ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿಯ ಕಾರಣೀಕ ದೈವಸ್ಥಾನ ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಭಕ್ತಾಧಿಗಳ ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಒಂದು ತಂಡ ಮಾಡುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಆರೋಪಿಸಿದ್ದಾರೆ.
ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ವಠಾರದಲ್ಲಿ ಸೋಮವಾರ ವ್ಯವಸ್ಥಾಪನಾ ಸಮಿತಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು. ಮೇ.23 ರಂದು ವ್ಯವಸ್ಥಾಪನಾ ಸಮಿತಿ ಭಂಡಾರಮನೆಗೆ ಹಾಕಿದ ಬೀಗವನ್ನು ಒಡೆದು ಅಕ್ರಮವಾಗಿ ಪ್ರವೇಶಗೈದ ಮುತ್ತಣ್ಣ ಶೆಟ್ಟಿ ಎಂಬವರು ಪೂಜೆ ನೆರವೇರಿಸಿದ್ದಾರೆ.
ಕೊರೊನಾ ಕಾರಣದಿಂದ ಸ್ಥಗಿತಗೊಂಡ ಜಾತ್ರೆಗೆ ಬದಲಾಗಿ ಹೋಮ ಮಾಡಲು ಸಿದ್ಧತೆ ಮಾಡಲಾಗಿತ್ತು . ಆದರೆ ಧಾರ್ಮಿಕ ದತ್ತಿ ಇಲಾಖೆ ವ್ಯವಸ್ಥಾಪನಾ ಸಮಿತಿ ಮೂಲಕ ಭಂಡಾರಮನೆಯ ಬಾಗಿಲಿಗೆ ಹಾಕಿಸಿದ್ದ ಬೀಗದ ಮೇಲೆ ಮುತ್ತಣ್ಣ ಶೆಟ್ಟಿ ಎಂಬವರು ಮತ್ತೊಂದು ಬೀಗ ಹಾಕಿದ್ದರು.
ಇದರಿಂದ ಹೋಮ ನೆರವೇರಿಸಲು ಅಸಾಧ್ಯವಾಗಿತ್ತು.ಅದಕ್ಕಾಗಿ ಅರ್ಚಕ ಕಾರಂತರ ಉಪಸ್ಥಿತಿಯಲ್ಲಿ ಹೊರಗಿನಿಂದಲೇ ವ್ಯವಸ್ಥಾಪನಾ ಸಮಿತಿ ಪ್ರಾರ್ಥನೆ ನಡೆಸಿ ವಾಪಸ್ಸಾಗಿದ್ದರು.
ಮರುದಿನ ಮುತ್ತಣ್ಣ ಶೆಟ್ಟಿ ವ್ಯವಸ್ಥಾಪನಾ ಸಮಿತಿ ಹಾಕಿರುವ ಬೀಗವನ್ನು ಒಡೆದು, ಹಿಂದಿನ ದಿನ ತರಿಸಿದ್ದ ಪೂಜಾ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಭಂಡಾರಮನೆಗೆ ಅಕ್ರಮವಾಗಿ ಪ್ರವೇಶಗೈದು ಪೂಜೆ ನೆರವೇರಿಸಿದ್ದರು.
ಈ ಮೂಲಕ ಭಕ್ತರ ಮನಸ್ಸನ್ನು ನೋಯಿಸುವ ಉದ್ದೇಶವನ್ನು ಇಟ್ಟುಕೊಂಡಿರುವ ತಂಡದ ವಿರುದ್ಧ ಜಿಲ್ಲಾಧಿಕಾರಿ , ಸಹಾಯಕ ಆಯುಕ್ತರು ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ದೂರು ಸಲ್ಲಿಸಿ ಕ್ರಮಕೈಗೊಳ್ಳಲು ಒತ್ತಾಯಿಸಲಾಗಿದೆ. ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕು.
ಮುಂದೆ ಇಂತಹ ಕೀಳು ನಡವಳಿಕೆ ನಡೆಯಬಾರದು ಅನ್ನುವುದೇ ಉದ್ದೇಶವಾಗಿದೆ. ಕೊರೊನಾ ಮಹಾಮಾರಿಯಿಂದಾಗಿ ಸರಕಾರದ ಆದೇಶದಂತೆ ಜಾತ್ರೆ ನಡೆಸಲಾಗಿಲ್ಲ .
ಭಕ್ತಾಧಿಗಳು ಬರುವುದನ್ನು ಪೊಲೀಸ್ ತಡೆದಿರುವುದು, ಭಕ್ತರಿಗೆ ಕಾಣಿಕೆ ಹಾಕಲು ಅವಕಾಶ ನೀಡದಿರುವುದು ಸರಿಯಲ್ಲ. ಈ ಬಗ್ಗೆ ವ್ಯವಸ್ಥಾಪನಾ ಸಮಿತಿ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮುಂದಿನ ದಿನಗಳಲ್ಲಿ ಕೊರೊನಾ ರೋಗ ದೂರವಾದ ಮೇಲೆ ಗ್ರಾಮದ ಭಕ್ತಾಧಿಗಳ ಸಭೆ ಕರೆದು ಚರ್ಚಿಸಿ ಪೂಜೆ ನಡೆಸುವ ಚಿಂತನೆ ಮಾಡಲಾಗಿದೆ.
ಭಂಡಾರಮನೆಯ ಕೀಲಿ ಕೈಯನ್ನು ಹತ್ತು ವರ್ಷಗಳ ಹಿಂದೆ ಜಾಗದ ಜಮೀನ್ದಾರರಾದ ಸಂಪಕ್ಕ ಶೆಡ್ತಿಯವರು ಅಂದಿನ ಅಧ್ಯಕ್ಷ ದೇವಾನಂದ ಶೆಟ್ಟಿಯವರಿಗೆ ಭಂಡಾರ ಮನೆಯಲ್ಲಿ ಪ್ರಾರ್ಥನೆಯೊಂದಿಗೆ ನೀಡಿದ್ದರು.
ಸಮಿತಿ ಬದಲಾಗುತ್ತಿದ್ದ ಹಾಗೆ ಧಾರ್ಮಿಕ ಇಲಾಖೆಯಿಂದ ನೂತನ ಸಮಿತಿಗೆ ನೀಡಿದ್ದಾರೆ . ಹಳೆಯ ಬೀಗಗಳನ್ನು ಬದಲಾಯಿಸುವ ಬಗ್ಗೆಯೂ ಧಾರ್ಮಿಕ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದರು.
ಅದರಂತೆ ಮೇ 14 ರಂದು ಸಂಕ್ರಮಣ ದಿವಸ , ಅರ್ಚಕ ನಾರಾಯಣ ಮೂಲ್ಯ ಪೂಜೆ ಮುಗಿಸಿದ ಮೇಲೆ ಸತಃ ತಾವೇ ಬೀಗ ಹಾಕಿದ್ದಾರೆ. ಆ ಬೀಗದ ಮೇಲೆ ಮುತ್ತಣ್ಣ ಶೆಟ್ಟಿ ಬೇರೆ ಬೀಗವನ್ನು ಹಾಕಿದ್ದು ಮೇ.22 ರಂದು ಬೆಳಿಗ್ಗೆ ಗಣಹೋಮದ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಗಮನಕ್ಕೆ ಬಂದಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶಿವಪ್ರಸಾದ್ ಆಚಾರ್ಯ, ಶಂಕರ್ ಬಲ್ಯ, ದಿನಮಣಿ ರಾವ್, ಪ್ರಮೀಳಾ ಚಂದ್ರಶೇಖರ್ ಉಪಸ್ಥಿತರಿದ್ದರು.