ಕರ್ನಾಟಕ ಬಜೆಟ್ 2020: ಬಜೆಟ್ ಓದುವುದರಲ್ಲಿ ಯಡಿಯೂರಪ್ಪ ಹೊಸ ಇತಿಹಾಸ
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮಾರ್ಚ್.05ರ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಿದರು.
2020-21 ನೇ ಸಾಲಿನ ಕರ್ನಾಟಕ ಆಯವ್ಯಯವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಯಶಸ್ವಿಯಾಗಿ ಮಂಡಿಸಿದರು.

ಬಜೆಟ್ ಓದುವುದರಲ್ಲಿ ಯಡಿಯೂರಪ್ಪ ಹೊಸ ಇತಿಹಾಸ ಸೃಷ್ಟಿಸಿದರು.
ಯಡಿಯೂರಪ್ಪ ಅವರು ಇಂದು ಓದಿದ ಬಜೆಟ್ ರಾಜ್ಯದ ಆಯವ್ಯಯ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯಲ್ಲಿ ಓದಿ ಮುಗಿಸಿದ ಬಜೆಟ್ ಎಂದು ದಾಖಲೆ ಬರೆಯಿತು.
ಒಟ್ಟು 112 ಪುಟಗಳ ಬಜೆಟ್ ಪ್ರತಿಯನ್ನು ಸಿಎಂ ಯಡಿಯೂರಪ್ಪ ಅವರು 1.40 ಗಂಟೆಯಲ್ಲಿ ಓದಿ ಮುಗಿಸಿದರು.

ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಭಾಷಣ ಮಂಡಿಸಿದರು. ಒಟ್ಟು 2.38 ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್‌ನ್ನು ಸಿಎಂ ಮಂಡಿಸಿದರು.
ಈ ಹಿಂದೆ 2018 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್ ಅತಿ ದೀರ್ಘಾವಧಿಯ ಬಜೆಟ್ ಎನಿಸಿಕೊಂಡಿತ್ತು.

ಕರಾವಳಿಗೆ ಬಜೆಟ್ ಕೊಡುಗೆ ಏನು.?
ಉಡುಪಿ ಜಿಲ್ಲೆ ಹೆಜಮಾಡಿಕೋಡಿಯಲ್ಲಿ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.
ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ. ಮೀಸಲಿಡಲಾಗಿದೆ.
ಮುಲ್ಕಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.
ಮಂಗಳೂರು ತಾಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.
ಮಹಿಳಾ ಮೀನುಗಾರರ ಸಬಲೀಕರಣ ಯೋಜನೆಯಡಿ 1,000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ.
ಯಾವುದು ಏರಿಕೆ? ಯಾವುದು ಇಳಿಕೆ
ಕರ್ನಾಟಕ ಸರ್ಕಾರಕ್ಕೆ ಆದಾಯಕ್ಕೆ ತಂದು ಕೊಡುವ ಅಬಕಾರಿ ಇಲಾಖೆ ಪ್ರಸ್ತಾವನೆಗೆ ಮಣಿದು ನಿರೀಕ್ಷೆಯಂತೆ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ.
ಮಿಕ್ಕಂತೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಏರಿಕೆಯಾಗಿದೆ.
ಸರ್ಕಾರದ ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸಲು, ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ.
ಕಾರಣ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಅನುದಾನ ಈ ಬಾರಿ ಸಾವಿರಾರು ಕೋಟಿ ರುಗಳಷ್ಟು ಕಡಿಮೆಯಾಗಿದೆ.
ಜಿಎಸ್ಟಿ ನಷ್ಟ ಭರಿಸಲು ಹಾಗೂ ರಾಜಸ್ವ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.
ಯಾವುದು ಏರಿಕೆ?
* ಮದ್ಯದ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಹೆಚ್ಚಳ.
* ಅಬಕಾರಿ ಸುಂಕ 18 ಸ್ಲ್ಯಾಬ್ ಗಳಿಗೆ ಶೇ 15 ರಿಂದ ಶೇ 34ಕ್ಕೆ ಏರಿಕೆ
* ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಏರಿಕೆ
* ಡೀಸೆಲ್ ಮೇಲಿನ 32 ರಿಂದ 35 ರಷ್ಟು ಸೆಸ್ ಏರಿಕೆ, ಡೀಸೆಲ್ ಪ್ರತಿ ಲೀಟರ್ ಬೆಲೆ 1.60 ರು ಏರಿಕೆ
* ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ 32ರಿಂದ 35ಕ್ಕೇರಿಕೆ
* ಖಾಸಗಿ ಸೇವಾ ವಾಹನ ತೆರಿಗೆ: 12ಕ್ಕಿಂತ ಹೆಚ್ಚು 20 ಕ್ಕಿಂತ ಕಡಿಮೆ ಆಸನವುಳ್ಳ ಪ್ರಯಾಣಿಕರ ಒಪ್ಪಂದ ವಾಹನದ ತ್ರೈಮಾಸಿಕ ಪ್ರತಿ ಆಸನಕ್ಕೆ 900 ರು ನಿಗದಿ.
* 1988ನೇ ಮೋಟಾರು ವಾಹನ ಕಾದ್ಯೆ ಕಲಂ 88(9) ಅನ್ವಯ ರಹದಾರಿ ಪಡೆದು ಚಾಲನೆಯಲ್ಲಿರುವ ಹೊಸ ಮಾದರಿ ಸ್ಲೀಪರ್ ಕೋಚ್ ವಾಹನಗಳ ನೋಂದಣಿ ಸಮಯದಲ್ಲಿ ತ್ರೈಮಾಸಿಕ ತೆರಿಗೆ ಪ್ರತಿ ಸ್ಲೀಪರ್ ಗೆ 4,000 ರು
* ವಿದ್ಯುತ್ ದರ ಹೆಚ್ಚಳ ಪ್ರತಿ ಯೂನಿಟ್ ಮೇಲೆ 10ರಿಂದ 20 ಪೈಸೆ ಏರಿಕೆ ಮುಂದುವರಿಕೆ.
* ವಿದ್ಯುತ್ ಮೇಲಿನ ತೆರಿಗೆ ಶೇ.6ರಿಂದ ಶೇ.9ಕ್ಕೆ ಏರಿಕೆ ಮುಂದುವರಿಕೆ
ಯಾವುದು ಇಳಿಕೆ?
* ಮನೆ ಖರೀದಿದಾರರಿಗೆ ಶುಭ ಸುದ್ದಿ, ನೋಂದಣಿ ಶುಲ್ಕ ಕಡಿತ.
* ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗು ಮೇಲಿನ ಹಿಟ್ಟುಗಳಿಗೆ ತೆರಿಗೆ ವಿನಾಯ್ತಿ, ರೈತರಿಗೆ ಹೆಕ್ಟೇರಿಗೆ 10 ಸಾವಿರ ರು ಅನುದಾನ.
* ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ.
ಸಿರಿ ಧಾನ್ಯಗಳ ಪಟ್ಟಿಗೆ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆ.
* ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್.
* ಅಡಿಕೆ ಬೆಳೆಗಾರರಿಗೆ 2 ಲಕ್ಷ ರುವರೆಗಿನ ಸಾಲಕ್ಕೆ ಶೇ 5 ರಷ್ಟು ಬಡ್ಡಿ ವಿನಾಯಿತಿ.
* ಮಹಿಳಾ ಮೀನುಗಾರರ ಸಬಲೀಕರಣ ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು
5 ಕೋಟಿ ರು ಅನುದಾನ.
* ಕೃಷಿ ಪತ್ತಿನ ಸಹಕಾರ ಸಂಘ ಗಳಿಂದ ನೀಡಿದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ.
92 ಸಾವಿರ ರೈತರಿಗೆ ಪ್ರಯೋಜನ.
ಯಡಿಯೂರಪ್ಪ ಸುಧೀರ್ಘ ಬಜೆಟ್ ಮಂಡಿಸಿದ ಬಳಿಕ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಅಧಿವೇಶನವನ್ನು ಮುಂದೂಡಿದರು.
ಈ ನಡುವೆ ರಾಜ್ಯ ಬಜೆಟ್ ನಲ್ಲಿ ಸಂಪನ್ಮೂಲ ಕೊರತೆ ಎದ್ದು ಕಾಣುತ್ತಿದ್ದು, ಕೇಂದ್ರ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ.
ಇದನ್ನು ಸ್ವತಃ ಬಿಎಸ್ ವೈ ಒಪ್ಪಿಕೊಂಡಿದ್ದಾರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.