ಕೇರಳ: ಕೇರಳದ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿಯಲ್ಲಿ ಭಾನುವಾರ ಜೆಹೋವಾಸ್ ವಿಟ್ನೆಸಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮಡಿದವರ ಸಂಖ್ಯೆ 3 ಕ್ಕೇರಿದೆ. ತೀವ್ರ ಸುಟ್ಟಗಾಯಗೊಂಡ 12 ವರ್ಷದ ಬಾಲಕಿ ಇಂದು ನಸುಕಿನ ವೇಳೆ ಮೃತ ಪಟ್ಟಿದ್ದಾಳೆ.
ಐಸಿಯು ವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ 18 ಮಂದಿಯ ಪೈಕಿ ಇನ್ನೂ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಬಾಂಬ್ ಸ್ಫೋಟ ಪ್ರಕರಣ ಕುರಿತಂತೆ ಎಡಿಜಿಪಿ ಅಜಿತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಡಿಸಿಪಿ ಸಸಿಧರನ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಶೈಕ್ ದರ್ವೇಶ್ ಹಾಹಿಬ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕೊಲೆ, ಕೊಲೆ ಯತ್ನ, ಸ್ಫೋಟಕ ಕಾಯ್ದೆ, ಭಯೋತ್ಪಾದಕ ವಿರೋಧಿ ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ.
ಕಳಮಶ್ಶೇರಿಯ ಜಮ್ರಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಜೆಹೋವಾಸ್ ವಿಟ್ನೆಸಸ್ ಕ್ರೈಸ್ತ ಪಂಗಡದ ಮೂರು ದಿನಗಳ ಪ್ರಾರ್ಥನಾ ಸಭೆಯ ಕೊನೆಯ ದಿನವಾದ ನಿನ್ನೆ ಬೆಳಗ್ಗೆ 9.40 ರ ವೇಳೆಗೆ ಪ್ರಾರ್ಥನೆ ನಡೆಯುತ್ತಿದ್ದಾಗಲೇ ಸ್ಫೋಟ ಸಂಭವಿಸಿತ್ತು. ಈ ಸಂದರ್ಭದಲ್ಲಿ ಓರ್ವ ಮಹಿಳೆ ಮೃತ ಪಟ್ಟು 52 ಮಂದಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಇನ್ನೋರ್ವ ಮಹಿಳೆ ಸಂಜೆ ವೇಳೆಗೆ ಹಾಗೂ ಓರ್ವ ಬಾಲಕಿ ತಡ ರಾತ್ರಿ ಮೃತ ಪಟ್ಟಿದ್ದಳು. ಲಿಯೊನಾ ಪೌಲೋಸ್, ಕುಮಾರಿ ಪುಷ್ಪನ್, ಮತ್ತು 12 ವರ್ಷದ ಲಿಬಿನಾ ಮೃತ ಪಟ್ಟವರು. ಇರಿಂಗೋಲ್ ನಿವಾಸಿ ಲಿಯೋನಾ ಪೌಲೋಸ್ ಒಬ್ಭಂಟಿಯಾಗಿ ಸಮಾವೇಶಕ್ಕೆ ಬಂದಿದ್ದರಿಂದ ಗುರುತು ಪತ್ತೆ ವಿಳಂಬವಾಗಿತ್ತು. 53 ವರ್ಷ ಪ್ರಾಯದ ಕುಮಾರಿ ಪುಷ್ಪನ್ ತೋಡುಪುಯ ಕಳಿಯೂರು ನಿವಾಸಿಯಾಗಿದ್ದು ಆಕೆ ವಿಧವೆ. ಶೇ. 90 ಗಾಯಗೊಂಡಿದ್ದ ಆಕೆ ಸಂಜೆ ವೇಳೆಗೆ ಮೃತ ಪಟ್ಟರು. ಶೇ. 95 ಸುಟ್ಟ ಗಾಯಗೊಂಡು ವೆಂಟಿಲೇಟರ್ ನಲ್ಲಿದ್ದ ಬಾಲಕಿ ಲಿಬಿನಾ ಎರ್ನಾಕುಳಂ ಮೆಡಿಕಲ್ ಕಾಲೇಜಿನಲ್ಲಿ ಇಂದು ನಸುಕಿನ 12.40 ಕ್ಕೆ ಕೊನೆಯುಸಿರೆಳೆದಿದ್ದಾಳೆ.
ಈ ನಡುವೆ ಘಟನೆಗೆ ಸಂಬಂಧಿಸಿ ತೃಶೂರಿನ ಕೊಡಕರ ಪೊಲೀಸ್ ಠಾಣೆಗೆ ಶರಣಾದ ಡೊಮಿನಿಕ್ ಮಾರ್ಟಿನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಜೆಹೋವಾಸ್ ವಿಟ್ನೆಸಸ್ ವಿಚಾರ ಧಾರೆಯನ್ನು ತಾನು ಒಪ್ಪುವುದಿಲ್ಲ; ಅದು ದೇಶಕ್ಕೆ ಅಪಾಯಕಾರಿ ಆಗಿದೆ. ಹಾಗಾಗಿ ಈ ಸಂಘಟನೆಯನ್ನೇ ಇಲ್ಲವಾಗಿಸ ಬೇಕೆಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದೇನೆ ಎಂಬುದಾಗಿ ತಿಳಿಸಿದ್ದಾನೆ. ಸ್ಪೋಟ ಕೃತ್ಯಕ್ಕೆ 50 ಗುಂಡು ಎಂದು ಕರೆಯಲ್ಪಡುವ ಸುಡು ಮದ್ದು ಮತ್ತು 8 ಲೀ. ಪೆಟ್ರೋಲ್ ಬಳಕೆ ಮಾಡಿದ್ದು, ಐಇಡಿ ಉಪಯೋಗಿಸಿ ಮದ್ದು ಗುಂಡುಗಳಿಗೆ ಬೆಂಕಿ ಹಚ್ಚಿದ್ದೇನೆ. ಸ್ಫೋಟಕ ತಯಾರಿಸಲು 3000 ರೂ. ಖರ್ಚು ಮಾಡಿದ್ದು, ಯೂ ಟ್ಯೂಬ್ ವೀಡಿಯೋ ನೋಡಿ ಎಲೆಕ್ಟ್ರಾನಿಕ್ ಡಿಟೊನೇಟರ್ ತಯಾರಿಸುವುದನ್ನು ಕಲಿತಿದ್ದೇನೆ ಎಂಬುದಾಗಿ ತಿಳಿಸಿದ್ದಾನೆ.
ಆಲುವಾದಲ್ಲಿರುವ ತನ್ನ ಪೂರ್ವಜರ ಮನೆಯ ತಾರಸಿಯಲ್ಲಿ ಬಾಂಬ್ ತಯಾರಿಸಿದ್ದು, ಅದನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿ ನಿನ್ನೆ ಬೆಳಗ್ಗೆ 7 ಗಂಟೆಗೆ ತಂದು ಕನ್ವೆನ್ಶನ್ ಹಾಲ್ ನಲ್ಲಿ ಇರಿಸಿದ್ದಾನೆ. ಬಳಿಕ ತಪ್ಪೊಪ್ಪಿಗೆ ಹೇಳಿಕೆಯನ್ನು ವೀಡಿಯೋ ರೆಕಾರ್ಡ್ ಮಾಡಿ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾನೆ. ಸಭಾಂಗಣದಲ್ಲಿ ಒಟ್ಟು 6 ಕಡೆ ಇರಿಸಿದ್ದಾನೆ. ಎನ್ಎಸ್ ಜಿ ತಂಡದವರು ಸ್ಫೋಟಕ ಐಇಡಿ ಉಳಿಕೆ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಟಿನ್ ನ ಅತ್ತೆ ಕೂಡಾ ಸಮಾವೇಶದಲ್ಲಿ ಭಾಗವಹಿಸಿದ್ದು, ಅಕೆ ಅಪಾಯದಿಂದ ಪಾರಾಗಿದ್ದಾರೆ. ಮಾರ್ಟಿನ್ ದುಬಾಯಿನಲ್ಗಿ 6 ವರ್ಷ ಕಾಲ ಫೋರ್ ಮೆನ್ ಆಗಿ ಕೆಲಸ ಮಾಡಿದ್ದ ಈತ ಯಹೋವನ ಸಾಕ್ಷಿಗಳ ಸಭೆಯ ವಿರುದ್ಧ ಪ್ರತೀಕಾರ ತೀರಿಸುವುದಕ್ಕಗಿ ವಾಪಸಾಗಿದ್ದನು ಎನ್ನಲಾಗಿದೆ.