ಮಂಗಳೂರು/ಗದಗ: ಮದವೆಯಾಗು ಎಂದು ಪೀಡಿಸುತ್ತಿದ್ದ ಪ್ರೇಯಸಿಯನ್ನೆ ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿಟ್ಟಿದ್ದ ಪ್ರಕರಣವನ್ನು ಗದಗ ಪೊಲೀಸರು ಭೇದಿಸಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಸಂಭವಿಸಿದ ಒಂದು ಭೀಕರ ಕೊಲೆ ಪ್ರಕರಣವು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶವನ್ನು ಹುಟ್ಟುಹಾಕಿತ್ತು.
ಈ ಘಟನೆಯಲ್ಲಿ ಸತೀಶ್ ಹಿರೇಮಠ (25) ಎಂಬ ಯುವಕ ತನ್ನ ಪ್ರೇಯಸಿ ಮಧುಶ್ರೀ (23) ಎಂಬ ಯುವತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಹತ್ತಿರದ ಹಳ್ಳದಲ್ಲಿ ಹೂತು ಮುಚ್ಚಿಹಾಕಿದ್ದ. ಈ ಘಟನೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದರೂ, ಆರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಸತೀಶ್ ಮತ್ತು ಮಧುಶ್ರೀ ಒಂದೇ ಗ್ರಾಮದವರಾಗಿದ್ದು, ಐದಾರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ ಮಧುಶ್ರೀ ಕುಟುಂಬಸ್ಥರಿಗೆ ಈ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿದೆ. ಹೀಗಾಗಿ ಗದಗದಲ್ಲಿ ಅವರ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಕೆಲವು ತಿಂಗಳು ಕಾಲ ದೂರ ಇದ್ದ ಈ ಜೋಡಿ ಪುನಃ ಒಂದಾಗಿತ್ತು. ಅದು 2024 ಡಿಸೆಂಬರ್ 16 ರ ರಾತ್ರಿ ಮಧುಶ್ರೀ ಗದಗ ನಗರದ ಅವರ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದಳು. ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿ ಕೊನೆಗೆ 2025 ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಆಗ ಪೊಲೀಸರು ಸತೀಶ್ ಮೇಲೆ ಅನುಮಾನದಿಂದ ವಿಚಾರಣೆ ಆರಂಭ ಮಾಡಿದ್ದು, ನನಗೆ ಏನು ಗೊತ್ತಿಲ್ಲ ಎಂದು ನಾಟಕ ಮಾಡಿದ್ದ.
ಕೇಸಿಗೆ ಟ್ವಸ್ಟ್ ಕೊಟ್ಟಿದ್ದು ಆ ಒಂದು ಮೆಸೇಜ್?
ಆದರೆ ಇಬ್ಬರು ಒಂದೇ ಬೈಕ್ ನಲ್ಲಿ ಹೋಗಿರುವ ಸಿಸಿಟಿವಿ ವಿಡಿಯೋ ಸಹ ಸಿಕ್ಕಿತ್ತು. ಇದರ ಆಧಾರದ ಮೇಲೆ ಪೊಲೀಸರು ಮತ್ತೆ ಸತೀಶ್ ನನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ಬೈಕ್ ಮೇಲೆ ಇಬ್ಬರು ಹೊಗಿದ್ದು ನಿಜ. ಆದ್ರೆ, ಮಧುಶ್ರೀಯನ್ನು ಹಾತಲಗೇರಿ ಗ್ರಾಮದ ಬಳಿ ಬಿಟ್ಟು ನಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಹೋಗಿದ್ದೇನೆ. ಅವಳು ಎಲ್ಲಿಗೆ ಹೋಗಿದ್ದಳೆಂದು ಗೊತ್ತಿಲ್ಲ ಎಂದಿದ್ದ. ಆಗ ಪೊಲೀಸರು ಸತೀಶ್ ನನ್ನು ಬಿಟ್ಟು ಕಳಿಸಿದ್ದರು. ಕಲೆ ದಿನಗಳ ನಂತರ ಸತೀಶ್ ನ ಮೊಬೈಲ್ ಒಂದು ಕಂಪನಿ ಮೆಸೇಜ್ ಬಂದಿತ್ತು. ಆಗಲೇ ನಾಪತ್ತೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಈ ಮೆಸೇಜ್ ಜಾಡು ಹಿಡಿದು ಹೋದ ಪೊಲೀಸರಿಗೆ ಸತೀಶನ ನೌಟಂಕಿ ಆಟ ಗೊತ್ತಾಗಿದೆ. ಸತೀಶನ ಮೊಬೈಲ್ ಗೆ ಬಂದಿದ್ದ ಲೊಕೇಶನ್ ಬೇರೆಯಾಗಿತ್ತು. ಆಗ ಪೊಲೀಸರಿಗೆ ಆರೋಪಿ ಸತೀಶ್ ಮೇಲೆ ಅನುಮಾನ ಜಾಸ್ತಿಯಾಗಿದ್ದು, ಮತ್ತೆ ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಅಂದಹಾಗೇ 2024 ಡಿಸೆಂಬರ್ 16 ರಂದು ಪ್ರೇಯಸಿ ಮಧುಶ್ರೀಯನ್ನು ಕರೆದುಕೊಂಡು ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದ, ತಮ್ಮ ಜಮೀನಿಗೆ ಹೋಗಿದ್ದ. ಆಗ ಮಧುಶ್ರೀ ಮದುವೆಯಾಗು ಎಂದು ಹಠ ಹಿಡಿದಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು, ಗಲಾಟೆ ವಿಕೋಪಕ್ಕೆ ಹೋಗಿದೆ. ರೊಚ್ಚಿಗೆದ್ದ ಸತೀಶ್ ಮಧುಶ್ರೀಯ ವೇಲ್ ನಿಂದ ಕುತ್ತಿಗೆಗೆ ಬಿಗಿದು, ಕೊಲೆ ಮಾಡಿದ್ದಾನೆ. ನಂತರ ಪಕ್ಕದ ಹಳ್ಳದಲ್ಲಿ ಅವಳ ಶವವನ್ನು ಹೊತು ಹಾಕಿ, ಏನೂ ಗೊತ್ತಿಲ್ಲದ ರೀತಿ ಇದ್ದ.
ಇದನ್ನೂ ಓದಿ: ತಾನೇ ಗಂಡನ ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡ ಸೋನಮ್; ಮಂಗಳಸೂತ್ರ ನೀಡಿತ್ತು ಕಿರಾತಕಿಯ ಸುಳಿವು!
ಬಳಿಕ ಮೃತದೇಹ ಹೂತು ಹಾಕಿದ್ದ ಸ್ಥಳಕ್ಕೆ ಆಗಾಗ ಬಂದು ಎಲುಬುಗಳನ್ನು ಬೇರೆ ಕಡೆ ಹಾಕಿ, ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದ. ಆದ್ರೆ, ಅಂದು ಸ್ವಿಚ್ ಆಫ್ ಆದ ಮೊಬೈಲ್ ಗೆ ಕಂಪನಿಯ ಒಂದು ಮೆಸೇಜ್ ಬಂದಿದ್ದು, ಆರೋಪಿ ಸತೀಶ್ ಹೇಳೋ ಲೊಕೇಶನ್ ಬೇರೆ, ಮೊಬೈಲ್ ಗೆ ಬಂದಿರೋ ಮೆಸೇಜ್ ಲೊಕೇಶನ್ ಬೇರೆಯಾಗಿತ್ತು. ಹೀಗಾಗಿ ಕೇಸ್ ಬೆನ್ನತ್ತಿದ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಮಾರುತಿ, ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ಮಾಡಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಶವವನ್ನು ಹೊತು ಹಾಕಿದ ಜಾಗವನ್ನು ತೋರಿಸಿದ್ದಾನೆ. ಸದ್ಯ ದೇಹದ ಕೆಲವು ಎಲುಬು ಸಿಕ್ಕಿದ್ದು, ಇನ್ನೂ ಅವಳ ರುಂಡ ಸಿಕ್ಕಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಪೊಲೀಸರು ರುಂಡಕ್ಕಾಗಿ ಶೋಧ ನಡೆಸುತ್ತಿದ್ದಾರೆ.
ಪೊಲೀಸರು ಮಧುಶ್ರೀ ಶವದ ಅವಶೇಷಗಳನ್ನು ಹಳ್ಳದಲ್ಲಿ ಪತ್ತೆ ಮಾಡಿದ್ದು, ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಬಿಡಿಸುವಲ್ಲಿ ಜಾಣತನದ ತನಿಖೆ ಪ್ರದರ್ಶಿಸಿದ್ದಾರೆ. ಸತೀಶ್ ಸಾಕ್ಷ್ಯಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿದ್ದರೂ, ಮೊಬೈಲ್ ಸಂದೇಶವೊಂದು ಪ್ರಕರಣದ ಜಾಡು ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರ ಜೊತೆಗೆ, ಸತೀಶ್‌ನ ಸಂಪರ್ಕದ ವಿವರಗಳು ಮತ್ತು ಆತನ ಚಲನವಲನಗಳನ್ನು ಪರಿಶೀಲಿಸಿದ್ದು ಪೊಲೀಸರಿಗೆ ಸಹಾಯಕವಾಯಿತು.
ಆದರೆ ಮದುವೆಯಾಗು ಎಂದಿದ್ದಕ್ಕೆ ಪ್ರೀಯಕರ ಸತೀಶ್ ಪ್ರೇಯಸಿ ಮಧುಶ್ರೀಯನ್ನು ಕೊಲೆ ಮಾಡಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.