ಉಳ್ಳಾಲದ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆ ಬೋಟು ದುರಂತ!ಇಬ್ಬರ ಶವ ಪತ್ತೆ ಉಳಿದವರ ಹುಡುಕಿಕೊಡಲು ಒತ್ತಾಯ
ಮಂಗಳೂರು:ಆಳ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ಹೆಸರಿನ ಮೀನುಗಾರಿಕಾ ಬೋಟು ಅಳಿವೆಬಾಗಿಲಿನಲ್ಲಿ ನೀರುಪಾಲಾಗಿ ಆರು ಜನರು ಕಣ್ಮರೆಯಾಗಿದ್ದರು. ಅದರಲ್ಲಿ ಇಬ್ಬರು ಮೀನುಗಾರರ ಮೃತದೇಹ ಪತ್ತೆಯಾಗಿದೆ.
ಈ ನಡುವೆ ಉಳಿದ ಮೀನುಗಾರರ ಮೃತದೇಹವನ್ನು ಪತ್ತೆ ಹಚ್ಚಿಕೊಡುವಂತೆ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಚರಣೆಗೆ ಎಲ್ಲಾ ನೆರವು ನೀಡುವಂತೆ ಸಾಮಾಜಿಕ ಮುಖಂಡ ಮುನೀಬ್ ಬೆಂಗ್ರೆ ಅವರು ಆಗ್ರಹಿಸಿದ್ದಾರೆ.
ಪ್ರಸ್ತುತ ಉಳಿದ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗುವವರೆಗೂ ಇಲ್ಲಿ ಮೀನುಗಾರಿಕೆಗೆ ಯಾವುದೇ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಬೆಂಗರೆ ನಾಗರಿಕರು ನಿನ್ನೆ ಮಧ್ಯರಾತ್ರಿ ದಿಢೀರ್ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಮೀನುಗಾರಿಕೆಗೆ ತೆರಳಿ ಇಂತಹ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಕರಾವಳಿ ರಕ್ಷಣಾ ಪಡೆ ಯಾವುದೇ ರೀತಿಯ ಶೋಧನೆಯನ್ನು ನಡೆಸದೆ , ಸ್ಥಳೀಯವಾಗಿ ಇತರ ಮೀನುಗಾರರು, ಮುಳುಗು ತಜ್ಞರು ಮಾಡಿದ ಕೆಲಸವನ್ನು ನಾವೇ ಮಾಡಿದ್ದು , ಎಂದು ಹೇಳಿಕೊಂಡು ಬರ್ತಾ ಇದ್ದಾರೆ.
ತಮ್ಮ ಜೀವದ ಹಂಗು ತೊರೆದು ಆಳ ಸಮುದ್ರದಲ್ಲಿ ಮೀನುಗಾರಿಕೆ ಗೆ ತೆರಳಿ ಮೀನು ಹಿಡಿದು ದಡ ಸೇರುತ್ತಾರೆ, ಇಲ್ಲಿ ಮೀನುಗಾರನಿಗೆ ಯಾವುದೇ ಸೌಲಭ್ಯ ಒದಗಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮೀನುಗಾರರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ, ಯಾವುದೇ ಬೇರೆ ಚಟುವಟಿಕೆ ನಡೆಯಲು ಬಿಡುವುದಿಲ್ಲ ಮೀನುಗಾರರು ಪತ್ತೆಯಾಗುವವರೆಗೂ ಪ್ರತಿಭಟನೆ ನಡೆಸುವುದಾಗಿ ನಗರ ಪಾಲಿಕೆ ಸದಸ್ಯ ಮುನೀಬ್ ಬೆಂಗರೆ ಎಚ್ಚರಿಸಿದ್ದಾರೆ.
ಇಂದು ನಸುಕಿನಿಂದಲೇ ಪೊಲೀಸರ ತಂಡ ಮತ್ತು ಮುಳುಗು ತಜ್ಞರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.
, ಕಾಂಗ್ರೆಸ್ ಮುಖಂಡ ಬಿಲಾಲ್ ಮೊಯ್ಯೂದ್ದೀನ್ ಹಾಗೂ ಸ್ಥಳೀಯ ನಾಯಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
Updates
ಮಂಗಳೂರು:
ಮೀನುಗಾರಿಕೆಗೆ ಹೋಗಿದ್ದ ಶ್ರೀ ರಕ್ಷಾ ಹೆಸರಿನ ಬೋಟು ಅಳಿವೆ ಬಾಗಿಲಿನಲ್ಲಿ ನೀರುಪಾಲಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇಂದು ನಸುಕಿನ ಜಾವ ಹುಡುಕಾಟ ಶುರು ಮಾಡಿದ ಮೀನುಗಾರಿಕಾ ತಂಡಕ್ಕೆ ಮೂರನೇ ಶವ ಪತ್ತೆಯಾಗಿದೆ.
ಸೋಮವಾರ ಸಂಜೆ ದುರಂತ ಸಂಭವಿಸಿದ ವೇಳೆ ಒಟ್ಟು 6 ಮಂದಿ ಕಣ್ಮರೆಯಾಗಿದ್ದರು. ಬೋಟ್ ಮುಳುಗಡೆಯಾದ ಜಾಗದ ಸ್ವಲ್ಪ ದೂರದಲ್ಲಿ ಬಲೆಯೊಳಗೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೃತ ಮೀನುಗಾರರನ್ನು ಅನ್ಸರ್ ಎಂದು ಖಚಿತ ಪಡಿಸಲಾಗಿದೆ. ಇವರು ಮಂಗಳೂರಿನ ಬೆಂಗ್ರೆ ನಿವಾಸಿ.
ತಣ್ಣೀರುಬಾವಿ ಮುಳುಗು ತಜ್ಞರ ತಂಡದಿಂದ ಕಾರ್ಯಾಚರಣೆ ನಡೆಸಿದಾಗ ಅನ್ಸಾರ್ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಬೊಕ್ಕಪಟ್ಣ ಪಾಂಡುರಂಗ ಸುವರ್ಣ ಮತ್ತು ಬೊಕ್ಕಪಟ್ಣ ಪ್ರೀತಂ ಅವರ ಮೃತದೇಹ ಪತ್ತೆಯಾಗಿತ್ತು.
ಅತ್ಯಂತ ಬಡ ಕುಟುಂಬದಿಂದ ಬಂದಿರುವ ಮುಹಮ್ಮದ್ ಅನ್ಸಾರ್ ಮೀನುಗಾರಿಕೆಯಲ್ಲಿ ತೊಡಗಿ ತಮ್ಮ ಜೀವನವನ್ನು ನಿರ್ವಹಣೆ ಮಾಡುತ್ತಿದ್ದರು.
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರಿಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ಮನೆಗೆ ಇವರು ಆಧಾರ ಸ್ಥಂಭವಾಗಿದ್ದರು.
ಇವರು ಈ ಹಿಂದೆ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕುಟುಂಬ ಸಲಹುವಷ್ಟು ವೇತನ ಸಿಗದ ಹಿನ್ನೆಲೆಯಲ್ಲಿ ಅವರು ಮೀನುಗಾರಿಕೆ ಕಾರ್ಮಿಕರಾಗಿ ದುಡಿಯುತ್ತಿದ್ದರು.
ಇವರನ್ನು ಕಳೆದುಕೊಂಡಿರುವ ಮನೆ ಮಂದಿಯ ರೋದನ ಮುಗಿಲು ಮುಟ್ಟಿದೆ. ಅನ್ಸಾರ್ ನಾಪತ್ತೆಯಾದ ವಿಚಾರ ಗೊತ್ತಾಗುತ್ತಿದ್ದಂತೆ ಅವರ ಪತ್ನಿ ಮೂರ್ಛೆ ಹೋಗಿದ್ದರು.
updates
ಮಂಗಳೂರು: ದುರಂತ ಸಂಭವಿಸಿದ ನಿನ್ನೆ ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಮತ್ತು ಪ್ರೀತಂ (25) ಎಂಬುವವರ ಮೃತದೇಹ ಪತ್ತೆಯಾಗಿತ್ತು.
ಸಮುದ್ರದ ಅಲೆಗಳ ಏರಿಳಿತ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತು ಸಂಜೆಯಾದ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಇದರಂತೆ ಇಂದು ಬೆಳಿಗ್ಗೆ ಪುನಃ ಕಾರ್ಯಾಚರಣೆ ಆರಂಭಿಸಿ ಮತ್ತಿಬ್ಬರ ಮೃಹದೇಹವನ್ನು ಮೇಲಕ್ಕೆತ್ತಿದ್ದಾರೆ. ಮತ್ತಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಪ್ರಸ್ತುತ ಪತ್ತೆಯಾಗಿರುವ ನಾಲ್ವರ ಮೃತದೇಹಗಳನ್ನು ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.