ವಾಷಿಂಗ್ಟನ್: ಒಂದೆಡೆ ನೊಬೆಲ್ ಶಾಂತಿ ಪುರಸ್ಕಾರ ತನ್ನ ಕೈತಪ್ಪಿ ಹೋಗಿದ್ದಕ್ಕೆ ಡೊನಾಲ್ಡ್ ಟ್ರಂಪ್ ಆಕ್ರೋಶಭರಿತರಾಗಿದ್ದಾರೆ. ಇನ್ನೊಂದೆಡೆ ನೊಬೆಲ್ ಪುರಸ್ಕೃತೆ ಆ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್‌ಗೆ ಅರ್ಪಿಸುತ್ತೇನೆ ಎಂದು ಹೇಳಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಹೌದು, ‘ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ತಮ್ಮನ್ನು ಆಯ್ಕೆ ಮಾಡಬೇಕು, ಹಲವಾರು ಯುದ್ದಗಳನ್ನು ನಿಲ್ಲಿಸಿದ್ದರಿಂದ ನಾನು ಈ ಪ್ರಶಸ್ತಿಗೆ ಅರ್ಹ’ ಎಂದೇ ಹೇಳುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಸೆ ಕೊನೆಗೂ ಇಡೆರಲಿಲ್ಲ. ವೆನೆಜುವೆಲಾದ ಜನರ ಪರವಾದ ಹೋರಾಟಕ್ಕಾಗಿ ಮರಿಯಾ ಕೊರಿನಾ ಮಚದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದೆ.
ಮರಿಯಾ ಕೊರಿನಾ ಮಚಾದೊ ಯಾರು?
ನಾರ್ವೇಜಿಯನ್ ನೊಬೆಲ್ ಸಮಿತಿಯು ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದೆ. ಐರನ್ ಲೇಡಿ ಎಂದೂ ಕರೆಯಲ್ಪಡುವ ಮಚಾಡೊ ಅವರ ಹೆಸರು ಟೈಮ್ ಮ್ಯಾಗಜೀನ್ ‘2025ರ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ’ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಮರಿಯಾ ಕೊರಿನಾ ಮಚಾಡೊ ಅವರು ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಕೊಡಿಸುವ ಸಲುವಾಗಿ ಅವರ ದಣಿವರಿಯದ ಕೆಲಸ ಮತ್ತು ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಅವರ ಹೋರಾಟಕ್ಕಾಗಿ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಚಾಡೊ ಅವರು 20 ವರ್ಷಗಳ ಹಿಂದೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗಾಗಿ ಧ್ವನಿಯೆತ್ತಿದರು. ಅಂದಿನಿಂದ ಅವರು ಜನರ ಪರವಾಗಿ ನಿಂತಿದ್ದಾರೆ.
ಟ್ರಂಪ್‌ಗೆ ನೊಬೆಲ್ ಕೈ ತಪ್ಪಿದ್ದೇಕೆ?
ಈ ಬಾರಿಯ ನೊಬೆಲ್ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡಬೇಕು ಎಂದು ರಿಪಬ್ಲಿಕನ್ ಪಕ್ಷದ ನಾಯಕರು ಕೂಡ ಒತ್ತಾಯಿಸುತ್ತಾ ಬಂದಿದ್ದರು. ‘ಆಪರೇಷನ್ ಸಿಂಧೂರ ವೇಳೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ದವನ್ನು ನಾನು ನಿಲ್ಲಿಸಿದ್ದೆ’ ಎಂದು ಹಲವು ಬಾರಿ ಪುನರುಚ್ಚರಿಸಿದ್ದರು. ಅಲ್ಲದೆ 8 ಯುದ್ದಗಳನ್ನು ನಿಲ್ಲಿಸಿದ್ದೇನೆ ಎಂದು ಹೇಳುತ್ತಿದ್ದರು. ಆದರೆ 2025ರ ನೊಬೆಲ್ ಪ್ರಶಸ್ತಿ ಟ್ರಂಪ್ ಕೈ ತಪ್ಪಿದೆ. ಇದಕ್ಕೆ ಹಲವಾರು ಕಾರಣಗಳಿವೆ.
ಒಂದನೆಯದಾಗಿ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ 338 ಅರ್ಜಿಗಳು ಅಥವಾ ಶಿಫಾರಸುಗಳು ಬಂದಿದ್ದವು. ಈ ವರ್ಷದ ಪ್ರಶಸ್ತಿಗೆ ನಾಮನಿರ್ದೇಶನಗಳು ಜನವರಿ ಅಂತ್ಯದಲ್ಲಿ ಕೊನೆಗೊಂಡಿತ್ತು. ಆಗಷ್ಟೇ ಟ್ರಂಪ್ ಮತ್ತೊಮ್ಮೆ ಅಧಿಕಾರಕ್ಕೇರಿ ಶ್ವೇತಭವನಕ್ಕೆ ಪ್ರವೇಶಿಸಿದ್ದರು. ಅವರು ಪ್ರಚಾರ ನಡೆಸುವಷ್ಟರಲ್ಲಿ ನಾಮನಿರ್ದೇಶನದ ಅವಧಿ ಅಂತ್ಯವಾಗಿತ್ತು. ಮತ್ತೊಂದೆಡೆ 2025ರ ನೊಬೆಲ್ ಶಾಂತಿ ಪ್ರಶಸ್ತಿಯು 2024ರಲ್ಲಿ ಮಾಡಿದ ಕೆಲಸವನ್ನು ಗುರುತಿಸುತ್ತದೆ. ಆ ವರ್ಷದಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಇನ್ನೂ ಅಧಿಕಾರ ವಹಿಸಿಕೊಂಡಿರಲಿಲ್ಲ. ಹೀಗಾಗಿ ಟ್ರಂಪ್‌ಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದೆ.
ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್‌ಗೆ ಅರ್ಪಿಸಿದ ಮಚಾದೊ!
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಮಾರಿಯಾ ಕೊರಿನಾ ಮಚಾದೊ, “ವೆನೆಜುವೆಲಾದ ಜನರ ಹೋರಾಟದ ಈ ಗುರುತಿಸುವಿಕೆಯು ನಮ್ಮ ಕಾರ್ಯವನ್ನು ಪೂರ್ಣಗೊಳಿಸಲು ಒಂದು ಉತ್ತೇಜನವಾಗಿದೆ. ಸ್ವಾತಂತ್ರ್ಯವನ್ನು ವಶಪಡಿಸಿಕೊಳ್ಳುವ ನಮ್ಮ ಗುರಿಗೆ ನಾವು ಹತ್ತಿರದಲ್ಲಿದ್ದು, ನಾವು ವಿಜಯದ ಹೊಸ್ತಿಲಲ್ಲಿದ್ದೇವೆ. ಸ್ವಾತಂತ್ರ್ಯವನ್ನು ಗಳಿಸುವ ಮತ್ತು ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ವೆನೆಜುವೆಲಾ ಜನತೆಯ ಜೊತೆ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಲ್ಯಾಟಿನ್ ಅಮೆರಿಕದ ಜನರು ಮತ್ತು ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ನಾವು ಈ ಸಮಯದಲ್ಲಿ ಧನ್ಯವಾದ ಅರ್ಪಿಸುತ್ತೇವೆ” ಎಂದು ಹೇಳಿದ್ದಾರೆ.
ಮುಂದುವರೆದು, “ನಾನು ಈ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಸಮಸ್ತ ಜನರಿಗೆ ಮತ್ತು ನಮ್ಮ ಉದ್ದೇಶಕ್ಕೆ ಅವರ ನಿರ್ಣಾಯಕ ಬೆಂಬಲ ನೀಡಿದ್ದಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸುತ್ತೇನೆ” ಎಂದು ಮಾರಿಯಾ ಕೊರಿನಾ ಮಚಾದೊ ಘೋಷಿಸಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಹಕ್ಕಿ ಡಿ*ಕ್ಕಿ
ನೊಬೆಲ್ ಸಮಿತಿಯ ನಿರ್ಧಾರವನ್ನು ಟೀಕಿಸಿದ ಅಮೆರಿಕ
ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದೆ ಇದ್ದರೂ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು, ಯುದ್ಧಗಳನ್ನು ಕೊನೆಗೊಳಿಸುವುದನ್ನು ಮತ್ತು ಜೀವಗಳನ್ನು ಉಳಿಸುವುದನ್ನು ಟ್ರಂಪ್ ಮುಂದುವರಿಸುತ್ತಾರೆ ಎಂದು ಶ್ವೇತಭವನ ಹೇಳಿದೆ.
ಶ್ವೇತಭವನದ ವಕ್ತಾರ ಸ್ಟೀವನ್ ಚೆಯುಂಗ್ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, “ಅಧ್ಯಕ್ಷ ಟ್ರಂಪ್ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು, ಯುದ್ಧಗಳನ್ನು ಕೊನೆಗೊಳಿಸುವುದನ್ನು ಮತ್ತು ಜೀವಗಳನ್ನು ಉಳಿಸುವುದನ್ನು ಮುಂದುವರಿಸುತ್ತಾರೆ. ಅವರು ಮಾನವೀಯ ಹೃದಯವನ್ನು ಹೊಂದಿದ್ದಾರೆ. ಪರ್ವತವನ್ನೇ ಚಲಿಸಬಲ್ಲ ಇಚ್ಛಾಶಕ್ತಿ ಅವರಲ್ಲಿದೆ. ಅವರಂತೆ ಯಾರೂ ಇರಲಾರರು” ಎಂದು ಹೇಳಿದ್ದಾರೆ.
“ನೊಬೆಲ್ ಸಮಿತಿಯು ಶಾಂತಿಗಿಂತ ಹೆಚ್ಚಾಗಿ ರಾಜಕೀಯವನ್ನು ಆದ್ಯತೆಯಾಗಿ ಪರಿಗಣಿಸುತ್ತದೆ ಎಂಬುದನ್ನು ಈ ಪ್ರಶಸ್ತಿ ಸಾಬೀತುಪಡಿಸಿದೆ” ಎಂದು ಅವರು ಟೀಕಿಸಿದ್ದಾರೆ.