ವಿಶೇಷ ಸಂದರ್ಶನ: ದರ್ಶನ ಪಾತ್ರಿಯಾಗಿ ಮುಂಬೈ ಫ್ಯಾಶನ್ ಹುಡುಗ ಸನಿಧ್ ಪೂಜಾರಿ
ಮಂಗಳೂರು: ತುಳುವರ ನಾಡು.. ಹಲವು ಸಂಸ್ಕೃತಿ-ಸಂಪ್ರದಾಯ, ವೈವಿಧ್ಯತೆಗಳ ಬೀಡು.
ದೈವರಾಧನೆ ಇಲ್ಲಿಯ ಪ್ರಮುಖ ಆಚರಣೆಗಳಲ್ಲಿ ಒಂದು. ತಲ-ತಲಾಂತರಗಳಿಂದ ಇಲ್ಲಿ ದೈವಾರಾಧನೆ ಆಚರಣೆಗೊಳ್ಳುತ್ತೆ.

ಕಾರ್ಣಿಕದ ದೈವಗಳು ನಂಬಿದವರಿಗೆ ಇಂಬು ಕೊಡುತ್ತಾರೆ. ಜಾತಿ-ಧರ್ಮವನ್ನು ಲೆಕ್ಕಿಸದೆ, ಕಷ್ಟ ಎಂದವರನ್ನು ಕೈ ಹಿಡಿದು ನಡೆಸುತ್ತಾರೆ.
ಇಂತಹ ಮಹಾನ್ ಶಕ್ತಿಗಳ ಚಾಕರಿ ಮಾಡುವವರು ಹೆಚ್ಚಾಗಿ ಹಳೆ ತಲೆಮಾರಿನವರಾಗಿರ್ತಾರೆ.
ಆದ್ರೆ ಫ್ಯಾಶನ್ ಲೋಕದ ತಾರೆ, ಮಾಡೆಲ್ ಜಗತ್ತಿನ ಮಿಂಚೊಂದು ತುಳುನಾಡಿನ ದೈವಗಳ ಚಾಕರಿ ಮಾಡ್ತಾರೆ ಅಂದಾಗ ಕೊಂಚ ವಿಸ್ಮಯದ ಸಂಗತಿಯೇ ಸರಿ.

ದೈವಾರಾಧನೆಯನ್ನು ಮೂಢನಂಬಿಕೆ, ದೈವ ನರ್ತನವನ್ನು ಅವಹೇಳನ ಮಾಡುವ ಈ ಆಧುನಿಕ ಯುಗದಲ್ಲಿ ರ್ಯಾಂಪ್ ವಾಕ್ ಮಾಡೋ ಸ್ಫುರದ್ರೂಪಿ ಯುವಕ ದೈವ ಚಾಕರಿ ಮಾಡ್ತಾರೆ, ಅವರ ಮೈಮೇಲೆ ದರ್ಶನ ಬರುತ್ತೆ ಅಂದ್ರೆ ಸೋಜಿಗವೆನಿಸುತ್ತೆ.
ಆದ್ರೆ ಮಾಡರ್ನ್ ಯುವಕನಿಗೆ ಅದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮುಂಬೈ ಮಾಡೆಲ್ ಜಗತ್ತಿನ ಹೀರೋ ಸನಿಧ್ ಪೂಜಾರಿ.
ಮೊನ್ನೆ-ಮೊನ್ನೆ ಮೂಲಪುರುಷರಾದ ಕೋಟಿ-ಚೆನ್ನಯರ ಕ್ಷೇತ್ರ ಗೆಜ್ಜೆಗಿರಿಯಲ್ಲಿ ‘ದೇಯಿ ಬೈದೆತಿ’ಗೆ ದರ್ಶನ ಪೂಜಾರಿಯಾಗಿದ್ದ ಸನಿಧ್ ಪೂಜಾರಿ, ಕರಾವಳಿಯ ಹೆಮ್ಮೆಯ ‘ನಮ್ಮ ಕುಡ್ಲ’ ಚಾನೆಲ್ ನ ಸಿಬ್ಬಂದಿಯೊಂದಿಗೆ ದೂರವಾಣಿ ಮಾತುಕತೆಗೆ ಸಿಕ್ಕಾಗ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮುಂಬೈನಲ್ಲೇ ಹುಟ್ಟಿ ಬೆಳೆದಿರುವ ಸನಿಧ್ ಪೂಜಾರಿ ಅಷ್ಟೇ ಸ್ವಚ್ಛವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ.
ಪ್ರಸ್ತುತ ಮುಂಬೈಯಲ್ಲಿ ವಾಸ್ತವ್ಯವಿರುವ ಕಟಪಾಡಿ ಮಟ್ಟು ಕೊಪ್ಪಲದ ಲಲಿತ ಪೂಜಾರಿ ಮತ್ತು ಕಟಪಾಡಿ ಏಣಗುಡ್ಡೆಯ ರಮೇಶ್ ಗೋಪಾಲ ಪೂಜಾರಿ ಮಗನಾಗಿ ಜನಿಸಿದ ಸನ್ನಿಧ್ ಪೂಜಾರಿ ತಮ್ಮ ಮೊದಲ ಹಂತದ ಶಿಕ್ಷಣವನ್ನು ಮುಂಬೈನ ಮುಲುಂಡ್ನ ಸೈಂಟ್ ಪಾಯಸ್ ಹೈಸ್ಕೂಲ್ ನಲ್ಲಿ ಪೂರೈಸಿದ್ರು.

ನಂತರ ಮುಂಬೈಯ ಸೈಸ್ ಕಾಲೇಜಿನಿಂದ ಪತ್ರಿಕೋದ್ಯಮ ಪದವಿಯನ್ನು ಪಡೆದರು. 21ನೇ ವಯಸ್ಸಿಗೆ ಪತ್ರಿಕೋದ್ಯಮ ಕ್ಷೇತ್ರವನ್ನು ಪ್ರವೇಶಿಸಿದ ಇವರು ಡಿಎನ್ಎ ಎಂಬ ಆಂಗ್ಲ ಪತ್ರಿಕೆಯ ವರದಿಗಾರರಾಗಿದ್ದರು.
ಸನಿಧ್ ಪೂಜಾರಿ ಅವರ ಸಂಪೂರ್ಣ ಫೋನ್ ಇನ್ ಸಂದರ್ಶನ ಇಲ್ಲಿದೆ ನೋಡಿ….
ನಮ್ಮ ಕುಡ್ಲ ಪ್ರತಿನಿಧಿ: ನೋಡೋಕೆ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿ, ಫ್ಯಾಶನ್ ಲೋಕದತ್ತ ಹೆಜ್ಜೆ ಹಾಕಿದ್ದ ನೀವು ಏಕಾಏಕಿ ತುಳುನಾಡಿನಲ್ಲಿ ದೈವಗಳ ದರ್ಶನ ಪಾತ್ರಿ ಆಗಿದ್ದಾದರೂ ಹೇಗೆ.? ಎಷ್ಟನೇ ವರ್ಷದಲ್ಲಿ ಆರಂಭಿಸಿದ್ರಿ.?
ಸನ್ನಿಧ್ ಪೂಜಾರಿ: ಇದು ನನ್ನ ಮುತ್ತಜ್ಜ ಸೂರ್ಯ ಪೂಜಾರಿಯವರು ಮಾಡಿಕೊಂಡು ಬರುತ್ತಿದ್ದ ವೃತ್ತಿಯಾಗಿತ್ತು. ಆ ಭಾಗ್ಯ ಈಗ ಕಾಲಕ್ರಮೇಣ ನನಗೆ ಒಲಿದು ಬಂದಿದೆ.
ಅದನ್ನು ನಾನೀನ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನಾನು ಸುಮಾರು 21ನೇ ವರ್ಷ ವಯಸ್ಸಿರುವಾಗ ಆರಂಭಿಸಿದೆ. ಇವಾಗ 5 ವರುಷ ಆಗ್ತಾ ಬಂದಿದೆ.
ನಮ್ಮ ಕುಡ್ಲ ಪ್ರತಿನಿಧಿ: ಈಗಿನ ಆಧುನಿಕ ಯುಗದಲ್ಲಿ ಅದ್ರಲ್ಲೂ ನೀವು ಫ್ಯಾಶನ್ ಜಗತ್ತಿಗೆ ಪರಿಚಯವಾಗಿದ್ದವರು, ದರ್ಶನ ಪೂಜಾರಿಯಾಗಿ ಕಾಣಿಸಿಕೊಳ್ಳೋಕೆ, ಪ್ರಮುಖ ಕಾರಣವೇನಾದ್ರು ಇದ್ಯಾ.?, ಯಾರಾದ್ರೂ ಒತ್ತಾಯ ಮಾಡಿದ್ರಾ.?
ಸನ್ನಿಧ್ ಪೂಜಾರಿ: ದೈವಾರಾಧನೆ ಅಂದ್ರೆನೇ ಅದೊಂದು ದೊಡ್ಡ ಸೇವೆ. ದೈವಾರಾಧನೆ ಅಂದ್ರೆ ಜ್ಞಾನಭಂಡಾರ.
ಇದರಲ್ಲಿ ನಮ್ಮದು-ತಮ್ಮದು ಅನ್ನೋದು ಏನೂ ಇರುವುದಿಲ್ಲ. ದೈವ-ದೇವರ ಪ್ರೇರಣೆ, ಅವರು ನನ್ನ ಬಾಯಲ್ಲಿ ಮಾತನಾಡಿಸುತ್ತಾ ಹೋಗ್ತಾರೆ.
ನಾನು ಹೀಗೆ ಹೇಳಲು ಕಾರಣ ಏನಪ್ಪಾ ಅಂದ್ರೆ, ನಾನೊಬ್ಬ ಮುಂಬೈನಲ್ಲಿ ಹುಟ್ಟಿ, ಮುಂಬೈನಲ್ಲೇ ಬೆಳೆದವನಿಗೆ ದರ್ಶನ ಪಾತ್ರಿ ಕೆಲಸ ಮಾಡುವ ಭಾಗ್ಯ ಸಿಗುತ್ತೆ ಅಂದ್ರೆ ಅದರರ್ಥ ದೈವ-ದೇವರ ಪ್ರೇರಣೆ ಅಲ್ಲವೇ.
ಮನೆ-ಮನೆಯಲ್ಲಿ, ದೈವಸ್ಥಾನಗಳಲ್ಲಿ ದರ್ಶನ ಪಾತ್ರಿಯಾಗಿ ಸೇವೆ ಮಾಡ್ತಾ ಇದ್ದೇನೆ ಅಂದ್ರೆ, ಅದು ನನಗೆ ದೈವಾರಾಧನೆ ಬಗ್ಗೆ ಇರುವ ಜ್ಞಾನದಿಂದ ಅಲ್ಲ.
ಬದಲಾಗಿ ದೈವ ನನ್ನ ಬಾಯಲ್ಲಿ ಏನನ್ನು ಮಾತನಾಡಿಸುತ್ತೆ. ಅದನ್ನು ನಾನು ನುಡಿಕಟ್ಟು ಥರ ಹೇಳುತ್ತೇನೆ. ಬದ್ಲಾಗಿ ಖಂಡಿತವಾಗ್ಲೂ ಇದು ಯಾವುದೇ ಪುಸ್ತಕದಲ್ಲಿ ಅಥವಾ ಬರಹದಲ್ಲಿ ಸಿಗುವಂತಹ ವಿಚಾರವಲ್ಲ.
ಪುಸ್ತಕದಿಂದ ಮಸ್ತಕಕ್ಕೆ ಬರುವ ವಿಷಯವಲ್ಲ. ದೈವದೇವರು ಪ್ರೇರಣೆ-ಪರಿಕಲ್ಪನೆ ಕೊಡುತ್ತಾರೆ ನಾವು ಮಾಡ್ಕೊಂಡು ಹೋಗ್ತಿವಿ.
“ದರಿಪ್ಪುನಕುಲು” ಅಂದ್ರೆ ದರ್ಶನ ಪಾತ್ರಿಯಾಗಿ ಮಾಡೋರಿಗೂ ಮರಣ ಇದೆ. ಮಾಡುವಂತಹ ಆಚಾರ್ಯ ವರ್ಗಕ್ಕೂ ಮರಣ ಉಂಟು. ಒಪ್ಪಿಸಿರುವ ಸಂಸಾರಕ್ಕೂ ಮರಣವಿದೆ.
ಶಾಶ್ವತ ಯಾವುದು ಅಂದ್ರೆ ಅದು ದೇವರ ವಜ್ರಾಯುಧ ಮಾತ್ರ. ಅದ್ರಲ್ಲಿ ದೇವರ ಕಡ್ಸಲೆ ಇರಬಹುದು, ಬೆತ್ತ, ಮಣಿಗಂಟೆ ಇದು ಮಾತ್ರ ಶಾಶ್ವತ.
ನಾವು ನಿಮಿತ್ತವಷ್ಟೇ.. ಇವಾಗ ಸನಿಧ್ ದರ್ಶನ ಪಾತ್ರಿ ಅಂದ್ರೆ ಅದು ದೈವದ ಚಿತ್ತ. ‘ದೇಯಿ ಬೈದೆತ್ತಿ’ಯಿಂದ ಸನಿಧ್ ಪೂಜಾರಿಯೇ ಹೊರತು ಸನಿಧ್ ಪೂಜಾರಿಯಿಂದ ದೇಯಿ ಬೈದೆತ್ತಿ ಅಲ್ಲ.
ಹಾಗಾಗಿ ನಾನು ಈ ಸೇವೆಗೆ ಸದಾ ತಲೆಬಾಗುತ್ತೇನೆ. ಅಲ್ಲದೇ ನನಗೆ ಅಷ್ಟೇ ಭಯ-ಭಕ್ತಿ ಕೂಡ ಇದೆ. ಹಣ ಕೊಟ್ಟರೂ ಈ ಸೇವೆ ಸಿಗುವುದಿಲ್ಲ. ದರ್ಶನ ಪಾತ್ರಿಯಾಗೋದು ಪೂರ್ವಜನ್ಮದ ಪುಣ್ಯವೇ ಹೌದು.
ಜೊತೆಗೆ ನಾನು ದೈವದ ಸೇವೆ ಮಾಡ್ತಾ ಇದ್ದೀನಿ ಅಂದ್ರೆ ಒಂಥರಾ ವಿಚಿತ್ರವೂ ಹೌದು. ಯಾಕೆಂದ್ರೆ ನಾನು ಕಲಿತಿದ್ದು ಇಂಗ್ಲೀಷ್ ಮೀಡಿಯಂನಲ್ಲಿ, ಇದ್ದಿದ್ದು ಮುಂಬೈನಲ್ಲಿ.
ನಮಗೆ ದೈವ ಚಾಕರಿಯ ಹಿನ್ನಲೆ ಕೂಡ ಇಲ್ಲ. ಒಂದೇ ಒಂದು ಕಾರಣ ಅಂದ್ರೆ ನನ್ನ ಮುತ್ತಜ್ಜನಿಂದ ಬಂದ ಬಳುವಳಿ. ಚಿಕ್ಕಂದಿನಲ್ಲೇ ನನ್ನ ತಂದೆ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಸಾಕಿ, ದೊಡ್ಡವನನ್ನಾಗಿ ಮಾಡಿದ್ದು ನನ್ನ ಅಮ್ಮ.
ಆದ್ರೆ ನಮ್ಮ ಜೀವನದಲ್ಲಿ ಏನೂ ಕಷ್ಟ ಬರದಂತೆ ನೋಡಿಕೊಂಡಿದ್ದು, ನಮ್ಮ ಮುತ್ತಾತಾನ ಮನೆಯಲ್ಲಿದ್ದ ದೈವ-ದೇವರು. ಹಾಗಾಗಿ ನಾನು ಮುತ್ತಜ್ಜನಂತೆ ಈ ಸೇವೆಯನ್ನು ಮಾಡಬೇಕಾಯಿತು.
ಆದ್ರೆ ನನ್ನ ಅಮ್ಮನಿಗೊಂದು ಹಠವಿತ್ತು ಅದೇನಪ್ಪಾ ಅಂದ್ರೆ, ನನ್ನ ಶಿಕ್ಷಣ ಮುಗಿದ ನಂತರ, ನನಗೆ ಒಂದೊಳ್ಳೆ ಕೆಲಸ ಸಿಕ್ಕಿ, ಲೈಫ್ ಸೆಟಲ್ ಆದ್ಮೆಲೇ, ದೈವದ ಚಾಕರಿ ಮಾಡಬೇಕು ಅಂತ.
ಅದಕ್ಕೆ ತಕ್ಕಂತೆ ನಾನು ಡಿಗ್ರಿ ಮುಗಿಸಿ, ವಿಶೇಷವಾಗಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ತಕ್ಷಣ ನನಗೆ ಜೀ ಮೀಡಿಯಾದಲ್ಲಿ ಕೆಲಸ ಗಿಟ್ಟಿಸಿಕೊಂಡೆ.
ಮೊದಮೊದಲು ಫ್ರಿಲ್ಯಾನ್ಸರ್ ಆಗಿದ್ದ ನಾನು, ಬಳಿಕ ಬರುಬರುತ್ತಾ ಬೇರೆ-ಬೇರೆ ಮಾಧ್ಯಮದಲ್ಲಿ ಫುಲ್ ಟೈಮ್ ಪತ್ರಕರ್ತನಾಗಿ ಕೆಲಸ ಮಾಡಲಾರಂಭಿಸಿದ್ದೆ.
ನಮ್ಮ ಕುಡ್ಲ ಪ್ರತಿನಿಧಿ: ನಿಮಗೆ ಫ್ಯಾಶನ್ ಜಗತ್ತು ಹೇಗೆ ಪರಿಚಯ ಆಯ್ತು.?
ಸನ್ನಿಧ್ ಪೂಜಾರಿ: ಚಿಕ್ಕಂದಿನಿಂದಲೂ ನನಗೆ ಮಾಡೆಲ್ ಆಗ್ಬೇಕು ಅನ್ನೋ ಆಸೆ ಇತ್ತು. ಮಾಡೆಲ್ ಜಗತ್ತು ನನ್ನನ್ನು ಸೆಳೀತಾನೇ ಇತ್ತು. ಹೀಗಿರ್ಬೇಕಾದ್ರೆ, ಒಂದಿನಾ ಲಾಕ್ಮೆ ಫ್ಯಾಶನ್ ವೀಕ್ ನಲ್ಲಿ ಹೀಗೆ ಮಾತಾಡುವಾಗ, ಸನ್ನಿಧ್ ಮಾಡೆಲ್ ಆಗೋದಕ್ಕಿಂತ ಫ್ಯಾಶನ್ ಕೊರಿಯೋಗ್ರಾಫರ್ ಆದ್ರೆ ಒಳ್ಳೆಯದು ಎನ್ನುವ ಅಭಿಪ್ರಾಯ ಬಂತು.
ನೀವು ಯಾಕೆ ಕೊರಿಯೋಗ್ರಾಫರ್ ಆಗಬಾರದು ಎಂದರು. ಅದಕ್ಕೆ ತಕ್ಕಂತೆ ನನ್ನ ಚೀಫ್ ಕೊರಿಯೋಗ್ರಾಫರ್ ಟೂರ್ ಗೆ ಟಿಕೆಟ್ ಬುಕ್ ಆಗಿತ್ತು.
ಸೋ ಆಕಸ್ಮಿಕವಾಗಿ ಆ ಫ್ಯಾಶನ್ ಕಾರ್ಯಕ್ರಮ ನನ್ನ ಕೈ ಸೇರಿತು. ನಾನು ಇಡೀ ಫ್ಯಾಶನ್ ಶೋಗೆ ಕೊರಿಯೋಗ್ರಫಿ ಮಾಡಿದೆ. ದೇವರ ದಯೆಯಿಂದ ಆ ಕಾರ್ಯಕ್ರಮ ಸೂಪರ್ ಹಿಟ್ ಆಯ್ತು. ಹಾಗಾಗಿ ನನಗೆ ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳು ಸಿಗಲಾರಂಭಿಸಿದವು. ನಾನದನ್ನ ಮಾಡ್ತಾ ಹೋದೆ.
ನನಗೆ ಆಕಸ್ಮಿಕವಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಮುಂದುವರಿದಿದ್ದಕ್ಕಾಗಿ, ಇವಾಗ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಅಂತಾನೇ ಹೇಳಬಹುದು. ತುಂಬಾ ಶೋ ಮಾಡಿದ್ದೇನೆ.
ಇನ್ನೂ ಮಾಡಲಿಕ್ಕಿದೆ. ನಾನು ನಂಬಿದ ದೈವ ನನ್ನ ಕೈಯಿಂದ ಅದನ್ನು ಮಾಡಿಸ್ತಾರೆ ಅನ್ನೋ ನಂಬಿಕೆ ನನಗಿದೆ.
ನನ್ನ ಪ್ರಕಾರ ಮಾಡೆಲಿಂಗ್ ಗಿಂತ ಫ್ಯಾಶನ್ ಕೊರಿಯೋಗ್ರಾಫರ್ ಬೆಸ್ಟ್. ಯಾಕೆಂದ್ರೆ ಮಾಡೆಲಿಂಗ್ ಗೆ ಪ್ರತೀದಿನ ಹೊಸ ಮುಖಗಳ ಪರಿಚಯ ಆಗ್ತಾನೆ ಇರುತ್ತೆ.
ಆದ್ರೆ ಕೊರಿಯೋಗ್ರಾಫರ್ ಆದ್ರೆ ಯಾವಾಗ್ಲೂ ಒಬ್ಬರಾಗಿರ್ತಾರೆ. ಒಂದು ಪ್ರಕಾರದಲ್ಲಿ ಹೇಳೋದಾದ್ರೆ, ಕೊರಿಯೋಗ್ರಾಫರ್ಸ್ ಯಾವಾಗ್ಲೂ ಬಾಸ್ ಆಗಿರ್ತಾರೆ ಅನ್ನೋದು ನನ್ನ ಅಭಿಪ್ರಾಯ.
ಇವಾಗ ನನ್ನದು ಸ್ವಂತ ಕಂಪೆನಿ ಇದೆ. ಅದರ ಹೆಸರು “ರುದ್ರ ಎಂರ್ಟಟೈನ್ ಮೆಂಟ್”.
ಅದಕ್ಕೂ ಮುನ್ನ ಫ್ಯಾಷನ್ ಬಗೆಗಿನ ಆಸಕ್ತಿಯಿಂದ ಬಿಡುವಿನ ವೇಳೆಯಲ್ಲಿ ಜಾಹೀರಾತಿನ ರೂಪದರ್ಶಿಯಾಗಿ ದುಡಿದಿದ್ದೇನೆ.
ಪ್ಯಾಂಟಲೂನ್ಸ್, ಎಫ್ ಬಿಬಿ, ಜಿನ್ನಿನ್, ಜ್ಹೋನಿ ಇತ್ಯಾದಿ ಕಂಪನಿಗಳಿಗೆ ರೂಪದರ್ಶಿಯಾಗಿದ್ದೆ. ಅಲ್ಲದೇ ಬಾಲಿವುಡ್, ಟಾಲಿವುಡ್ ಸೇರಿದಂತೆ ಇಂಗ್ಲೀಷ್ ನಟ-ನಟಿಯರೊಂದಿಗೆ ಕೆಲಸ ಮಾಡಿದ ಖುಷಿ ಇದೆ.
ನಮ್ಮ ಕುಡ್ಲ ಪ್ರತಿನಿಧಿ: ನೀವು ಫ್ಯಾಶನ್ ಕೊರಿಯೋಗ್ರಾಫರ್ ಆಗಿ ಮಾಡಿದ ಕಾರ್ಯಕ್ರಮಳಾವುವು.?
ಸನ್ನಿಧ್ ಪೂಜಾರಿ: ಲ್ಯಾಕ್ಮೆ ಫ್ಯಾಷನ್ ವೀಕ್, ನವಿ ಮುಂಬಯಿ ಫ್ಯಾಷನ್ ವೀಕ್, ಕೇರಳ ಫ್ಯಾಷನ್ ಲೀಗ್, ಬೆಂಗಳೂರು ಬ್ಲೆಂಡರ್ಸ್ ಪ್ರೈಡ್, ಮಿಸ್ಟರ್ ನ್ ಮಿಸ್ಸ್ ಮ್ಯಾಂಗಲೋರ್.
ಆಮೇಲೆ ನನ್ನ ಸ್ವಂತ ಕಂಪೆನಿ “ರುದ್ರ ಎಂಟರ್ಟೈನ್ಮೆಂಟ್” ಮೂಲಕ ಮುಂಬೈನಲ್ಲಿ ಮಿಸ್ಟರ್ ಆಂಡ್ ಮಿಸ್ಸ್ ಬಿಲ್ಲವ 2017, ಮಿಸ್ಟರ್ ಆಂಡ್ ಮಿಸ್ಸ್ ಕರ್ನಾಟಕ 2018 ನಡೆಸಿಕೊಟ್ಟಿದ್ದೆ. ಅದು ಅಭೂತಪೂರ್ವ ಯಶಸ್ಸು ಕಂಡಿತ್ತು.
ಜೊತೆಗೆ ನನಗೆ ಅದು ಬಹಳ ಖುಷಿ ಕೊಟ್ಟ ವಿಚಾರ ಕೂಡ ಹೌದು.
ನಮ್ಮ ಕುಡ್ಲ ಪ್ರತಿನಿಧಿ: ನೀವು ಮೊದಲ ಬಾರಿಗೆ ದರ್ಶನ ಮಾಡಿದ ಜಾಗ ಯಾವುದು.? ಯಾವ ವರ್ಷದಲ್ಲಿ.?
ಸನ್ನಿಧ್ ಪೂಜಾರಿ: ನನಗೆ ಮೊದಲು ಎಣ್ಣೆ ಶಾಸ್ತ್ರ ನಡೆದಿದ್ದು, ನನ್ನ ತಾಯಿಯ ಕುಟುಂಬ ಉಡುಪಿ ಕಟಪಾಡಿಯ ಮಟ್ಟು ಕೊಪ್ಪಲದ ಚಾಮುಂಡಿ ದೈವಕ್ಕೆ.
ಅಮ್ಮ ಹೇಳಿದ ಹಾಗೆ ನಾನು ಪ್ರಾಪ್ತ ವಯಸ್ಸಿಗೆ ಬಂದು, ನಾನು ಜೀವನದಲ್ಲಿ ಒಂದು ಹಂತ ತಲುಪಿದ ಮೇಲೆಯೇ ದರ್ಶನದ ವಿಧಿ-ವಿಧಾನಗಳನ್ನು ಮಾಡಲಾಯಿತು.
ಅದರಂತೆ 2017 ರ ಮೇ 3 ರಂದು ಸಾಂತಾಕ್ರೂಜ್ನ ಮಹಾಕಾಳಿ ಕ್ಷೇತ್ರದ ಪ್ರಧಾನ ಧರ್ಮದರ್ಶಿ ಪಣಿಯೂರು ಗಿರಿಯ ಪೂಜಾರಿಯವರ ಮಾರ್ಗದರ್ಶನದಲ್ಲಿ ‘ಎಣ್ಣೆ ನೀಡುವ’ (ಎಣ್ಣೆ ಕೊರ್ಪಿನಿ) ಶಾಸ್ತ್ರವನ್ನು ಕಟಪಾಡಿಯ ಮಟ್ಟು ಕೊಪ್ಪಲದಲ್ಲಿ ಹಿರಿಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಅಲ್ಲದೇ ನಮ್ಮ ಕುಟುಂಬದ ದೈವಕ್ಕೆ ಮೊದಲು ದರ್ಶನ ಸೇವೆ ಆಗಬೇಕು ಎಂಬುದು ಕ್ರಮ.
ಹಾಗಾಗಿ ಕಟಪಾಡಿ ಮಟ್ಟುವಿನ ಚಾಮುಂಡಿ ದೈವಕ್ಕೆ ಮೊದಲ ದರ್ಶನ ನಡೆಯಿತು.
ನಾನು ಉದ್ಯಾವರದ ಪಣಿಯೂರು ಗಿರಿಯ ಪೂಜಾರಿಯವರನ್ನೇ ನನ್ನ ಗುರುವಿನ ಸ್ಥಾನದಲ್ಲಿ ಸ್ವೀಕರಿಸಿದ್ದೇನೆ.
ನಮ್ಮ ಕುಡ್ಲ ಪ್ರತಿನಿಧಿ: ಪ್ರಸಿದ್ಧ ಗೆಜ್ಜೆಗಿರಿ ನಂದನಬಿತ್ತ್ ಲ್ ಕ್ಷೇತ್ರದ ಬಗ್ಗೆ ಏನು ಹೇಳೋಕೆ ಇಷ್ಟಪಡ್ತೀರಿ.?
ಸನ್ನಿಧ್ ಪೂಜಾರಿ: ಗೆಜ್ಜೆಗಿರಿಯಂತಹ ಪುಣ್ಯ ಕ್ಷೇತ್ರದ ಬಗ್ಗೆ ಇಲ್ಲಿಯವರೆಗೆ ಕೇಳಿಲ್ಲ, ನೋಡಿಲ್ಲ. ಇದೇ ಮೊದಲ ಬಾರಿಗೆ ಗೆಜ್ಜೆಗಿರಿಯಂತಹ ಕ್ಷೇತ್ರದ ಬಗ್ಗೆ ತಿಳಿದುಕೊಂಡಿದ್ದೇನೆ.
ಸುಮಾರು 400 ವರ್ಷಗಳ ಇತಿಹಾಸ. ಹಾಗಾಗಿ ಈ ಕ್ಷೇತ್ರದ ಬಗ್ಗೆ ಮಾತಾಡುವಷ್ಟು ನನ್ನಲ್ಲಿ ವಿಚಾರಗಳಿಲ್ಲ.
ನನ್ನ ಹಿರಿಯರು ಹೇಳಿದ್ದನ್ನು ನಾನು ಕೇಳಿ, ಚಾಚೂ ತಪ್ಪದೇ ಪಾಲಿಸಿಕೊಂಡು ಹೋಗುತ್ತಿದ್ದೇನೆ. ತುಂಬಾ ಕಾರಣಿಕವುಳ್ಳ ಕ್ಷೇತ್ರ.
ನಮ್ಮ ಕುಡ್ಲ ಪ್ರತಿನಿಧಿ: ಪ್ರಸಿದ್ಧ ಗೆಜ್ಜೆಗಿರಿ ನಂದನಬಿತ್ತ್ ಲ್ ಕ್ಷೇತ್ರದಲ್ಲಿ ದೇಯಿ ಬೈದೆತ್ತಿಗೆ ದರ್ಶನ ಪಾತ್ರಿ ಮಾಡಿದಾಗ ಹೇಗನ್ನಿಸ್ತು.?
ಸನ್ನಿಧ್ ಪೂಜಾರಿ: ನಿಜವಾಗ್ಲೂ.. ನನಗೆ ದೇಯಿ ಬೈದೆತ್ತಿ’ ದರ್ಶನದ ಬಗ್ಗೆ ಬಾಯಲ್ಲಿ ಹೇಳೋಕೆ ಪದಗಳೇ ಸಾಲೋದಿಲ್ಲ.
ಇಲ್ಲಿ ಚಾಕರಿ ಮಾಡೋ ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ. ನಾನು ಇದನ್ನು ಕನಸಲ್ಲೂ ಎಣಿಸಿರಲಿಲ್ಲ. ಅದೊಂದು ಅಭೂತಪೂರ್ವ ಕ್ಷಣ. ನನ್ನ ಜೀವನದ ಮಹತ್ತರ ಘಳಿಗೆ ಕೂಡ.
ಗೆಜ್ಜೆಗಿರಿಗೆ ದರ್ಶನ ಪಾತ್ರಿಯಾಗಿ ಮಾಡಲು ನನಗೆ ಹೇಳಿಕೆ ಬಂದ ಕೂಡಲೇ ನಾನು ನನ್ನ ಹಿರಿಯರು, ಹಾಗೂ ಈ ಕ್ಷೇತ್ರದ ಬಗ್ಗೆ ತಿಳಿದವರ ಆಶೀರ್ವಾದ ಪಡೆದು ದೇಯಿ ಬೈದೆತ್ತಿಯ ಸೇವೆ ಮಾಡಿ ಬಂದಿದ್ದೇನೆ.
ನಮ್ಮ ಕುಡ್ಲ ಪ್ರತಿನಿಧಿ: ನಿಮ್ಮ ಪ್ಯಾಶನ್ ಪ್ರಪಂಚ ಹಾಗೂ ದರ್ಶನ ಪಾತ್ರಿ ಕೆಲಸ, ಈ ಎರಡನ್ನೂ ಹೇಗೆ ನಿಭಾಯಿಸ್ತೀರಿ.?
ಸನ್ನಿಧ್ ಪೂಜಾರಿ: ದೇವರಾಣೆಗೂ ಇದನ್ನು ದೇವರು ನಡೆಸಿಕೊಡ್ತಾರೆ.. ಯಾಕೆಂದ್ರೆ ನನಗೆ ದರ್ಶನ ಪಾತ್ರಿ ಕೆಲಸ ಇರುವಾಗ ರುದ್ರ ಎಂಟರ್ಟೈನ್ ಮೆಂಟ್ ನಲ್ಲಿ ಕೆಲಸ ಇರೋದಿಲ್ಲ. ಹಾಗೆ ಅಲ್ಲಿದ್ರೆ, ಇಲ್ಲಿರಲ್ಲ. ಇಲ್ಲಿದ್ರೆ ಅಲ್ಲಿರಲ್ಲ. ಅದೇ ನನಗೂ ವಿಸ್ಮಯವಾಗೋದು.
ನಮ್ಮ ಕುಡ್ಲ ಪ್ರತಿನಿಧಿ: ನಿಮ್ಮ ಬಾಲ್ಯ ಜೀವನ ಹೇಗಿತ್ತು.?
ಸನ್ನಿಧ್ ಪೂಜಾರಿ: ತುಂಬಾನೇ ಮಜವಾಗಿ ಕಳೆದಿದ್ದೇನೆ. ಚಿಕ್ಕಂದಿನಿಂದಲೂ ಅಪ್ಪನನ್ನು ಕಳ್ಕೊಂಡ್ರು.. ಅಮ್ಮ ಆ ನೋವು ಕಾಡೋಕೆ ಬಿಡ್ಲಿಲ್ಲ.
ಅಮ್ಮ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ನನ್ನ ಅಮ್ಮನಿಗೆ ನಾನೊಬ್ಬನೆ ಮಗ. ಮುಂಬೈನಲ್ಲಿ ಹುಟ್ಟಿ-ಬೆಳೆದಿದ್ದ ಕಾರಣ, ನಮ್ಮ ಊರಿನ ಜಾತ್ರೆ, ಮಣ್ಣಲ್ಲಿ ಆಡೋ ಭಾಗ್ಯ ಹೆಚ್ಚಾಗಿ ಸಿಗ್ಲಿಲ್ಲ.
ಆದ್ರೆ ರಜೆಯಲ್ಲಿ ಅಮ್ಮನ ಊರು ಉಡುಪಿಗೆ ಬಂದಾಗ ಇದನ್ನೆಲ್ಲಾ ಮಿಸ್ ಮಾಡ್ಕೊತಾ ಇರ್ಲಿಲ್ಲ.
ಇದ್ರಲ್ಲಿ ನನ್ನ ಗೆಳೆಯರ ಪಾತ್ರ ಕೂಡ ತುಂಬಾನೇ ಇದೆ. ಯಾಕೆಂದ್ರೆ ಅವರು ನನ್ನನ್ನು ಇದ್ದ-ಬದ್ದ ಜಾತ್ರೆಗೆ ಕರೆದುಕೊಂಡು ಹೋಗ್ತಾ ಇದ್ರು. ಊರಿನಲ್ಲಿ ಸಿಗೋ ಕಾಡು ಹಣ್ಣಿರಬಹುದು.
ಅಥವಾ ಹಳ್ಳಿಯ ಯಾವುದೇ ಮನರಂಜನೆಯನ್ನು ನಾವು ಮಿಸ್ ಮಾಡ್ಕೋತಾ ಇರ್ಲಿಲ್ಲ. ಪ್ರತೀ ದೇವಸ್ಥಾನದ ಕಥೆಗಳನ್ನು ನನ್ನ ಗೆಳೆಯರು ಹಾಗೂ ನನ್ನ ಅಭಿಮಾನಿಗಳು ಹೇಳ್ತಾ ಇದ್ರು.
ಅವರಿಗೆ ನಾನು ಯಾವಾಗ್ಲೂ ಚಿರಋಣಿಯಾಗಿರ್ತಾನೆ. ಅವರು ನನಗೆ ಮಂಗಳೂರಿನ ನಿಜವಾದ ಶಾಸ್ತ್ರ-ಸಂಪ್ರದಾಯಗಳನ್ನು ತಿಳಿಸಿಕೊಟ್ಟಿದ್ದಾರೆ.
ಇದು ನಮಗೆ ಪುಸ್ತಕ ಅಥವಾ ಇಂಟರ್ ನೆಟ್ ನಲ್ಲಿ ಸಿಗುವುದಿಲ್ಲ. ಹೀಗೆ ನಾನು ಬಾಲ್ಯದಿಂದಲೇ ತುಳುನಾಡಿನ ಬಗ್ಗೆ ಕೇಳಿ ತಿಳಿದುಕೊಂಡು ಬಂದಿದ್ದೇನೆ.
ನಮ್ಮ ಕುಡ್ಲ ಪ್ರತಿನಿಧಿ: ನಿಮ್ಮ ಮುಂದಿನ ಗುರಿ ಏನು.?
ಸನ್ನಿಧ್ ಪೂಜಾರಿ: ತುಳುನಾಡಿನಲ್ಲಿ ದೈವಾರಾಧನೆಗೆ ಪ್ರಮುಖ ಆದ್ಯತೆ. ಆದ್ರೆ ಈಗಿನ ದಿನಗಳಲ್ಲಿ ಅದು ಮೂಢನಂಬಿಕೆ ಅಂತ ಕೆಲವರು ಹೇಳಿದ್ರೂ ಕೂಡ.
ನಮಗೆ ಅದು ಮೂಢನಂಬಿಕೆ ಅಲ್ಲ. ಯಾಕೆಂದ್ರೆ ನಾನು ಚಿಕ್ಕಂದಿನಿಂದಲೇ ಈ ಶಕ್ತಿಯನ್ನು ಗಾಢವಾಗಿ ನಂಬಿಕೊಂಡು ಬಂದಿದ್ದೇನೆ.
ಹಾಗಾಗಿ ನಾನು ಈ ದರ್ಶನ ಪಾತ್ರಿ ಕೆಲಸವನ್ನು ನನ್ನ ಜೀವನದುದ್ದಕ್ಕೂ ಮುಂದುವರಿಸಿಕೊಂಡು ಹೋಗುತ್ತೇನೆ.
ನನ್ನ ಮುಂದಿನ ಪೀಳಿಗೆಗೂ ಈ ದೈವಾರಾಧನೆ ಬಗ್ಗೆ ತಿಳಿ ಹೇಳುವ ಅವಕಾಶ ಸಿಕ್ಕರೆ, ಖಂಡಿತಾ ಅದನ್ನು ನಾನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇದರೊಟ್ಟಿಗೆ ಫ್ಯಾಶನ್ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡುವ ಹುಮ್ಮಸ್ಸಿದೆ.
—
ಸಂದರ್ಶನ: ಸುನೀತಾ ಮಂಜುನಾಥ್
