ಮಂಗಳೂರು : ಅತ್ಯಂತ ಅಪರೂಪದ ಜೀವ ಉಳಿಸುವ ಪ್ರಕ್ರಿಯೆಯೊಂದರಲ್ಲಿ, ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಖ್ಯಾತ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಎಂ. ಕೆ. ಮೂಸಾ ಕುನ್ಹಿ ಮತ್ತು ಅವರ ವೈದ್ಯಕೀಯ ತಂಡವು ಹಿರಿವಯಸ್ಸಿನ ಮಹಿಳಾ ರೋಗಿಗೆ ಅಪರೂಪದ ಹಾಗು ಬಹು ಕಷ್ಟದ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ಈ ಮೂಲಕ ಆಕೆಗೆ ಹೊಸ ಜೀವನವನ್ನು ಆಸ್ಪತ್ರೆ ನೀಡಿದೆ. ರೋಗಿ ಕಾಸರಗೋಡಿನ ೬೧ ವರ್ಷದ ಶ್ರೀಮತಿ ನಬೀಸಾ ಹೃದಯ ಪಂಪ್ ಮಾಡುವ ಶಕ್ತಿ ೧೫%ಕ್ಕಿಂತ ಕಡಿಮೆ ಇರುವ ಅಪಾಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಸುಧಾರಿತ ಹೊಸ ತಂತ್ರಗಳನ್ನು ಬಳಸಿಕೊಂಡು ಮಾಡಿದ ಯಶಸ್ವಿ ಬೈಪಾಸ್ ಶಸ್ತ್ರಚಿಕಿತ್ಸೆ ಅವರಿಗೆ ಹೃದಯ ಕಸಿ ಮಾಡುವಿಕೆಯ ಅಗತ್ಯವನ್ನು ತಪ್ಪಿಸಿದೆಯಲ್ಲದೆ ಸನ್ನಿಹಿತ ಸಾವಿನಿಂದ ಅವರನ್ನು ರಕ್ಷಿಸಿದೆ.
“ಇಂತಹ ರೋಗಿಗೆ ಸಾಮಾನ್ಯವಾಗಿ ಹೃದಯ ಕಸಿ ಅಗತ್ಯವಿರುತ್ತದೆ,” ಎಂದು ಡಾ. ಮೂಸಾ ಹೇಳಿದ್ದಾರೆ.
“ಹೃದಯ ಪಂಪ್ ಮಾಡುವ ಶಕ್ತಿ 15% ಮತ್ತು ಅದಕ್ಕಿಂತ ಕಡಿಮೆ ಇರುವುದು ಜೀವಕ್ಕೆ ಅಪಾಯಕಾರಿಯಾದ ಸ್ಥಿತಿಯಾಗಿದೆ. ಸೂಕ್ತ ಚಿಕಿತ್ಸೆಯಿಲ್ಲದಲ್ಲಿ ಅಂತಹ ರೋಗಿಗಳು ಕೆಲವು ದಿನಗಳವರೆಗೂ ಬದುಕುವುದಿಲ್ಲ.” ಅತ್ಯಂತ ಕಡಿಮೆ ಹೃದಯ ಪಂಪ್ ಮಾಡುವ ಶಕ್ತಿಯನ್ನು ಹೊಂದಿರುವ ರೋಗಿಗಳಿಗೆ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಬಹಳ ವಿರಳವಾಗಿ ಪ್ರಯತ್ನಿಸಲಾಗುತ್ತಿದೆೆ. ಬಹುಶಃ ಮಂಗಳೂರಿನಲ್ಲಿ ಮತ್ತು ದೇಶದ ಈ ಭಾಗದಲ್ಲಿ ಇದೇ ಮೊದಲನೆಯದಾಗಿದೆ. ಹಾರ್ಟ್-ಲಂಗ್ ಯಂತ್ರದ ಬಳಕೆಯ ಅಗತ್ಯವಿಲ್ಲದ ಅತ್ಯಾಧುನಿಕ ‘ಆಫ್-ಪಂಪ್ ಬೈಪಾಸ್ ಸರ್ಜರಿ’ ತಂತ್ರವನ್ನು ಬಳಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.
ಶಸ್ತçಚಿಕಿತ್ಸೆ ನಡೆದ ಒಂದು ವಾರದೊಳಗೆ ರೋಗಿಯು ಚೆನ್ನಾಗಿ ಚೇತರಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯು ಸುಮಾರು ಆರು ಗಂಟೆಗಳ ಕಾಲ ನಡೆಯಿತು ಮತ್ತು ಆಕೆಯ ಹೃದಯದಲ್ಲಿನ ನಾಲ್ಕು ಬ್ಲಾಕ್‌ಗಳನ್ನು ಬೈಪಾಸ್ ಮಾಡಲಾಗಿದೆ. ಈಗ ಆಕೆಯ ಹೃದಯ ಪಂಪಿಂಗ್ ಶಕ್ತಿ 22%ಕ್ಕಿಂತ ಹೆಚ್ಚಾಗಿದೆ.
ಅವರು ಸಹಜವಾಗಿ ನಡೆದಾಡುವಷ್ಟು ಮತ್ತು ಎರಡು ಮಹಡಿಗಳನ್ನು ಹತ್ತುವಷ್ಟು ಸಶಕ್ತರಾಗಿದ್ದರೆ. ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಷ್ಟು ಗುಣಮುಖರಾಗಿದ್ದಾರೆ. “ನನ್ನ ಅನುಭವದಲ್ಲಿ, ಅವರು ಹೃದಯದ ಸಹಜ ಪಂಪಿಂಗ್ ಸಾಮರ್ಥ್ಯ ಮರಳಿ ಪಡೆಯಲು ಕೆಲವು ತಿಂಗಳುಗಳಿಂದ ಎರಡು ವರ್ಷಗಳವರೆಗೆ ತೆಗೆದುಕೊಳ್ಳಬಹುದು,” ಎಂದು ಡಾ. ಮೂಸಾ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾನಾ ಆಸ್ಪತ್ರೆಯ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಅವರು ರೋಗಿಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಶಸ್ತçಚಿಕಿತ್ಸೆಗೆ ಶಿಫಾರಸು ಮಾಡಿದ್ದರು.
“ರೋಗಿ ನನ್ನನ್ನು ಸಂಪರ್ಕಿಸಿದಾಗ ತುಂಬಾ ಗಂಭೀರ ಸ್ಥಿತಿಯಲ್ಲಿದ್ದರು. ಅವರು ತೀವ್ರ ಉಸಿರಾಟದ ತೊಂದರೆ, ಕಡಿಮೆ ರಕ್ತದೊತ್ತಡ, ರಕ್ತದಲ್ಲಿ ಕಡಿಮೆ ಆಮ್ಲಜನಕದ ಮಟ್ಟ ಮತ್ತು ಪಲ್ಮನರಿ ಎಡಿಮಾವನ್ನು ಹೊಂದಿದ್ದರು. ಅವರನ್ನು ಜೀವಂತವಾಗಿಡಲು ಮತ್ತು ಬೈಪಾಸ್ ಶಸ್ತçಚಿಕಿತ್ಸೆಗೆ ಸರಿಹೊಂದಿಸಲು ಕೆಲವು ದಿನಗಳ ವೆಂಟಿಲೇಟರ್ ಸಪೋರ್ಟ್ ಮತ್ತು ಆಮ್ಲಜನಕದ ಒದಗುವಿಕೆಯ ಅಗತ್ಯವಿತ್ತು,” ಎಂದು ಡಾ. ಯೂಸುಫ್ ತಿಳಿಸಿದರು.
“ಈ ರೀತಿಯ ಅತ್ಯಂತ ಅಪರೂಪದ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿಯುಳ್ಳ ಭಾರತ ಮತ್ತು ಪ್ರಪಂಚದ ಬೆರಳೆಣಿಕೆಯಷ್ಟು ಹೃದಯ ಶಸ್ತ್ರಚಿಕಿತ್ಸಕರಲ್ಲಿ ಡಾ. ಮೂಸಾ ಒಬ್ಬರು,” ಎಂದು ಅವರು ಹೇಳಿದರು.
ಬಹು ಬ್ಲಾಕ್‌ಗಳೊಂದಿಗೆ ಕಡಿಮೆ ಪಂಪ್ ಮಾಡುವ ಶಕ್ತಿಯನ್ನು ಹೊಂದುವಂತೆ ಮಾಡುವ ಈ ಹೃದ್ರೋಗಕ್ಕೆ ಇಸ್ಕೆಮಿಕ್ ಕಾರ್ಡಿಯೋಮಿಯೋಪತಿ ಮತ್ತು ಹೃದಯ ವೈಫಲ್ಯ ಎಂದು ವೈದ್ಯಕೀಯವಾಗಿ ಕರೆಯಲಾಗುತ್ತದೆ.
ಇಂತಹ ರೋಗಿಗಳು ಬಹಳ ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತಾರೆ. ಶ್ರೀಮತಿ ನಬೀಸಾ ಉತ್ತಮ ಆರೋಗ್ಯವನ್ನು ಅನುಭವಿಸುತ್ತಿದ್ದರು.
ಸುಮಾರು ಒಂದು ತಿಂಗಳ ಹಿಂದೆ, ಆಕೆಗೆ ಇದ್ದಕ್ಕಿದ್ದಂತೆ ತೀವ್ರ ಉಸಿರಾಟದ ತೊಂದರೆ ಮತ್ತು ಎದೆಯ ಅಸ್ವಸ್ಥತೆ ಕಾಣಿಸಿಕೊಂಡಿತು. ಉಸಿರಾಟದ ತೊಂದರೆಯಿಂದಾಗಿ ಆಕೆಗೆ ನಡೆಯಲು ಅಥವಾ ಮಲಗಲು ಸಾಧ್ಯವಾಗುತ್ತಿರಲಿಲ್ಲ್ಲ.
“ಬಹುಶಃ ಅವರು ಸೈಲೆಂಟ್ ಹಾರ್ಟ್ ಅಟ್ಯಾಕ್ (ಮೌನ ಹೃದಯಾಘಾತ) ನಿಂದ ಬಳಲುತ್ತಿದ್ದರು,” ಎಂದು ಡಾ. ಯೂಸುಫ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾನಾ ಆಸ್ಪತ್ರೆಯಲ್ಲಿ ಮಾಡಿದ ಆಂಜಿಯೋಗ್ರಾಮ್ ಮತ್ತು ಇತರ ವೈದ್ಯಕೀಯ ತನಿಖೆಗಳ ಮೂಲಕ ಹೃದಯದ ಪಂಪಿಂಗ್ ಶಕ್ತಿಯನ್ನು ಕೇವಲ 15%, ಸ್ಥೂಲವಾಗಿ ವಿಸ್ತರಿಸಿದ ಹೃದಯ ಮತ್ತು ಮುಖ್ಯ ಅಪಧಮನಿ ಬ್ಲಾಕ್ ಸೇರಿದಂತೆ ನಾಲ್ಕು ನಿರ್ಣಾಯಕ ಬ್ಲಾಕ್‌ಗಳನ್ನು ಹೊಂದಿರುವುದು ಕಂಡು ಬಂತು, ಇದು ‘ತುರ್ತು ಜೀವ ಬೆದರಿಕೆ’ ಯೆಂದು ಪರಿಗಣಿಸಲಾಯಿತು.
ಅಂತರಾಷ್ಟ್ರೀಯವಾಗಿ ಈಗ ಹೃದಯ ಕಸಿ ಮಾಡುವ ಬದಲು ಈ ರೀತಿಯ ರೋಗಿಗಳ ಮೇಲೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಪ್ರಯತ್ನಿಸುವ ಉದಯೋನ್ಮುಖ ಪ್ರವೃತ್ತಿ ಇದೆ ಎಂದು ಡಾ. ಮೂಸಾ ವಿವರಿಸಿದ್ದಾರೆ.
ಇಸ್ಕೆಮಿಕ್ ಕಾರ್ಡಿಯೋಮಯೋಪತಿ ಮತ್ತು ಹೃದಯ ವೈಫಲ್ಯ ಪ್ರಕರಣಗಳು ಭಾರತ ಹಾಗೂ ವಿಶ್ವಾದ್ಯಂತ ಹೆಚ್ಚುತ್ತಿವೆ. ಭಾರತದಲ್ಲಿ 2.5 ಕೋಟಿಗೂ ಹೆಚ್ಚು ಜನರು ತೀವ್ರ ಹೃದಯ ವೈಫಲ್ಯದಿಂದ ಬಳಲುತ್ತಿದ್ದಾರೆ ಮತ್ತು ಯಶಸ್ವಿ ಚಿಕಿತ್ಸೆಯ ಸೀಮಿತ ಆಯ್ಕೆಗಳನ್ನು ಹೊಂದಿದ್ದಾರೆ.
ಅತ್ಯಂತ ಭರವಸೆಯ ಚಿಕಿತ್ಸೆಗಳೆಂದರೆ ಹೃದಯ ಕಸಿ ಮತ್ತು ಕೃತಕ ಹೃದಯ ಅಳವಡಿಕೆ. ಆದರೆ ಇವು ನಮ್ಮ ದೇಶದಲ್ಲಿ ವ್ಯಾಪಕವಾಗಿ ಲಭ್ಯವಿಲ್ಲ. “ಈ ಕ್ಷೇತ್ರದ ಇತ್ತೀಚಿನ ಬೆಳವಣಿಕೆಯೆಂದರೆ ಬೈಪಾಸ್ ಶಸ್ತ್ರಚಿಕಿತ್ಸೆ, ವಿಶೇಷವಾಗಿ ಶ್ವಾಸಕೋಶ ಯಂತ್ರವನ್ನು ಬಳಸದೆ ‘ಬೀಟಿಂಗ್ ಹಾರ್ಟ್’ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಕಂಡುಬಂದಿದೆ. ಇದು ಈ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತಿದೆ,” ಎಂದು ಡಾ.ಮೂಸಾ ಹೇಳಿದರು.
ಈ ಪ್ರಕರಣವು ಸೈಲೆಂಟ್ ಹಾರ್ಟ್ ಅಟ್ಯಾಕ್ (ಮೌನ ಹೃದಯಾಘಾತ) ಬಗ್ಗೆ ಗಮನ ಸೆಳೆದಿದೆ. ಈ ರೀತಿಯ ಹೃದಯಾಘಾತವಾದಲ್ಲಿ ರೋಗಿಯು ಎದೆ ನೋವು ಅಥವಾ ಉಸಿರಾಟದಂತಹ ಯಾವುದೇ ಸಾಮಾನ್ಯ ಲಕ್ಷಣಗಳನ್ನು ತೋರಿಸುವುದಿಲ್ಲ. ಆದ್ದರಿಂದ ಜನರು ಈ ಸ್ಥಿತಿಯನ್ನು ಹೃದಯಾಘಾತವೆಂದು ಗುರುತಿಸುವುದಿಲ್ಲ. ಈ ರೀತಿಯ ಹೃದಯಾಘಾತದ ರೋಗಿಗಳನ್ನು ಸಾಮಾನ್ಯವಾಗಿ ತಡವಾಗಿ ಗುರುತಿಸಲಾಗುತ್ತದೆ ಮತ್ತು ಅವರಲ್ಲಿ ಹೆಚ್ಚಿನವರು ಸಕಾಲಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪುವುದಿಲ್ಲ. ಮೌನ ಹೃದಯಾಘಾತದ ಬಗ್ಗೆ ಸಾರ್ವಜನಿಕ ಅರಿವು ಅಗತ್ಯ ಎಂದು ಡಾ.ಮೂಸಾ ಹೇಳಿದರು.