Connect with us

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ…

Published

on

ದ.ಕ-ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ…

ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಮಳೆಯ ರಭಸ ಹೆಚ್ಚಾಗುತ್ತಿದೆ.

ಘಟ್ಟ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಭೀತಿಯೂ ಎದುರಾಗಿದೆ.

ಕಳೆದ ಬಾರಿಯ ಮಳೆಯು ದಕ್ಷಿಣ ಕನ್ನಡ ಜಿಲ್ಲೆಯನ್ನು ಅಲ್ಲೋಲಕಲ್ಲೋಲ ಮಾಡಿದ್ದು, ಈ ಬಾರಿಯ ಮಳೆಯ ಲಕ್ಷಣವೂ ಕಳೆದ ವರ್ಷದ ಮಳೆಯಂತೆಯೇ ಇರುವ ಹಿನ್ನಲೆಯಲ್ಲಿ ಘಟ್ಟದ ಪ್ರದೇಶದ ಅಂಚಿನಲ್ಲಿರುವ ಜನರಲ್ಲಿ ಆತಂಕ ಮನೆ ಮಾಡಲಾರಂಭಿಸಿದೆ.

ಮಳೆಯ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಕಾರ್ಮೋಡ ಕವಿದ ವಾತಾವರಣವಿದೆ. ಇಂದು ಕೂಡ ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಕರಾವಳಿಯಲ್ಲಿ ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು’ ಎಂದು ಎಚ್ಚರಿಸಿದ್ದಾರೆ.

ಇನ್ನು ಉಡುಪಿಯಲ್ಲೂ ಕೂಡ ದಾರಾಕಾರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಹಲವೆಡೆ ಸಣ್ಣ ಪ್ರಮಾಣದ ನೆರೆ ಉಂಟಾಗಿದೆ.

ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ.

ನಿನ್ನೆ ರಾತ್ರಿಯಿಂದ ಒಂದೇ ಸಮನೆ ಮಳೆಯಾಗುತ್ತಿದ್ದು ತಗ್ಗುಪ್ರದೇಶಗಳಲ್ಲಿ ನೀರು ಜಮೆಯಾಗುತ್ತಿದೆ. ನದೀಪಾತ್ರದ ಜನರು ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕಾರ್ಕಳ, ಬ್ರಹ್ಮಾವರ, ಬೈಂದೂರು ಮತ್ತು ಕೊಲ್ಲೂರು ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ.

ರಾತ್ರಿಯಿಡಿ ಸುರಿಯುವ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ಕೃತಕ ನೆರೆ ಹಾವಳಿ ಉಂಟಾಗಿದೆ. ಇನ್ನು ಭಾರೀ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ.

ರುದ್ರು ಕೊಟ್ಟಾರಿ ಎಂಬವರ ಮನೆಗೆ ಭಾಗಶಃ ಹಾನಿಯಾಗಿದ್ದು, 40 ಸಾವಿರ ರೂಪಾಯಿ ನಷ್ಟ ಅಂದಾಜಿಸಲಾಗಿದೆ.

ಇನ್ನು ನಂದಿನಿ ನಂದಿಯೂ ತುಂಬಿ ಹರಿಯುತಿದ್ದು, ಅತ್ತೂರು ಬೈಲು ಮಹಾಗಣಪತಿ ಮಂದಿರಕ್ಕೆ ಸಂಚರಿಸುವ ರಸ್ತೆ ಮುಳುಗಡೆಯಾಗಿದೆ.

ನಡುಗೋಡು ಕಿಲೆಂಜೂರು, ಮಿತ್ತಬೈಲ್ ಮತ್ತಿತರರ ಪ್ರದೇಶಗಳ ಕೃಷಿ ಭೂಮಿ ಜಲಾವೃತಗೊಂಡಿದೆ, ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು ನೆರೆಯಿಂದಾಗಿ ಕೃಷಿ ಚಟುವಟಿಕೆಗಳನ್ನು ಮೊಟಕುಗೊಳಿಸಲಾಗಿದೆ.

ಪ್ರತೀ ವರ್ಷ ನಾಟಿ ಕಾರ್ಯಕ್ಕೆ ಉತ್ತರ ಕರ್ನಾಟಕದ ಕಾರ್ಮಿಕರು ಬರುತ್ತಿದ್ದು, ಈ ಬಾರಿ ಕೊರೊನಾದಿಂದಾಗಿ ಉತ್ತರ ಕರ್ನಾಟಕದ ಬೆರಳೆಣಿಕೆ ಕಾರ್ಮಿಕರು ಬಂದಿದ್ದು ನಾಟಿ ಕಾರ್ಯಕ್ಕೆ ಸಮಸ್ಯೆಯಾಗಿದೆ.

ಮಾತ್ರವಲ್ಲದೆ, ನಿಧಾನಗತಿಯಲ್ಲಿ ನಾಟಿ ಕಾರ್ಯ ನಡೆಯುತ್ತಿದೆ, ಇದೀಗ ನೆರೆಯಿಂದಾಗಿ ರೈತರು ಮತ್ತೆ ಸಮಸ್ಯೆಗೊಳಗಾಗಿದ್ದಾರೆ.

ಇನ್ನು ‘ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜು.4ರಿಂದ 7ರ ವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉದ್ಯಮಿಯನ್ನು ‘ಹನಿಟ್ರ್ಯಾಪ್’ ಮಾಡಲು ಹೋಗಿ ತಗಲಾಕ್ಕೊಂಡ ನರ್ಸ್ & ಗ್ಯಾಂಗ್

Published

on

ಮಂಗಳೂರು/ದಾವಣಗೆರೆ : ಖಾಸಗಿ ಆಸ್ಪತ್ರೆ ನರ್ಸ್​​ ಒಬ್ಬಳು ಕಷ್ಟ ಎಂದು ಹೇಳಿಕೊಂಡು ಬಂದು ಉದ್ಯಮಿಗೆ ಗಾಳ ಹಾಕಿದ್ದಳು. ಆದರೆ, ಹಾಳು ಬುದ್ದಿ  ತೋರಿಸಿ ಇದೀಗ ಜೈಲು ಪಾಲಾಗಿದ್ದಾಳೆ. ಈ ಘಟನೆ ನಡೆದಿರೋದು ದಾವಣಗೆರೆಯಲ್ಲಿ.

ಸುಶ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಚಯ…ಸಲುಗೆ…ಹನಿಟ್ರ್ಯಾಪ್ :

ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಶ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು, ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಬಳಿಕ ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಸುಶ್ಮಿತಾ ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭುರನ್ನು ಅಪಾರ್ಟ್ಮೆಂಟ್‌ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್‌ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಸುಶ್ಮಿತಾ ಹಾಗೂ ಪ್ರಭು ಒಟ್ಟಿಗೆ ಇದ್ದ ವೀಡಿಯೋವನ್ನು ಇತರ ಆರೋಪಿಗಳು ಮಾಡಿಕೊಂಡಿದ್ದರು. ಬಳಿಕ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ರೂಮಿಗೆ ನುಗ್ಗಿ, ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿ  25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಕೊಂಡಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆರೋಪಿಗಳ ಬೆ*ದರಿಕೆಗೆ ಬೇಸತ್ತು ಠಾಣೆಗೆ ಪ್ರಭು ದೂರು ನೀಡಿದ್ದು,  ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading

LATEST NEWS

ರಿಪ್ಪನ್‌ ಪೇಟೆ ಬಳಿ ಬೀಕರ ಅಗ್ನಿ ಅವಘಡ, ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾದ ಕಾರು

Published

on

ಶಿವಮೊಗ್ಗ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಬಳಿ ಶನಿವಾರ ತಡರಾತ್ರಿ ನಡೆದಿದೆ.


ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ಮದುವೆ ಕಾರ್ಯದ ನಿಮಿತ್ತವಾಗಿ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಕಾರಿನ ಎಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಮಲಗಿದ್ದಲ್ಲೇ ಆರೋಗ್ಯ ಇಲಾಖೆ ನೌಕರ ಹೃದಯಾ*ಘಾತಕ್ಕೆ ಬ*ಲಿ

ಚಾಲಕ ಶ್ರೀಕಾಂತ್ ಮತ್ತು ಮತ್ತೊಬ್ಬ ಪ್ರಯಾಣಿಕ ಗಂಗಾಧರ ಗೌಡ ಅವರು ಹೊಗೆ ಕಾಣಿಸಿಕೊಂಡ ತಕ್ಷಣ ಕಾರಿನಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ರಸ್ತೆ ಮಧ್ಯೆಯೇ ಧಗಧಗನೆ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.

Continue Reading

FILM

‘ನಮ್ಮನ್ನ ಯಾಕೆ ಮದುವೆಗೆ ಕರೆದಿಲ್ಲ?’: ವಿಜಯ್-ರಶ್ಮಿಕಾ ವಿರುದ್ಧ ಮುನಿಸಿಕೊಂಡ ಪುಟ್ಟ ಅಭಿಮಾನಿ!

Published

on

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಉದಯಪುರದಲ್ಲಿ ವಿವಾಹವಾದರು. ಈ ಮದುವೆಗೆ ತನ್ನನ್ನು ಕರೆದಿಲ್ಲ ಎಂದು ಪುಟ್ಟ ಅಭಿಮಾನಿಯೊಬ್ಬರು ಕೋಪದಿಂದ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆ ಪುಟ್ಟ ಬಾಲಕಿ ವಿಡಿಯೋದಲ್ಲಿ, “ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ನಮ್ಮನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ.
ಈ ವಿಡಿಯೋಗೆ ವಿಜಯ್ ಅವರು ತುಂಬಾ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. “ಬುಜ್ಜಿ ತಲ್ಲಿ.. ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮತ್ತು ಸಿಹಿತಿಂಡಿಗಳನ್ನು ಹೇಳು, ಮನೆಯಲ್ಲಿ ಎಲ್ಲವನ್ನೂ ಮಾಡಿಸಿ ಒಟ್ಟಿಗೆ ತಿನ್ನೋಣ” ಎಂದು ಕಮೆಂಟ್ ಮಾಡಿದ್ದಾರೆ.

ನಟಿ ರಶ್ಮಿಕಾ ಕೂಡ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಆ ಬಾಲಕಿಗೆ ವಿಶೇಷ ಉಡುಗೊರೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್!

ಈ ದಂಪತಿಗಳು ತಮ್ಮ ಮದುವೆಯ ನಂತರ ದೇವಸ್ಥಾನಗಳಲ್ಲಿ ಸಿಹಿತಿಂಡಿ ಹಂಚುವ ಮೂಲಕ ಮತ್ತು ಅಭಿಮಾನಿಗಳೊಂದಿಗೆ ವಿಶೇಷ ಊಟ ಮಾಡುವ ಮೂಲಕ ಸಂಭ್ರಮವನ್ನು ಆಚರಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page