ಮಂಗಳೂರು/ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್‌ಗೆ ಹನಿಮೂನ್‌ಗೆ ಹೋಗಿದ್ದಾಗ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಸೋನಮ್ ರಘುವಂಶಿ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಕೊನೆಗೂ ತಾನೇ ಆ ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಈ ಮಧ್ಯೆ ರಾಜಾ ರಘುವಂಶಿ ಕೊಲೆ ನಂತರ ಸೋನಮ್ ಪತ್ತೆಯಾಗಿದ್ದು ಹೇಗೆ ಎಂದು ಮೇಘಾಲಯ ಪೊಲೀಸ್ ಮಹಾನಿರ್ದೇಶಕ ಐ ನೊಂಗ್ರಾಂಗ್ ಬಿಚ್ಚಿಟ್ಟಿದ್ದಾರೆ.

ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು.
ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ಮಂಗಳಸೂತ್ರ ನೀಡಿತ್ತು ಕಿರಾತಕಿಯ ಸುಳಿವು!
ರಾಜಾ ರಘುವಂಶಿ ಮೃತದೇಹ ಪತ್ತೆಯಾದ ಬಳಿಕ ಸೋನಂಗಾಗಿ ಪೊಲೀಸರು ಹುಡುಕಾಟ ಚುರುಕುಗೊಳಿಸಿದ್ದರು. ನಾಪತ್ತೆಯಾಗಿದ್ದ ಸೋನಂ ಜೂ.9ರಂದು ಘಟನೆ ನಡೆದ ಸ್ಥಳದಿಂದ ಸುಮಾರು 1200 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿ ಶರಣಾಗಿದ್ದಳು. ಪೊಲೀಸರು ಸೋನಂ ಗೆಳೆಯ ರಾಜ್ ಕುಶ್ವ ಮತ್ತು ಮೂರು ಬಾಡಿಗೆ ಹಂತಕರನ್ನು ಬಂಧಿಸಿದ್ದರು.
ಅಷ್ಟಕ್ಕೂ ಸೋನಂ ಸುಳಿವು ಸಿಕ್ಕಿದ್ದು ಹೇಗೆಂದರೆ, ಸೋಹ್ರಾ ಹೋಮ್ ಸ್ಟೇನಲ್ಲಿ ಬಿಟ್ಟುಹೋಗಿದ್ದ ಸೂಟ್‌ಕೇಸ್‌ನಲ್ಲಿ ಇರಿಸಿದ್ದ ಸೋನಂ ಮಂಗಳಸೂತ್ರ ಮತ್ತು ಉಂಗುರ ಈ ಘಟನೆಯಲ್ಲಿ ಆರೋಪಿಗಳ ದೊಡ್ಡ ಸುಳಿವು ನೀಡಿದೆ ಎಂದು ಮೇಘಾಲಯ ಡಿಜಿಪಿ ಐ ನೊಂಗ್ರಾಂಗ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು,”ವಿವಾಹಿತ ಮಹಿಳೆಯೊಬ್ಬರು ಆಭರಣಗಳನ್ನು ಬಿಟ್ಟು ಹೋಗಿರುವುದು, ಪ್ರಕರಣದಲ್ಲಿ ಶಂಕಿತಳಾಗಿ ಆಕೆಯನ್ನು ಬೆನ್ನಟ್ಟಲು ನಮಗೆ ಸುಳಿವು ನೀಡಿತು”ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೇಘಾಲಯದ ಹನಿಮೂನ್ ದುರಂತಕ್ಕೆ ಬಿಗ್ ಟ್ವಿಸ್ಟ್; ಗಂಡನ ಕೊ*ಲೆಯ ಹಿಂದೆ ಪತ್ನಿ ಕೈವಾಡ
ಕೊನೆಗೂ ಸತ್ಯ ಒಪ್ಪಿಕೊಂಡ ಸೋನಂ!
ಈ ಮೊದಲು ದರೋಡೆಕೋರರು ಆತನನ್ನು ಕೊಲೆ ಮಾಡಿದರು ಎಂದು ಕತೆ ಕಟ್ಟಿದ್ದ ಸೋನಂ ಇದೀಗ ತಾನೇ ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ವರದಿಗಳ ಪ್ರಕಾರ, ಮುಖ್ಯವಾದ ಸಾಕ್ಷಿಗಳನ್ನು ಪ್ರಸ್ತುತಪಡಿಸಿದಾಗ ಸೋನಂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಮೇಘಾಲಯ ಪೊಲೀಸರ ಸಮ್ಮುಖದಲ್ಲಿ ಮಾಡಿದ ಅವರ ತಪ್ಪೊಪ್ಪಿಗೆಯು ಪೂರ್ವಯೋಜಿತ ಕೊಲೆಯಲ್ಲಿ ಅವರ ಭಾಗವಹಿಸುವಿಕೆ ಇದೆ ಎಂದು ದೃಢಪಡಿಸಿತು.
ಪೋಷಕರ ಮನೆಯಲ್ಲಿದ್ದಾಗ ಕೊಲೆ ಪ್ಲಾನ್ ಮಾಡಿದ್ದಳು ಹಂತಕಿ ಪತ್ನಿ
ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಸೋನಮ್ ಬೇರೆಡೆಗೆ ಹೋಗುವ ಮೊದಲು ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಒತ್ತಾಯಿಸುವ ಮೂಲಕ ರಾಜನನ್ನು ಭಾವನಾತ್ಮಕವಾಗಿ ಒಲಿಸಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಗುವಾಹಟಿಗೆ ಮತ್ತು ನಂತರ ಮೇಘಾಲಯಕ್ಕೆ ಪ್ರಯಾಣಿಸಲು ಅವಳು ಅವನನ್ನು ಮನವೊಲಿಸಿದ್ದಳು. ಅಲ್ಲಿ ಅವನನ್ನು ಕೊಲೆ ಮಾಡಲಾಯಿತು. ಇದೆಲ್ಲವನ್ನೂ ಮದುವೆಯ ನಂತರ ಅವಳು ತನ್ನ ಪೋಷಕರ ಮನೆಯಲ್ಲಿದ್ದಾಗ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಲಾನ್ 1 ಫೈಲ್ ಆದರೆ ಪ್ಲಾನ್ 2 ರೆಡಿ ಮಾಡಿದ್ದ ಸೋನಂ!
ರಾಜಾ ರಘುವಂಶಿ ಮತ್ತು ಸೋನಮ್ ಅವರ ಮದುವೆಯಾಗಿ 4 ದಿನಗಳ ನಂತರ ಮೇ 15ರಂದು ತನ್ನ ತಾಯಿಯ ಮನೆಗೆ ಮರಳಿದ್ದರು. ಅಲ್ಲಿಂದ, ಅವರು ಪ್ರಯಾಣ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು ಮತ್ತು ಪ್ರಿಯಕರ ರಾಜ್ ಅವರೊಂದಿಗೆ ಫೋನ್ ಮೂಲಕ ಸಂಪೂರ್ಣ ಪ್ಲಾನ್ ಮಾಡಿದ್ದಳು. ಇಂದೋರ್‌ನಲ್ಲಿ ಮೇಘಾಲಯ ಪೊಲೀಸರು ಆರೋಪಿಯ ಆರಂಭಿಕ ವಿಚಾರಣೆಯ ಸಮಯದಲ್ಲಿ, ಸೋನಮ್‌ನ ಒಳಗೊಳ್ಳುವಿಕೆಯ ಪ್ರಮಾಣವು ಬೆಳಕಿಗೆ ಬಂದಿತು ಎಂದು ವರದಿಯಾಗಿದೆ. ಒಂದುವೇಳೆ ವಿಶಾಲ್, ಆನಂದ್ ಮತ್ತು ಆಕಾಶ್ ಎಂದು ಗುರುತಿಸಲ್ಪಟ್ಟಿರುವ ತನ್ನ ಸ್ನೇಹಿತರು ರಾಜನನ್ನು ಕೊಲ್ಲಲು ವಿಫಲವಾದರೆ, ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಅವನನ್ನು ಬೆಟ್ಟದ ಸ್ಥಳಕ್ಕೆ ಕರೆದೊಯ್ದು ಕೊಲ್ಲುವುದಾಗಿ ಸೋನಮ್ ರಾಜ್‌ಗೆ ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಅಪರಾಧ ಬಹಿರಂಗವಾದರೆ ನೇಪಾಳಕ್ಕೆ ಪರಾರಿಯಾಗಲು ಇಬ್ಬರೂ ಪ್ಲಾನ್ ಮಾಡಿದ್ದರು ಎಂದು ವರದಿಯಾಗಿದೆ.