ಪಾದರಾಯನಪುರ ಗೂಂಡಾ ಪ್ರಕರಣ ಕುರಿತು ಸರ್ಕಾರಕ್ಕೆ ಶಾಸಕ ಖಾದರ್ ಸವಾಲ್.!
ಮಂಗಳೂರು: ಬೆಂಗಳೂರಿನ ಪಾದರಾಯನಪುರದ ಸಾದೀಕ್ ನಗರದಲ್ಲಿ ಹಲ್ಲೆ ನಡೆದಾಗ ಸರಕಾರ ಸೂಕ್ತ ಕ್ರಮ ಕೈಗೊಂಡಿದ್ದರೆ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ. ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ದೋಷಿಸುವುದು ತಪ್ಪು.

ಯಾವ ಸಮುದಾಯದವರು ಇಂತಹ ನೀಚ ಕೃತ್ಯವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಶಾಸಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ಪಾದರಾಯನಪುರದಲ್ಲಿ ಗೂಂಡಾಗಿರಿ ಮಾಡಿದವರ ವಿರುದ್ಧ ಕಿಡಿಕಾರಿದ ಶಾಸಕ, ‘ಗೂಂಡಾಗಳಿಗೆ ಸರಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಲಿ.
ಗೂಂಡಾಗಳಿಗೆ ಬೆಂಬಲಿಸುವ ಕೆಲಸ ಸರಕಾರದಿಂದ ಮಾಡಬಾರದು. ಸಮಾಜದ ಸ್ವಾಸ್ಥ ಕೆಡಿಸುವ ಕೆಲಸ ನಡೆಯಬಾರದು.
ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸೋಣ. ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕು. ಈ ರೀತಿಯ ಘಟನೆ ನಮ್ಮೆಲ್ಲರಿಗೂ ಕಪ್ಪು ಚುಕ್ಕೆ ಇದ್ದಂತೆ.
ಕಾರಣ ಏನೇ ಇರಲಿ, ಆದ್ರೆ ಗೂಂಡಾಗಿರಿಗೆ ನಮ್ಮ ಬೆಂಬಲವಿಲ್ಲ. ತಂದೆ ತಾಯಿಯ ಮಾತೆ ಕೇಳದವರು ನಾಯಕರ ಮಾತು ಕೇಳುತ್ತಾರಾ.?.
ಪದೇ ಪದೇ ಇಂತಹ ಕೃತ್ಯ ನಡೆಯದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಸಮುದಾಯ ದಂಗೆ ಎಬ್ಬಿಸಿ ದಾಂಧಲೆ ಮಾಡಿ ಎಂದು ಹೇಳುವುದಿಲ್ಲ.
ಎಲ್ಲವನ್ನು ಸಮುದಾಯ ನಿರ್ವಹಿಸುದಾದರೆ ಸರಕಾರ ಏಕೆ.?. 70 ವರ್ಷದ ವೃದ್ಧರಿಗೆ ಲಾಟಿ ಬೀಸುವ ಪೊಲೀಸರು ಈ ಗೂಂಡಾಗಳ ಮೇಲೆ ಯಾಕೆ ಚಾರ್ಜ್ ಮಾಡುವುದಿಲ್ಲ.? ಎಂದು ಸರಕಾರ ಹಾಗೂ ಪೊಲೀಸ್ ಇಲಾಖೆಗೆ ಖಾದರ್ ಖಡಕ್ ಪ್ರಶ್ನೆ ಮಾಡಿದ್ದಾರೆ.

ಇತ್ತ ಮಾಧ್ಯಮ ಕೂಡ ಸಮುದಾಯಕ್ಕೆ ಪ್ರಶ್ನೆ ಹಾಕುವ ಬದಲು, ಸರಕಾರವನ್ನು ಪ್ರಶ್ನಿಸಲಿ. ರಾಜ್ಯದ ಆರೂವರೆ ಕೋಟಿ ಜನರಿಗೆ ಇರುವುದು ಒಂದೇ ಕಾನೂನು.
ಸರಕಾರ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರೋ ಕೆಲವರು ಮಾಡಿದ ಅಮಾನವೀಯ ಕೆಲಸಕ್ಕೆ ಇಡೀ ಸಮುದಾಯದವರನ್ನು ದೂಷಿಸುವುದು ತಪ್ಪು. ಸರಕಾರದ ಭಯ ಜನರಿಗಿಲ್ಲ ಎಂದು ಖಾದರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಶ್ರೀರಾಮಲು ಕೊಟ್ಟ ಹೇಳಿಕೆಗೆ ತಿರುಗೇಟು ನೀಡಿದ ಖಾದರ್, ಶ್ರೀರಾಮುಲು ಹೇಳಿದಂತೆ ರಾತ್ರಿ ಹೋಗಲು ಇದೇನೂ ಕಾರ್ಯಕ್ರಮವಲ್ಲ. ವೈರಸ್ ಹರಡದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.ಇಂತಹ ಹೇಳಿಕೆ ಸಮಂಜಸವಲ್ಲ ಎಂದಿದ್ದಾರೆ.
ಇತ್ತ ಯಾವುದೇ ರೀತಿಯ ಮುಂದಾಲೋಚನೆ ಇಲ್ಲದೆ ಲಾಕ್ ಡೌನ್ ತಂದು ಜನ ಹೊಟ್ಟೆ ಬಟ್ಟೆಗಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
25 ದಿನ ಸಹಿಸಿಕೊಂಡ ಜನರಿಗೆ ಇನ್ನು ಕೂಡ ಮುಂದೇನೂ ಎಂಬ ಪ್ರಶ್ನೆ ಕಾಡುತ್ತಿದೆ. ಸರಕಾರದ ಬಳಿ ಯಾವುದಕ್ಕೂ ಉತ್ತರವಿಲ್ಲ.
ಕೊರೊನಾ ಯಾವ ಹಂತಕ್ಕೆ ಮುಟ್ಟಿದೆ ಮುಂದಿನ ಕ್ರಮವೇನು ಎಂದು ಸರಕಾರಕ್ಕೆ ತಿಳಿದಿಲ್ಲ. ಆಸ್ಪತ್ರೆಯಲ್ಲಿ ಯಾವ ವ್ಯವಸ್ಥೆ ಇದೆ.
ವೈದ್ಯರಿಗೆ ಸುರಕ್ಷತಾ ಕವಚ ಸರಕಾರದಿಂದ ಲಭ್ಯವಿದೆಯಾ. ? ಸರಕಾರಕ್ಕೆ ಸಹಕಾರ ನೀಡಿದರೂ ಲೀಡರ್ ಶೀಪ್ ಮಾಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ.
ಯಾವುದೇ ಒಂದು ಸಚಿವ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ನೇಮಿಸದೆ ಸರಕಾರ ಇಂದು ಈ ಹಂತಕ್ಕೆ ತಲುಪಿದ್ದು, ಸಮಾಜದ ಸ್ವಾಸ್ಥದ ಜೊತೆಗೆ ಆರೋಗ್ಯ ಕಾಪಾಡುವಲ್ಲಿ ಕೂಡ ಸಂಪೂರ್ಣ ವಿಫಲವಾಗಿದೆ ಎಂದು ಖಾದರ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಇನ್ನು ದೆಹಲಿ ತಬ್ಲಿಘಿ ಸಮಾವೇಶದ ಬಗ್ಗೆ ಮಾತನಾಡಿದ ಖಾದರ್, ನಿಜಾಮುದ್ದೀನ್ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ದೆಹಲಿ ಸರಕಾರ ಅನುಮತಿ ನೀಡಿದ್ದಲ್ಲದೇ, ಕೊರೊನಾ ಪೀಡಿತ ದೇಶಗಳ ಜನರಿಗೆ ವೀಸಾ ನೀಡಿ ಭಾರತಕ್ಕೆ ಬರಲು ಕೇಂದ್ರ ಸರಕಾರ ಅನುಮತಿ ನೀಡಿತ್ತು.
ಆದರೂ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಮಾಡಿದ ಕೆಲಸ ತಪ್ಪು ಎಂದೆ ನಾವು ಹೇಳುತ್ತೇವೆ. ಇಂತಹವರಿಗೆ ನಮ್ಮ ಬೆಂಬಲವಿಲ್ಲ. ಆದರೆ ಸರಕಾರ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ನಿದ್ರಾವಸ್ಥೆಗೆ ಜಾರಿದೆ ಎಂದು ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದೆ.
ಇತ್ತ ರೇಷನ್ ಕಾರ್ಡ್ ಬಗ್ಗೆಯೂ ಫೈರ್ ಮಾಡಿದ ಖಾದರ್, ರೇಷನ್ ಕಾರ್ಡ್ ಇಲ್ಲದವರಿಗೆ ಅಕ್ಕಿ ಇಲ್ಲ. ಹಾಗಾದರೆ ರೇಷನ್ ಕಾರ್ಡ್ ಇಲ್ಲದವರಿಗೆ ಹಸಿವೆ ಆಗಲ್ವಾ.?.
ಸಿದ್ಧರಾಮಯ್ಯ ಸರಕಾರವಿದ್ದಾಗ ಐದು ನಿಮಿಷಗಳಲ್ಲಿ ರೇಷನ್ ಕಾರ್ಡ್ ನೀಡುವ ವ್ಯವಸ್ಥೆ ಆಗಿತ್ತು. ಇಂತಹ ಕ್ರಮ ಈ ಪರಿಸ್ಥಿತಿಯಲ್ಲಿ ಸರಕಾರ ಕೈಗೊಳ್ಳಬೇಕು.
ಜೊತೆಗೆ ಆಶಾಕಾರ್ಯಕರ್ತರಿಗೆ ಟೆಸ್ಟಿಂಗ್ ಕಿಟ್ ನೀಡಿ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಲು ಸರಕಾರ ಆದೇಶದ ಜೊತೆ ವ್ಯವಸ್ಥೆ ಮಾಡಬೇಕು.
ಒಟ್ಟಾರೆಯಾಗಿ ಸರಕಾರವೆ ಗೊಂದಲದಲ್ಲಿದ್ದು ಕೊರೊನಾ ತಡೆಗಟ್ಟಲು ದಿನಕ್ಕೊಂದು ಮಂತ್ರಿಗಳನ್ನು ನೇಮಕ ಮಾಡುತ್ತಿದೆ. ಇನ್ನು ಜನರು ಯಾರ ಮೇಲೆ ವಿಶ್ವಾಸವಿಡಬಹುದು. ಎಂದು ಯುಟಿ ಖಾದರ್ ಮಾರ್ಮಿಕವಾಗಿ ನುಡಿದಿದ್ದಾರೆ.