿ ಆದರೂ ಬೀಳಲೇಬೇಕು.
ಆದರೆ ಈಗ ಪ್ರಕೃತಿಯ ಏರಿಳಿತಗಳಿಂದ ಹವಾಮಾನದಲ್ಲಿ ವ್ಯತ್ಯಾಸ ಉಂಟಾದರೂ ಸಂಪ್ರದಾಯದ ಕ್ರಮದಲ್ಲಿ ಯಾವುದೇ ರೀತಿಯ ರಾಜಿ ನಡೆಯುವುದಿಲ್ಲ.
ಈ ದಿನ ದೇವಸ್ಥಾನಗಳಲ್ಲಿ ವಸಂತ ಪೂಜೆ ನಡೆದು ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೀಪಾವಳಿಯ ಬಳಿಕ ದೇವರು ಗರ್ಭಗುಡಿಯಿಂದ ಹೊರಗೆ ಬಂದು ಉತ್ಸವಗಳು ಆರಂಭಗೊಳ್ಳುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಆಟಿ ತಿಂಗಳ ನಂತರ ಬರುವ ಸೋಣ ತಿಂಗಳಿನಲ್ಲಿ ಶುಭ ಕಾಲವಿರುತ್ತದೆ. ಆದ್ದರಿಂದ ಅಂದಿನಿಂದ ಎಲ್ಲಾ ಆಚರಣೆಗಳು, ಉತ್ಸವಗಳು ಶುರುವಾಗುತ್ತದೆ.
ಯಕ್ಷಗಾನ ತಿರುಗಾಟಕ್ಕೂ ಸಮಾಪ್ತಿ:
ಯಕ್ಷಗಾನಗಳ ಮೇಳಗಳು ಕೂಡಾ ಪತ್ತನಾಜೆಯಂದು ತಮ್ಮ ಕೊನೆಯ ಪ್ರದರ್ಶನ ನೀಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟ ಮುಕ್ತಾಯ ಮಾಡುತ್ತದೆ. ದೀಪಾವಳಿಯ ಬಳಿಕ ದೀಪೋತ್ಸವ ಸಂದರ್ಭದಲ್ಲಿ ಪುನಃ ಪ್ರದರ್ಶನಕ್ಕೆ ಅಣಿಯಾಗುತ್ತದೆ.
ಪತ್ತನಾಜೆಯ ಬಳಿಕ ಯಕ್ಷಗಾನ ಮೇಳಗಳು ತಮ್ಮ ಪ್ರದರ್ಶನ ನಿಲ್ಲಿಸುವುದರಿಮದ ಅದರ ಕಲಾವಿದರಿಗೆ ಜೀವನ ನಿರ್ವಹಣೆ ಕಷ್ಟ.
ಶ್ರೀ ಕ್ಷೇತ್ರ ಕಟೀಲಿನಲ್ಲಿ ಕಟೀಲು ಮೇಳದ ಕಲಾವಿದರ ಆರ್ಥಿಕ ಸಮಸ್ಯೆಯನ್ನು ಮನಗೊಂಡು ಯಕ್ಷ ಧರ್ಮ ಬೋಧಿನಿ ಟ್ರಸ್ಟ್ ಕಲಾವಿದರಿಗೆ ಮಳೆಗಾಲದಲ್ಲೂ ವೇತನ ನೀಡುತ್ತದೆ.
ಯಕ್ಷಗಾನದ ತಿರುಗಾಟದ ಸಂದರ್ಭದಲ್ಲಿ ರಂಗಸ್ಥಳ ಮತ್ತಿತ್ತರ ವಿಧದಲ್ಲಿ ಬರುವ ಅನುದಾನದಲ್ಲಿನ ಉಳಿಕೆ ಮೊತ್ತವನ್ನು ಕಟೀಲಿನ 6 ಮೇಳ ಸುಮಾರು 300 ಕಲಾವಿದರಿಗೆ 6 ತಿಂಗಳ ಕಾಲ ಮಾಸಿಕ ವೇತನವಾಗಿ ಕಳೆದ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ.
ಈ ಬಾರಿ ಧರ್ಮಸ್ಥಳ, ಕಟೀಲು, ಸಾಲಿಗ್ರಾಮ, ಮಂದಾರ್ತಿ, ಸಸಿಹಿತ್ಲು, ಬಪ್ಪನಾಡು, ಪಾವಂಜೆ, ಹನುಮಗಿರಿ, ಶ್ರೀ ಶನೀಶ್ವರ ಮೇಳ ಸೇರಿದಂತೆ 15ಕ್ಕೂ ಹೆಚ್ಚು ಮೇಳಗಳು ತಿರುಗಾಟ ನಡೆಸಿವೆ.