ಮಂಗಳೂರು: ಹೆಣ್ಮಕ್ಕಳಿಗೆ ರೇಷ್ಮೆ ಸೀರೆ ಅಂದರೆ ಭಾರೀ ಇಷ್ಟ. ಯಾವೂದೇ ಒಂದು ಶುಭ ಕಾರ್ಯಕ್ರಮಕ್ಕೆ ಹೋಗಬೇಕಾದರೆ ಹೆಣ್ಮಕ್ಕಳಿಗೆ ರೇಷ್ಮೆ ಸಾರಿ ಬೇಕೇ ಬೇಕು. ಅಮ್ಮನ ರೇಷ್ಮೆ ಸೀರೆಯನ್ನು ಕಂಡರಂತೂ ಎಲ್ಲಿಲ್ಲದ ಪ್ರೀತಿ. ರೇಷ್ಮೆ ಸೀರೆಯ ಬೆಲೆ ಜಾಸ್ತಿ ಆದರೂ ಹಣ ಹೊಂದಿಸಿಕೊಂಡು ಹೋಗಿ ಅದನ್ನು ಖರೀದಿ ಮಾಡುತ್ತಾರೆ. ಹಬ್ಬ, ಹರಿದಿನ, ಪೂಜೆ, ದೇವಸ್ಥಾನ, ಮದುವೆ ಹೀಗೆ ಯಾವೂದೇ ಸಮಾರಂಭಕ್ಕೆ ರೇಷ್ಮೆ ಸೀರೆ ಬೇಕೇ ಬೇಕು.

ಸಾಮಾನ್ಯವಾಗಿ ಮಹಿಳೆಯರ ರೇಷ್ಮೆ ಸೀರೆ ತುಂಬಾನೇ ದುಬಾರಿ ಇರುತ್ತೆ. ಯಾಕೆಂದರೆ ಇದನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಯವಾದ, ಮೃದುವಾದ ಸೀರೆಯನ್ನು ತಯಾರಿಸಬೇಕೆಂದರೆ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಈ ರೇಷ್ಮೆ ಸೀರೆಯನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ತಿಳಿಯೋಣ.
ರೇಷ್ಮೆ ಸೀರೆ ತಯಾರಿಸುವುದು ಹೇಗೆ ?
ರೇಷ್ಮೆ ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬ ಹೆಂಗಳೆಯರ ಬಳಿ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತದೆ. ಒಂದು ವೇಳೆ ಇಲ್ಲದಿದ್ದರೆ ಖರೀದಿಸಲೇ ಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.
ರೇಷ್ಮೆ ಸೀರೆಯನ್ನು ತಯಾರಿಸುವುದು ರೇಷ್ಮೆ ನೂಲಿನಿಂದ. ಒಂದು ಹೆಣ್ಣು ಹುಳು ಒಮ್ಮೆಗೆ 300-500 ಮೊಟ್ಟೆಗಳನ್ನು ಇಡುತ್ತದೆ. ಈ ಎಲ್ಲಾ ಮೊಟ್ಟೆಗಳನ್ನು ಒಂದೇ ಸ್ಥಳದಲ್ಲಿ ಇರಿಸಬೇಕಾಗುತ್ತದೆ. ಇದರಿಂದ ಲಾರ್ವಾಗಳು ಹೊರಹೊಮ್ಮುತ್ತವೆ. ಅದರ ಸಹಾಯದಿಂದ ರೇಷ್ಮೆ ನೂಲು ತಯಾರಿಸಿ ಸೀರೆ ಮಾಡಲಾಗುತ್ತದೆ.

ಮೊದಲಿಗೆ ರೇಷ್ಮೆ ಹುಳುವಿನ ಕೃಷಿ ಮಾಡಬೇಕು. ಈ ಕೃಷಿಗೆ ತುಂಬಾ ಕಷ್ಟಪಡಬೇಕಾಗುತ್ತದೆ. ಪರಿಶ್ರಮ ಹಾಕಿದರೆ ಇದು ಬಂಗಾರದ ಕೃಷಿ. ಇನ್ನು ಪ್ರತಿಯೊಂದು ರೇಷ್ಮೆ ಹುಳುವನ್ನು ಕೈಯಿಂದಲೇ ತೆಗೆದು ಅವುಗಳನ್ನು ಸಣ್ಣ ವಿಭಾಗಗಳಲ್ಲಿ ಚಂದ್ರಿಕೆಯಲ್ಲಿ ಇರಿಸಲಾಗುತ್ತದೆ. ಬಳಿಕ ಅವುಗಳ ಮೇಲೆ ಮಲ್ಬೆರಿ ಎಲೆಗಳನ್ನು ಹೊಂದಿಸಲಾಗುತ್ತೆ. ರೇಷ್ಮೆ ಹುಳುಗಳು ಈ ಎಲೆಗಳನ್ನು ತಿನ್ನುತ್ತವೆ. ಆಹಾರ ಸೇವನೆ ನಿಂತಾಗ, ಅವು ನೂಲನ್ನು ಬಿಡಲು ಆರಂಭಿಸುತ್ತದೆ.

ಈ ಸಂಪೂರ್ಣ ಪ್ರಕ್ರಿಯೆಯು 3ರಿಂದ 8 ದಿನಗಳನ್ನು ತೆಗೆದುಕೊಳ್ಳುತ್ತದೆ. ರೇಷ್ಮೆ ಹುಳು 100 ಮೀಟರ್ ಉದ್ದದ ರೇಷ್ಮೆಯ ಒಂದೇ ದಾರವನ್ನು ಮಾಡುತ್ತದೆ. ಈ ದಾರವು ಅವುಗಳ ಪಕ್ಕದಲ್ಲಿರುವ ನೈಸರ್ಗಿಕ ಅಂಟಿಗೆ ಅಂಟಿಕೊಂಡಿರುತ್ತದೆ. ಅರ್ಧ ಕಿಲೋ ರೇಷ್ಮೆ ಮಾಡಲು 2600 ರಿಂದ 3000 ರೇಷ್ಮೆ ಹುಳುಗಳ ಪರಿಶ್ರಮ ಇರುತ್ತದೆ. ಒಂದು ಸುಂದರವಾದ ಸೀರೆ ತಯಾರಾಗಲು ಸುಮಾರು 1700-2500 ರೇಷ್ಮೆ ಹುಳುಗಳು ಸಾಯುತ್ತವೆ.
ರೇಷ್ಮೆಗೆ ಬಣ್ಣ ಹಾಕೋದು ಹೇಗೆ?
ದಾರವನ್ನು ಬ್ಲೀಚಿಂಗ್ ಮಾಡಿದ ನಂತರ ಒಣಗಿಸಿ ನಂತರ ರೇಷ್ಮೆಗೆ ಬಣ್ಣ ಹಾಕಲಾಗುತ್ತೆ. ರೇಷ್ಮೆ ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ಬಣ್ಣವನ್ನು ಸಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಲವಾರು ದಿನಗಳವರೆಗೆ ಪದೇ ಪದೇ ಬಣ್ಣ ಹಾಕಿ ಒಣಗಿಸಲಾಗುತ್ತೆ.
ಸೀರೆ ಹೇಗೆ ತಯಾರಿಸಲಾಗುತ್ತದೆ?
ಕೊನೆಗೆ ದಾರ ಸಿದ್ದವಾದ ಬಳಿಕ ಆ ಎಳೆಗಳು ಮಗ್ಗಕ್ಕೆ ಹೋಗುತ್ತವೆ. ಪವರ್ ಲೂಮ್ ಮತ್ತು ಹ್ಯಾಂಡ್ ಲೂಮ್‌ನಲ್ಲಿ ರೇಷ್ಮೆ ಸೀರೆಗಳನ್ನು ತಯಾರಿಸಬಹುದು. ಈ ಎಳೆಗಳನ್ನು ಸ್ಥಿರ ಮಾದರಿಯಲ್ಲಿ ನೇಯಲಾಗುತ್ತದೆ. ಈ ಪ್ರಕ್ರಿಯೆಯಿಂದ ಬಟ್ಟೆಯನ್ನು ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ತಯಾರಿಸಲು 4-5 ದಿನಗಳಿಂದ 2-3 ತಿಂಗಳವರೆಗೆ ತೆಗೆದುಕೊಳ್ಳುತ್ತದೆ.

ಸಿಲ್ಕ್ ಮಾರ್ಕ್ ನೋಡಿ ರೇಷ್ಮೆ ಸೀರೆ ಖರೀದಿಸಿ
ನಾವು ಚಿನ್ನ ಖರೀದಿಸುವಾಗ ಹಾಲ್‌ಮಾರ್ಕ್ ನೋಡಿ ಖರೀದಿಸುತ್ತೇವೆ. ಅದೇ ರೀತಿ ರೇಷ್ಮೆ ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ನೋಡುವುದು ಕೂಡ ಮುಖ್ಯ. ಈ ಬಗ್ಗೆ ಹಲವಾರು ವರ್ಷಗಳಿಂದ ಸಿಲ್ಕ್ ಮಾರ್ಕ್ ಆರ್ಗನೈಜೇಷನ್ ಆಫ್ ಇಂಡಿಯಾ ಜಾಗೃತಿ ಮೂಡಿಸುತ್ತಾ ಬಂದಿದೆ.