ಮಂಗಳೂರು : ಮೇಲ್ನೋಟಕ್ಕೆ ಕೋಪಿಷ್ಟನಂತೆ ಕಂಡರೂ ಒಳಗಡೆ ಮಗುವಿನಂತಹ ಮನಸ್ಸು…ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾದ್ರೆ ಬಡವರ ಪಾಲಿಗೆ ಇವರು ಬಂಗಾರದ ವ್ಯಕ್ತಿ. ಇದ್ದಿದ್ದು ಇದ್ದ ಹಾಗೆ ಖಡಕ್ ಆಗಿ ಮಾತನಾಡೋ ಕಾರಣ ಸಾಕಷ್ಟು ಜನರ ವಿರೋಧಿಯಾದ್ರೂ, ಒಳಗೊಳಗೆ ಅವರಿಂದಲೇ ಪ್ರೀತಿಯನ್ನು ಕೂಡಾ ಪಡಿತಾ ಇದ್ದ ಜನಪ್ರೀಯ ಜನನಾಯಕ. ಜನರನ್ನು ತನ್ನವರೆಂದೇ ಒಬ್ಬ ಜನಪ್ರತಿನಿಧಿಯಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸ್ತಾ ಇದ್ದ ವಸಂತ ಬಂಗೇರ ಇನ್ನು ನೆನಪು ಮಾತ್ರ…
ಸದಾ ತನ್ನ ಮಾತಿನ ಮೂಲಕವೇ ಸುದ್ದಿಯಾಗುತ್ತಿದ್ದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಶಾಶ್ವತವಾಗಿ ಮಾತು ಮುಗಿಸಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತನ್ನ ಕ್ಷೇತ್ರದ ಜನರ ಸೇವೆಗಾಗಿ ತನ್ನ ಜೀವನ ಮುಡಿಪಾಗಿಟ್ಟ ವಸಂತ ಬಂಗೇರ ನಿಜವಾಗಿಯೂ ಒಬ್ಬ ಜನನಾಯಕರಾಗಿದ್ದರು. ತನ್ನ ಬಳಿ ಕಷ್ಟ ಹೇಳಿಕೊಂಡು ಯಾರೇ ಬಂದ್ರೂ ಹಿಂದೂ ಮುಂದು ನೋಡದೆ ಸಹಾಯ ಮಾಡ್ತಾ ಇದ್ರು. ತನ್ನ ಕೈ ಖಾಲಿ ಮಾಡಿ ಮತ್ತೊಬ್ಬರಿಗೆ ಕೈ ಎತ್ತಿ ದಾನ ಮಾಡ್ತಾ ಇದ್ದ ವಸಂತ ಬಂಗೇರ ಇದೇ ಕಾರಣಕ್ಕೆ ಜನಾನುರಾಗಿಯಾಗಿದ್ದರು.
ಇದೀಗ ಅವರಿಲ್ಲಾ ಅನ್ನೋ ಸುದ್ದಿ ಅವರ ಅಭಿಮಾನಿಗಳನ್ನ ಕಣ್ಣೀರಿನ ಕಡಲಿನಲ್ಲಿ ಮುಳುಗಿಸಿದೆ. ಅವರ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆ ಅವರ ಮನೆಗೆ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ತಾಲೂಕು ಕ್ರೀಡಾಂಗಣಕ್ಕೂ ಸಾವಿರಾರು ಅಭಿಮಾನಿಗಳು ಆಗಮಿಸಿ ಅವರಿಗೆ ಅಂತಿನ ನಮನ ಸಲ್ಲಿಸಿದ್ದಾರೆ. ನೇರವಾಗಿ ನಿಷ್ಠೂರವಾಗಿ ತಪ್ಪುಗಳನ್ನು ಖಂಡಿಸುತ್ತಿದ್ದ ತಮ್ಮ ಪರ ಧ್ವನಿಯಾಗಿದ್ದ ನಾಯಕ ಇನ್ನಿಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾದ್ಯವಾಗಿಲ್ಲ. ಬಡವರಿಗೆ ಅನ್ಯಾಯ ಆಗ್ತಾ ಇದೆ ಅಂತ ಗೊತ್ತಾದ್ರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ತಾ ಇದ್ದ ವಸಂತ ಬಂಗೇರ ಅವರ ಆ ಸ್ಟೈಲ್ ಯಾವತ್ತೂ ಮರೆಯಲು ಸಾದ್ಯವಿಲ್ಲ.
ರಾಜ್ಯ ರಾಜಕಾರಣದಲ್ಲಿ ಸರಿಸುಮಾರು 40 ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಹೆಸರು ವಸಂತ ಬಂಗೇರ. ಬೆಳ್ತಂಗಡಿ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಶಾಸಕರಾಗಿದ್ದ ವಸಂತ ಬಂಗೇರ ಕೊನೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಬಿಜೆಪಿಯಿಂದ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಸಂತ ಬಂಗೇರ ಬಳಿಕ ನಡೆದ ರಾಜಕೀಯ ದ್ರುವೀಕರಣದಲ್ಲಿ ಜೆಡಿಎಸ್ ಮತ್ತು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಜಾತ್ಯಾತೀತ ನಾಯಕನಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಒಡನಾಡಿಯಾಗಿ ರಾಜ್ಯದ ಅಪಾರ ರಾಜಕೀಯ ನಾಯಕರು ಮೆಚ್ಚಿಕೊಂಡಿದ್ದ ವ್ಯಕ್ತಿ ಇವರು. ವಿಪರ್ಯಾಸ ಅಂದ್ರೆ ರಾಜಕೀಯದ ಉತ್ತುಂಗಕ್ಕೆ ಏರಿದ್ರೂ ಸಚಿವರಾಗುವ ಅವಕಾಶ ವಸಂತ ಬಂಗೇರ ಅವರಿಗೆ ಸಿಗಲೇ ಇಲ್ಲ ಅನ್ನೋದು. 2013 ರಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ರೂ ವಸಂತ ಬಂಗೇರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ರೆ ಯಾವೊಬ್ಬ ಸಚಿವನಿಗೂ ಸಾದ್ಯವಾಗದ ಕೆಲಸವನ್ನು ಸಿಎಂ ಆಗಿದ್ದ ಸಿದ್ಧರಾಮಯ್ಯ ಮೂಲಕ ಮಾಡಿಸೋ ತಾಕತ್ತು ಇದ್ದಿದ್ದು ವಸಂತ ಬಂಗೇರ ಅವರಿಗೆ ಮಾತ್ರ ಅನ್ನೋದನ್ನ ಮರೆಯುವ ಹಾಗಿಲ್ಲ.
ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಇದ್ದಿದ್ದು ಇದ್ದಹಾಗೇ ಹೇಳೋ … ಬಡವರು ಅಂದ್ರೆ ನನ್ನವರು ಎಂದು ಪ್ರೀತಿ ಮಾಡೋ ಜನ ನಾಯಕ ಇಂದು ಎಲ್ಲರ ಪ್ರೀತಿಗೆ ವಿದಾಯ ಹೇಳಿ ಮೌನವಾಗಿದ್ದಾರೆ. ” ನನ್ನನ್ನು ಆರಿಸಿದವರು ನೀವು .. ನೀವು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಮೋಸ ಮಾಡಿಲ್ಲ. ಹಣ ಮಾಡದೆ ಸ್ವಚ್ಚವಾಗಿ ಜನ ಸೇವೆ ಮಾಡಿದ ತೃಪ್ತಿ ಇದೆ” ಅಂತಲೇ ರಾಜಕೀಯಕ್ಕೆ ವಿದಾಯ ಹೇಳಿದ್ದ ವಸಂತ ಬಂಗೇರ ಇಂದು ಎಲ್ಲವನ್ನೂ ಬಿಟ್ಟು ತಮ್ಮ ಅಂತಿಮಯಾತ್ರೆ ಮುಗಿಸಿದ್ದಾರೆ.
ವಸಂತ ಬಂಗೇರ ಅವರ ಅಂತ್ಯಕ್ರೀಯೆ ಅವರ ಕುವೆಟ್ಟು ಕೇದೆ ಮನೆಯಲ್ಲಿ ನಡೆಸಲಾಗಿದೆ. ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಷ ಮಾಡುವ ಮೂಲಕ ಅಂತಿಮ ವಿಧಿಯನ್ನು ಪೂರೈಸಿದ್ದಾರೆ. ಪಂಚಭೂತಗಳಲ್ಲಿ ಲೀನವಾಗಿರುವ ಮಾಜಿ ಶಾಸಕ ವಸಂತ ಬಂಗೇರ ಇನ್ನು ನೆನಪು ಮಾತ್ರ. ಆದ್ರೆ ವಸಂತ ಬಂಗೇರ ಅವರು ಅವರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಜನನಾಯಕರಾಗಿರುತ್ತಾರೆ.
ವಿಡಿಯೋ ನೋಡಿ : ವಸಂತ ಬಂಗೇರ ಅವರ ರಾಜಕೀಯ ಜೀವನ ಕುರಿತಾದ ಸ್ಟೋರಿ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿಯ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಜಮಲಾಬಾದ್ ಗಡ (ಗಡಾಯಿಕಲ್ಲು), ಬಂಡಾಜೆ, ಬೊಳ್ಳೆ, ದಿಡುಪೆ ಜಲಪಾತ ಪ್ರವಾಸಿ ತಾಣಗಳಿಗೆ ಜೂ.16ರಿಂದ ಮುಂದಿನ ಆದೇಶದವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿ: ನಿಲ್ಲಿಸಿದ್ದ ಹಿಟಾಚಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃ*ತಪಟ್ಟು ಹಲವರು ಗಂ*ಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ರವಿವಾರ ತಡ ರಾತ್ರಿ ನಡೆದಿದೆ.
ಮೃ*ತ ವ್ಯಕ್ತಿಯನ್ನು ಕಾರ್ಕಳ ಹೆರ್ಮುಂಡೆ ನಿವಾಸಿ ಶಂಕರ ನಾರಾಯಣ ಭಟ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಲಾವತ್ತಡ್ಕ ಎಂಬಲ್ಲಿ ಹೆದ್ದಾರಿ ಬದಿ ಲಾರಿಯಲ್ಲಿ ನಿಲ್ಲಿಸಲಾಗಿದ್ದ ಹಿಟಾಚಿಗೆ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಹತ್ತಕ್ಕೂ ಹೆಚ್ವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡ ಶಂಕರ ನಾರಾಯಣ ಭಟ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃ*ತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ: ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರ ಬಿದ್ದು ದಂಪತಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಕೊಪ್ಪದ ಗಂಡಿ ಸಮೀಪ ನಡೆದಿದೆ.
ಕಡಿರುದ್ಯವಾರ ಗ್ರಾಮದ ಎರ್ಮಾಲ ಪಲ್ಕೆ ನಿವಾಸಿಗಳಾದ ಗುಮ್ಮಣ್ಣ ಮತ್ತು ವಿಮಲಾ ಗಾಯಗೊಂಡವರು. ತಾಲೂಕಿನಾದ್ಯಂತ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಮಣ್ಣು ಸಡಿಲಗೊಂಡು ಮರ ಬಿದ್ದಿದೆ.