Connect with us

LATEST NEWS

80ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ: ಮೌನವಹಿಸಿದೆ ಜಿಲ್ಲಾಡಳಿತ ..!

Published

on

80ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ: ಮೌನವಹಿಸಿದೆ ಜಿಲ್ಲಾಡಳಿತ..! 

ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಜನಸಾಮಾನ್ಯರು ನೀರಿನ ಬಿಲ್ ಕಟ್ಟದಿದ್ದರೆ ಅಧಿಕಾರಿಗಳು ಆವಾಜ್ ಹಾಕಿ ವಸೂಲಿ ಮಾಡ್ತಾರೆ.ಆದರೆ ಸರ್ಕಾರಿ ಸಂಸ್ಥೆಗಳು, ಪ್ರತಿಷ್ಠಿತ ವ್ಯಕ್ತಿಗಳು ಹಲವಾರು ವರ್ಷಗಳಿಂದ 80 ಕೋಟಿಗೂ ಅಧಿಕ ನೀರಿನ ಬಿಲ್ ಬಾಕಿ ಇರಿಸಿದರೂ ಆಡಳಿತ ಮಾತ್ರ ಮೌನವಾಗಿದೆ.

ಪ್ರತಿಷ್ಠಿತ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಡವರು, ಜನಸಾಮಾನ್ಯರಿಗೆ ಒಂದು ನ್ಯಾಯ. ಶ್ರೀಮಂತ, ಪ್ರತಿಷ್ಠಿತ ವ್ಯಕ್ತಿ ಸಂಸ್ಥೆಗಳಿಗೆ ಇನ್ನೊಂದು ನ್ಯಾಯ ಎಂಬಂತಾಗಿದೆ.

ಅಧಿಕಾರಿಗಳ ಮಲತಾಯಿ ಧೋರಣೆಯಿಂದಲೇ ಹಲವು ವರ್ಷದಿಂದ ಮಹಾನಗರಪಾಲಿಕೆಯ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹಣ ಬರಲು ಬಾಕಿ ಇದೆ.

ಅಸಲಿಗೆ ಹೀಗೆ ಬಾಕಿ ಇರುವ ಹಣ ಪಾಲಿಕೆಗೆ ಸಂದಾಯವಾಗಬೇಕಿರೋದು ನೀರಿನ ಬಿಲ್ಗಳಿಂದ ಅನ್ನೋದು ದುರಂತ. ಜನಸಾಮಾನ್ಯರಿಂದ ನೀರಿನ ಬಿಲ್ ಬಾಕಿಯನ್ನು ವಸೂಲು ಮಾಡುವ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ, ಪ್ರಭಾವಿಗಳು ಮತ್ತು ಶ್ರೀಮಂತರ ಬಿಲ್ ಬಾಕಿಯಿದ್ದರೂ ಮೌನಕ್ಕೆ ಶರಣಾಗಿದೆ. ನೀರಿನ ಬಿಲ್ ಬಾಕಿ ಇಟ್ಟವರ ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿಗಳು, ಖಾಸಗಿ ಆಸ್ಪತ್ರೆಗಳು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ  ಕೆಲವು ಪ್ರತಿಷ್ಠಿತ ಕಾಲೇಜುಗಳು ಸೇರಿವೆ. ಹೀಗೆ ಪಟ್ಟಿ ಮಾಡಲಾದ ಸಂಸ್ಥೆಗಳಿಂದ ಮನಪಾ ಬೊಕ್ಕಸಕ್ಕೆ ಬರೋಬ್ಬರಿ 80 ಕೋಟಿ ರೂಪಾಯಿ ಸಂದಾಯವಾಗಲು ಬಾಕಿ ಇರುವುದು ತಿಳಿದು ಬಂದಿದೆ.

ಪ್ರತಿ ತಿಂಗಳು ನೀರಿನ ಬಿಲ್ ಪಾವತಿ ಮಾಡುವಂತೆ ಜನಸಾಮಾನ್ಯರಿಗೆ ಕರೆಗಳು ಬರುತ್ತವೆ, ಒತ್ತಡ ಹಾಕಲಾಗುತ್ತದೆ. ಬಿಲ್ ಕಟ್ಟದಿದ್ದರೆ ನೀರಿನ ಸಂಪರ್ಕ ಸ್ಥಗಿತಗೊಳಿಸುವ ಧಮ್ಕಿ ಹಾಕಲಾಗುತ್ತದೆ. ಆದರೆ ಸಮಾಜದಲ್ಲಿ ಗಣ್ಯರು ಎನಿಸಿಕೊಂಡಿರುವವರು ಪ್ರತಿಷ್ಠಿತ ಸಂಸ್ಥೆಗಳ ಬಿಲ್ ಬಾಕಿ ಇದ್ದರೂ ಪಾಲಿಕೆ ಅಧಿಕಾರಿಗಳ ವರಸೆ ನಡೆಯುವುದಿಲ್ಲ.

ಉಳ್ಳವರು ಲಕ್ಷಾಂತರ ರೂಪಾಯಿ ನೀರಿನ ಬಿಲ್ ಬಾಕಿ ಇರಿಸಿಕೊಂಡಿದ್ದರೂ ವಸೂಲಿ ಮಾಡುವ ಗೋಜಿಗೆ ಪಾಲಿಕೆ ಅಧಿಕಾರಿಗಳು ಹೋಗಿಲ್ಲ. ಪಾಲಿಕೆಯ ನೀರಿನ ಬಿಲ್ ಸಂಗ್ರಹಿಸುವಲ್ಲಿ ಹಿಂದಿನ ಕಾಂಗ್ರೆಸ್ ಆಡಳಿತ ವಿಫಲವಾಗಿತ್ತು. ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ಕೂಡ ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮೃದು ಧೋರಣೆ ತಳೆದಿದೆ.

ಸಧ್ಯ ಮಂಗಳೂರಿನಲ್ಲಿ 85,000 ಮನೆಗಳಿಗೆ, 5000 ಗೃಹೇತರ, 1370 ವಾಣಿಜ್ಯ, ಕಟ್ಟಡ 1200, ಕೈಗಾರಿಕೆ 800,ನೀರಿನ ಸಂಪರ್ಕಗಳಿವೆ. ಆದರೆ ಇದರಲ್ಲಿ ಜನಸಾಮಾನ್ಯರ ನೀರಿನ ಬಿಲ್ ಮಾತ್ರ ಕಾಲಕಾಲಕ್ಕೆ ಸಂದಾಯವಾಗುತ್ತಿದ್ದು, ಪ್ರಭಾವಿಗಳ ಮತ್ತು ಸರ್ಕಾರಿ ಸಂಸ್ಥೆಗಳು ಮಾತ್ರ ಹಲವಾರು ವರ್ಷಗಳಿಂದ ಬಿಲ್ ಬಾಕಿ ಇರಿಸಿದೆ. ಒಟ್ಟಿನಲ್ಲಿ ಸಾಮಾನ್ಯ ಜನರ ತಿಂಗಳ ಬಿಲ್ಲಿಗೆ ಬೆನ್ನು ಬೀಳುವ ಪಾಲಿಕೆ ಆಡಳಿತ ಶ್ರೀಮಂತರ ವಿಚಾರದಲ್ಲಿ ರಾಜಿ ಮಾಡಿಕೊಂಡಿರುವುದು ಅಕ್ಷಮ್ಯ.

LATEST NEWS

ಹೆಲ್ಮೆಟ್‌ ಧರಿಸದ ಸವಾರನನ್ನು ನಿಲ್ಲಿಸಿ ದಂಡ ಹಾಕದೇ ಕಳುಹಿಸಿದ ಪೊಲೀಸ್‌ ಸಿಬ್ಬಂದಿ!

Published

on

ಶಹದೋಲ್: ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಚಾಲನೆ ಹಾಗೂ ಅಪಘಾತಗಳಾಗುವ ಸಂದರ್ಭದಲ್ಲಿ ತಲೆಗೆ ಏಟು ಬೀಳಬಾರದೆನ್ನುವ ಕಾರಣಕ್ಕೆ ಹೆಲ್ಮೆಟ್‌ ಖಡ್ಡಾಯಗೊಳಿಸಿ ಸರಕಾರವೇ ಆದೇಶ ಹೊರಡಿಸಿದೆ. ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ.

ಆದರೆ, ಮಧ್ಯಪ್ರದೇಶದ ಶಹದೋಲ್‌ನಲ್ಲಿ ಸಂಚಾರಿ ಪೊಲೀಸ್ ಹೆಲ್ಮೆಟ್ ಧರಿಸದೇ ಬಂದ ಬೈಕ್ ಸವಾರರನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಅವರು ಹೇಳಿದ ಉತ್ತರ ಕೇಳಿ ಕಕ್ಕಾಬಿಕ್ಕಿಯಾಗಿದ್ದಾರೆ.

ತನ್ನ ದೊಡ್ಡ ತಲೆಗೆ ಚಿಕ್ಕ ಹೆಲ್ಮೆಟ್ ಸರಿಹೊಂದುವುದಿಲ್ಲ ಎಂದಾಗ ಪೊಲೀಸ್‌ ತನ್ನದೇ ಹೆಲ್ಮೆಟ್‌ ತೆಗೆದು ಸವಾರನ ತಲೆಗೆ ಇಟ್ಟು ನೋಡಿದ್ದಾರೆ. ಆದರೂ ಹೆಲ್ಮೆಟ್‌ ಅವರ ತಲೆಗೆ ಸರಿಹೊಂದಿಲ್ಲ. ಇವರಿಬ್ಬರ ನಡುವಿನ ಸಂವಾದ ಇದೀಗ ಭಾರೀ ವೈರಲ್‌ ಆಗಿದೆ.

“ದಿ ಟ್ರಾಫಿಕ್ ಕಾಪ್” ಎಂದು ಜನಪ್ರಿಯವಾಗಿರುವ ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್ ಮತ್ತು ಸೋಶಿಯಲ್ ಇನ್ಫ್ಲುಯೆನ್ಸರ್ ಆಗಿರುವ ವಿವೇಕಾನಂದ ತಿವಾರಿ, ಹೆಲ್ಮೆಟ್ ಇಲ್ಲದೆ ಮೋಟಾರ್‌ಸೈಕಲ್ ಸವಾರಿ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ತಡೆದಿದ್ದಾರೆ.

ಸುರಕ್ಷತಾ ಉಲ್ಲಂಘನೆಯ ಬಗ್ಗೆ ಪ್ರಶ್ನಿಸಿದಾಗ, ಸವಾರ ಬೈಕ್‌ನಿಂದ ಇಳಿದು ಮಾರುಕಟ್ಟೆಯಲ್ಲಿ ತನ್ನ ಗಾತ್ರದ ಹೆಲ್ಮೆಟ್ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಆರಂಭದಲ್ಲಿ ಸಂಶಯ ವ್ಯಕ್ತಪಡಿಸಿದ ತಿವಾರಿ, ಸವಾರನ ತಲೆಯ ಮೇಲೆ ತನ್ನದೇ ಆದ ಹೆಲ್ಮೆಟ್ ಹಾಕಲು ಪ್ರಯತ್ನಿಸಿದ್ದಾರೆ. ಹೆಲ್ಮೆಟ್ ಹೊಂದಿಕೆಯಾಗಲಿಲ್ಲ, ನಿಜವಾದ ಕಷ್ಟವನ್ನು ಅರಿತುಕೊಂಡ ಅಧಿಕಾರಿ, ದಂಡ ವಿಧಿಸಲ್ಲ ಎಂದರು.

ಇದನ್ನೂ ಓದಿ: ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

ಅಲ್ಲದೆ ದೊಡ್ಡ ತಲೆಗೆ ಸರಿ ಹೊಂದುವ ಹೆಲ್ಮೆಟ್‌ಗಳನ್ನು ತಯಾರಿಸಿ ಎಂದು ಕಂಪೆನಿಗಳಿಗೆ ಮನವಿ ಮಾಡಿದರು. ಈ ವಿಡಿಯೋ ವೈರಲ್‌ ಆಗಿದ್ದು, ಸ್ಟೀಲ್‌ಬರ್ಡ್ ಕಂಪೆನಿ ಹೆಲ್ಮೆಟ್ಸ್ ಕೂಡ ಪ್ರತಿಕ್ರಿಯೆ ನೀಡಿದೆ. ದೊಡ್ಡ ಹೆಲ್ಮೆಟ್‌ಗಳನ್ನು ತಯಾರಿಸುವುದಾಗಿ ಹೇಳಿದೆ.

Continue Reading

LATEST NEWS

ಇಸ್ತ್ರಿ ಅಂಗಡಿಯವನ ಸಂಪಾದನೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು!

Published

on

ಕೇವಲ 10 ರೂಪಾಯಿಗೆ ಒಂದು ಬಟ್ಟೆ ಇಸ್ತ್ರಿ ಮಾಡುವ ಸಣ್ಣ ಉದ್ಯಮದಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.


ನಳಿನಿ ಉನಾಗರ್ ಎಂಬುವವರು ಎಕ್ಸ್ (X) ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರ ಮನೆಯ ಬಳಿಯಿರುವ ಡ್ರೈ ಕ್ಲೀನರ್ ಅಂಗಡಿಯ ಮಾಲೀಕರು ಮತ್ತು ಅವರ ಪತ್ನಿ ಇಬ್ಬರೂ ಸೇರಿ ಸಹಾಯಕರ ನೆರವಿನೊಂದಿಗೆ ಈ ಸಾಧನೆ ಮಾಡುತ್ತಿದ್ದಾರೆ.

ಪ್ರತಿದಿನ ಸುಮಾರು 350 ಬಟ್ಟೆಗಳನ್ನು ತಲಾ 10 ರೂಪಾಯಿಯಂತೆ ಇಸ್ತ್ರಿ ಮಾಡುತ್ತಾರೆ. ಇದರಿಂದ ದಿನಕ್ಕೆ 3,500 ರೂ. ಆದಾಯ ಬರುತ್ತದೆ. ಪ್ರತಿದಿನ ಸರಿಸುಮಾರು 20 ಭಾರೀ ಬಟ್ಟೆಗಳನ್ನು ತಲಾ 350 ರೂ. ರಂತೆ ಡ್ರೈ ಕ್ಲೀನ್ ಮಾಡುತ್ತಾರೆ. ಇದರಿಂದ ದಿನಕ್ಕೆ 7,000 ರೂ. ಆದಾಯ ಬರುತ್ತದೆ. ಎಲ್ಲಾ ಸೇರಿ ದಿನಕ್ಕೆ ಸುಮಾರು 10,500 ರೂಪಾಯಿ ಗಳಿಸುತ್ತಾರೆ. ತಿಂಗಳಿಗೆ 27 ದಿನ ಕೆಲ್ಸ ಮಾಡಿದ್ರೂ ಒಟ್ಟು ಆದಾಯ ಸುಮಾರು 2.8 ಲಕ್ಷ ಎಂದು ನಳಿನಿ ಹೇಳಿದ್ದಾರೆ.

ಇದನ್ನೂ ಓದಿ: ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

ಅಂಗಡಿ ಅವರದ್ದೇ ಆದ ಕಾರಣ ಬಾಡಿಗೆ ಇರುವುದಿಲ್ಲ. ವಿದ್ಯುತ್ ಬಿಲ್ ಸುಮಾರು 6,000 ರೂ. ಮತ್ತು ಇಬ್ಬರು ಸಹಾಯಕರ ಸಂಬಳ 40,000 ರೂ. ಕಳೆದರೆ, ಅವರಿಗೆ ತಿಂಗಳಿಗೆ ಅಂದಾಜು 2.3 ಲಕ್ಷ ರೂಪಾಯಿ ಉಳಿಯುತ್ತದೆ.

Continue Reading

LATEST NEWS

ಅಪ್ಪನೊಂದಿಗೆ ಹಾಲು ತರಲು ಹೋದಾಗ ನಡೆದ ದುರಂತ; ಸ್ಕೂಲ್ ಬಸ್ ಹರಿದು ಇಬ್ಬರು ಕಂದಮ್ಮಗಳು ಸಾವು

Published

on

ಬೆಂಗಳೂರು: ಶಾಲಾ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಎರಡು ಪುಟ್ಟ ಕಂದಮ್ಮಗಳು ಕೊನೆಯುಸಿರೆಳೆದ ಘಟನೆ ಇಂದು ಬೆಳಿಗ್ಗೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕಾನ್ಸ್‌ಟೇಬಲ್ ನಾಗನಗೌಡ ಅವರ 2 ವರ್ಷದ ಮಗಳು ವರ್ಷ ಹಾಗೂ ಅವರ ಅಣ್ಣನ ಮಗಳು 4 ವರ್ಷದ ಭಾನು ಎಂದು ಗುರುತಿಸಲಾಗಿದೆ.

ನಗರದ ಸಿಎಆರ್ ವಿಭಾಗದಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗನಗೌಡ ಎಂಬುವವರು ಇಂದು ಬೆಳಿಗ್ಗೆ ತಮ್ಮ ಬೈಕ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು.

ಥಣಿಸಂದ್ರದ ಮುಖ್ಯರಸ್ತೆಯ ಬಳಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಶಾಲಾ ಬಸ್ ಅಚಾನಕ್ಕಾಗಿ ಟರ್ನ್ ಪಡೆದುಕೊಂಡಿದೆ. ಈ ವೇಳೆ ಬೈಕ್‌ಗೆ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ನಾಗನಗೌಡ ಮತ್ತು ಇಬ್ಬರು ಮಕ್ಕಳು ರಸ್ತೆಗೆ ಬಿದ್ದಿದ್ದಾರೆ.

ದುರದೃಷ್ಟವಶಾತ್, ಮಕ್ಕಳಿಬ್ಬರು ನೇರವಾಗಿ ಬಸ್ಸಿನ ಚಕ್ರದ ಕೆಳಗೆ ಬಿದ್ದಿದ್ದು, ಚಾಲಕ ಬ್ರೇಕ್ ಹಾಕುವಷ್ಟರಲ್ಲಿ ಬಸ್ ಮಕ್ಕಳ ಮೇಲೆ ಹರಿದಿದೆ. ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಎರಡು ಮತ್ತು ನಾಲ್ಕು ವರ್ಷದ ಇಬ್ಬರು ಪುಟಾಣಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಐಟಿಐ ವಿದ್ಯಾರ್ಥಿಗಳ ಮಧ್ಯೆ ಚೂರಿ ಇರಿತ-ಇಬ್ಬರಿಗೆ ಗಾಯ

ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page