ಮಂಗಳೂರು : ‘ಡ್ರಗ್ ಫ್ರೀ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪಣ ತೊಟ್ಟಿದ್ದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದಲ್ಲೇ ಅತೀ ದೊಡ್ಡ ಡ್ರಗ್ಸ್ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರು ನಗರಕ್ಕೆ, ರಾಜ್ಯಕ್ಕೆ ಹಾಗೂ ಇತರ ರಾಜ್ಯಗಳಿಗೆ ಎಂಡಿಎಂಎ ಮಾ*ದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ದೇಶದ ವಿದೇಶಿ ಮಹಿಳಾ ಪ್ರಜೆಗಳಿಬ್ಬರನ್ನು ಬಂಧಿಸಿದ್ದಾರೆ.

ಬಾಂಬಾ ಫಾಂಟಾ ಅಲಿಯಾಸ್ ಅಡೋನಿಸ್ ಜಬುಲಿಲ್(31), ಅಬಿಗೈಲ್ ಅಡೋನಿಸ್(30) ಬಂಧಿತರು. ಇವರಿಂದ 75 ಕೋಟಿ ಮೌಲ್ಯದ 37.870 ಕೆಜಿ ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಿಂಗ್ ಪೆಡ್ಲರ್‌ಗಳ ಹಿಂದೆ ಬಿದ್ದ ಸಿಸಿಬಿ ಪೊಲೀಸ್ :
ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಉಳಿದುಕೊಂಡು ಮಾ*ದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಹೈದರ್ ಅಲಿಯಾಸ್ ಹೈದರ್ ಅಲಿ ಎಂಬಾತನನ್ನು 2024 ರಲ್ಲಿ ದಸ್ತಗಿರಿ ಮಾಡಲಾಗಿತ್ತು. ಆತನಿಂದ 15 ಗ್ರಾಂ ಎಂಡಿಎಂಎಯನ್ನು ಸ್ವಾಧೀನಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಪ್ರಕರಣದಲ್ಲಿ ಹೈದರ್ ಆಲಿ ಮತ್ತು ಇನ್ನಿತರ ವ್ಯಕ್ತಿಗಳಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಡ್ರ*ಗ್ ಪೆಡ್ಲರ್ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೇರಿಯಾ ದೇಶದ ವಿದೇಶಿ ಪ್ರಜೆ ಪೀಟರ್ ಇಕೆಡಿ ಬೆಲೆನ್ವು ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ 6.248 ಕೆಜಿ ಮಾದಕ ವಸ್ತುವಾದ ಎಂಡಿಎಂಎಯನ್ನು ಈ ಹಿಂದೆ ವಶಪಡಿಸಿಕೊಳ್ಳಲಾಗಿತ್ತು.
ಪೀಟರ್‌ಗೆ ಮಾದಕ ವಸ್ತುವನ್ನು ಪೂರೈಕೆ ಮಾಡುವ ಕಿಂಗ್ ಪಿನ್ ಡ್ರಗ್ಸ್ ಪೆಡ್ಲರ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಕಳೆದ 6 ತಿಂಗಳಿನಿಂದ ಮಂಗಳೂರು ಸಿಸಿಬಿ ಪೊಲೀಸರು ನಿರಂತರ ತನಿಖೆ ನಡೆಸಿದ್ದು, ಈ ಪ್ರಕರಣದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಹಾಗೂ ದೇಶದ ಇತರ ಕಡೆಗಳಿಗೆ ಮಾದಕ ವಸ್ತುವಾದ ಎಂಡಿಎಂಎಯನ್ನು ಬೃಹತ್ ಪ್ರಮಾಣದಲ್ಲಿ ವಿದೇಶಿ ಮಹಿಳಾ ಪ್ರಜೆಗಳು ವಿಮಾನದಲ್ಲಿ ಸಾಗಾಟ ಮಾಡುವ ಬಗ್ಗೆ ಮಾಹಿತಿ ದೊರೆತಿದೆ.
ಬೆಂಗಳೂರಿನ ಡ್ರಗ್ ಪೆಡ್ಲರ್ ಪೀಟರ್ ಇಕೆಡಿ ಬೆಲೆನ್ವುಗೆ ಮಾದಕ ವಸ್ತುವನ್ನು ಸಾಗಾಟ ಮಾಡಿದ ಆರೋಪಿಗಳು ಮಾರ್ಚ್ 14 ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಆರೋಪಿಗಳನ್ನು ದಸ್ತಗಿರಿ ಮಾಡಲು ಮಂಗಳೂರು ಸಿಸಿಬಿ ಪೊಲೀಸರ ತಂಡ ಬೆಂಗಳೂರಿಗೆ ತೆರಳಿದ್ದಾರೆ.
ಇದನ್ನೂ ಓದಿ : ಮಂಗಳೂರು: ಮಹಡಿಯಿಂದ ಬಿದ್ದು13 ವರ್ಷದ ಬಾಲಕ ಸಾ*ವು, ಪಬ್‌ಜಿ ಆಟದ ಬಗ್ಗೆ ಅನುಮಾನ..!
ದೆಹಲಿಯಿಂದ ವಿಮಾನದಲ್ಲಿ ಬಂದಿದ್ದ ದಕ್ಷಿಣ ಅಫ್ರಿಕಾ ದೇಶದ ಇಬ್ಬರು ಮಹಿಳಾ ಪ್ರಜೆಗಳನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ವಶಕ್ಕೆ ಪಡೆದುಕೊಂಡರು. ಈ ವೇಳೆ ಅವರ ವಶದಲ್ಲಿದ್ದ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ ನಲ್ಲಿ ಸಾಗಿಸುತ್ತಿದ್ದ 75 ಕೋಟಿ ಮೌಲ್ಯದ 37.878 ಕೆಜಿ ಮಾದಕ ವಸ್ತುವಾದ ಎಂಡಿಎಂಎ, 4 ಮೊಬೈಲ್ ಫೋನುಗಳು, ಟ್ರಾಲಿ ಬ್ಯಾಗ್ ಗಳು 2, ಪಾಸ್ ಪೋರ್ಟ್2, ನಗದು 18,460 ರೂ. ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದೆಹಲಿಯಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ವಿಮಾನದಲ್ಲಿ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೇರಿಯನ್ ಪ್ರಜೆಗಳಿಗೆ ಹಾಗೂ ಇತರ ಜನರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿಕೊಂಡು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.