ಮಂಗಳೂರು/ಬೆಂಗಳೂರು: “ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು” ಎಂಬ ಹೇಳಿಕೆಯನ್ನು ನೀಡಿ ವಾಪಸ್ ಕ್ಷಮೆಯನ್ನೂ ಕೇಳದೆ, ಮೊಂಡಾಟ ಮುಂದುವರಿಸಿರುವ ನಟ ಕಮಲ್ ಹಾಸನ್ ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಕಮಲ್ ಹಾಸನ್ ಅವರ “ಥಗ್ ಲೈಫ್” ಸಿನಿಮಾ ಅತಂತ್ರ ಸ್ಥಿತಿಯಲ್ಲಿದೆ. ಕ್ಷಮೆ ಕೇಳದಿದ್ದರೆ ಜೂ. 5ರಂದು ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬ ಕರ್ನಾಟಕ ಫಿಲ್ಮ್ ಛೇಂಬರ್ ಎಚ್ಚರಿಕೆಯನ್ನೂ ಲೆಕ್ಕಿಸದೆ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಕನ್ನಡ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿದೆ. ಈ ನಡುವೆ ಫಿಲ್ಮ್ ಚೇಂಬರ್ ಕಮಲ್‌ಗೆ ಕ್ಷಮೆಯಾಚಿಸಲು ಮಂಗಳವಾರ ಮಧ್ಯಾಹ್ನ 12 ಗಂಟೆಯವರೆಗೆ ಗಡುವು ವಿಧಿಸಿತ್ತು.
ಇದೀಗ ಕಮಲ್ ಹಾಸನ್ ಅವರು ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರಿಗೆ ಸುದೀರ್ಘವಾದ ಪತ್ರ ಬರೆದಿದ್ದು, ಕನ್ನಡ ಭಾಷೆಯ ಬಗ್ಗೆ ಕನ್ನಡಿಗರ ಬಗ್ಗೆ ಉಲ್ಲೇಖಿಸಿದ್ದಾರೆ.
ಕಮಲ್ ಹಾಸನ್ ಬರೆದ ಪತ್ರದಲ್ಲೇನಿದೆ?
‘ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್ ಕುಮಾರ್ ಅವರ ಕುಟುಂಬದ ಬಗ್ಗೆ, ವಿಶೇಷವಾಗಿ ಶಿವರಾಜ್‌ಕುಮಾರ್ ಅವರ ಬಗ್ಗೆ ನಿಜವಾದ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಸಂದರ್ಭದಿಂದ ಹೊರಗಿಡಲಾಗಿದೆ ಎಂಬುದು ನನಗೆ ನೋವುಂಟುಮಾಡುತ್ತದೆ. ನನ್ನ ಮಾತುಗಳು ನಾವೆಲ್ಲರೂ ಒಂದೇ ಕುಟುಂಬದವರು ಮತ್ತು ಯಾವುದೇ ರೀತಿಯಲ್ಲಿ ಕನ್ನಡವನ್ನು ಕುಗ್ಗಿಸಲು ಅಲ್ಲ ಎಂಬುದನ್ನು ತಿಳಿಸುವ ಉದ್ದೇಶವನ್ನು ಹೊಂದಿದ್ದವು. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ ಎಂದಿದ್ದಾರೆ.
ತಮಿಳಿನ ರೀತಿಯೇ ಕನ್ನಡ ಸಹ ಶ್ರೀಮಂತ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಹೊಂದಿದ್ದು, ಅದನ್ನು ನಾನು ವರ್ಷಗಳಿಂದಲೂ ಗೌರವಿಸುತ್ತಾ ಬಂದಿದ್ದೇನೆ. ಕನ್ನಡ ಭಾಷಿಕರು, ನನ್ನ ವೃತ್ತಿ ಜೀವನದಲ್ಲಿ ನನಗೆ ತೋರಿದ ಪ್ರೀತಿ ಮತ್ತು ಗೌರವ ನನ್ನ ಎದೆಯಲ್ಲಿ ಭದ್ರವಾಗಿದೆ. ಭಾಷೆಯ ಬಗ್ಗೆ ನನಗಿರುವ ಪ್ರೀತಿ ಸ್ಪಟಿಕದಂಥಹದ್ದು, ಅದನ್ನು ನಾನು ಯಾವುದೇ ಭೀತಿ ಇಲ್ಲದೆ ಹೇಳುವೆ. ಅದರಂತೆ ಕನ್ನಡಿಗರಿಗೆ ಅವರ ಭಾಷೆಯ ಬಗ್ಗೆ ಇರುವ ಅದಮ್ಯ ಪ್ರೀತಿಯ ಬಗ್ಗೆಯೂ ನನಗೆ ಗೌರವ ಇದೆ’ ಎಂದಿದ್ದಾರೆ.
ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯ ಶಾಶ್ವತ ಮತ್ತು ಹೃತ್ತೂರ್ವಕವಾಗಿದೆ. ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳ ಸಮಾನ ಘನತೆಯ ಪರವಾಗಿ ನಿಲ್ಲುತ್ತೇನೆ ಮತ್ತು ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ಏಕೆಂದರೆ ಅಂತಹ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಯನ್ನು ಹಾಳು ಮಾಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ‘ಕ್ಷಮೆ ಕೇಳಲಾಗದಿದ್ದರೆ ಬಿಡಿ ಕರ್ನಾಟಕದಲ್ಲಿ ಬಿಡುಗಡೆ ಏಕೆ ಬೇಕು’; ಕಮಲ್ ಹಾಸನ್‌ಗೆ ಹೈಕೋರ್ಟ್ ತರಾಟೆ
‘ನನಗೆ ಸಿನಿಮಾ ಭಾಷೆ ಗೊತ್ತು, ನಾನು ಅದನ್ನೇ ಮಾತನಾಡುತ್ತೇನೆ. ಸಿನಿಮಾ ಭಾಷೆ ವಿಶ್ವಭಾಷೆ. ಆ ಭಾಷೆಗೆ ಪ್ರೀತಿಸುವುದು ಮಾತ್ರವೇ ಗೊತ್ತು. ನನ್ನ ಹೇಳಿಕೆ ಸಹ ನಮ್ಮ ನಡುವೆ ಇರುವ ಪ್ರೀತಿ ಮತ್ತು ಬಾಂಧವ್ಯ ಹಾಗೂ ಒಗ್ಗಟ್ಟನ್ನು ತೋರ್ಪಡಿಸುವ ಉದ್ದೇಶವನ್ನೇ ಹೊಂದಿತ್ತು. ನನ್ನ ಹಿರಿಯರು ನನಗೆ ಕಲಿಸಿಕೊಟ್ಟ ಪ್ರೀತಿ ಮತ್ತು ಗೌರವವನ್ನೇ ನಾನು ಪಾಲಿಸುತ್ತಿದ್ದೇನೆ. ಅದೇ ಪ್ರೀತಿ ಮತ್ತು ಗೌರವದ ಭಾಗವಾಗಿ ಶಿವಣ್ಣ, ಆಡಿಯೋ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಆ ಕಾರಣಕ್ಕಾಗಿ ಅವರು ಮುಜುಗರ ಅನುಭವಿಸಬೇಕಾಗಿ ಬಂದಿರುವುದಕ್ಕೆ ನನಗೆ ವಿಷಾದವಿದೆ. ಆದರೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ವಿಶ್ವಾಸ ಹೀಗೆಯೇ ಮುಂದುವರೆಯುತ್ತದೆ ಎಂಬ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ.

ಸಿನಿಮಾ ಜನರ ನಡುವೆ ಸೇತುವೆಯಾಗಿ ಉಳಿಯಬೇಕು, ಅವರನ್ನು ವಿಭಜಿಸುವ ಗೋಡೆಯಾಗಿ ಉಳಿಯಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಅವಕಾಶ ನೀಡಿಲ್ಲ ಮತ್ತು ಎಂದಿಗೂ ಬಯಸುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಮಾತುಗಳ ಉದ್ದೇಶವನ್ನು ಗ್ರಹಿಸಿ ಸ್ವೀಕರಿಸಲಾಗುವುದು ಮತ್ತು ಕರ್ನಾಟಕದ ಬಗ್ಗೆ, ಅಲ್ಲಿರುವ ಜನರ ಬಗ್ಗೆ ಮತ್ತು ಅವರ ಭಾಷೆಯ ಬಗ್ಗೆ ನನ್ನ ನಿರಂತರ ಪ್ರೀತಿಯನ್ನು ಅದರ ನಿಜವಾದ ಬೆಳಕಿನಲ್ಲಿ ಗುರುತಿಸಲಾಗುವುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಪುನರುಚ್ಚರಿಸಲು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದಿದ್ದಾರೆ.