ಮಂಗಳೂರು: ಅವಿಭಜಿತ ದ.ಕ ಜಿಲ್ಲೆಯ ಒಟ್ಟು 13 ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಹಿಳಾ ಮಣಿಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದ್ದು, ಮೂವರು ಜಿಲ್ಲಾ ಪಂಚಾಯತ್ ಸದಸ್ಯರಿಗೆ ಲಕ್ ಖುಲಾಯಿಸಿದೆ.

ಖಾದರ್‌ಗೆ ಪೈಪೋಟಿ ನೀಡಲು ಉಳ್ಳಾಲ ಕ್ಷೇತ್ರದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ,
ಪುತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಜಿ.ಪ ಮಾಜಿ ಅಧ್ಯಕ್ಷೆ ಅಶಾ ತಿಮ್ಮಪ್ಪ,
ಸುಳ್ಯ ಕ್ಷೇತ್ರದಲ್ಲಿ ಹಾಲಿ ಶಾಸಕ ಅಂಗಾರ ಬದಲಿಗೆ ಜಿ.ಪಂ ಮಾಜಿ ಸದಸ್ಯೆ ಭಾಗಿರತಿ ಮುರಲಿಯಾಗೆ ಮಣೆ ಹಾಕಲಾಗಿದೆ.
ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮತ್ತೆ ಒಕ್ಕಲಿಗ ಸಮುದಾಯಕ್ಕೆ ಒಲಿದಿದ್ದು, ದ.ಕ.ಜಿ.ಪಂ.ಮಾಜಿ ಅಧ್ಯಕ್ಷೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಕುಂತೂರು ಗ್ರಾಮದ ಆಶಾ ತಿಮ್ಮಪ್ಪ ಗೌಡ ಕುಂಡಡ್ಕ ಅವರಿಗೆ ಒಲಿದಿದೆ.

ಆಶಾ ತಿಮ್ಮಪ್ಪ ಗೌಡ
ಪದವು ನಿವಾಸಿ ತಿಮ್ಮಪ್ಪ ಗೌಡ ಅವರ ಪತ್ನಿ 65ರ ಹರೆಯದ ಆಶಾರವರು ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತೆ. ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಹೊಂದಿದ್ದಾರೆ.
ಇವರು ನೆಲ್ಯಾಡಿ ಹಾಗೂ ಬೆಳ್ಳಾರೆಯಿಂದ ಜಿ. ಪಂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವಿಶೇಷ ಎಂದರೇ ಇವರು ಪೆರಾಬೆ ಗ್ರಾಮದಿಂದ ಬಿಜೆಪಿಯಿಂದ ಎಂಎಲ್ ಎ ಚುನಾವಣೆ ಸ್ಪರ್ಧಿಸುತ್ತಿರುವ ಎರಡನೇ ಅಭ್ಯರ್ಥಿ. ಈ ಹಿಂದೆ ಶಕುಂತಳಾ ಟಿ ಶೆಟ್ಟಿ ಬಿಜೆಪಿಯಿಂದ ಬಂಟ್ವಾಳ ಹಾಗೂ ಪುತ್ತೂರಿನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಸತೀಶ್ ಕುಂಪಲ
ಮಂಗಳೂರು ವಿಧಾನ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡ ಸತೀಶ್ ಕುಂಪಲ ಆಯ್ಕೆ ಆಗಿದ್ದಾರೆ. ಟಿಕೆಟ್ ಗಾಗಿ ಭಾರೀ ಪೈಪೋಟಿ ನಡುವೆ ಹೈಕಮಾಂಡ್ ಸತೀಶ್ ಕುಂಪಲ ಅವರಿಗೆ ಟಿಕೆಟ್ ನೀಡಿದೆ.
ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖ ಸತೀಶ್ ಕುಂಪಲ ಅವರಿಗೆ ಟಿಕೆಟ್ ದೊರಕಿದೆ. ಕಳೆದ ಬಾರಿ ಸಂತೋಷ್ ರೈ ಬೋಳಿಯಾರು ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಯು.ಟಿ.ಖಾದರ್ ಅವರ ಎದುರು ಕಣಕ್ಕಿಳಿದು ಸೋತಿದ್ದರು.
ಈ ಬಾರಿ ಸಂತೋಷ್ ರೈ ಅವರ ಬದಲು ಬಿಜೆಪಿ ಸತೀಶ್ ಕುಂಪಲ ಅವರಿಗೆ ಮಣೆ ಹಾಕಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಭಾಗೀರಥಿ ಮುರುಳ್ಯ
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶಾಂತಿನಗರ ಮುರುಳ್ಯದ ದಿ.ಗುರುವ ಮತ್ತು ದಿ.ಕೊರಗ್ಗು ದಂಪತಿಯ ಪುತ್ರಿ ಭಾಗೀರಥಿ ಮುರುಳ್ಯ ಅವರು ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದು, ಪ್ರಸ್ತುತ ಹೈನುಗಾರಿಕೆ, ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಮೊದಲಿಗೆ ಬೀಡಿ ಕಾರ್ಮಿಕೆಯಾಗಿ, ಗೌರವ ಶಿಕ್ಷಕಿಯಾಗಿಯೂ ದುಡಿದಿದ್ದಾರೆ.
ರಾಷ್ಟ್ರಸೇವಿಕಾ ಸಮಿತಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಭಾಗೀರಥಿ ಅವರು ರಾಷ್ಟ್ರ ಸೇವಿಕ ಸಮಿತಿ ಸದಸ್ಯೆಯಾಗಿ, ಮತ್ತಿತರವಾಗಿ ತೊಡಗಿಸಿಕೊಂಡಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿ ಎಣ್ಮೂರು ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ, ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ ದುಡಿದಿದ್ದಾರೆ. ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯೆಯಾಗಿ, ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ, ಬಿಜೆಪಿ ಪುತ್ತೂರು ಮಂಡಲ ಸಹಪ್ರಭಾರಿಯಾಗಿ, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಉಪಾಧ್ಯಕ್ಷೆಯಾಗಿ ಉಡುಪಿ, ದ.ಕ. ಸಹಪ್ರಭಾರಿಯಾಗಿ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆಯಾಗಿ, ಬೆಳ್ತಂಗಡಿ ಮಂಡಲ ಸಹಪ್ರಭಾರಿಯಾಗಿದ್ದಾರೆ.
ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚದ ಕಾರ್ಯಕಾರಿಣಿ ಸದಸ್ಯೆಯಾಗಿ, ಕೊಡಗು ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಹಕಾರಿ ಸಂಘಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲೂ, ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.