ರಾಜ್ಯದಲ್ಲೇ ಮೊದಲ ಬಾರಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತಂದು ಮಾದರಿಯಾಗಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತರ ‘ನೇರ ಫೋನ್ ಇನ್ ಕಾರ್ಯಕ್ರಮ’ ಹೇಳ ಹೆಸರಿಲ್ಲದಂತೆ ಕಾಣೆಯಾಗಿದೆ.
ಮಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತಂದು ಮಾದರಿಯಾಗಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತರ ‘ನೇರ ಫೋನ್ ಇನ್ ಕಾರ್ಯಕ್ರಮ’ ಹೇಳ ಹೆಸರಿಲ್ಲದಂತೆ ಕಾಣೆಯಾಗಿದೆ.
ಮಂಗಳೂರಿಗೆ ಇದೀಗ ನೂತನ ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿರುವ ಕುಲ್‌ದೀಪ್ ಕುಮಾರ್ ಆರ್. ಜೈನ್ ಮರುಜೀವ ಕೊಟ್ಟು ಜನಸಾಮಾನ್ಯರಿಗೆ ಕಿವಿಯಾಗಬೇಕೆಂಬುವುದು ಪ್ರಜ್ಞಾವಂತ ನಾಗರೀಕರ ಆಶಯವಾಗಿದೆ.

ಕುಲ್‌ದೀಪ್ ಕುಮಾರ್ ಆರ್. ಜೈನ್
ರಾಜ್ಯದಲ್ಲೇ ಮೊದಲ ಬಾರಿಗೆ ಜಾರಿಯಾಗಿದ್ದ ವಿನೂತನವಾಗಿ ‘ನೇರ ಫೋನ್ ಇನ್ ಕಾರ್ಯಕ್ರಮ’ ಮಾದರಿಯನ್ನು ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಜಾರಿಗೆ ತರುವ ಮೂಲಕ ಪೊಲೀಸರು ಹೇಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬಹುದೆಂಬುವುದನ್ನು ತೋರಿಸಿಕೊಟ್ಟವರು ಹೆಮ್ಮೆಯ ಮಂಗಳೂರು ಪೊಲೀಸರು.
100ಕ್ಕೂ ಅಧಿಕ ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಇದೇ ಫೋನ್ ಇನ್ ಕಾರ್ಯಕ್ರಮ ಇದೀಗ ನಿಂತು ಬರೋಬ್ಬರಿ 3 ವರ್ಷಗಳೇ ಸಂದಿವೆ.
ಮಂಗಳೂರು ಮಾದರಿಯನ್ನು ಇಟ್ಟುಕೊಂಡು ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಾರಂಭಿಸಿದ ಈ ಕಾರ್ಯಕ್ರಮ ಇಂದಿಗೂ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಮಂಗಳೂರಿಗರು ಈಗಲೂ ನೆನಪಿಡುವ ಅಂದಿನ ನಗರ ಪೊಲೀಸ್ ಆಯುಕ್ತರಾದ ಡಾ. ಎಂ.ಚಂದ್ರಶೇಖರ್ 2016ರ ಆ.5 ರಂದು ಮೊದಲ ಫೋನ್ ಇನ್ ಕಾರ್ಯಕ್ರವನ್ನು ಆರಂಭಿಸಿದ್ದರು.
ಪ್ರತೀ ಶುಕ್ರವಾರ ಬೆಳಗ್ಗೆ 10 ರಿಂದ 11 ಗಂಟೆವರೆಗಿನ ಒಂದು ಗಂಟೆ ಸಮಯವನ್ನು ಸಾರ್ವಜನಿಕರ ಅಹವಾಲು ಕೇಳಲು ಮೀಸಲಿರಿಸಿದ್ದರು.
ಈ ಮೂಲಕ ಜನಸಾಮಾನ್ಯನ ದುಗುಡ ದುಮ್ಮಾನವನ್ನು ದೊರೆ ಸಮಾನವಾಗಿರುವ ಪೊಲೀಸ್ ಆಯುಕ್ತರೇ ಖುದ್ದು ಕೇಳಿ ಅದಕ್ಕೆ ಸೂಕ್ತ ಪರಿಹಾರವನ್ನು ಆನ್ ದಿ ಸ್ಪಾಟ್ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಜನ ಸ್ನೇಹಿಯಾಗಿದ್ದ ಈ ಉದ್ದೇಶವು ಬಹುತೇಕ ಯಶಸ್ವಿಯಾಗಿ ಮಂಗಳೂರು ನಾಗರೀಕರ ಹಲವು ಸಮಸ್ಯೆಗಳಿಗೆ ಪರಿಹಾರ ಕಾಣುವ ಪ್ರಮುಖ ವೇದಿಕೆಯಾಗಿ ಮಾರ್ಪಟ್ಟಿತ್ತು.
ಜನ ಸಾಮಾನ್ಯ ತನ್ನ ದುಗುಡ ದುಮ್ಮಾನಗಳನ್ನು ಫೋನ್ ಮೂಲಕ ನಿರ್ಭಿತಿಯಿಂದ ನೇರವಾಗಿ ಪೊಲೀಸ್ ಆಯುಕ್ತರಿಗೆ ತಿಳಿಸುವ ಮತ್ತು ಆ ಮೂಲಕ ಅದಕ್ಕೇ ಸೂಕ್ತ ಪರಿಹಾರ ನೀಡುವ ಅಥವಾ ದೂರಿನ ಆಧಾರದಲ್ಲಿ ಪರಿಹಾರ ಕೊಡುವ ಅತ್ಯಂತ ಯಶಸ್ವಿ ಕಾರ್ಯಕ್ರಮ ಅದಾಗಿತ್ತು.
ಸಾರ್ವಜನಿಕರ ಅಹವಾಲನ್ನು ಸ್ವತಃ ಪೊಲೀಸ್ ಕಮೀಷನರೇ ಕೇಳುತ್ತಿದ್ದುದು ಈ ಕಾರ್ಯಕ್ರಮದ ವಿಶೇಷ.
ಇವರ ಜೊತೆ ಡಿಸಿಪಿ, ಎಸಿಪಿ, ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳು, ಬಸ್ ಮಾಲಕರ ಸಂಘದ ಪದಾಧಿಕಾರಿಗಳು, ಆರ್‌ಟಿಓ ಅಧಿಕಾರಿಗಳು ಸೇರಿ ವಿವಿಧ ಅಧಿಕಾರಿಗಳ ಸಮ್ಮುಖದಲ್ಲೇ ಸಮಸ್ಯೆಗಳು ಆನ್ ದಿ ಸ್ಪಾಟ್ ಪರಿಹಾರ ಕಾಣುತ್ತಿದ್ದವು.

ಡಾ. ಚಂದ್ರಶೇಖರ್ ಯಾವ ಬದ್ದತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರೋ ಅದೇ ಬದ್ದತೆಯಿಂದ ತನ್ನ ವರ್ಗಾವಣೆಯವರೆಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ತದನಂತರ ಬಂದ ಪೊಲೀಸ್ ಆಯುಕ್ತರುಗಳಾದ ಟಿ. ಆರ್. ಸುರೇಶ್, ಸಂದೀಪ್ ಪಾಟೀಲ್, ಪಿ.ಎಸ್ ಹರ್ಷವರೆಗೂ ಈ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿತ್ತು.
ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹೆಚ್ಚು ಕಡಿಮೆ ಸಂಪೂರ್ಣ ಹತೋಟಿಯಲ್ಲಿತ್ತು.
ಮತ್ತು ಜನರ ನೈಜ ದೂರುಗಳಿಗೆ ಪೊಲೀಸ್ ಆಯುಕ್ತರೇ ಖುದ್ದಾಗಿ ಕೇವಲ ಒಂದು ಫೋನ್ ಮೂಲಕ ಪರಿಹಾರ ಸೂಚಿಸುತ್ತಿದ್ದರು. ಈ ಕಾರ್ಯಕ್ರಮ ಪೊಲೀಸ್ ಇಲಾಖೆ ಮತ್ತು ನಾಗರಿಕರ ಮಧ್ಯೆ ವಿಶ್ವಾಸದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು.
ಪ್ರತೀ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇವಲ ಒಂದು ಘಂಟೆಯಲ್ಲೇ ಕಡಿಮೆ ಪಕ್ಷ 30 ರಿಂದ 50 ಕರೆಗಳು ಬರುತ್ತಿತ್ತು. ಜೊತೆಗೆ ಅದಕ್ಕೆ ಅಧಿಕಾರಿಗಳು ಕೂಡಾ ಉತ್ತಮ ಸ್ಪಂದನೆ ನೀಡುತ್ತಿದ್ದರು.
ಕಾರ್ಯಕ್ರಮದಲ್ಲಿ ದೂರು ನೀಡಿದ ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡುತ್ತಿದ್ದುದು ಇದರ ಮತ್ತೊಂದು ವಿಶೇಷ.
ಜೊತೆಗೆ ಈ ಕಾರ್ಯಕ್ರಮ ಪಾರದರ್ಶಕವಾಗಿದ್ದು, ಸಮಸ್ಯೆಗಳು ಮತ್ತು ಪರಿಹಾರವನ್ನು ಸ್ಥಳೀಯ ಹಾಗೂ ರಾಜ್ಯಮಟ್ಟದ ಪತ್ರಿಕೆ- ಮಾದ್ಯಮಗಳು ಬಿತ್ತರಿಸುತ್ತಿದ್ದುದರಿಂದ ವಿಶೇಷ ಮಹತ್ವ ಪಡೆದಿತ್ತು.
ಇದಕ್ಕಾಗಿ ಸಾರ್ವಜನಿಕರು ನಿರ್ಭೀತಿಯಿಂದ ಆಯುಕ್ತರಿಗೆ ತಮ್ಮ ದೂರುಗಳನ್ನು ಸಲ್ಲಿಸುತ್ತಿದ್ದರು.
ಆದರೆ ಕಳೆದ 3 ವರ್ಷದಿಂದ ಈ ಕಾರ್ಯಕ್ರಮ ನಿಂತು ಸಾರ್ವಜನಿಕರ ದೂರುಗಳಿಗೆ ಅದರಲ್ಲೂ ಹಿರಿಯ ನಾಗರಿಕರಿಗೆ, ಅಶಕ್ತರಿಗೆ, ನೊಂದವರಿಗೆ ಸ್ಪಂದನೆಯೇ ಇಲ್ಲದಂತಾಗಿದೆ.
ಇಂದು ತಮ್ಮ ಹಾಗೂ ಸಮಾಜದ ಪ್ರತಿಯೊಂದು ಸಮಸ್ಯೆಗೂ ಪೊಲೀಸ್ ಕಚೇರಿಗಳನ್ನು ತಡಕಾಡಬೇಕಿದೆ. ಕೆಲವು ದೂರುಗಳು ಠಾಣೆಯ ಫೈಲ್ ಸೇರುವ ಬದಲು ಕಸದ ಬುಟ್ಟಿಗೆ ಸೇರುತ್ತಿದೆ.
ಆದ್ದರಿಂದ ಮತ್ತೆ ಪೊಲೀಸ್ ಆಯುಕ್ತರು ಜನಸ್ನೇಹಿ ಕಾರ್ಯಕ್ರಮವಾಗಿರುವ ಫೋನ್ ಇನ್ ಅನ್ನು ಮತ್ತೆ ಆರಂಭಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಕೇವಲ ಸೋಷಿಯಲ್ ಮೀಡಿಯಾಗಳಿಂದ ಜನಸ್ನೇಹಿ ಪೊಲೀಸ್ ಆಗಲು ಸಾಧ್ಯವಿಲ್ಲ ಎಂಬುವುದನ್ನು ಹಿರಿಯ ಅಧಿಕಾರಿಗಳು ಮನಗಾಣಬೇಕು.
ಎಷ್ಟೋ ಹಿರಿಯ ನಾಗರಿಕರಿಗೆ ಸಾಮಾಜಿಕ ಜಾಲತಾಣಗಳ ಅರಿವೇ ಇಲ್ಲ. ಜಿಲ್ಲಾ ಹಾಗೂ ನಗರ ಮಟ್ಟದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ತುರ್ತು ಸಂದರ್ಭಗಳಲ್ಲಿ ಕರೆ ಮಾಡಬಹುದಾಗಿದ್ದ ಡಯಲ್ 100 ಇದೀಗ ಸರಕಾರದ ನಿರ್ದೇಶದನ್ವಯ ಡಯಲ್ 112 ಆಗಿದ್ದು, ಈ ವ್ಯವಸ್ಥೆಯನ್ನು ಏಕಗವಾಕ್ಷಿ ಯೋಜನೆಯನ್ನಾಗಿ ರೂಪಿಸಿ ರಾಜ್ಯ ಮಟ್ಟದಲ್ಲಿ ಜಾರಿಗೊಳಿಸಿದ್ದಾರೆ.
ಆದರೆ ಈ ಸಂಖ್ಯೆಗೆ ಕರೆ ಮಾಡಿದಾಗ ಅದು ಬೆಂಗಳೂರು ಪೊಲೀಸ್ ಇಲಾಖೆ ನಿರ್ವಹಿಸುವ ಕಾಲ್ ಸೆಂಟರ್‌ಗೆ ತಲುಪಿ ಬಳಿಕ ಆಯಾಯ ಜಿಲ್ಲಾ ವ್ಯಾಪ್ತಿಗೆ ವರ್ಗಾವಣೆಯಾಗುತ್ತಿದೆ.
ಈ ವ್ಯವಸ್ಥೆ ಜನಸಾಮಾನ್ಯನಿಗೆ ತೀರಾ ತ್ರಾಸದಾಯಕವಾಗಿದೆ ಎಂಬುವುದು ಕೂಡ ಅಷ್ಟೇ ಸತ್ಯ.
ಆದ್ದರಿಂದ ತಮ್ಮ ಅಹವಾಲುಗಳನ್ನು ನೇರವಾಗಿ ಪೊಲೀಸ್ ಆಯುಕ್ತರಿಗೆ ತಿಳಿಸುವ ನೇರ ಫೋನ್ ಕಾರ್ಯಕ್ರಮದಂತಹ ವೇದಿಕೆ ಮಂಗಳೂರಿನಂತಹ ಸೂಕ್ಷ್ಮ ಪ್ರದೇಶಕ್ಕೆ ಅತ್ಯಗತ್ಯ.
ಸದ್ಯ ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದೆ ಜೊತೆಗೆ ಒಂದಷ್ಟು ಸಮಸ್ಯೆಗಳನ್ನು ಅದು ಹೊತ್ತು ತರುತ್ತಿದೆ.
ಇದರೊಟ್ಟಿಗೆ ನಗರದಲ್ಲಿ ಸಮಸ್ಯೆಗಳ ರಾಶಿ ಇದೆ. ಬಸ್ ಸಂಚಾರ, ಟ್ರಾಫಿಕ್, ಫುಟ್‌ಪಾತ್, ಅಪರಾಧ, ಡ್ರಗ್ ಮಾಫಿಯಾ, ಕಳ್ಳತನ, ಅಕ್ರಮ ಗೋಸಾಟ ಪ್ರಕರಣಗಳು ಹೆಚ್ಚಾಗುತ್ತಿದೆ.
ಇದನ್ನು ತಡೆಗಟ್ಟುವ ಉದ್ದೇಶದಿಂದ ನೂತನ ಆಯುಕ್ತರು ಈ ಕಾರ್ಯಕ್ರಮವನ್ನು ಮುಂದುವರೆಸಬೇಕಾಗಿ ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.