ಮಂಗಳೂರು/ದೆಹಲಿ : ಸುದೀರ್ಘ 27 ವರ್ಷಗಳ ನಂತರ, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಿಗೆ ಮರಳುತ್ತಿದೆ. ಮತ ಎಣಿಕೆ ಮುಗಿದಿದ್ದು, ಬಿಜೆಪಿ ಸ್ಥಾನಗಳಲ್ಲಿ 48 ಭರ್ಜರಿ ಜಯ ದಾಖಲಿಸಿದೆ. ಆಡಳಿತರೂಢ ಆಮ್ ಆದ್ಮಿ ಪಕ್ಷ 22 ಸ್ಥಾನಗಳಿಗೆ ತೃಪ್ತಿ ಕಂಡಿದೆ. ಸಮೀಕ್ಷೆಗಳು ಊಹಿಸಿದಂತೆ ಖಾತೆ ತೆರೆಯದೆ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ.

ಬಿಜೆಪಿ ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಜಯಭೇರಿ ಭಾರಿಸುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಹೀಗೆ ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ವಿಧಾನಸಭೆಗಳ ಚುನಾವಣೆಯಲ್ಲೂ ಹೆಚ್ಚಿನ ಗೆಲುವು ಬಿಜೆಪಿಯ ಪಾಲಿಗೆ ಬಂದಿದೆ. ಈಗ ದೆಹಲಿಯೂ ವಿಜಯದ ಮಾಲೆ ಬಿಜೆಪಿಗೆ ಒಲಿದಿದೆ.
ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣಾ ಮತದಾನದಲ್ಲಿ ಒಟ್ಟು ಶೇ. 60.54ರಷ್ಟು ಮತದಾನ ನಡೆದಿತ್ತು. ನಂತರ ಚುನಾವಣೋತ್ತರ ಸಮೀಕ್ಷೆಯಲ್ಲಿ ಎಎಪಿಗೆ ಬಿಜೆಪಿ ಪ್ರಬಲ ಸವಾಲು ಒಡ್ಡಲಿದೆ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಎಎಪಿ ನಾಯಕರು ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಪ್ರದರ್ಶನವನ್ನು ಕಡಿಮೆ ಅಂದಾಜಿಸಿದೆ. ನಾವು ಮತ್ತೆ ಅಧಿಕಾರಕ್ಕೆ ಮರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಇಂದು ನಡೆದ ಚುನಾವಣೆ ಫಲಿತಾಂಶದಲ್ಲಿ ಎಎಪಿಗೆ ಭಾರಿ ಮುಖಭಂಗವಾಗಿದೆ. ಈ ಮೂಲಕ ತನ್ನ ಸುದೀರ್ಘ 10 ವರ್ಷಗಳ ದೆಹಲಿ ಆಡಳಿತಕ್ಕೆ ಅಂತ್ಯ ಹಾಡಲಿದೆ.
ಘಟಾನುಘಟಿಗಳಿಗೆ ಸೋಲು
ದೆಹಲಿಯ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಎಎಪಿ ವರಿಷ್ಠ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಭಾರಿ ಮುಖಭಂಗವಾಗಿದೆ. ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ದ ಸೋಲಾಗಿದೆ. ಇನ್ನು ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಮನೀಶ್ ಸಿಸೋಡಿಯಾ ಅವರನ್ನು ಬಿಜೆಪಿ ಅಭ್ಯರ್ಥಿ ತನ್ವೀಂದರ್ ಸಿಂಗ್ ಸೋಲಿಸಿದರು. ಆದರೆ ದೆಹಲಿ ಮುಖ್ಯಮಂತ್ರಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಗೆಲುವು ಸಾಧಿಸುವ ಮೂಲಕ ಕಲ್ಕಾಜಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಬಿಜೆಪಿಯ ರಮೇಶ್ ಬಿಧುರಿ ಎದುರು ಗೆಲುವು ಸಾಧಿಸಿದ್ದಾರೆ.
ಹ್ಯಾಟ್ರಿಕ್ ಶೂನ್ಯ ಸಂಪಾದಿಸಿದ ಕಾಂಗ್ರೆಸ್
ಕಾಂಗ್ರೆಸ್ ಸತತ ಮೂರನೇ ಬಾರಿಯೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ. 15 ವರ್ಷಗಳ ಕಾಲ ರಾಷ್ಟ್ರ ರಾಜಧಾನಿಯನ್ನು ಆಳಿದ ಕಾಂಗ್ರೆಸ್ 2013ರ ವಿಧಾನಸಭಾ ಚುನಾವಣೆಯಲ್ಲಿ 8 ಸ್ಥಾನಗಳನ್ನು ಪಡೆದಿತ್ತು. 28 ಕ್ಷೇತ್ರಗಳಲ್ಲಿ ಗೆದಿದ್ದ ಎಎಪಿಗೆ ಬೆಂಬಲ ನೀಡಿತ್ತು. ಆದರೆ ಕೆಲವೇ ದಿನಗಳಲ್ಲಿ ಮೈತ್ರಿ ಮುರಿದು ಹೋಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ 31 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಅಧಿಕಾರಿದಿಂದ ದೂರ ಉಳಿದಿತ್ತು.
ಇದನ್ನೂ ಓದಿ: ದೆಹಲಿ ಮತ ಏಣಿಕೆ ಆರಂಭ; ಗದ್ದುಗೆ ಏರುವವರು ಯಾರು?
2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳನ್ನು ಗೆದ್ದು ಹೊಸ ದಾಖಲೆ ಬರೆದಿತ್ತು. ಬಿಜೆಪಿ 3 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು. 2020ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದು ಎರಡನೇ ಸಲ ಅಧಿಕಾರ ಹಿಡಿದಿತ್ತು. ಬಿಜೆಪಿ 8 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು.
2025ರ ಚುನಾವಣೆಯಲ್ಲೂ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲೂ ಗೆಲುವು ಕಾಣದೇ ನಿರಾಸೆ ಅನುಭವಿಸಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಮರಳಿದೆ.
ದೆಹಲಿ ಸಿಎಂ ರೇಸ್‌ನಲ್ಲಿ ಸಾಲು ಸಾಲು ಆಕಾಂಕ್ಷಿಗಳು
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದ್ದು, ಇದರ ಬೆನ್ನಲ್ಲೇ ಪಕ್ಷದಿಂದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಶುರುವಾಗಿದೆ. ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರೇ ದೆಹಲಿಯ ನೂತನ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆಯೇ ಈಗ ಪರ್ವೇಶ್ ವರ್ಮಾ ಅಮಿತ್ ಶಾ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದಾರೆ. ಆದ್ರೆ ಪರ್ವೇಶ್ ಬಳಿಕವೂ ದೆಹಲಿಯ ಸಿಎಂ ಗದ್ದುಗೆ ಏರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
ಬಿಜ್ವಾಸನ್‌ನಿಂದ ಸ್ಪರ್ಧಿಸಿದ ಗಹ್ಲೋಟ್, ಬಿಜೆಪಿಯ ಮತ್ತೊಬ್ಬ ಸಂಭಾವ್ಯ ಅಭ್ಯರ್ಥಿ. ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ್ ಬಿಧುರಿ ಕೂಡ ಸಿಎಂ ಆಕಾಂಕ್ಷಿಯಾಗಿದ್ದರು ಆದ್ರೆ ಅವರು ಈಗ ಸರಿಸುಮಾರು ಒಂದು ಸಾವಿರ ಮತಗಳಿಂದ ಅತಿಶಿ ವಿರುದ್ಧ ಸೋತಿದ್ದರಿಂದ ಅವರು ಸಿಎಂ ಆಗುವ ಹಾದಿ ಮುಚ್ಚಿ ಹೋಗಿದೆ. ಹೀಗಾಗಿ ಪರ್ವೇಶ್ ವರ್ಮಾ ಅವರ ಹಾದಿ ಸುಗಮವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸಿಎಂ ರೇಸ್‌ನಲ್ಲಿ ಕೇಳಿಬರುತ್ತಿರುವ ಮತ್ತೊಂದು ಅಚ್ಚರಿಯ ಹೆಸರು ಅಂದ್ರೆ ಅದು ಸ್ಮೃತಿ ಇರಾನಿ. 2024ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಸ್ಮೃತಿ ಇರಾನಿಯವರನ್ನು ದೆಹಲಿ ಗದ್ದುಗೆಗೆ ತಂದು ಕೂರಿಸುವ ಪ್ಲ್ಯಾನ್ ಹಿಂದಿನಿಂದಲೂ ಬಿಜೆಪಿಯಲ್ಲಿ ನಡೆದಿದೆ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಇದರ ಬಗ್ಗೆ ನಿರ್ಧಾರಕೈಗೊಳ್ಳಲಿದೆ ಎಂದು ದೆಹಲಿ ನಾಯಕರು ಹೇಳಿದ್ದಾರೆ.