Connect with us

DAKSHINA KANNADA

ಪುನಃ ಚೇತನಗೊಂಡ ಪೊಳಲಿ ಕಾಳಿ ಸರೋವರದ ಕೆರೆಗೆ ಬಾಗಿನ ಅರ್ಪಣೆ

Published

on

ಬಂಟ್ವಾಳ :  ಕರಿಯಂಗಳ  ಗ್ರಾಮದ ಪೊಳಲಿ ಕೊಳದ ಬಳಿಯ ಕಾಳಿ ಸರೋವರದ ಕೆರೆಯನ್ನು ಪುನಃಚೇತನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಗಿನ  ಅರ್ಪಣೆ ಕಾರ್ಯಕ್ರಮ ಇಂದು (ಮೇ 8) ನಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಇದರ ವತಿಯಿಂದ ಸುಮಾರು 10 ಲಕ್ಷ  ರೂ. ವೆಚ್ಚದಲ್ಲಿ ಪುನಃಶ್ಚೇತನಗೊಂಡಿರುವ ಕೆರೆಗೆ ಬಾಗಿನ ಅರ್ಪಣೆಯನ್ನು ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು  ಮಾತೃಶ್ರೀ ಡಾ.ಹೇಮಾವತಿ.ವಿ.ಹೆಗ್ಗಡೆ ನೆರವೇರಿಸಿದರು.

ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಡೆ ಮಾತನಾಡಿ, ನಮ್ಮೂರು ನಮ್ಮಕೆರೆ  ಯೋಜನೆಯು ವ್ಯಕ್ತಿಗಳಿಗೆ ಮಾತ್ರವಲ್ಲದೆ, ಕೃಷಿ ಕಾರ್ಯಗಳಿಗೂ ಹಾಗೂ ಅಂತರ್ಜಲ ಹೆಚ್ಚಿಸುವ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದೆ. ಕ್ರಿಕೆಟ್ ಮೈದಾನವಾಗಿದ್ದ ಅದೆಷ್ಟೋ ಕೆರೆಗಳು ಇದೀಗ ಸುಸಜ್ಜಿತ  ಪ್ರವಾಸಿ ಕೆರೆಗಳಾಗಿ ನಿರ್ಮಾಣ ಮಾಡುವುದರಲ್ಲಿ ಶಕ್ತರಾಗಿದ್ದೇವೆ ಎಂಬುದು ಹೆಮ್ಮೆಯ ವಿಷಯ. ಪೊಳಲಿ ದೇವಾಲಯದ ಬಳಿ ಇರುವ ಈ ಕೆರೆಯು ಸುಸಜ್ಜಿತವಾಗಿ ಹಾಗೂ ಉತ್ತಮ ರೀತಿಯಲ್ಲಿ ನಿರ್ಮಾಣವಾಗಿದ್ದು ನೋಡಲು ಬಹಳ ಸುಂದರವಾಗಿದೆ. ಈ ಕೆರೆಯನ್ನು ಕಾಪಾಡಿಕೊಳ್ಳುವುದು, ಹೂಳು ತುಂಬದಂತೆ ನೋಡಿಕೊಳ್ಳುವುದು ಊರಿನವರ ಕರ್ತವ್ಯವಾಗಿದೆ ಎಂದರು

ಮಾತೃಶ್ರೀ ಡಾ. ಹೇಮಾವತಿ ಹೆಗ್ಡೆ ಮಾತನಾಡಿ, ಪೊಳಲಿ ದೇವಿಯನ್ನು ದರ್ಶನ ಮಾಡಿ ಈ ಕೆರೆಯನ್ನು ಉದ್ಘಾಟಿಸಲು ಬಂದಿರುವುದು ಬಹಳ ಖುಷಿಯಾಗದೆ. ಪ್ರತಿ ಜೀವಸಂಕುಲಕ್ಕೆ ದಾಹ ಇದೆ. ಹಾಗಾಗಿ ನೀರು ಅಗತ್ಯವಾಗಿರುವುದರಿಂದ ಒಂದೂರಲ್ಲಿ ಒಂದು ಕೆರೆ ಪ್ರಧಾನವಾಗಿದೆ. ದಕ್ಷಿಣ ಕನ್ನಡದವರಿಗೆ ಹೇರಳವಾಗಿ ಮಳೆ ಇರುವುದರಿಂದ ನೀರಿನ ಕೊರತೆ ಅನುಭವ ಆಗಿಲ್ಲ ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಕೊರತೆ ತೀವ್ರವಾಗಿದ್ದು ಪ್ರತಿ ದಿನವೂ ಸಾಲು ಸಾಲಾಗಿ ನಿಂತು ನೀರು ಕೊಡದಲ್ಲಿ ಕೊಂಡು ಹೋಗುವ ದೃಶ್ಯ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಈ ನಿಟ್ಟಿನಲ್ಲಿ 1000 ಗಡಿ ಹತ್ತಿರಕ್ಕೆ ನಮ್ಮೂರು ನಮ್ಮ ಕೆರೆಯು  ಧರ್ಮಸ್ಥಳ ಯೋಜನೆಯ ಮೂಲಕ ನಿರ್ಮಾಣವಾಗಿರೋದು ಹೆಮ್ಮೆಯ ಸಂಗತಿ ಎಂದರು.

ಕೊಳದ ಬಳಿ ಕೆರೆಯ ಪಕ್ಕ  ಎಂಆರ್‌ಪಿಎಲ್ ಸಂಸ್ಥೆಯ ಸಿ.ಎಸ್‌ ಆರ್ ಅನುದಾನದಿಂದ ಸುಮಾರು 6.75 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯವನ್ನು MRPL ಸಂಸ್ಥೆಯ ಪ್ರಬಂಧಕ ಪ್ರದೀಪ್ ಕುಮಾರ್ ಉದ್ಘಾಟಿಸಿದರು.

ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀಜಿಗಳಾದ  ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ : ಮೇ.11 ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ

ಶಾಸಕ ರಾಜೇಶ್‌ ನಾಯ್ಕ್ ಯು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವಾಹಣಾಧಿಕಾರಿ ಡಾ  ಆನಂದ್ ಕೆ.,   ಮಾಜಿ ಸಚಿವ ರಮಾನಾಥ ರೈ ,  ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜಯ್ಯ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯವಿರ್ವಾಹಣ ಅಧಿಕಾರಿ ಅನಿಲ್ ಕುಮಾರ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್‌, ತಾ.ಪಂ ಬಂಟ್ವಾಳ ಕಾರ್ಯನಿರ್ವಹಣ ಅಧಿಕಾರಿ ಸಚಿನ್‌ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರಾನಾಥ.ಟಿ.ಸಾಲ್ಯಾನ್‌, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಅಭಿಯಂತರ ಸುಶಾನ್, ಗುತ್ತಿಗೆದಾರ ಕೆ.ಎಂ.ಅಬೂಬಕ್ಕರ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

DAKSHINA KANNADA

ಮಹಿಳೆಯೊಂದಿಗೆ ಅಸಭ್ಯ ವರ್ತನೆ; ಬಿಜೆಪಿ ಮುಖಂಡನ ಉಚ್ಚಾಟನೆ

Published

on

ವಿಟ್ಲ : ರಸ್ತೆ ವಿಚಾರವಾಗಿ ನಡೆದ ಜಗಳದ ವೇಳೆ ಮಹಿಳೆಗೆ ಗುಪ್ತಾಂ*ಗ ತೋರಿಸಿ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಕೃತಿ ಮೆರೆದಿದ್ದ. ಈ ವಿಚಾರ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಅಸಭ್ಯ ವರ್ತನೆ ತೋರಿದ ಪದ್ಮನಾಭ ಸಫಲ್ಯ ವಿರುದ್ಧ  ಬಿಜೆಪಿ ಕ್ರಮ ಕೈಗೊಂಡಿದೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿ ಪಕ್ಷದಿಂದ ಉಚ್ಚಾಟಿಸಿರುವ ಬಗ್ಗೆ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ತಿಳಿಸಿದೆ. ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪದ್ಮನಾಭ ಸಪಲ್ಯನನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ, ಪಕ್ಷದಿಂದ ಉಚ್ಚಾಟಿಸಲಾಗಿದೆ. ಅಲ್ಲದೆ ಪಂಚಾಯತ್‌ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುವಂತೆ ಪುತ್ತೂರು ಗ್ರಾಮಾಂತರ ಮಂಡಲ  ಅಧ್ಯಕ್ಷ ದಯಾನಂದ ಶೆಟ್ಟಿ ಸೂಚಿಸಿದ್ದಾರೆ.

ಮಹಿಳೆಯರಿಗೆ ಗೌರವ ಮತ್ತು ಪ್ರಾತಿನಿಧ್ಯ ಕೊಡುವ ಪಾರ್ಟಿಯಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಘನತೆ, ಗೌರವ ಹಾಗೂ ವರ್ಚಸ್ಸಿಗೆ ಘಾಸಿಯುಂಟು ಮಾಡಿರುವ ಕಾರಣಕ್ಕಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪದ್ಮನಾಭ ಸಫಲ್ಯ ಹಾಗೂ ಮನೆ ಸಮೀಪದ‌ ಮಹಿಳೆಗೂ ರಸ್ತೆ ವಿಚಾರದಲ್ಲಿ ವಿವಾದ ಇತ್ತು. ಮಹಿಳೆ ಮನೆಗೆ ತೆರಳುತ್ತಿದ್ದ ವೇಳೆ ಇಡ್ಕಿದು ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಪದ್ಮನಾಭ ಸಫಲ್ಯ ಮನೆ ದಾರಿಗೆ ಗೇಟು ಅಳವಡಿಸಿದ್ದ. ಇದನ್ನು ಪ್ರಶ್ನಿಸಿದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ಸಂಬಂಧ ಮಹಿಳೆ ಪದ್ಮನಾಭ ಸಫಲ್ಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಪೆಹಲ್ಗಾಮ್ ದಾಳಿ : ಮೂವರು ಉಗ್ರರ ಫೋಟೋ ಬಿಡುಗಡೆ; ಸುಳಿವು ಕೊಟ್ಟವರಿಗೆ 20 ಲಕ್ಷ!

ದೂರು ದಾಖಲಾಗುತ್ತಿದ್ದಂತೆಯೇ ಪದ್ಮನಾಭ ಸಫಲ್ಯರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ರದ್ದುಗೊಳಿಸಿ ಪಕ್ಷದಿಂದ ಉಚ್ಚಾಟಿಸಲಾಗಿದೆ.  ಪದ್ಮನಾಭ ಸಫಲ್ಯನ ಅಸಭ್ಯ ವರ್ತನೆಯ ವೀಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

Continue Reading

DAKSHINA KANNADA

ಮಂಗಳೂರು : ಟಿಂಟೆಡ್ ಗ್ಲಾಸ್‌ ಅಳವಡಿಸಿದ್ದ ಕಾರುಗಳ ಮೇಲೆ ಬಿತ್ತು ಕೇಸ್

Published

on

ಮಂಗಳೂರು : ಬ್ಲಾಕ್ ಫಿಲ್ಮ್, ಸನ್ ಫಿಲ್ಮ್ ಅಥವಾ ಟಿಂಟೆಡ್ ಗ್ಲಾಸ್‌ಗಳನ್ನು ಅಳವಡಿಸಿ ಸಂಚಾರಿಸುವ ವಾಹನಗಳನ್ನು ಮಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿ ಕಾರುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

10 ದಿನದಲ್ಲಿ 500ಕ್ಕೂ ಅಧಿಕ ಕಾರುಗಳ ವಿರುದ್ಧ ಕೇಸ್ :

ಮೇ 2 ರಿಂದ 11 ವರೆಗೆ ಒಟ್ಟು 504 ಕಾರುಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ರೂ.2,53,000 ದಂಡ ವಿಧಿಸಲಾಗಿದೆ. ಅಲ್ಲದೇ ವಾಹನಗಳಿಗೆ ಅಳವಡಿಸಿರುವ ಟಿಂಟೆಡ್‌ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್‌ಗಳನ್ನು ವಾಹನ ಚಾಲಕರಿಂದ ತೆಗೆಸಿ ಪೊಲೀಸರು ಸೂಕ್ತ ತಿಳುವಳಿಕೆಯನ್ನು ನೀಡಿದರು.

ಇದನ್ನೂ ಓದಿ : ಉಡುಪಿ : ನಿಂತಿದ್ದ ಇನ್ಸುಲೇಟ‌ರ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರು

ಸರ್ವೋಚ್ಚ ನ್ಯಾಯಾಲಯದ ಆದೇಶ :

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸ್ ವತಿಯಿಂದ ವಿವಿಧ ಕಡೆಗಳಲ್ಲಿ ವಿಶೇಷ ಚೆಕ್‌ಪೋಸ್ಟ್‌ಗಳನ್ನು ತೆರೆದು ವಾಹನಗಳ ತಪಾಸಣೆ ಕಾರ್ಯವನ್ನು ವಾಹನಗಳ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲಾಯಿತು. ವಿಶೇಷ ಕಾರ್ಯಚಾರಣೆಯು ಮುಂದಿನ ದಿನಗಳಲ್ಲಿ ಮುಂದುವರೆಯಲಿದ್ದು, ಸಾರ್ವಜನಿಕರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಾಹನಗಳ ಗಾಜುಗಳಿಗೆ ಹೆಚ್ಚುವರಿಯಾಗಿ ಟಿಂಟ್‌ಗಳನ್ನು ಅಳವಡಿಸದಂತೆ ತಿಳುವಳಿಕೆ ನೀಡಲಾಯಿತು.

ವಿಡಿಯೋ ನೋಡಿ :

Continue Reading

BELTHANGADY

ನಿದ್ದೆ ಮಾತ್ರೆ ಸೇವನೆ ತಾಯಿ ಮಗ ಆತ್ಮಹತ್ಯೆ ಯತ್ನ ; ಡೆತ್‌ನೋಟ್‌ನಲ್ಲಿ ಏನಿದೆ ..?

Published

on

ಬೆಳ್ತಂಗಡಿ : ಅತಿಯಾದ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ದೆ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ (ಮೇ.12) ಸಂಭವಿಸಿದೆ.

ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ| ಕುಂಞರಾಮನ್ ನಾಯ‌ರ್ ಅವರ ಪತ್ನಿ ಕಲ್ಯಾಣಿ (96) ಸಾವನ್ನಪ್ಪಿದರೆ, ಪುತ್ರ, ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ ಕೆ. (58) ಅವರು ಗಂಭೀರಾವಸ್ಥೆಯಲ್ಲಿದ್ದು ಮಂಗಳೂರಿನ ವೆಸ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯವೇ ಈ ದುರ್ಘಟನೆಗೆ ಮುಕ್ಯ ಕಾರಣ ಎನ್ನಲಾಗಿದೆ.

ಮಲಗಿದ ಸ್ಥಿತಿಯಲ್ಲಿ ತಾಯಿ- ಮಗ :

ಕಲ್ಯಾಣಿ ಮತ್ತು ಜಯರಾಂ ಅವರ ಮನೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿರುವುದನ್ನು ಗಮನಿಸಿ ನೆರೆ ಹೊರೆಯವರು ಬಂದು ನೋಡಿದಾಗ ತಾಯಿ ಮತ್ತು ಮಗ ಮನೆಯೊಳಗೆ ದೇವರ ಕೋಣೆಯ ಎದುರು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಊರವರು ಸೇರಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿರುವುದು ಕಂಡುಬಂದಿತ್ತು. ತತ್‌ಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಡೆತ್‌ನೋಟ್‌ನಲ್ಲಿ ಏನಿದೆ ..?

ತೀವ್ರ ನಿಗಾ ಘಟಕದಲ್ಲಿದ್ದ ತಾಯಿ ಕಲ್ಯಾಣಿ ಅವರು ಮೇ 12ರಂದು ಸಂಜೆ ಕೊನೆಯುಸಿರೆಳೆದರು. ಮಗ ಜಯರಾಂ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ್ದರಿಂದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಲಗಿದ ಜಾಗದಲ್ಲಿ ಜಯರಾಂ ಅವರು ಬರೆದಿರುವ ನಾಲ್ಕು ಪುಟ ಗಳ ಪತ್ರ ಲಭಿಸಿದ್ದು ಅದರಲ್ಲಿ ಸಾಲದ ಸಮಸ್ಯೆ, ತನ್ನ ಅನಾರೋಗ್ಯದ ಕಾರಣ ದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಬರೆಯಲಾಗಿದೆ.

ತಾಯಿ ಕಳೆದ ನಾಲ್ಕು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಮಲಗಿದಲ್ಲೇ ಇದ್ದು ಅವರ ಆರೈಕೆಯನ್ನು ಮಗನೇ ಮಾಡುತ್ತಿದ್ದರು. ಆದ್ದರಿಂದ ನಾನು ಸತ್ತರೆ ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂಬ ಕಾರಣಕ್ಕೆ ನಾವಿಬ್ಬರೂ ಜತೆಯಾಗಿ ಸಾಯುತ್ತಿದ್ದೇವೆ ಎಂದು ಬರೆದಿದ್ದಾರೆ ಎನ್ನಲಾಗಿದೆ. ತಾಯಿಗೆ ಅವರು ಮೊದಲು ಮಾತ್ರೆ ನೀಡಿ ಬಳಿಕ ಮಾತ್ರೆ ಸೇವಿಸಿದರೇ ಅಥವಾ ಇಬ್ಬರೂ ಜತೆಗೆ ಮಾತ್ರೆ ಸೇವಿಸಿದ್ದಾರೆಯೇ ಎಂಬುದು ಗೊತ್ತಾಗಿಲ್ಲ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page