ಬೆಂಗಳೂರು: ಭಾನುವಾರ ಸಂಜೆಯಿಂದ ಸುರಿಯಲಾರಂಭಿಸಿದ ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಕೃತಕ ನೆರೆ ಮತ್ತೆ ಸೃಷ್ಟಿಯಾಗಿದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧದ ಕ್ಯಾಂಟೀನ್‌ಗೆ ಮಳೆ ನೀರು ನುಗ್ಗಿದೆ.
ಭಾನುವಾರ ರಾತ್ರಿ ಪೂರ್ತಿ ಮಳೆ ಸುರಿದಿದ್ದು, ಜನ ಕಂಗೆಟ್ಟಿದ್ದಾರೆ. ನಗರದ ಹಲವು ಕಡೆಗಳಲ್ಲಿ ಮಳೆಯಿಂದಾಗಿ ಭಾರೀ ಅವಾಂತರವಾಗಿದೆ.

ಇಂದಿರಾ ನಗರ, ಸರ್ಜಾಪುರ ರಸ್ತೆಯಲ್ಲಿರುವ ರೈಬೋ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಜನಸಾಮಾನ್ಯರು ಪರದಾಡುತ್ತಿದ್ದಾರೆ.
ಇನ್ನು ಮಳೆಯಿಂದಾಗಿ ಮಾರತಹಳ್ಳಿ – ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲೂ ಟ್ರಾಫಿಕ್ ಜಾಂ ಉಂಟಾಗಿದೆ. ರಸ್ತೆಯಲ್ಲೇ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುತ್ತಿದ್ದು, ಬೆಂಗಳೂರು ತಮಕೂರು ರಸ್ತೆಯಲ್ಲೂ ಇದೇ ರೀತಿಯಲ್ಲಿ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ನಗರದ ಹಲವು ಕಡೆಗಳಲ್ಲಿ ಅಪಾರ್ಟ್ಮೆಂಟ್‌ಗಳಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರುಗಳು ಮಳೆ ನೀರಿನಿಂದ ಮುಳುಗಡೆಯಾದ ದೃಶ್ಯಗಳು ಕಂಡುಬರುತ್ತಿವೆ.
ಸರ್ಜಾಪುರ ರಸ್ತೆಯ ಗ್ರೀನ್ ವುಡ್ ಅಪಾರ್ಟ್ಮೆಂಟ್ ನಲ್ಲಿ ಕಾರುಗಳು ಮುಳುಗಡೆಯಾಗಿದ್ದನ್ನು ಅಲ್ಲಿನ ನಿವಾಸಿಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಹಲವು ಅಪಾರ್ಟ್ಮೆಂಟ್‌ಗಳಲ್ಲಿ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಮನೆಯಿಂದ ಹೊರ ಬರಲು ಸಾಧ್ಯವಾಗದೆ ಪರದಾಟ ನಡೆಸುತ್ತಿದ್ದಾರೆ.
ಶಾಂತಿನಗರದ ಬಿಎಂಟಿಸಿ ಡಿಪೋ ಒಳಗಡೆ ನೀರು ನಿಂತಿದ್ದು ಕೆರೆಯಂತಾಗಿದೆ. ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮವಾಗಿ ಕಾರುಗಳು ಮುಳುಗಿದ್ದು, ರಸ್ತೆ, ಬಡವಾಣೆ ಜಲಾವೃತಗೊಂಡಿವೆ. ರಾಜ್ಯದ 18 ಜಿಲ್ಲೆಗಳಿಗೆ ಇಂದು ಮಳೆಯ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ, ಕೊಪ್ಪಳ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಇಂದು ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿ ರಾಜಕಾಲುವೆ ಮತ್ತು ಇತರ ಮಳೆ ನೀರು ಹರಿಯುವ ಚರಂಡಿಗಳ ಒತ್ತುವರಿಯಾಗಿರುವುದೇ ಮಳೆ ಅನಾಹುತಕ್ಕೆ ಮುಖ್ಯ ಕಾರಣ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ಬಿಬಿಎಂಪಿ ಅನುಸರಿಸಿದ ನಿಧಾನ ಕ್ರಮಗಳಿಂದಲೇ ಬೆಂಗಳೂರು ಜಲಾವೃತಗೊಂಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.