ಮಂಗಳೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳೀಯರನ್ನು ಹಲವು ನೆಪ ಮುಂದಿಟ್ಟು ಕೆಲಸದಿಂದ ಬಿಡಲಾಗುತ್ತಿದೆ.
ಜೊತೆಗೆ ಹೊರ ರಾಜ್ಯದವರನ್ನು ನೇಮಿಸಲಾಗುತ್ತಿದೆ. ವಿಮಾನ ನಿಲ್ದಾಣದ ಅಗ್ನಿಶಾಮಕ ದಳದಲ್ಲೂ ಹೊರ ರಾಜ್ಯದವರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವು ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಮಾರಾಟಗೊಂಡಾಗ ನಾವು ವ್ಯಕ್ತ ಪಡಿಸಿದ ಆತಂಕಗಳು ನಿಜವಾಗತೊಡಗಿದೆ.
ಈಗಾಗಲೇ ವಿಮಾನ ನಿಲ್ದಾಣದ ಗುತ್ತಿಗೆ ಕಂಪೆನಿಗಳ ಅಡಿ ದುಡಿಯುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಹಲವು ನೆಪಗಳನ್ನು ಮುಂದಿಟ್ಟು ಕೈ ಬಿಡಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆ ಕಾರ್ಮಿಕರ ಸೇರ್ಪಡೆಗೆ ಆದ್ಯತೆ ನೀಡಲಾಗುತ್ತಿದೆ.
ಈ ನಡುವೆ ಮಂಗಳೂರು ವಿಮಾನ ನಿಲ್ದಾಣದ ಅಗ್ನಿಶಾಮಕ ದಳಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಗುತ್ತಿಗೆ ನೀಡಲು ಅವಕಾಶ ಇಲ್ಲದಿರುವುದರಿಂದ ಅದಾನಿ ಕಂಪೆನಿ ನೇರ ನೇಮಕಾತಿ ಮಾಡಬೇಕಿದೆ.
![]()
ಮಂಗಳೂರು ವಿಮಾನ ನಿಲ್ದಾಣ ಅಗ್ನಿಶಾಮಕ ದಳದ ಸಿಬ್ಬಂದಿ ನೇಮಕಾತಿಯ ಕುರಿತು ಕೆಲವು ಮಾಹಿತಿಗಳು ಹೊರ ಬಂದಿದ್ದು ಸ್ಥಳೀಯರ ಮಟ್ಟಿಗೆ ಆಘಾತಕಾರಿಯಾಗಿದೆ.
80 ಸಿಬ್ಬಂದಿಗಳ ನೇಮಕಾತಿಯ ಅಗತ್ಯ ಇದ್ದರೂ ಸದ್ಯ 20 ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಇಲ್ಲಿ ಆಘಾತಕಾರಿ ಸಂಗತಿಯೆಂದರೆ SSLC ವಿದ್ಯಾಭ್ಯಾಸ ಸಾಕಾಗುವ ಅಗ್ನಿ ಶಾಮಕ ದಳದ ಸಿಬ್ಬಂದಿಯಂತಹ ಸಾಮಾನ್ಯ ಹುದ್ದೆಗೂ ಆದಾನಿ ಕಂಪೆನಿ ಸ್ಥಳೀಯರಿಗೆ ಆದ್ಯತೆ, ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈಗ ಇರುವ ಸುದ್ದಿಯ ಪ್ರಕಾರ ಅದಾನಿ ಕಂಪೆನಿಯು ಸ್ಥಳೀಯರಿಗೆ ಆದ್ಯತೆ ನೀಡಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿಲ್ಲ.
ಬದಲಿಗೆ ತನಗೆ “ಅನುಭವಸ್ಥರು” ಬೇಕು ಎಂದು ಹೊರ ರಾಜ್ಯಗಳಲ್ಲಿ ಸಿಬ್ಬಂದಿಗಳ ಹುಡುಕಾಟ ನಡೆಸುತ್ತಿದೆ.
ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದವರು, ತುಳುನಾಡಿನವರು ಬಿಡಿ ಇಡೀ ಕರುನಾಡಿನವರೂ ಅದಾನಿ ಕಂಪೆನಿಯವರು “ಹುಡುಕಾಟ” ನಡೆಸುತ್ತಿರುವ ಅನುಭವಸ್ಥರ ಪಟ್ಟಿಯಲ್ಲಿ ಇಲ್ಲ ಎಂಬುದು ವಿಮಾನ ನಿಲ್ದಾಣದ ಒಳಗಡೆಯಿಂದ ನುಸುಳಿ ಬರುತ್ತಿರುವ ಸುದ್ದಿ.
ಅಗ್ನಿಶಾಮಕ ದಳಕ್ಕೆ ಸಾಮಾನ್ಯವಾಗಿ ನೇಮಕಾತಿ ನಡೆಯುವುದು ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್ ಹಾಗೂ ದೈಹಿಕ ಫಿಟ್ನೆಸ್ ಆಧಾರದಲ್ಲಿ.
ನೇಮಕಾತಿಯ ನಂತರ ತರಬೇತಿ ನೀಡಿ ಅವರನ್ನು ವೃತ್ತಿಗೆ ಸಿದ್ಧಗೊಳಿಸಲಾಗುತ್ತದೆ. ಆದರೆ ಅದಾನಿ ಕಂಪೆನಿ ಮಾತ್ರ ತುಳುನಾಡಿನವರನ್ನು ಮಾತ್ರ ಅಲ್ಲ ಇಡೀ ಕರ್ನಾಟಕದವರನ್ನೇ ಹೊರಗಿಡಲು “ಅನುಭವೀ ಸಿಬ್ಬಂದಿ” ಎಂಬ ಸೂತ್ರವನ್ನು ಮುಂದಿಟ್ಟು ತುಳುವರನ್ನು ವಂಚಿಸಲು ಹೊರಟಿದೆ.
ಇದು ಅಪಾಯಕಾರಿ ಬೆಳವಣಿಗೆ.
ದೇಶದ ಬೇರೆ ಬೇರೆ ಮಹಾ ನಗರಗಳಲ್ಲಿ ಉದ್ಯೋಗ ಕಳೆದು ಕೊಂಡು ತುಳುವರು ತಮ್ಮ ತವರು ಜಿಲ್ಲೆಗೆ ವಾಪಾಸಾಗುತ್ತಿರುವ,
ನಿರುದ್ಯೋಗ ಭೀಕರ ಸ್ವರೂಪ ತಾಳುತ್ತಿರುವ ಸಂದರ್ಭ ಹೊಸ ಉದ್ಯೋಗವಾಕಾಶಗಳು ತುಳುನಾಡಿನಲ್ಲಿ ಸೃಷ್ಟಿಯಾಗಬೇಕಿತ್ತು.
ದುರಂತ ಏನೆಂದರೆ, ಹೊಸ ಉದ್ಯೋಗಗಳ ಸೃಷ್ಟಿಗೆ ಸರಕಾರ ಇಲ್ಲಿ ಯಾವ ಯೋಜನೆಯನ್ನೂ ಹೊಂದಿಲ್ಲ. ಬದಲಿಗೆ ಇರುವ ಉದ್ಯೋಗಗಳನ್ನೂ ಸ್ಥಳೀಯರಿಗೆ ವಂಚಿಸಿ ಹೊರ ರಾಜ್ಯದವರ ಪಾಲಾಗುವಂತೆ ಮಾಡಲಾಗುತ್ತಿದೆ.
ಅದಾನಿ ಕಂಪೆನಿ ವಿಮಾನ ನಿಲ್ದಾಣದಲ್ಲಿ ಮಾಡುತ್ತಿರುವುದು ಅದನ್ನೆ. ಜಿಲ್ಲಾಡಳಿತ ಕಣ್ಣು ಮುಚ್ಚಿದೆ ಎಂದು ಆರೋಪಿಸಿದ್ದಾರೆ.
ವಿಮಾನ ನಿಲ್ದಾಣವನ್ನು ಮಾರಾಟ ಮಾಡಿಲ್ಲ. ಕೇವಲ ಮೈಂಟನೆನ್ಸ್ ಮಾತ್ರ ಅದಾನಿ ಕಂಪೆನಿಗೆ ನೀಡಲಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸಲು ನೋಡಿದ ಬಿಜೆಪಿ ಬೆಂಬಲಿಗರು ಈಗ ಏನಂತಾರೊ ತಿಳಿಯದು. ಆದರೆ ತುಳುನಾಡಿನ ಜನ ಈಗ ಸುಮ್ಮನಿರಬಾರದು.
ಧ್ವನಿ ಎತ್ತರಿಸಬೇಕು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಉದ್ಯೋಗಗಳೂ ತುಳುವ ಮಣ್ಣಿನ ಮಕ್ಕಳಿಗೇ ಮೀಸಲಾಗಬೇಕು.
ಎಮ್ ಆರ್ ಪಿ ಎಲ್ ನ 233 ಉದ್ಯೋಗದಲ್ಲಿ ಆದ ಮೋಸ ಇಲ್ಲಿ ಮರುಕಳಿಸಲು ಬಿಡಬಾರದು.
ಈಗ ನಾವು ಕೈ ಚೆಲ್ಲಿದರೆ ಮುಂದಕ್ಕೆ ವಿಮಾನ ನಿಲ್ದಾಣ ಮಾತ್ರ ಅಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೈಗಾರಿಕೆ, ಉದ್ಯಮಗಳ ಉದ್ಯೋಗಗಳೂ ನಮ್ಮ ಕೈತಪ್ಪಲಿದೆ.
ಅದಾನಿ ಕಂಪೆನಿ ವಿಮಾನ ನಿಲ್ದಾಣ ಅಗ್ನಿಶಾಮಕ ದಳದ ನೇಮಕಾತಿ ಪ್ರಕ್ರಿಯೆಯನ್ನು ಕೈ ಬಿಡಬೇಕು. ಪೂರ್ತಿ ನೇಮಕಾತಿ ಸ್ಥಳೀಯರಿಗೇ ಮೀಸಲಿಡಬೇಕು.
ಹಾಗಂತ ಇಡೀ ಕರಾವಳಿ ಒಕ್ಕೊರಲಿನಿಂದ ಮಾತಾಡಬೇಕು. ಶಾಸಕ, ಸಂಸದರನ್ನು ತಡೆದು ಪ್ರಶ್ನಿಸಬೇಕು ಎಂದರು.
ಹಾಗೆಯೆ ನಿಮ್ಮ ಮಾಹಿತಿಗೆ. ಇನ್ನು ಮೂರು ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಕಂಪೆನಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಲಿದೆ.
ಅಷ್ಟರಲ್ಲಿ ಅದಾನಿ ಕಂಪೆನಿಗೆ ವಿಮಾನ ನಿಲ್ದಾಣ ನಿರ್ವಹಣೆ ತರಬೇತಿಯನ್ನು ಪೂರ್ತಿಗೊಳಿಸಿ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ ಅಲ್ಲಿಂದ ಹೊರ ನಡೆಯಲಿದ್ದಾರೆ.
ಅದರ ಭಾಗವಾಗಿ ಅದಾನಿ ಕಂಪೆನಿ ಸುಮಾರು ನೂರರ ಹತ್ತಿರ ಸಿಬ್ಬಂದಿಗಳನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ತಂದಿದೆ.
ಈಗ ಇರುವ ಮಾಹಿತಿ ಪ್ರಕಾರ ಇದರಲ್ಲಿ ಒಬ್ಬರೂ ತುಳುನಾಡಿನವರಿಲ್ಲ.
ಕರುನಾಡಿನವರೂ ಇರುವುದು ಅನುಮಾನ. ಎಲ್ಲ ಉತ್ತರ ಭಾರತ ಮಯ. ನಿಮಗೆ ಅರ್ಥ ಆಗುತ್ತದೆ ಎಂದು ಭಾವಿಸುವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.