Connect with us

ಕೊರೊನಾ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ಹೇಗೆ.?…

Published

on

ಕೊರೊನಾ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ಹೇಗೆ.?…

ಬರಹ: ಡಾ| ಶ್ರೀನಿವಾಸ ಕಕ್ಕಿಲಾಯ

ಮಂಗಳೂರು: ಕೊರೊನಾ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ನಡೆಸಲು ಜನರು ಭಯಗೊಂಡು ಹಿಂಜರಿಯುತ್ತಿರುವ ಬಗ್ಗೆ ಹಲವೆಡೆಗಳಿಂದ ವರದಿಗಳಾಗಿವೆ.

ಮೇಘಾಲಯ, ಚೆನ್ನೈಯಲ್ಲೂ ಕೊರೊನಾದಿಂದ ಮೃತರಾದ ಮೂವರು ಹಿರಿಯ ವೈದ್ಯರ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿ ಕಲ್ಲು ತೂರಿದ ಘಟನೆಗಳೂ ನಡೆದಿವೆ. ಕುಟುಂಬದವರು ಅಂತ್ಯ ಸಂಸ್ಕಾರವನ್ನು ಮಾಡದಿದ್ದ ಸಂದರ್ಭಗಳಲ್ಲಿ ಅನ್ಯ ಮತೀಯರು, ಸ್ನೇಹಿತರು ಮುಂತಾದವರು ಅವನ್ನು ನಡೆಸಲು ನೆರವಾಗಿರುವ ಬಗ್ಗೆಯೂ ವರದಿಗಳಾಗಿವೆ.

ಕೊರೊನಾದಿಂದ ಮೃತರಾದವರ ಅಂತ್ಯ ಸಂಸ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆಯಿರುವುದು ಮತ್ತು ಆ ಕಾರಣದಿಂದ ಹಲವು ತಪ್ಪು ಕಲ್ಪನೆಗಳಿರುವುದು ಇಂತಹ ಸನ್ನಿವೇಶಗಳಿಗೆ ಕಾರಣವಾಗುತ್ತಿವೆ.

ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತುರ್ತು ವೈದ್ಯಕೀಯ ಪರಿಹಾರದ ವಿಭಾಗವು ಕೊರೊನಾ ಸೋಂಕಿತರ ಶವ ಸಂಸ್ಕಾರದ ವಿಧಾನಗಳ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಈಗಾಗಲೇ ಪ್ರಕಟಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಕೊರೊನಾ ಸೋಂಕಿನ ಸನ್ನಿವೇಶದಲ್ಲಿ ಸುರಕ್ಷಿತವಾದ ಶವ ಸಂಸ್ಕಾರದ ಬಗ್ಗೆ ಮತ್ತು ಸೋಂಕು ನಿಯಂತ್ರಣದ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕೊರೊನಾ ಪೀಡಿತರಾಗಿದ್ದವರ ಮೃತ ದೇಹದಿಂದ ಕೊರೊನಾ ಸೋಂಕು ಹರಡುವುದಿಲ್ಲವೆಂದೂ, ಅಂಥವರ ಮತೀಯ, ಸಾಮಾಜಿಕ ಹಾಗೂ ಕೌಟುಂಬಿಕ ಸಂಪ್ರದಾಯಗಳಿಗೆ ಯಾವುದೇ ಚ್ಯುತಿಯಾಗದಂತೆ, ಕೆಲವೊಂದು ಎಚ್ಚರಿಕೆಗಳನ್ನು ವಹಿಸಿ, ಅಂತ್ಯ ಸಂಸ್ಕಾರಗಳನ್ನು ನಡೆಸಬಹುದೆಂದೂ, ಇವೆರಡು ಮಾರ್ಗಸೂಚಿಗಳಲ್ಲಿ ಅತಿ ಸ್ಪಷ್ಟವಾಗಿ ಹೇಳಲಾಗಿದೆ.

ಈಗ ನಮ್ಮ ದೇಶದಲ್ಲಿ ಪ್ರತಿನಿತ್ಯ 30 ರಿಂದ 50 ಕೊರೊನಾ ಸಂಬಂಧಿತ ಸಾವುಗಳಾಗುವ ಬಗ್ಗೆ ವರದಿಗಳಾಗುತ್ತಿದ್ದು, ಮೃತರಿಗೆ ಅವರವರ ಸಂಪ್ರದಾಯಗಳಿಗನುಗುಣವಾಗಿ ಅಂತ್ಯ ಕ್ರಿಯೆಗಳನ್ನು ನಡೆಸುವ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಮಾಹಿತಿಯಿದ್ದರೆ ಯಾವುದೇ ಗೊಂದಲಗಳಿಗಾಗಲೀ, ಆತಂಕಗಳಿಗಾಗಲೀ ಅವಕಾಶವಿಲ್ಲದಂತೆ ಮಾಡಬಹುದಾಗಿದೆ.

ಅದಕ್ಕಾಗಿ ಈ ಎರಡು ಅಧಿಕೃತ ಮಾರ್ಗಸೂಚಿಗಳನ್ನಷ್ಟೇ ಪಾಲಿಸಿದರೆ ಸಾಕಾಗುತ್ತದೆ.

ಅಲ್ಲಿಲ್ಲಿ ಒಬ್ಬೊಬ್ಬರು ಹೇಳುವುದನ್ನು ಅಲ್ಲಿಂದಲ್ಲಿಗೇ ಕಡೆಗಣಿಸಲಡ್ಡಿಯಿಲ್ಲ.

ಕೊರೊನಾ ಪೀಡಿತರಾಗಿದ್ದವರ ಮೃತ ದೇಹದಿಂದ ಕೊರೊನಾ ಸೋಂಕು ಹರಡುವುದಿಲ್ಲ:

ಎಬೋಲ, ಮಾರ್ಬರ್ಗ್ ಜ್ವರಗಳಂತಹ ರಕ್ತಸ್ರಾವವನ್ನುಂಟು ಮಾಡುವ ಸೋಂಕುಗಳು ಹಾಗೂ ಕೊಲೆರಾಗಳನ್ನು ಹೊರತು ಪಡಿಸಿದರೆ ಬೇರೆ ಯಾವ ಸಂದರ್ಭಗಳಲ್ಲೂ ಮೃತ ದೇಹಗಳಿಂದ ಸೋಂಕು ತಗಲುವ ಸಾಧ್ಯತೆಗಳಿಲ್ಲ.

ಫ್ಲೂ ಸೋಂಕಿನಲ್ಲಿ ಮರಣೋತ್ತರ ಪರೀಕ್ಷೆಯ ವೇಳೆ ಸೂಕ್ತ ಜಾಗರೂಕತೆಗಳನ್ನು ವಹಿಸದಿದ್ದರೆ ಮೃತ ದೇಹದ ಶ್ವಾಸಕೋಶಗಳಿಂದ ಸೋಂಕುಂಟಾಗುವ ಸಾಧ್ಯತೆಗಳಿವೆ ಎಂದು ಗುರುತಿಸಲಾಗಿದ್ದರೂ, ಇತರ ಸಂದರ್ಭಗಳಲ್ಲಿ ಮೃತ ದೇಹಗಳಿಂದ ಸೋಂಕು ಹರಡುವುದಿಲ್ಲವೆಂದೇ ಹೇಳಬಹುದು.

ಕೊರೊನಾ ಪೀಡಿತರ ಮೄತ ದೇಹದಿಂದ ಸೋಂಕು ಹರಡಿರುವ ಸಾಧ್ಯತೆಗಳ ಬಗ್ಗೆ ಇದುವರೆಗೆ ಎಲ್ಲಿಂದಲೂ ವರದಿಗಳಾಗಿಲ್ಲ.

ಆದರೂ ಕೂಡ, ಕೊರೊನಾ ಸೋಂಕು ಹೊಸದಾಗಿರುವ ಕಾರಣಕ್ಕೆ, ಮತ್ತು ಅದರ ಬಗ್ಗೆ ಎಲ್ಲಾ ವಿವರಗಳು ಇನ್ನೂ ಲಭ್ಯವಿಲ್ಲದಿರುವ ಕಾರಣಕ್ಕೆ ಕೊರೊನಾದಿಂದ ಮೃತ ಪಟ್ಟವರ ದೇಹಗಳ ಅಂತ್ಯ ಸಂಸ್ಕಾರದ ವೇಳೆ ಕೆಲವೊಂದು ಸಾಮಾನ್ಯ ಎಚ್ಚರಿಕೆಗಳನ್ನು ವಹಿಸಬೇಕೆಂದು ಸೂಚಿಸಲಾಗುತ್ತಿದೆ.

ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರವರ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸಬಹುದು:

ಸೋಂಕಿನಿಂದ ಮೃತರಾದವರ ದೇಹವನ್ನು ಸುಡಲೇಬೇಕು ಎಂಬ ನಿಯಮವೇನಿಲ್ಲ.

ಮೃತ ದೇಹವನ್ನು ಸುಡಬಹುದು ಅಥವಾ ಹೂಳಬಹುದು. ಚಿತಾಗಾರದಲ್ಲಿ ಉಳಿಯುವ ಭಸ್ಮದಿಂದ ಸೋಂಕು ಹರಡುವ ಅಥವಾ ಅಪಾಯವಾಗುವ ಯಾವುದೇ ಸಾಧ್ಯತೆಗಳು ಇಲ್ಲವೇ ಇಲ್ಲದಿರುವುದರಿಂದ ಅದನ್ನು ಸಂಗ್ರಹಿಸಿ ಅಂತಿಮ ವಿಧಿಗಳನ್ನು ನಡೆಸುವುದಕ್ಕೆ ಯಾವ ರೀತಿಯ ಅಡಚಣೆಗಳೂ ಇಲ್ಲ.

ಕೊರೊನಾ ಸೋಂಕಿನಿಂದಾಗುವ ಸಾವುಗಳು ಆಸ್ಪತ್ರೆಗಳಲ್ಲಾಗಬಹುದು, ವೃದ್ಧಾಶ್ರಮಗಳಲ್ಲಾಗಬಹುದು ಅಥವಾ ಮನೆಗಳಲ್ಲೂ ಆಗಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ಈ ಎಲ್ಲಾ ಸನ್ನಿವೇಶಗಳನ್ನೂ ಪರಿಗಣಿಸಲಾಗಿದ್ದರೆ, ಭಾರತ ಸರಕಾರದ ಮಾರ್ಗಸೂಚಿಗಳಲ್ಲಿ ಆಸ್ಪತ್ರೆಗಳಲ್ಲಿ ಸಾವುಗಳಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯಷ್ಟೇ ಹೇಳಲಾಗಿದೆ.

ತೀವ್ರ ರೂಪದ ಕೊರೊನಾ ಪೀಡಿತರೆಲ್ಲರೂ ಆಸ್ಪತ್ರೆಗಳಲ್ಲಿ ದಾಖಲಾಗಿಯೇ ಆಗುತ್ತಾರೆಂಬ ನಿರೀಕ್ಷೆಯಿಂದ ಇವನ್ನು ರೂಪಿಸಿರಬಹುದೇನೋ.?.

ತೀವ್ರ ರೂಪದ ಕೊರೊನಾ ಸೋಂಕಿತರು ಆಸ್ಪತ್ರೆಗಳ ತೀವ್ರ ಚಿಕಿತ್ಸಾ ಘಟಕಗಳಲ್ಲಿ ಮೃತರಾಗುವುದರಿಂದ, ಅವರ ಸಂಬಂಧಿಕರಿಗೆ ಕೊರೊನಾ ಸೋಂಕಿನಿಂದ ರಕ್ಷಣೆಗಾಗಿ ಆ ಘಟಕಗಳೊಳಕ್ಕೆ ಪ್ರವೇಶವಿರುವುದಿಲ್ಲ.

ಹಾಗಾಗಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಆ ರೋಗಿಯ ಚಿಕಿತ್ಸೆಗಾಗಿ ಹಾಕಿರಬಹುದಾದ ಎಲ್ಲಾ ನಳಿಕೆಗಳು,

ಚುಚ್ಚು ಸೂಜಿಗಳು ಇತ್ಯಾದಿಗಳನ್ನೆಲ್ಲ ತೆಗೆದು, ಮೂಗು, ಬಾಯಿ, ಕಣ್ಣು ಮುಂತಾದ ರಂಧ್ರಗಳಲ್ಲಿ ಒಸರುವ ಎಲ್ಲಾ ಸ್ರಾವಗಳನ್ನು ಶುಚಿಗೊಳಿಸಿ, ಅವನ್ನು ಮುಚ್ಚುವ ಕೆಲಸಗಳನ್ನು ರೋಗಿಯ ಆರೈಕೆಯಲ್ಲಿ ನಿರತರಾದ ಆಸ್ಪತ್ರೆಯ ಸಿಬಂದಿಯೇ ಮಾಡುತ್ತಾರೆ.

ಆ ಬಗೆಗಿನ ತರಬೇತಿಯನ್ನೆಲ್ಲ ಅವರಿಗಾಗಲೇ ನೀಡಲಾಗಿದೆ. ಇದಾದ ಬಳಿಕ ಮೃತರ ಸಂಬಂಧಿಕರು ಮೃತ ದೇಹವನ್ನು ನೋಡ ಬಯಸಿದರೆ ಮಾರ್ಗಸೂಚಿಗಳಲ್ಲಿ ಹೇಳಲಾದ ಅಗತ್ಯ ಎಚ್ಚರಿಕೆಯ ಕ್ರಮಗಳೊಂದಿಗೆ ಅವರಿಗೆ ನೋಡಲು ಅವಕಾಶವನ್ನು ನೀಡಲಾಗುತ್ತದೆ.

ಆದರೆ ಮೃತ ದೇಹವನ್ನು ಮುಟ್ಟುವುದಕ್ಕೆ, ಅಥವಾ ಮುತ್ತಿಕ್ಕುವುದಕ್ಕೆ ಅವಕಾಶವಿರುವುದಿಲ್ಲ. ಆ ಬಳಿಕ ಮೃತ ದೇಹವನ್ನು ವಿಶೇಷವಾದ ಚೀಲದಲ್ಲಿರಿಸಲಾಗುತ್ತದೆ.

ಮತ್ತು ಆ ಚೀಲದ ಹೊರಮೈಯನ್ನು 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಲಾಗುತ್ತದೆ, ನಂತರ ಮನೆಯವರು ನೀಡಿರಬಹುದಾದ ಬಟ್ಟೆಯನ್ನು ಅದರ ಹೊರಗೆ ಸುತ್ತಿ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ.

ವೃದ್ಧಾಶ್ರಮದಲ್ಲೋ, ಮನೆಯಲ್ಲೋ ಮೃತ್ಯುವುಂಟಾದರೆ ಮೃತದೇಹವನ್ನು ನಿಭಾಯಿಸುವ ಬಗ್ಗೆ ನಮ್ಮ ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನನ್ನೂ ಹೇಳಿಲ್ಲ.

ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ಆ ಬಗ್ಗೆ ಸ್ಪಷ್ಟವಾದ ವಿವರಣೆಗಳಿವೆ.

ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಸಿದ್ಧಗೊಳಿಸುವವರು (ದೇಹವನ್ನು ಶುಚಿಗೊಳಿಸುವುದು, ಕೂದಲನ್ನು ಸರಿಪಡಿಸುವುದು, ಬಟ್ಟೆಯನ್ನು ಉಡೀಸುವುದು ಇತ್ಯಾದಿಗಳನ್ನು ಮಾಡುವ ಕುಟುಂಬದ ಸದಸ್ಯರು ಅಥವಾ ಧರ್ಮಗುರುಗಳು) ಕೈಗವಸುಗಳನ್ನು ಬಳಸಬೇಕು.

ಹಾಗೂ ಮೃತದೇಹದ ಸ್ರಾವಗಳು ದೇಹವನ್ನು ಸಿದ್ಧಪಡಿಸುವವರ ಮುಖಕ್ಕೆ ಸಿಂಪಡನೆಯಾಗುವ ಸಾಧ್ಯತೆಗಳಿದ್ದರೆ ಅಂತವರು ತಮ್ಮ ಮುಖ ಮತ್ತು ಕಣ್ಣುಗಳಿಗೆ ರಕ್ಷಣೆ ನೀಡಬಲ್ಲ ಮುಖಕವಚವನ್ನೂ, ಕನ್ನಡಕವನ್ನೂ ಬಳಸಬೇಕು.

ಮೃತದೇಹವನ್ನು ಸಿದ್ಧಪಡಿಸಿದವರು ಆ ಸಂದರ್ಭದಲ್ಲಿ ತಾವು ಧರಿಸಿದ ಬಟ್ಟೆಗಳನ್ನು ಕೆಲಸವಾದ ಕೂಡಲೇ ತೆಗೆದು ಪ್ರತ್ಯೇಕವಾಗಿ ಒಗೆಯಬೇಕು.

ಅಥವಾ ತಮ್ಮ ದಿರಿಸಿನ ಮೇಲೆ ಪ್ರತ್ಯೇಕವಾದ ಮೇಲಂಗಿಯನ್ನು ಧರಿಸಿ, ಬಳಿಕ ಅದನ್ನು ತೆಗೆದು ಒಗೆಯಬಹುದು.

ಹೀಗೆ ಸಿದ್ಧಪಡಿಸಿದವರು ಮತ್ತು ಅವರಿಗೆ ನೆರವಾದವರು ಆ ಬಳಿಕ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.

ಮೃತದೇಹವನ್ನು ಸಿದ್ಧಪಡಿಸುವವರಾಗಲೀ, ಬೇರೆ ಯಾರೇ ಆಗಲೀ ಮೃತ ದೇಹವನ್ನು ಮುತ್ತಿಕ್ಕಬಾರದು.

ಮಕ್ಕಳು, ಅರುವತ್ತಕ್ಕೆ ಮೇಲ್ಪಟ್ಟ ಹಿರಿಯರು, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಶ್ವಾಸಕೋಶಗಳ ಕಾಯಿಲೆ, ಹೃದ್ರೋಗ, ಇತ್ಯಾದಿ ಸಮಸ್ಯೆಗಳಿರುವವರು ಮೃತದೇಹವನ್ನು ಸಿದ್ಧಪಡಿಸುವ ಕೆಲಸವನ್ನು ಮಾಡಬಾರದು.

ಆದಷ್ಟು ಕಡಿಮೆ ಜನರಷ್ಟೇ ಸಿದ್ದಪಡಿಸುವ ಕೆಲಸವನ್ನು ಮಾಡಿ, ಇನ್ನುಳಿದವರು ಮೃತದೇಹದಿಂದ ಒಂದು ಮೀಟರ್ ದೂರವುಳಿದು ಅದನ್ನು ನೋಡಬಹುದು.

ಕುಟುಂಬದ ಸಂಪ್ರದಾಯಗಳಿಗೆ ಅನುಗುಣವಾಗಿ ಮೃತದೇಹವನ್ನು ವೀಕ್ಷಿಸುವುದಕ್ಕೆ ಅವಕಾಶವನ್ನು ನೀಡಬಹುದು.

ಆದರೆ ದೇಹವನ್ನು ಮುಟ್ಟುವುದಕ್ಕಾಗಲೀ, ಮುತ್ತಿಕ್ಕುವುದಕ್ಕಾಗಲೀ ಅವಕಾಶವಿರಬಾರದು. ದೇಹವನ್ನು ವೀಕ್ಷಿಸುವಾಗ ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು.

ಶ್ವಾಸಕೋಶದ ಸಮಸ್ಯೆಯುಳ್ಳವರು ಮೃತದೇಹವನ್ನು ವೀಕ್ಷಿಸುವುದರಿಂದ ದೂರವುಳಿದರೆ ಒಳ್ಳೆಯದು.

ಹಾಗೊಂದು ವೇಳೆ ಅವರು ವೀಕ್ಷಿಸುವುದಿದ್ದರೆ ಮುಖಕವಚವನ್ನು ಧರಿಸುವುದು ಒಳ್ಳೆಯದು. ಮೃತ ದೇಹವನ್ನು ವೀಕ್ಷಿಸಿದವರೆಲ್ಲರೂ ಆ ಬಳಿಕ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.

ಮೃತ ದೇಹವನ್ನು ಅಂತ್ಯ ಸಂಸ್ಕಾರದ ಸ್ಥಳಕ್ಕೆ ಒಯ್ಯುವ ವಾಹನವನ್ನು 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಬಹುದು.

ಚಿತಾಗಾರದಲ್ಲಿ ಅಥವಾ ಹೂಳುವ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೊರೊನಾದಿಂದ ಮೃತಪಟ್ಟವರ ದೇಹಗಳಿಂದ ಯಾವುದೇ ವಿಶೇಷ ಅಪಾಯಗಳಿಲ್ಲ.

ಅವರು ಕೈಗವಸುಗಳನ್ನು ಧರಿಸುವುದು, ಮುಖಕವಚಗಳನ್ನು ಧರಿಸುವುದು ಹಾಗೂ ಕೈಗಳನ್ನು ತೊಳೆದುಕೊಳ್ಳುವುದು ಮುಂತಾದ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಸಾಕು.

ಸ್ಮಶಾನದಲ್ಲಿ ಮೃತ ದೇಹದ ಮುಖವನ್ನು ವೀಕ್ಷಿಸುವುದಕ್ಕೆ ಅವಕಾಶ ನೀಡಬಹುದು.

ಅದಕ್ಕಾಗಿ ಮೃತ ದೇಹದ ಮುಖದ ಬಟ್ಟೆಯನ್ನು ಸರಿಸುವವರು ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ವಹಿಸಬೇಕು.

ಧರ್ಮಗ್ರಂಥಗಳನ್ನು ಪಠಿಸುವುದು, ಮೃತ ದೇಹದ ಮೇಲೆ ಪವಿತ್ರ ಜಲವನ್ನು ಪ್ರೋಕ್ಷಿಸುವುದು, ಅಥವಾ ಮೃತ ದೇಹವನ್ನು ಮುಟ್ಟುವ ಅಗತ್ಯವಿಲ್ಲದ ಇತರ ಯಾವುದೇ ಅಂತಿಮ ವಿಧಿಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಗಳಿಲ್ಲ.

ಆದರೆ ಮೃತದೇಹವನ್ನು ಅಪ್ಪಿಕೊಳ್ಳುವುದು ಅಥವಾ ಮುತ್ತಿಕ್ಕುವುದನ್ನು ಮಾಡಬಾರದು. ಮೃತರ ಕುಟುಂಬದ ಸದಸ್ಯರಿಗೆ ಆ ಮೊದಲೇ ಸೋಂಕು ತಗಲಿರುವ ಸಾಧ್ಯತೆಗಳಿರುವುದರಿಂದ ಸ್ಮಶಾನದಲ್ಲಿ ಆದಷ್ಟು ಕಡಿಮೆ ಜನರಿರಬೇಕು ಮತ್ತು ಪರಸ್ಪರ ಅಂತರವನ್ನು ಕಾಯಬೇಕು.

ಅಂತಿಮ ಕ್ರಿಯೆಗಳಲ್ಲಿ ಭಾಗಿಗಳಾದವರೆಲ್ಲರೂ ತಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.

ಮೃತದೇಹವನ್ನು ಚಿತೆಯಲ್ಲಿರಿಸುವಾಗ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮೃತ ದೇಹವನ್ನು ಹೂಳುವ ಸಂದರ್ಭದಲ್ಲಿ ಅದಕ್ಕೆ ಸಾಮಾನ್ಯವಾಗಿ ಅನುಸರಿಸುವ ಕ್ರಮಗಳನ್ನೇ ಅನುಸರಿಸಬಹುದು.

ಮತ್ತು ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು; ಹೆಚ್ಚು ಆಳಕ್ಕೆ ಹೂಳಬೇಕೆಂಬ ಅಥವಾ ಇತರ ಯಾವುದೇ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂಬ ಯಾವುದೇ ಸಲಹೆಗಳನ್ನು ಎರಡು ಮಾರ್ಗಸೂಚಿಗಳಲ್ಲೂ ನೀಡಿಲ್ಲ.

ಚಿತಾಗಾರದಿಂದ ಚಿತಾ ಭಸ್ಮವನ್ನು ಸಂಗ್ರಹಿಸುವುದಕ್ಕೆ ಮತ್ತು ಅದರ ವಿಸರ್ಜನೆ ಇತ್ಯಾದಿ ಅಂತಿಮ ಕ್ರಿಯೆಗಳಿಗೆ ಯಾವ ವಿಶೇಷ ಸೂಚನೆಯೂ ಇಲ್ಲ.

ಮೃತರು ಬಳಸಿದ್ದ ಬಟ್ಟೆಗಳನ್ನು ಅಥವಾ ವಸ್ತುಗಳನ್ನು ಎಸೆಯುವ ಅಥವಾ ಸುಟ್ಟುಹಾಕುವ ಅಗತ್ಯವಿಲ್ಲ.

ಅವನ್ನು ಬಿಸಿನೀರಿನಲ್ಲಿ ಸೋಪಿನೊಂದಿಗೆ ಶುಚಿಗೊಳಿಸಬಹುದು ಅಥವಾ 70% ಇಥನಾಲ್ ಯಾ 1% ಹೈಪೊಕ್ಲೋರೈಟ್ ದ್ರಾವಣದಿಂದ ಶುದ್ಧೀಕರಿಸಬಹುದು.

ಒಟ್ಟಿನಲ್ಲಿ, ಕೊರೊನಾ ಸೋಂಕಿನಿಂದ ಮೃತರಾದವರ ಅಂತಿಮ ವಿಧಿಗಳನ್ನು ನೆರವೇರಿಸುವಾಗ ಯಾವುದೇ ಭಯ ಅಥವಾ ಆತಂಕಗಳಿಗೆ ಒಳಗಾಗಬೇಕಾದ ಅಗತ್ಯವಿಲ್ಲ.

ಸಾಮಾನ್ಯವಾದ, ಸರಳವಾದ, ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಮೃತರ ಕುಟುಂಬಗಳ ಸಂಪ್ರದಾಯಗಳಿಗನುಗುಣವಾಗಿ ಗೌರವಯುತವಾದ ಅಂತ್ಯ ಸಂಸ್ಕಾರವನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಗಳಾಗಬಾರದು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉದ್ಯಮಿಯನ್ನು ‘ಹನಿಟ್ರ್ಯಾಪ್’ ಮಾಡಲು ಹೋಗಿ ತಗಲಾಕ್ಕೊಂಡ ನರ್ಸ್ & ಗ್ಯಾಂಗ್

Published

on

ಮಂಗಳೂರು/ದಾವಣಗೆರೆ : ಖಾಸಗಿ ಆಸ್ಪತ್ರೆ ನರ್ಸ್​​ ಒಬ್ಬಳು ಕಷ್ಟ ಎಂದು ಹೇಳಿಕೊಂಡು ಬಂದು ಉದ್ಯಮಿಗೆ ಗಾಳ ಹಾಕಿದ್ದಳು. ಆದರೆ, ಹಾಳು ಬುದ್ದಿ  ತೋರಿಸಿ ಇದೀಗ ಜೈಲು ಪಾಲಾಗಿದ್ದಾಳೆ. ಈ ಘಟನೆ ನಡೆದಿರೋದು ದಾವಣಗೆರೆಯಲ್ಲಿ.

ಸುಶ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಚಯ…ಸಲುಗೆ…ಹನಿಟ್ರ್ಯಾಪ್ :

ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಶ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು, ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಬಳಿಕ ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಸುಶ್ಮಿತಾ ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭುರನ್ನು ಅಪಾರ್ಟ್ಮೆಂಟ್‌ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಸುಶ್ಮಿತಾ ಹಾಗೂ ಪ್ರಭು ಒಟ್ಟಿಗೆ ಇದ್ದ ವೀಡಿಯೋವನ್ನು ಇತರ ಆರೋಪಿಗಳು ಮಾಡಿಕೊಂಡಿದ್ದರು. ಬಳಿಕ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ರೂಮಿಗೆ ನುಗ್ಗಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿ  25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಕೊಂಡಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆರೋಪಿಗಳ ಬೆ*ದರಿಕೆಗೆ ಬೇಸತ್ತು ಠಾಣೆಗೆ ಪ್ರಭು ದೂರು ನೀಡಿದ್ದು,  ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading

LATEST NEWS

ರಿಪ್ಪನ್‌ ಪೇಟೆ ಬಳಿ ಬೀಕರ ಅಗ್ನಿ ಅವಘಡ, ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಕಾರು

Published

on

ಶಿವಮೊಗ್ಗ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಬಳಿ ಶನಿವಾರ ತಡರಾತ್ರಿ ನಡೆದಿದೆ.


ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ಮದುವೆ ಕಾರ್ಯದ ನಿಮಿತ್ತವಾಗಿ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಕಾರಿನ ಎಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಮಲಗಿದ್ದಲ್ಲೇ ಆರೋಗ್ಯ ಇಲಾಖೆ ನೌಕರ ಹೃದಯಾ*ಘಾತಕ್ಕೆ ಬ*ಲಿ

ಚಾಲಕ ಶ್ರೀಕಾಂತ್ ಮತ್ತು ಮತ್ತೊಬ್ಬ ಪ್ರಯಾಣಿಕ ಗಂಗಾಧರ ಗೌಡ ಅವರು ಹೊಗೆ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ರಸ್ತೆ ಮಧ್ಯೆಯೇ ಧಗಧಗನೆ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.

Continue Reading

FILM

‘ನಮ್ಮನ್ನ ಯಾಕೆ ಮದುವೆಗೆ ಕರೆದಿಲ್ಲ?’: ವಿಜಯ್-ರಶ್ಮಿಕಾ ವಿರುದ್ಧ ಮುನಿಸಿಕೊಂಡ ಪುಟ್ಟ ಅಭಿಮಾನಿ!

Published

on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಉದಯಪುರದಲ್ಲಿ ವಿವಾಹವಾದರು. ಈ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಪುಟ್ಟ ಅಭಿಮಾನಿಯೊಬ್ಬರು ಕೋಪದಿಂದ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆ ಪುಟ್ಟ ಬಾಲಕಿ ವಿಡಿಯೋದಲ್ಲಿ, “ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ.
ಈ ವಿಡಿಯೋಗೆ ವಿಜಯ್ ಅವರು ತುಂಬಾ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಬುಜ್ಜಿ ತಲ್ಲಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳನ್ನು ಹೇಳು, ಮನೆಯಲ್ಲಿ ಎಲ್ಲವನ್ನೂ ಮಾಡಿಸಿ ಒಟ್ಟಿಗೆ ತಿನ್ನೋಣ” ಎಂದು ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಕೂಡ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಬಾಲಕಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್!

ಈ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನಗಳಲ್ಲಿ ಸಿಹಿತಿಂಡಿ ಹಂಚುವ ಮೂಲಕ ಮತ್ತು ಅಭಿಮಾನಿಗಳೊಂದಿಗೆ ವಿಶೇಷ ಊಟ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page