ಬಸ್ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಮಗ ಬಲಿ: ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತಾ ರೋಧಿಸಿದ ಹೆತ್ತ ಕರುಳು
ಉಡುಪಿ: ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ ಸಿಬ್ಬಂದಿಗಳಿಗೆ ಕೊಂಚ ಮಾನವೀಯತೆ ಕಮ್ಮಿಯಾದಂತೆ ಕಾಣಿಸುತ್ತೆ.
ಲಾಂಗ್ ಜರ್ನಿ ಮಾಡುವವರಿಗೆ ಸೇಫ್ಟಿಯೇ ಇಲ್ಲದಂತಾಗಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಮೊನ್ನೆ-ಮೊನ್ನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದ ಘಟನೆ.

ಹೌದು.. ಖಾಸಗಿ ಬಸ್ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಮಗನನ್ನು ಕಳೆದುಕೊಂಡ ತಾಯಿಯೊಬ್ಬರು ಉಡುಪಿ ಜಿಲ್ಲಾಧಿಕಾರಿಗೆ ಬರೆದಿರುವ ಬಹಿರಂಗ ಪತ್ರ ಅದೆಂತವರಿಗೂ ಕಣ್ಣೀರು ತರಿಸುತ್ತೆ.
ತನ್ನ ಕಂದಮ್ಮನನ್ನು ಕಳೆದುಕೊಂಡು ಹೆತ್ತಬ್ಬೆ ಬರೆದಿರುವ ಕಣ್ಣೀರ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನಕಲಕುವ ಈ ಪತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಆದ್ರೆ ಏನು ಪ್ರಯೋಜನ ತನ್ನ ಮಗನನ್ನು ಕಳೆದುಕೊಂಡು ರೋಧಿಸುತ್ತಿರುವ ಆ ಹೆತ್ತಕರುಳಿನ ಗೋಳು ಕೇಳೋರ್ಯಾರು.?.

ಅಷ್ಟಕ್ಕೂ ಆ ತಾಯಿ ಬರೆದ ಪತ್ರದಲ್ಲೇನಿದೆ.? ಇಲ್ಲಿದೆ ಓದಿ…
ಜಿಲ್ಲಾಧಿಕಾರಿ ಸರ್.. ನಮಸ್ತೆ..,
‘ನಮಗಿದ್ದ ಒಬ್ಬನೇ ಮಗ ಸುಹಾಸ್ ಮಾರ್ಚ್ 7ರಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟ್ಟಿದ್ದ.
ರಾತ್ರಿ 12.30ಕ್ಕೆ ಟೀ ಕುಡಿದು ಬಸ್ ಹತ್ತಿದ್ದ. ಬಸ್ ಹತ್ತುವಾಗ ಹುಷಾರಾಗಿಯೇ ಇದ್ದ. ಅಲ್ಲಿಯವರೆಗೂ ಎಲ್ಲವೂ ಸರಿಯಿತ್ತು.
ಬಸ್ ಬೆಂಗಳೂರಿನಿಂದ ಹೊರಟ ಬಳಿಕ ದಾರಿ ಮಧ್ಯೆ ಮಗನಿಗೆ ಸುಸ್ತು ಹೆಚ್ಚಾಗಿ ಎದೆನೋವು ಕಾಣಿಸಿಕೊಂಡಿದೆ.
2 ಬಾರಿ ಎದೆ ನೋವಾಗುತ್ತಿದೆ ಎಂದು ಬಸ್ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾನೆ.
ಆದರೆ, ‘ದುರ್ಗಾಂಬಾ’ ಬಸ್ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಬಸ್ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆಯಿಂದ ನನ್ನ ಮಗನನ್ನು ಕಳೆದುಕೊಳ್ಳಬೇಕಾಯಿತು’.
“ನನ್ನ ಮಗ ‘ಪ್ರೆಸಿಡೆನ್ಸಿ ಯೂನಿವರ್ಸಿಟಿ ರಾಜನಕುಂಟೆ ಬೆಂಗಳೂರು’ ಇಲ್ಲಿ 4 ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ.
ಮಾರ್ಚ್ 7ರಂದು ಮಧ್ಯರಾತ್ರಿ ಮಗನಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.
ಹಾಗಾಗಿ, ಟಿಕೆಟ್ ಬುಕ್ ಮಾಡಿದ ಬಸ್ ಕಚೇರಿಗೆ ಸತತ ಅರ್ಧ ಗಂಟೆಯವರೆಗೂ ನಿರಂತರವಾಗಿ ಕರೆ ಮಾಡಿದರೂ ರೆಸ್ಪಾನ್ಸ್ ಇರಲಿಲ್ಲ.
ನಂತರ ಕಾಲ್‌ಗೆ ಉತ್ತರಿಸಿದ ಸಿಬ್ಬಂದಿ ‘ಬಸ್ ಬರುತ್ತಿದೆ’ ಎಂದು ಜೋರಾಗಿ ಮಾತನಾಡಿ ಕಾಲ್ ಕಟ್ ಮಾಡಿದರು.
‘ಮಗ ಕಾಲ್ ರಿಸೀವ್ ಮಾಡ್ತಿಲ್ಲ, ದಯವಿಟ್ಟು ಬಸ್ ಕಂಡಕ್ಟರ್ ನಂಬರ್ ಕೊಡಿ ಅಂತಾ ಮನವಿ ಮಾಡಿದರೂ ಯಾರೂ ಕೊಡಲಿಲ್ಲ.
ಬೆಳಗಿನ ಜಾವ 4.30ರಿಂದ ಪದೇ ಪದೆ ಕಾಲ್ ಮಾಡುತ್ತಲೇ ಇದ್ದೆ.
ಬೆಳಿಗ್ಗೆ 6.30ಕ್ಕೆ ಕಾಲ್ ರಿಸೀವ್ ಮಾಡಿದ ಸಿಬ್ಬಂದಿಯು, ಬಸ್ ಕೋಟೇಶ್ವರ ಹತ್ತಿರ ಬರುತ್ತಿದೆ ಎಂದಷ್ಟೆ ಹೇಳಿ ಕಾಲ್ ಕಟ್ ಮಾಡಿದರು.
ಸಿಬ್ಬಂದಿಗೆ ನನ್ನ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆಯೇ ಇರಲಿಲ್ಲ’.
ಮುಂಜಾನೆ ಬಸ್ ಬಂದಿರಬಹುದು, ಬಸ್ ಹತ್ತಿರ ನಾನೇ ಹೋಗ್ತೇನೆ ಅಂತಾ ಪತಿ ಹೋದರು.
ಪತಿ ಹೋದ 20 ನಿಮಿಷಕ್ಕೆ ಬೇರೊಂದು ನಂಬರ್ ನಿಂದ ಕಾಲ್ ಬಂತು. ಆವಾಗ ‘ನಿಮ್ಮ ಮಗ ಮಾತಾಡ್ತಾ ಇಲ್ಲ’ ಅಂತಾ ತಿಳಿಸಿದರು. 7.49ಕ್ಕೆ ಪತಿಗೆ ಈ ವಿಷಯ ತಿಳಿಸಿದೆ.
ಬಳಿಕ ಕುಂದಾಪುರದ ಶಾಸ್ತ್ರೀ ಸರ್ಕಲ್ ಪಾರ್ಕ್ ಹತ್ತಿರ ಹೋದಾಗ, ಬಸ್ಸಿನಲ್ಲಿ ಮಗ ಹೆಣವಾಗಿ ಮರಳಿದ್ದ. ಮಗನಿಗೆ ಹೃದಯಾಘಾತವಾಗಿರುವ ಸುದ್ದಿ ತಿಳಿಯಿತು.
ಮಗ ದಾರಿ ಮಧ್ಯೆ ಎದೆನೋವು ಎಂದು 2 ಬಾರಿ ಹೇಳಿದಾಗ ಬಸ್ ಬಂಟ್ವಾಳದ ಹತ್ತಿರ ಇತ್ತಂತೆ.
ಆಗಲೇ ಬಸ್ ಸಿಬ್ಬಂದಿ ಮಗನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ನಮಗೆ ಕರೆ ಮಾಡಿ ತಿಳಿಸಬಹುದಿತ್ತು.
ಅದೂ ಆಗದಿದ್ದರೆ ನಮ್ಮ ಕರೆಯನ್ನಾದರೂ ಸ್ವೀಕರಿಸಬಹುದಿತ್ತು. ಆವಾಗ್ಲಾದ್ರೂ ನನ್ನ ಮಗ ಬದುಕಿ ಉಳಿಯುತ್ತಿದ್ದ.
ಸಿಬ್ಬಂದಿಯ ಅಕ್ಷಮ್ಯ ನಿರ್ಲಕ್ಷ್ಯದಿಂದ ಮಗನನ್ನು ಕಳೆದುಕೊಂಡಿದ್ದೇವೆ ಸರ್’.
ಮಗ ಹಟ್ಟಿಯಂಗಡಿ ಸ್ಕೂಲ್‌ನಲ್ಲಿ ಓದಿದ್ದ. ನನ್ನ ಮಗ ಏನೆಂಬುದನ್ನು ಅಲ್ಲಿನ ಪ್ರಿನ್ಸಿಪಾಲ್ ಶರಣ್ ಅವರನ್ನೊಮ್ಮೆ ವಿಚಾರಿಸಿ ಸರ್, ತುಂಬಾ ಒಳ್ಳೆಯ ಹೆಸರು ತಗೊಂಡಿದ್ದ.
ಇರುವ ಒಬ್ಬ ಮಗನನ್ನು ಕಳೆದುಕೊಂಡು ಹೆತ್ತ ಹೊಟ್ಟೆಗೆ ಬೆಂಕಿ ಇಟ್ಟುಬಿಟ್ಟರು ಸರ್. ಒಂದು ಜೀವ, ಜೀವನ, ನಮ್ಮ ಉಸಿರನ್ನೇ ತೆಗೆದುಬಿಟ್ಟರು ಸರ್.
‘ನಾನು ನನ್ನ ಮಗನನ್ನು ಕಳೆದುಕೊಂಡಿದ್ದಾಗಿದೆ. ನನಗಾದ ಶಿಕ್ಷೆ ಬೇರೆ ಯಾವ ತಾಯಿಗೂ ಆಗುವುದು ಬೇಡ.
ಅದಕ್ಕಾಗಿ ನಿಮ್ಮಲ್ಲಿ ಒಂದು ಮನವಿ. ಬಸ್ಸಿನವರಿಗೆ ಸರಿಯಾದ ಬುದ್ದಿ ಕಲಿಸಬೇಕು. ಅದು ನಿಮ್ಮಿಂದ ಸಾಧ್ಯ ಸರ್.
ದಯವಿಟ್ಟು ಕ್ರಮ ಜರುಗಿಸಿ’.
‘100, 200 ಹೆಚ್ಚಿಗೆ ತೆಗೆದುಕೊಳ್ಳಲಿ, ಆದರೆ, ಜೀವ ತೆಗೆಯೋದು ಯಾವ ನ್ಯಾಯ.
ಎಲ್ಲ ಮುಗಿದ ಮೇಲೆ ಸಾರಿ ಕೇಳುತ್ತಾರೆ ಸರ್, ಹೆತ್ತ ತಾಯಿಯ ಹೊಟ್ಟೆ ಉರಿಯುತ್ತಿದೆ.
ಎಲ್ಲ ಬಸ್‌ನವರಿಗೆ ಸಂದೇಶ ಕೊಡಿ, ನಮಗಾದ ಅನ್ಯಾಯ ಬೇರೆಯವರಿಗೆ ಆಗಬಾರದು’. ಎಂದು ಪತ್ರದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ತಾಯಿಯ ಪತ್ರ ತಲುಪಿದ ಕೂಡಲೇ, ಪತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಪ್ರತಿಕ್ರಿಯಿಸಿದ್ದು, ‘ಪತ್ರ ಓದಿ ಮನಸ್ಸಿಗೆ ನೋವಾಯಿತು.
ಈ ವಿಚಾರವಾಗಿ ಎಸ್‌ಪಿ ವಿಷ್ಣುವರ್ಧನ್ ಹಾಗೂ ಎಎಸ್‌ಪಿ ಕುಮಾರಚಂದ್ರ ಅವರ ಬಳಿ ಮಾತನಾಡಿದ್ದು, ತಕ್ಷಣ ನೊಂದ ತಾಯಿಯ ಬಳಿ ದೂರು ಸ್ವೀಕರಿಸುವಂತೆ ಸೂಚಿಸಿದ್ದೇನೆ.
ತನಿಖೆಯಲ್ಲಿ ಬಸ್ ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಮಗನನ್ನು ಕಳೆದುಕೊಂಡ ತಾಯಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದೇನೆ. ಶೀಘ್ರ ಖಾಸಗಿ ಬಸ್ ಮಾಲೀಕರ ಸಭೆ ಕರೆದು, ಪ್ರಯಾಣಿಕರ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗುವುದು.
ಮುಂದೆ ಈ ರೀತಿಯ ಪ್ರಕರಣಗಳಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಖೇದ ವ್ಯಕ್ತಪಡಿಸಿದ್ದಾರೆ.
ಅದೇನೇ ಇರಲಿ.. ಕೇವಲ ಬಸ್ ಸಿಬ್ಬಂದಿಗಳ ಉದಾಸಿನಕ್ಕೆ ಒಂದು ಅಮಾಯಕ ಜೀವ ಬಲಿಯಾಗಿದೆ.
ಇನ್ನು ಆ ಹೆತ್ತ ತಾಯಿಗೆ ಮಗನ ಪ್ರೀತಿ ನೀಡೋರ್ಯಾರು.?. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕಾಗಿದೆ.
ಮುಂದಿನ ದಿನಗಳಲದಲಿ ಇಂತಹ ಘಟನೆ ನಡೆಯದಿರಲಿ ಅನ್ನೋದೇ ನಮ್ಮ ಆಶಯ…