ಉಡುಪಿ: ಸುತ್ತಲೂ ಆವರಣ ಗೋಡೆ , ಗಮನ ಸೆಳೆಯುವ ಗೋಡೆ ಬರಹ, ಕಾರ್ಟೂನ್ ಚಿತ್ರಗಳು. ಕೊಠಡಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಶಿಸ್ತಿನಿಂದ ಕುಳಿತು ನಿಷ್ಕಲ್ಮಶ ಮನಸ್ಸಿನಿಂದ ಗುರುಗಳ ಮಾತುಗಳನ್ನು ಆಲಿಸುತ್ತಿರುವಂತಹ ಪುಟ್ಟ ಪುಟ್ಟ ಮಕ್ಕಳು. ಇದೆಲ್ಲವೂ ನಾವೂ ನೀವೂ ಊಹಿಸುವಂತಹ ಪ್ಲೇ ಸ್ಕೂಲ್‌ನ ಚಿತ್ರಣವಲ್ಲ.

ಬದಲಾಗಿ ಪ್ರೀತಿಯಿಂದ ಅಕ್ಷರಭ್ಯಾಸ, ಪದ್ಯ, ಡ್ಯಾನ್ಸ್, ಹೇಳಿ ಕೊಡುತ್ತಿರುವ ಗುರುಗಳು ಕಂಡುಬಂದದ್ದು ಉಡುಪಿ ಕಾಪುವಿನ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲುವಿನಲ್ಲಿರುವಂತಹ ಮನೆಯ ವಾತಾವರಣ ಅನುಭವವನ್ನು ಕಟ್ಟಿಕೊಡುವಂತಹ ಹೈಟೆಕ್ ಸ್ಪರ್ಶ ನೀಡಲಾದ ಒಂದು ಅಂಗನವಾಡಿ ಶಾಲೆ.

ದಿ| ಅಚ್ಯುತ ಕಾಮತ್ ಅವರು ಗ್ರಾ.ಪಂ.ಗೆ ದಾನವಾಗಿ ನೀಡಿದ 6 ಸೆಂಟ್ಸ್ ಜಾಗದಲ್ಲಿ ತೀರಾ ದುಸ್ಥಿತಿಯ 35 ವರ್ಷದ ಹಳೆಯ ಕಟ್ಟಡದಲ್ಲಿ ಈ ಕೇಂದ್ರವು ಕಾರ್ಯ ನಿರ್ವಹಿಸುತ್ತಿತ್ತು. ಅಪಾಯಕಾರಿ ಸ್ಥಿತಿಯಲ್ಲಿದ್ದ ಅಂಗನವಾಡಿಗೆ ಹೊಸ ಸ್ಪರ್ಶವನ್ನು ನೀಡಲಾಗಿದೆ.

ಇಲ್ಲಿನ ಗ್ರಾಮಪಂಚಾಯತ್‌ಗೆ ದಾನಿಯೊಬ್ಬರು ಜಾಗವನ್ನು ದಾನವಾಗಿ ಕೊಟ್ಟಿದ್ದರು. ಅದೇ ಜಾಗದಲ್ಲಿ ಅಂಗನವಾಡಿಯ ಕಟ್ಟಡವೊಂದು ನಿರ್ಮಾಣ ಮಾಡಲಾಗಿತ್ತು.

ಬರೋಬ್ಬರಿ 35 ವರ್ಷ ಕಾಲ ಅದೇ ಜಾಗದಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಶಾಲೆ ಬಳಿಕ ಶಿಥಿಲಾವ್ಯಸ್ಥೆಗೆ ತಲುಪಿ ಮಕ್ಕಳ ಜೀವಕ್ಕೆ ಅಪಾಯವಾಗುವಂತಹ ಸಾಧ್ಯತೆ ಇತ್ತು.

ಇದನ್ನು ಗಮನಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಆರ್.ಪಾಟ್ಕರ್ ಅವರು ಮಹಿಳಾ , ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಸುಮಾರು 20.5 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿಯನ್ನು ನಿರ್ಮಾಣ ಮಾಡಿಸಿ ಆಧುನಿಕ ಸ್ಪರ್ಶ ಕೊಡಲು ಕಾರಣರಾಗಿದ್ದಾರೆ.

ಈ ಅಂಗನವಾಡಿಯಲ್ಲಿ ಪುಟಾಣಿಗಳಿಗಾಗಿ ಪ್ರತ್ಯೇಕ ಜಾರುಬಂಡಿ, ವಾಟರ್ ಪ್ಯೂರಿಫೈಯರ್, ಸೋಫಾ, ಚಪ್ಪಲ್ ಸ್ಟಾಂಡ್, ಬ್ಯಾಗ್ ಸ್ಟಾಂಡ್, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್ ಮತ್ತು ಕುರ್ಚಿ ಸೇರಿದಂತೆ ಅನೇಕ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದ್ದು, ಮಾದರಿ ಅಂಗನವಾಡಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮಾತ್ರವಲ್ಲ ಖಾಸಗಿ ಪ್ಲೇ ಸ್ಕೂಲ್ ಗಳ ಭರಾಟೆ ಮಧ್ಯೆ, ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಹೈಟೇಕ್ ಆಗಿ ಕಂಗೊಳಿಸುತ್ತಿದೆ.

ಸಂಘ ಸಂಸ್ಥೆಗಳಾದ ಬಂಟಕಲ್ಲು ನಾಗರಿಕ ಸೇವಾ ಸಮಿತಿ, ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ, ಲಯನ್ಸ್ ಕ್ಲಬ್ ಬಂಟಕಲ್ಲು -ಬಿಸಿ ರೋಡ್, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್, ಲಯನ್ಸ್ ಕ್ಲಬ್ ಉಡುಪಿ-ಕರಾವಳಿ, ರೋಟರಿ ಕ್ಲಬ್ ಶಿರ್ವ, ಸ್ತ್ರೀಶಕ್ತಿ ಸಂಘ ಮತ್ತು ಇತರ ದಾನಿಗಳು ಸಹಕರಿಸಿದ್ದರಿಂದಲೇ ಈ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ ಎನ್ನಬಹುದು.
ಕೇಬಲ್ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾಟೂನ್ ನೆಟ್‌ವರ್ಕ್ ನೋಡುವ ಅವಕಾಶ ಕಲ್ಪಿಸಲಾಗಿದೆ. ಪುಟಾಣಿಗಳಿಗಾಗಿ ನೆರಳಿರುವ ಪ್ರತ್ಯೇಕ ಜಾರುಬಂಡಿ, ಸುಮಾರು 800 ಚ.ಅಡಿ ಚಪ್ಪರ, 1000 ಚ.ಅಡಿಯ ಇಂಟರ್‌ಲಾಕ್, ಮಕ್ಕಳ ಹೆತ್ತವರಿಗಾಗಿ ವಿರಮಿಸಲು ಕಾಂಕ್ರೀಟ್ ಬೆಂಚುಗಳು,
ಎರಡು ಶೌಚಾಲಯ, 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ವಾಟರ್ ಪ್ಯೂರಿಫೈಯರ್, ಸೋಫಾ, ಚಪ್ಪಲ್ ಸ್ಟಾಂಡ್, ಬ್ಯಾಗ್ ಸ್ಟಾಂಡ್, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್ ಮತ್ತು ಕುರ್ಚಿ ಹಾಗೂ ಆವರಣದಲ್ಲಿ ಸೋಲಾರ್‌ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾನೈಟ್ ಹೊದಿಕೆಯ ಅಡುಗೆ ಕೋಣೆಯೊಂದಿಗೆ ಗ್ರೈಂಡರ್ ಮತ್ತು ಗ್ಯಾಸ್ ಸ್ಟೌ ಸೌಲಭ್ಯ ಕಲ್ಪಿಸಲಾಗಿದೆ. ಪೌಷ್ಟಿಕ ಆಹಾರ ತೋಟ ರಚನೆಯೊಂದಿಗೆ ಅಲಂಕಾರಿಕ ಗಿಡಗಳನ್ನು ಕೂಡಾ ಈ ಬಾಲಭವನದ ಸುತ್ತಮುತ್ತ ನೆಡಲಾಗಿದೆ.

ಪ್ರಸ್ತುತ ಕೇಂದ್ರದಲ್ಲಿ 30 ಮಕ್ಕಳಿದ್ದು, ಅಂಗನವಾಡಿ ಕಾರ್ಯಕರ್ತೆಯಾಗಿ ವಿನಯಾ ಹರೀಶ್ ಕುಂದರ್, ಸಹಾಯಕಿ ಸಂಧ್ಯಾ ಆಚಾರ್ಯ ಮತ್ತು ಮೇಲ್ವಿಚಾರಕಿಯಾಗಿ ಶೈಲಾ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಗನವಾಡಿಯ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಕ್ಕಳಿಗೆ ಉಣಬಡಿಸಲಾಗುತ್ತಿರುವುದು ವಿಶೇಷ.