Connect with us

bangalore

ಜನರ ಜೇಬಿಗೆ ಬೀಳುತ್ತಾ ಕತ್ತರಿ ..? ಏ.1 ರಿಂದ ಮತ್ತೆ ಏರುತ್ತಾ ವಿದ್ಯುತ್ ದರ ..?

Published

on

ಬೆಂಗಳೂರು : ಬಸ್, ಮೆಟ್ರೊ ಪಯಾಣ ದರ ಏರಿಕೆ ಬೆನ್ನಲ್ಲೇ ರಾಜ್ಯ ಸರಕಾರ ವಿದ್ಯುತ್ ದರ ಹೆಚ್ಚಿಸಿ ಜನಜೀವನದ ಮೇಲೆ ಗದಾಪ್ರಹಾರ ನಡೆಸಿದೆ. ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಕೆಎಆರ್‌ಸಿ, ಜನಸಾಮಾನ್ಯರ ಸಂಕಷ್ಟ ಹೆಚ್ಚಿಸಿದ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೂ ಮೊದಲೇ ಪ್ರತಿ ಯೂನಿಟ್‌ ಗೆ 36 ಪೈಸೆ ಹೆಚ್ಚಿಸಿದ್ದು, ಪರಿಷ್ಕೃತ ದರ ಏ.1ರಿಂದ ಜಾರಿಗೆ ಬರಲಿದೆ.

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರಕಾರವು ಅಗತ್ಯ ಸೇವೆಗಳ ಬೆಲೆ ಒಂದೊಂದರಂತೆ ಏರಿಕೆ ಮಾಡುತ್ತಿದೆ. ಇತ್ತೀಚೆಗಷ್ಟೇ ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಮದ್ಯದ ದರ ಏರಿಕೆಯಾಗಿತ್ತು, ಈ ಬೆನ್ನಲ್ಲೇ ಇದೀಗ ಸರಕಾರವು ವಿದ್ಯುತ್ ದರ ಹೆಚ್ಚಳದ ಶಾಕ್ ಕೊಟ್ಟಿದೆ. ಅಷ್ಟು ಮಾತ್ರವಲ್ಲದೇ ಸದ್ಯದಲ್ಲೇ ನೀರು, ಹಾಲಿನ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಎಸ್ಕಾಂಗಳು ಮುಂದಿನ ಮೂರು ವರ್ಷಗಳಿಗೆ ವಿದ್ಯುತ್ ದರ ಪರಿಷ್ಕರಣೆ ಕೋರಿ ಪ್ರಸ್ತಾವ ಸಲ್ಲಿಸಿದ್ದು, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮಾರ್ಚ್ ಅಂತ್ಯಕ್ಕೆ ಮತ್ತೊಮ್ಮೆ ವಿದ್ಯುತ್ ದರ ಪರಿಷ್ಕರಿಸಲಿದೆ. ಈ ವೇಳೆ ಯೂನಿಟ್‌ಗೆ 10ರಿಂದ 15 ಪೈಸೆ ಹೆಚ್ಚಳವಾಗುವ ನಿರೀಕ್ಷೆಯಿದ್ದು ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.

ಈ ಹಿಂದೆ ಅಸ್ತಿತ್ವದಲ್ಲಿದ್ದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ (ಕೆಇಬಿ) ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಮೊತ್ತವನ್ನು 2002ರವರೆಗೆ ಇಂಧನ ಇಲಾಖೆಯೇ ಭರಿಸುತ್ತಿತ್ತು. ಆದರೆ, ಕೆಂಜಿ ರದ್ದುಗೊಳಿಸಿ ಕೆಪಿಟಿಸಿಎಲ್ ಹಾಗೂ 5 ವಿದ್ಯುತ್ ವಿತರಣಾ ಕಂಪನಿ (ಎಸ್ಕಾಂ)ಗಳನ್ನು ರಚಿಸಿದ ಸರಕಾರ, ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಾನೇ ಭರಿಸುವುದಾಗಿ ಹೇಳಿತ್ತು. ಬಳಿಕ ಭರವರಸೆ ಬದಲಿಸಿ, ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸರಕಾರದ ಪಾಲನ್ನು ಗ್ರಾಹಕರಿಂದಲೇ ಪಡೆಯುವಂತೆ ಕೆಇಆರ್ ಸಿಗೆ ಪ್ರಸ್ತಾವ ಸಲ್ಲಿಸಿತ್ತು. ಬಳಿಕ ಪ್ರಸ್ತಾವದ ಸಂಬಂಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆದು, ಹೈಕೋರ್ಟ್, ಸರಕಾರದ ಕೋರಿಕೆಯನ್ನು 2024ರ ಮಾರ್ಚ್‌ನಲ್ಲಿ ಎತ್ತಿ ಹಿಡಿದಿತ್ತು.

ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಹೈಕೋರ್ಟ್ ಆದೇಶ ಮುಂದಿಟ್ಟುಕೊಂಡು 2024ರ ನವರಂದು ಕೆಇಆರ್‌ಗೆ ಮತ್ತೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ಪುರಸ್ಕರಿಸಿರುವ ಕೆಇಆರ್.ಸಿ, ಸರಕಾರದ ಬದಲು ಗ್ರಾಹಕರಿಂದಲೇ ಹೆಚ್ಚುವರಿಯಾಗಿ ವಿದ್ಯುತ್ ಶುಲ್ಕದ ರೂಪದಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಹಣ ಹೊಂದಿಸಲು ವಿದ್ಯುತ್ ದರ ಏರಿಸಿದೆ. ಸರಕಾರ ಜನರ ಕಲ್ಯಾಣಕ್ಕಾಗಿ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿ 200 ಯೂನಿಟ್ ಈಗ ಉಚಿತವಾಗಿ ವಿದ್ಯುತ್ ಕೊಡುತ್ತಿದೆ. ಮತ್ತೊಂದೆಡೆ ನೌಕರರ ಪಿಂಚಣಿ, ಕೆಪಿಎಲ್ ಮತ್ತು ಎಸ್ಕಾಂಗಳ ನೌಕರರು ಸರಕಾರಿ ನೌಕರರೇ ಆಗಿದ್ದಾರೆ.

bangalore

ಗ್ರೀನ್ ಜರ್ಸಿ ತೊಟ್ಟ ಬೆಂಗಳೂರಿಗೆ ಸತತ 4ನೇ ಜಯ ..! ಅರ್ಧಶತಕ ಬಾರಿಸುವ ಮೂಲಕ ಕೊಹ್ಲಿ ದಾಖಲೆ ..!

Published

on

IPL 2025  :  ರಜತ್ ಪಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಈ ಸೀಸನ್​ನಲ್ಲಿ ನಾಲ್ಕನೇ ಗೆಲುವು ಸಾಧಿಸಿದೆ. ಈ ಎಲ್ಲಾ ನಾಲ್ಕು ಗೆಲುವುಗಳು ಇತರ ತಂಡಗಳ ವಿರುದ್ಧ ಅವರ ತವರಿನಲ್ಲಿ ಬಂದಿರುವುದು ವಿಶೇಷವಾಗಿದೆ. ನಿನ್ನೆ (ಏ.13) ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ತಂಡ 9 ವಿಕೆಟ್​ಗಳಿಂದ ಸೋತಿದೆ. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಅರ್ಧಶತಕಗಳ ಸಹಾಯದಿಂದ ಆರ್‌ಸಿಬಿ, ರಾಜಸ್ಥಾನ್ ರಾಯಲ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು.

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 173 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ 17.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 175 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಆರ್‌ಸಿಬಿ ಪರ ಸಾಲ್ಟ್ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಾಯದಿಂದ 65 ರನ್ ಗಳಿಸಿದರೆ, ಕೊಹ್ಲಿ 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 62 ರನ್ ಗಳಿಸಿ ಅಜೇಯರಾಗುಳಿದರು. ಇವರಲ್ಲದೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ದೇವದತ್ ಪಡಿಕ್ಕಲ್ 28 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಗಳಿಸಿದರು.

ವಿರಾಟ್ ಕೊಹ್ಲಿ ಅರ್ಧಶತಕ :

ರಾಜಸ್ಥಾನ ವಿರುದ್ಧ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ. ಇದಕ್ಕಾಗಿ ಅವರು 39 ಎಸೆತಗಳನ್ನು ಎದುರಿಸಿದರು. ಈ ಮೂಲಕ ಅವರು ಇತಿಹಾಸ ಸೃಷ್ಟಿಸಿದ್ದಾರೆ. ವಾಸ್ತವವಾಗಿ, ಇದು ಅವರ ಟಿ20 ವೃತ್ತಿಜೀವನದ 100ನೇ ಅರ್ಧಶತಕವಾಗಿದೆ.

Continue Reading

bangalore

ತವರಿನಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ ಕೆ.ಎಲ್.ರಾಹುಲ್ ..! ಆರ್‌ಸಿಬಿಗೆ ಭಾರೀ ಮುಖಭಂಗ ಮಾಡಿದ ಕನ್ನಡಿಗ ..!

Published

on

ಬೆಂಗಳೂರು : ತವರಿನಲ್ಲಿಯೇ ಆರ್‌ಸಿಬಿಗೆ ಭಾರೀ ಮುಖಭಂಗ ನಡೆದಿದೆ. ಅದೂ ಸಹ ಒಬ್ಬ ಕನ್ನಡಿಗನಿಂದ. ನಿನ್ನೆ (ಏ.11) ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು, ಆರ್​ಸಿಬಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಆರ್​ಸಿಬಿ ಪರ ಓಪನರ್ ಬ್ಯಾಟರ್ ಆಗಿ ಕ್ರೀಸ್​ಗೆ ಆಗಮಿಸಿದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಆದರೆ 7 ಓವರ್​ ಆಗುಷ್ಟರಲ್ಲಿ ಆರ್​ಸಿಬಿಯ ಚಿತ್ರಣವೇ ಬದಲಾಯಿತು. ಪ್ರಮುಖವಾದ 3 ವಿಕೆಟ್​ಗಳು ಉರುಳಿ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಗೂ ತವರಿನ ಪಿಚ್​ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಆರ್ಭಟದಿಂದ ರಾಯಲ್ ಚಾಲೆಂಜರ್ಸ್​ ಜೊತೆ ಡೆಲ್ಲಿ ಕ್ಯಾಪಿಟಲ್ಸ್​ 6 ವಿಕೆಟ್​ಗಳ ರೋಚಕ ಗೆಲವು ಪಡೆದಿದೆ. ಈ ಮೂಲಕ ಆರ್​ಸಿಬಿ ತನ್ನ ನೆಲದಲ್ಲಿಯೇ ಕನ್ನಡಿಗನಿಂದ ಭಾರೀ ಅವಮಾನಕ್ಕೆ ಒಳಗಾದಂತೆ ಆಗಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ 20 ಓವರ್​ನಲ್ಲಿ 7 ವಿಕೆಟ್​ಗೆ 164 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭವೇನೂ ಚೆನ್ನಾಗಿರಲಿಲ್ಲ. ಏಕೆಂದರೆ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಫಾಫ್​ಡುಪ್ಲಿಸ್ಸಿ 2, ಮೆಕ್‌ಗುರ್ಕ್ 7, ಪೊರೆಲ್ 7 ರನ್​ ಹೀಗೆ ಬ್ಯಾಕ್ ಟು ಬ್ಯಾಕ್​ ವಿಕೆಟ್​ ಉರುಳಿದವು. ಈ ವೇಳೆ ಡೆಲ್ಲಿಗೆ ನೆರವಾಗಿದ್ದು ಕನ್ನಡಿಗ ಕೆ.ಎಲ್ ರಾಹುಲ್​. ಕೊನೆವರೆಗೂ ಕ್ರೀಸ್​ ಕಚ್ಚಿಕೊಂಡು ರಾಹುಲ್ ಬ್ಯಾಟಿಂಗ್ ಮಾಡಿದರು. ಸೋಲುವ ಪಂದ್ಯವನ್ನು ರಾಹುಲ್ ಅವರೇ ಗೆಲ್ಲಿಸಿಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಕೆ.ಎಲ್​ ರಾಹುಲ್​ಗೆ ನಾಯಕ ಅಕ್ಷರ್ ಪಟೇಲ್ ಉತ್ತಮ ಸಾಥ್ ಕೊಟ್ಟರು. ಕೆ.ಎಲ್​ ರಾಹುಲ್ ಆರ್ಭಟದ ಬ್ಯಾಟಿಂಗ್​ನಿಂದ ಡೆಲ್ಲಿ ಕ್ಯಾಪಿಟಲ್ಸ್​ 17.5 ಓವರ್​​ಗಳಲ್ಲಿ 4 ವಿಕೆಟ್​ಗೆ 169 ರನ್​ಗಳನ್ನ ಗಳಿಸಿ ಅದ್ಭುತವಾದ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಇನ್ನೇನು ಸೋಲುತ್ತದೆ ಎಂದುಕೊಂಡಿದ್ದರು. ಆದರೆ ಪಂದ್ಯದಲ್ಲಿ ಮುಖ್ಯ ಪಾತ್ರ ವಹಿಸಿದ ಕೆ.ಎಲ್ ರಾಹುಲ್ ಗೆಲ್ಲುವವರೆಗೂ ಹೋರಾಡಿದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್​ ನಿನ್ನೆ (ಏ.10) ನಡೆದ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿ, 4 ರಲ್ಲೂ ಅಮೋಘವಾದ ಗೆಲುವು ಸಾಧಿಸಿ 8 ಅಂಕಗಳನ್ನು ಪಡೆದುಕೊಂಡಿದೆ.

Continue Reading

bangalore

13 ಲಕ್ಷ ಸಾಲಕ್ಕೆ 63 ಲಕ್ಷ ಬಡ್ಡಿ ಸುಲಿಗೆ: ಮೂವರು ಅರೆಸ್ಟ್ ..

Published

on

ಮಂಗಳೂರು/ಬೆಂಗಳೂರು: ಉದ್ಯಮಿಯೊಬ್ಬರು ಪಡೆದಿದ್ದ 13 ಲಕ್ಷ ರೂ. ಸಾಲಕ್ಕೆ ಬಡ್ಡಿ ರೂಪದಲ್ಲಿ 63 ಲಕ್ಷ ರೂ. ಪಡೆದು ಮತ್ತೂ ಹಣಕ್ಕೆ ಬೇಡಿಕೆ ಇರಿಸಿ ಕೊಲೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿರುವ ಆರೋಪದಡಿ ಮೂವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ದೀಪಕ್‌, ಜಯಕುಮಾರ್‌ ಹಾಗೂ ಬಾಬು ಬಂಧಿತ ಆರೋಪಿಗಳು.

ಅಸಲು ತೀರಿಸಿದ ಬಳಿಕವೂ ಹಣಕ್ಕೆ ಬೇಡಿಕೆ:

“ಬಂಧಿತ ಆರೋಪಿ ದೀಪಕ್‌ನಿಂದ ಪಡೆದಿದ್ದ 13 ಲಕ್ಷಕ್ಕೆ ಪ್ರತಿಯಾಗಿ ಒಟ್ಟು 63 ಲಕ್ಷ ನೀಡಿದ್ದೇನೆ. ಜಯಕುಮಾರ್‌ನಿಂದ ಪಡೆದಿದ್ದ 8 ಲಕ್ಷಕ್ಕೆ ಪ್ರತಿಯಾಗಿ ಒಟ್ಟು 6.40 ಲಕ್ಷ ನೀಡಿದ್ದೇನೆ. ಅವರು ಕೊಟ್ಟ ಹಣಕ್ಕೆ ದುಬಾರಿ ಬಡ್ಡಿ ಸಮೇತ ಹಣ ವಾಪಾಸ್ ನೀಡಿದ್ದರೂ ಸಹ ಆರೋಪಿಗಳು ಇನ್ನೂ ಅಸಲು ತೀರಿಲ್ಲ ಎಂದು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಪದೇ ಪದೇ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇವರ ಹಿಂಸೆಯಿಂದ ನಾಲ್ಕು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ. ಒಂದು ವರ್ಷದ ಮಗಳ ಮುಖ ನೋಡಿ ಆತ್ಮಹತ್ಯೆ ನಿರ್ಧಾರ ಕೈಬಿಟ್ಟಿದ್ದೇನೆ. ಹೀಗಾಗಿ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಉದ್ಯಮಿ ರವಿ ದೂರಿನಲ್ಲಿ ವಿವರಿಸಿದ್ದಾರೆ.

ಲಕ್ಕಸಂದ್ರ ನಿವಾಸಿ ಉದ್ಯಮಿ ಎಂ.ರವಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page