ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಬಗ್ಗೆ ಮಾಧ್ಯಮಕ್ಕೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಂಗಳೂರು ಸಿಟಿ ಪೊಲೀಸ್ ಎಂಬ ವೆಬ್‌ಸೈಟ್ ಇತ್ತು.
ಅದು ಕೆಲ ತಿಂಗಳಿಂದ ನಿಷ್ಕ್ರಿಯಗೊಂಡು ಇದೀಗ ಗೂಗಲ್ ಸರ್ಚ್ ಇಂಜಿನ್‌ನಿಂದಲೇ ನಾಪತ್ತೆಯಾಗಿದೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಗೆ ಹೋಲಿಸಿದರೆ ಉಡುಪಿ ಜಿಲ್ಲಾ ಪೊಲೀಸ್ ಪ್ರತಿನಿತ್ಯ ಎರಡು ಸಮಯದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಅಪರಾಧ, ನಾಪತ್ತೆ, ಅಪಘಾತ ಸೇರಿದಂತೆ ಪ್ರಕರಣ ದಾಖಲಾದ ಮಾಹಿತಿಯನ್ನು ನೀಡುತ್ತಿದೆ.
ಉಡುಪಿ ಜಿಲ್ಲಾ ಪೊಲೀಸ್ ವೆಬ್‌ಸೈಟ್ ಪ್ರತಿನಿತ್ಯ ಅಪರಾಹ್ನ ಹಾಗೂ ಮಧ್ಯಾಹ್ನ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತದೆ.

ಉಡುಪಿ ಜಿಲ್ಲೆಯು ಎಸ್‌ಪಿ ವ್ಯಾಪ್ತಿಯನ್ನು ಹೊಂದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯು ಎಸ್‌ಪಿ ವ್ಯಾಪ್ತಿ ಸೇರಿ ನಗರ ಕಮೀಷನರೇಟ್ ವ್ಯಾಪ್ತಿ ಹೊಂದಿದೆ. ಇಲ್ಲಿ ಅಪರಾಧ ಪ್ರಕರಣಗಳು ಹೆಚ್ಚು. ಉಡುಪಿ ಜಿಲ್ಲೆಗೆ ಹೋಲಿಸಿದರೆ ದ.ಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿದೆ.
ಜೊತೆಗೆ ಅಪರಾಧ, ಸೈಬರ್ ಸೇರಿದಂತೆ ಹಲವು ವಿಭಾಗಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿ ಹೊಂದಿರುವವರು ಇದ್ದಾರೆ. ಆದರೂ ಒಂದು ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ನಿರ್ಮಿತವಾದ ಪೊಲೀಸ್ ವೆಬ್‌ಸೈಟ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ನೀರಿನಲ್ಲಿ ಇಟ್ಟ ಹೋಮದಂತೆ ಆಗಿದೆ.

ಈ ಹಿಂದೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಎಫ್‌ಐಆರ್ ಸಾರಾಂಶವನ್ನು ಆ ದಿನವೇ ಸಂಜೆಯೊಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದ್ದರು. ಜೊತೆಗೆ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ನಡೆಯುವ ಸಭೆಗಳ ಮಾಹಿತಿ, ಪತ್ರಿಕಾ ಪ್ರಕಟಣೆಗಳನ್ನು ಇದರಲ್ಲಿ ಪ್ರಕಟಿಸಲಾಗುತ್ತಿತ್ತು.
ಈ ಹಿಂದೆ ಜನಸಾಮಾನ್ಯರಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ, ಕಮಿಷನರೇಟ್ ವ್ಯಾಪ್ತಿಯ ಠಾಣೆಗಳ, ಸಂಚಾರಿ ಠಾಣೆಯ ದೂರವಾಣಿ ಸಂಖ್ಯೆ ಸಿಗುತಿತ್ತು. ಈ ಮೂಲಕ ಸಂಬಂಧಪಟ್ಟವರನ್ನು ನೇರವಾಗಿ ಸಂಪರ್ಕಿಸಬಹುದಿತ್ತು.
ಆದರೆ ಈಗ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ವೆಬ್ಸೈಟ್ ನಾಪತ್ತೆಯಾಗುವುದರೊಂದಿಗೆ ಪೊಲೀಸ್ ಇಲಾಖೆ ಜನರಿಂದ ದೂರವಿದೆಯೇನೋ ಎಂಬಂತೆ ಭಾಸವಾಗುತ್ತಿದೆ.
ಠಾಣೆಗಳಲ್ಲಿ ಘಟನೆ ನಡೆದ ಬಗ್ಗೆ ಮಾಹಿತಿಯೇ ಇಲ್ಲ ಅನ್ನುತ್ತಾರೆ?
ಮಂಗಳೂರು ಕಮಿಷನರೇಟ್ ವ್ಯಾಪ್ತಿ ದ.ಕ ಜಿಲ್ಲಾ ಕೇಂದ್ರ ಪ್ರದೇಶವಾಗಿದ್ದು, ಇಲ್ಲಿ ರಾಜ್ಯ ರಾಷ್ಟ್ರಮಟ್ಟದ ಮಾಧ್ಯಮಗಳ ವರದಿಗಾರರಿದ್ದಾರೆ. ಆದ್ದರಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕೆಲವು ಅಪರಾಧ ಪ್ರಕರಣಗಳ ಬಗ್ಗೆ ಕೆಲವು ಮಾಧ್ಯಮ ವರದಿಗಾರರು ಪೊಲೀಸ್ ಠಾಣೆಗಳಲ್ಲಿ ನಿಖರತೆಯನ್ನು ತಿಳಿಯಲು ಮಾಹಿತಿ ಕೇಳಿದರೆ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಜೊತೆಗೆ ಕೆಲವು ಮಾಧ್ಯಮಗಳಿಗೆ ಕೆಲವು ಪ್ರಕರಣಗಳ ಮಾಹಿತಿ ದೊರೆಯುತ್ತದೆ. ಅದೇ ಮಾಹಿತಿಯನ್ನು ಕೆಲವರು ಎರವಲು ಪಡೆಯುತ್ತಾರೆ.ಈ ವೇಳೆ ಗೊಂದಲಗಳು ಉಂಟಾಗುತ್ತದೆ. ಕೆಲವೇ ಕೆಲವು ಆಯ್ದ ಪ್ರಕರಣಗಳ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರು, ಅಥವಾ ಡಿಸಿಪಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡುತ್ತಾರೆ.
ಮಾಹಿತಿ ಎಡವಟ್ಟಿನಿಂದ ವರದಿಗಳೂ ಎಡವಟ್ಟು
ಸಣ್ಣಪುಟ್ಟ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಹಿಂದಿನ ಪೊಲೀಸ್ ಆಯುಕ್ತರು ಹುದ್ದೆಯಲ್ಲಿದ್ದಾಗ ವೆಬ್‌ಸೈಟ್ ನಿರ್ವಹಣೆಗೆ ಪರಿಣಿತ ಸಿಬ್ಬಂದಿ ನೇಮಕ ಮಾಡಿ ಪ್ರತಿದಿನದ ಆಗುಹೋಗುಗಳ ಬಗ್ಗೆ ಮಾಹಿತಿಗಳು ಇಲಾಖಾ ವೆಬ್‌ಸೈಟ್‌ನಲ್ಲಿ ಅಪ್ಡೇಡ್ ಆಗುತಿತ್ತು.
ಆದ್ದರಿಂದ ಮಾಧ್ಯಮಗಳ ವರದಿಯಿಂದ ಓದುಗರು ಗೊಂದಲಕ್ಕೀಡಾಗುತ್ತಿರಲಿಲ್ಲ. ಈಗ ಒಬ್ಬೊಬ್ಬ ವರದಿಗಾರರಿಗೆ ತಪ್ಪು ತಪ್ಪು ಮಾಹಿತಿ ಸಿಗುವುದರಿಂದ ಓದುಗರು ಅಥವಾ ಕೇಳುಗರು ಪ್ರಕರಣದ ಅದೇ ತಪ್ಪು ವರದಿಯನ್ನು ಓದುತ್ತಾರೆ.
ಬೆಂಗಳೂರು ಕಮೀನರೇಟ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೊಲೀಸ್ ಅವರು ಒಂದು ಟ್ವೀಟ್ ಮಾಡಿದರೂ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಜೊತೆಗೆ ಪ್ರತಿನಿತ್ಯದ ಆಗುಹೋಗುಗಳನ್ನು ಟ್ವಿಟ್ಟರ್, ಫೇಸ್‌ಬುಕ್, ಪೊಲೀಸ್ ವೆಬ್‌ಸೈಟ್ ಮುಂತಾದ ಜಾಲತಾಣದ ಮುಖಾಂತರ ಜನರಿಗೆ ಹತ್ತಿರವಾಗಿದ್ದಾರೆ.
ಆದರೆ ರಾಜ್ಯದ ವಾಣಿಜ್ಯ ನಗರದ ಮಂಗಳೂರು ಪೊಲೀಸರು ಮಾತ್ರ ಓಬಿರಾಯನ ಕಾಲದಲ್ಲೇ ಇರುವುದು ದುರಂತವೇ ಸರಿ.
ಈ ಬಗ್ಗೆ ಈಗಲಾದರೂ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರಿಗೆ ಪೊಲೀಸ್ ಇಲಾಖೆಯ ಮಾಹಿತಿ, ಅಧಿಕಾರಿಗಳ ಸಂಪರ್ಕ ಸಂಖ್ಯೆ, ಪೊಲೀಸ್ ಠಾಣಾ ಮಾಹಿತಿ ಸೇರಿ ಪ್ರತಿನಿತ್ಯ ಅಪರಾಧ ಪ್ರಕರಣ, ಇಲಾಖೆಯ ಪತ್ರಿಕಾ ಪ್ರಕಟಣೆಗಳ ಬಗ್ಗೆ ಗೊಂದಲಗಳು ಉಂಟಾಗಲಿದೆ.
ಆಯ್ದ ಪತ್ರಕರ್ತರಿಗೆ ಮಾತ್ರ ಮಾಹಿತಿ
ನಗರ ಪೊಲೀಸ್ ಕಮೀಷನರ್ ಕೆಲವು ಆಯ್ದ ಪತ್ರಕರ್ತರಿಗೆ ಮಾತ್ರ ಮಾಹಿತಿ ನೀಡುತ್ತಾರೆ ಎಂಬ ಆರೋಪ ಪತ್ರಕರ್ತರೇ ಮಾಡುತ್ತಿದ್ದಾರೆ. ಇದರಿಂದ ಎಲ್ಲಾ ಮಾಧ್ಯಮದವರಿಗೆ ಮಾಹಿತಿ ಸಿಗದೇ ಓದುಗರಿಗೂ ತಪ್ಪು ಮಾಹಿತಿ ರವಾನೆಯಾಗುತ್ತದೆ.
ಈ ತಪ್ಪು ಮಾಹಿತಿ ರವಾನೆಯನ್ನು ತಪ್ಪಿಸುವ ಉದ್ದೇಶದಿಂದ ಹಲವು ಬಾರಿ ಪೊಲೀಸ್ ವೆಬ್‌ಸೈಟ್ ಅನ್ನು ಮೊದಲಿನಂತೆ ಸಕ್ರಿಯಗೊಳಿಸುವಂತೆ ಹಲವು ಪತ್ರಕರ್ತರು ಮತ್ತೆ ಮತ್ತೆ ಮನವಿ ಮಾಡಿದರೂ ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಕಮೀಷನರ್ ಕ್ಯಾರೇ ಅನ್ನುತ್ತಿಲ್ಲ ಏಕೆ ಎಂಬ ಪ್ರಶ್ನೆ ನಿಗೂಢವಾಗಿಯೇ ಉಳಿದಿದೆ.