ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಸೀಸನ್-12 ಶುರುವಾಗೋಕೆ ಕೌಂಟ್‌ಡೌನ್ ಶುರುವಾಗ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಕನ್ನಡ ಬಿಗ್‌ಬಾಸ್ ಶುರುವಾಗಲಿದೆ. ಮತ್ತೊಂದೆಡೆ ಈ ಬಾರಿ ವಿವಾದಿತರಿಗೆ ಅವಕಾಶ ಇಲ್ಲವೇ ಎಂಬ ಮಾತಿಗೆ ಪ್ರತಿಕ್ರಿಯಿಸಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್ ಶೋಗೆ ಸುದೀಪ್ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಬಗ್ಗೆ ಮೌನ ಮುರಿದಿದ್ದಾರೆ.

ಬಿಗ್ ಬಾಸ್ ಸೀಸನ್ 11 ಮುಗಿದು ಹೆಚ್ಚು ಕಡಿಮೆ ಆರು ತಿಂಗಳು ಕಳೆದುಹೋಗಿದ್ದು, ಇದೀಗ ಸೀಸನ್ 12ಗೆ ಆರಂಭವಾಗಲೂ ಸಿದ್ದತೆ ನಡೆಯುತ್ತಿದೆ. ಈ ಬಗ್ಗೆ ವಿವರಣೆ ನೀಡಲು ನಿನ್ನೆ (ಜೂ.30) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ‘ಕಲರ್ಸ್ ಕನ್ನಡ’ ವಾಹಿನಿಯೂ ಸುದ್ದಿಗೋಷ್ಠಿ ಆಯೋಜಿಸಿತ್ತು. ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಯ ಬಗ್ಗೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡರು. ವಿವಿಧ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಬಿಗ್ ಬಾಸ್-12ಗೆ ವಿವಾದಿತರಿಗೆ ನೋ ಎಂಟ್ರಿ?
ಹೊಸ ಆವೃತ್ತಿಯಲ್ಲಿ ಕಾಂಟ್ರವರ್ಸಿ ಕಿಂಗ್/ಕ್ವೀನ್‌ಗಳನ್ನ ಬಿಗ್‌ಬಾಸ್‌ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲವಾ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ವೀಕೆಂಡ್ ಅಂತ ಬಂದಾಗ ಕಾಂಟ್ರವರ್ಸಿ ಮಾಡಿಕೊಂಡವರ ಪಂಚಾಯ್ತಿಗೆ ಸಮಯ ಹಾಕಬೇಕಾಗುತ್ತೆ. ಕೆಲವರು ಹೊರಗಡೆ, ಸ್ಟೇಜ್‌ಮೇಲೆ ಚನಾಗಿಯೇ ಇರ್ತಾರೆ ಆದ್ರೆ, ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡುತ್ತಾರೆ. ಹಾಗೆ ಯಾರನ್ನೂ ಜಡ್ಜ್ ಮಾಡೋಕೆ ಆಗೋಲ್ಲ. ಆದ್ರೆ ಕೆಲವು ಷರತ್ತುಗಳಿವೆ ಅದು ಏನು ಅಂತಾ ಈಗ ಹೇಳಲ್ಲ ಎಂದಿದ್ದಾರೆ ಕಿಚ್ಚ. ಇನ್ನು ಕಂಟೆಸ್ಟೆಂಟ್ ಆಯ್ಕೆ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ತಿಳಿಸಲಾಗುತ್ತೆ ಎಂದಿದೆ ಕಲರ್ಸ್ ತಂಡ. ಈ ಬಾರಿ ಒಬ್ಬರು ಬುದ್ದಿವಂತರು, ಮತ್ತೊಬ್ಬರು ಅತೀ ಬುದ್ಧಿವಂತರು ಎಂಬ ಎರಡು ರೀತಿಯ ಕಂಟೆಸ್ಟೆಂಟ್‌ಗಳು ಇರುತ್ತಾರೆ ಎಂದು ಸುಳಿವು ನೀಡಿದ್ದಾರೆ.
ಸಂಭಾವನೆ ಬಗ್ಗೆ ಮೌನ ಮುರಿದ ಸುದೀಪ್!
ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಅವರ ಸಂಭಾವನೆಯ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಈ ಬಾರಿಯ ಬಿಗ್ ಬಾಸ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸುದೀಪ್ ಅವರು ಇದಕ್ಕೆ ಜಾಣತನದ ಉತ್ತರ ನೀಡಿದ್ದಾರೆ. ಸುದೀಪ್ ಅವರು ಈ ಮೊದಲು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ, ಈಗ ಅವರು ನಿರ್ಧಾರವನ್ನು ಬದಲಿಸಿದ್ದಾರೆ.
ಸಂಭಾವನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕಿಚ್ಚ, ಮನೆ ಬಾಡಿಗೆಗೆ ಹೋದರೆ 10 ಪರ್ಸೆಂಟ್ ಇನ್ಕ್ರಿಮೆಂಟ್ ಇರುತ್ತೆ. ನಾನು ಲೀಸ್ಗೂ ಅಲ್ಲ, ರೆಂಟ್ಗೂ ಅಲ್ಲ. ನಮ್ಮದೊಂದು ಇರುತ್ತೆ ತಾನೇ’ ಎಂದರು.
ಮುಂದುವರಿದುಮ, ‘ಟ್ವೀಟ್ ಮಾಡುವಾಗ ಸಂಭಾವನೆ ವಿಚಾರ ತಲೆಯಲ್ಲಿ ಇರಲಿಲ್ಲ. ಟ್ವೀಟ್ ಮಾಡದೆಯೂ ಸಂಭಾವನೆ ಹೆಚ್ಚು ಬೇಕು ಎಂದು ಕೇಳಬಹುದಲ್ಲ. ಅದು ಪಬ್ಲಿಕ್ನಲ್ಲಿ ಮಾತನಾಡುವ ವಿಚಾರ ಅಲ್ಲ. ಹಣ ಅನ್ನೋದು ಲಾಸ್ಟ್. ನಾನು ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುತ್ತೇನೆ ಎಂಬ ಸರಿಯಾದ ಲೆಕ್ಕ ಯಾರಿಗೂ ಸಿಗಲ್ಲ. ಏಕೆಂದರೆ ಪ್ರತಿ ಚಿತ್ರವೂ ಭಿನ್ನ, ಪ್ರತಿ ಚಿತ್ರದ ಬಜೆಟ್ ಕೂಡ ಬೇರೆ ಬೇರೆ ಇರುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಖ್ಯಾತ ಸುದ್ದಿ ನಿರೂಪಕಿ ಆತ್ಮಹತ್ಯೆ; ಆಕೆ ಮಾಡಿದ್ದ ಕೊನೆಯ ಇನ್ಸ್ಟಾ ಪೋಸ್ಟ್ ಏನು?
‘ನಾನು ರೇಟ್ ಕಟ್ಟೋಕೆ ಹೋಗಲ್ಲ. ನಾನು ಚೀಪ್ ಅಲ್ಲ. ದೊಡ್ಡ ಬಜೆಟ್ ಸಿನಿಮಾ ಇದ್ದಾಗ ನಾವು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು. ಮೊದಲ ಸೀಸನ್ನಲ್ಲಿ ಪಡೆದಿದ್ದ ಸಂಭಾವನೆಯನ್ನು ಈಗಲೂ ಪಡೆಯೋಕೆ ಆಗುತ್ತಾ? ಹೆಚ್ಚು ಬೇಕಾಗುತ್ತದೆ. ಪ್ರತಿ ಶೋಗೂ ಅದರದ್ದೇ ಆದ ಬಜೆಟ್ ಇರುತ್ತದೆ. ಸ್ಪರ್ಧಿಗಳಿಗೂ ಸಂಭಾವನೆ ಕೊಡಬೇಕು’ ಎಂದಿದ್ದಾರೆ ಅವರು. ಒಟ್ಟಿನಲ್ಲಿ ಸುದೀಪ್ ಅವರು ಸಂಭಾವನೆ ಕುರಿತ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ್ದಾರೆ.