ಬೆಳ್ತಂಗಡಿ ತಾಲೂಕಿನ ಮಾಲಾಡಿ ಎಂಬ ಗ್ರಾಮದಲ್ಲಿ ಭೂತದ ಕಾಟ ನಡೆಯುತ್ತಿರುವುದು ಈಗ ಕುತೂಹಲ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದು ಭೂತದ ಚೇಷ್ಟೆ ಎಂದು ಮನೆಯವರು ಹೇಳಿಕೊಂಡಿದ್ದಾರೆ.

ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿಯುವ ಬಟ್ಟೆಗಳು.. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗುವ ಜೋಡಿಸಿಟ್ಟ ಅಡುಗೆ ಪಾತ್ರೆಗಳು… ಕತ್ತಲಾಗುತ್ತಿದ್ದಂತೆ ಮನೆಯಲ್ಲಿ ಇನ್ಯಾರೋ ಓಡಾಡಿದಂತೆ ಆಗುವ ಅನುಭವ. ಹೌದು ಇಂತಹ ಒಂದು ಘಟನೆ ಮನೆಯೊಂದರಲ್ಲಿ ನಡೆಯುತ್ತಿದ್ದು ಕಳೆದ ಮೂರು ತಿಂಗಳಿನಿಂದ ಮನೆಯವರು ನಿದ್ರೆಯನ್ನೇ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದೆಯಂತೆ.
ಮೊಬೈಲ್‌ನಲ್ಲಿ ದೆವ್ವದ ಫೋಟೊ ಸೆರೆ
ಕತ್ತಲು ಆವರಿಸುತ್ತಿದ್ದಂತೆ ನಡೆಯುವ ಈ ವಿಚಿತ್ರಕಾರಿ ಘಟನೆಯಿಂದ ಮಾಲಾಡಿಯ ಈ ಮನೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಉಮೇಶ್ ಶೆಟ್ಟಿ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಾಗಿದ್ದು, ಕಳೆದ ಮೂರು ತಿಂಗಳಿನಿಂದ ಈ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ಉಮೇಶ್ ಶೆಟ್ಟಿ ಅವರ ಮಗಳು ತನ್ನ ಮೊಬೈಲ್ ಮೂಲಕ ಈ ವಿಚಿತ್ರ ಘಟನೆಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಮುಖವನ್ನು ಹೋಲುವ ಆಕೃತಿಯೊಂದು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಹೀಗಾಗಿ ಇದು ಭೂತದ ಚೇಷ್ಟೆ ಅಂತ ಹೇಳಲಾಗಿದ್ದು, ಗ್ರಾಮದ ಜನರು ಇದರ ಪರಿಶೀಲನೆ ನಡೆಸಲು ಈ ಮನೆಗೆ ಬರ್ತಾ ಇದ್ದಾರೆ.
ಕೇವಲ ಮನೆಯವರಷ್ಟೇ ಇರುವಾಗ ಇಂತಹ ವಿಚಿತ್ರಕಾರಿ ಘಟನೆಗಳು ನಡೆದಿದೆ ಅನ್ನುವುದು ಇಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಊರಿನ ಜನರು ಬಂದು ಇದರ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ನಡೆಸಿದ್ದಾರೆಯಾದ್ರೂ ಯಾರಿಗೂ ಇಂತಹ ಅನುಭವ ಉಂಟಾಗಿಲ್ಲ. ಹಾಗಂತ ಉಮೇಶ್ ಅವರ ಪತ್ನಿಗೆ ಉಸಿರುಗಟ್ಟಿದಂತಹ ಅನುಭವ ಹೊರತು ಪಡಿಸಿದ್ರೆ ಬೇರೆ ಏನು ಇಲ್ಲಿ ಕಂಡು ಬಂದಿಲ್ಲ. ಆದ್ರೆ ಅವರ ಉಸಿರುಗಟ್ಟುವಿಕೆಗೂ ಭೂತಕ್ಕೂ ಸಂಬಂಧ ಇದೆಯಾ ಅನ್ನೋದು ಕೂಡಾ ಖಚಿತವಾಗಿಲ್ಲ.
ಯಾವಾಗ ಇವರು ಮೊಬೈಲ್‌ನಲ್ಲಿ ವಿಚಿತ್ರ ಆಕೃತಿಯ ಫೋಟೊ ತೆಗೆದು ಊರ ಜನರಿಗೆ ತೋರಿಸಿದ್ರೋ ಆವಾಗಿನಿಂದ ಇಲ್ಲಿಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ಜನರು ಬರಲು ಆರಂಭಿಸಿದ್ದಾರೆ. ಆದ್ರೆ ಊರವರ ಮುಂದೆ ಭೂತ ಪ್ರತ್ಯಕ್ಷವಾಗದೇ ಇರೋ ಕಾರಣ ಈ ಕಥೆಯ ಬಗ್ಗೆಯೇ ಜನರಿಗೆ ಅನುಮಾನ ಆರಂಭವಾಗಿದೆ. ಅಸಲಿಗೆ ಇಲ್ಲಿ ನಡೆಯುತ್ತಿರುವುದು ಭೂತದ ಚೇಷ್ಟೆಯೋ ಅಥವಾ ಮನುಷ್ಯ ನಿರ್ಮಿತ ಚೇಷ್ಟೆಯೋ ಅನ್ನೋ ಅನುಮಾನಗಳು ಜನರಿಗೆ ಕಾಡಿದೆ.
ಭಯದ ವಾತವಾರಣರದಲ್ಲಿ ಕತ್ತಲಲ್ಲಿ ಮೊಬೈಲ್ ಹಿಡಿದು ಭೂತದ ಫೋಟೊ ಹೇಗೆ ತೆಗೆದರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಹಾಗಂತ ಈ ರೀತಿ ಭೂತ ಇದೆ ಅಂತ ಸುಳ್ಳು ಹೇಳುವುದರಿಂದಲೂ ಇವರಿಗೇನು ಸಿಗುತ್ತದೆ ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ಈ ವಿಚಾರದಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಭೂತದ ಹುಟುಕಾಟಕ್ಕೆ ಜನರು ಮುಂದಾಗಿದ್ದಾರೆ. ಕೆಲವರು ಇದು ಹೌದು ಅಂದ್ರೆ ಇನ್ನೂ ಕಲವರು ಇದು ಸುಳ್ಳು ಅಂದಿದ್ದು, ಇದರ ಹಿಂದೆ ಏನೋ ಮಸಲತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರ ಅಸಲಿ ಸತ್ಯ ಏನು ಅನ್ನೋ ಬಗ್ಗೆ ಈ ಮನೆಯವರ ಕೌನ್ಸಿಲಿಂಗ್ ಮಾಡಿದ್ರಷ್ಟೇ ಗೊತ್ತಾಗಬಹುದು ಅನ್ನೋದು ಹಲವರ ಅಭಿಪ್ರಾಯ.