ಒಂದಾದ ಮೇಲೆ ಒಂದರಂತೆ ವಿವಾದ ಮಾಡಿಕೊಳ್ಳುತ್ತಲೇ ಇರುವ ಗಾಯಕ ಸೋನು ನಿಗಮ್ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ನಲ್ಲಿ ಭಯೋತ್ಪಾದನಾ ದಾಳಿ ಆಯಿತು’ ಎಂದು ಹೇಳಿ ಕನ್ನಡಿಗರನ್ನು ಕೆಣಕಿ ಸುದ್ದಿ ಆಗಿದ್ದರು. ಇದೀಗ ಮತ್ತೊಮ್ಮೆ ಸೋನು ನಿಗಮ್ ಹೆಸರಿನ ಟ್ವಿಟರ್ ಖಾತೆಯಿಂದ ಮಾಡಿದ ಟ್ವೀಟ್ ಒಂದು ಚರ್ಚೆಗೆ ಕಾರಣ ಆಗಿದೆ.

ಹೌದು.. ಬೆಂಗಳೂರಿನ SBI ಬ್ಯಾಂಕ್ನಲ್ಲಿ ಮ್ಯಾನೇಜರ್ ಕನ್ನಡ ಮಾತನಾಡಲು ನಿರಾಕರಿಸಿದ ಘಟನೆ ವಿವಾದ ಸೃಷ್ಟಿಸಿದ್ದು, ಈ ಕುರಿತು ಕನ್ನಡ ಪರ ಹೋರಾಟಗಾರರ ಪ್ರತಿಭಟನೆಗೆ ಮಣಿದ ಮ್ಯಾನೇಜರ್ ಕ್ಷಮೆ ಕೋರಿದ್ದರೂ ಈ ಕುರಿತ ವಿವಾದ ಮಾತ್ರ ಯಾಕೋ ಇನ್ನೂ ತಣ್ಣಗಾಗುವಂತೆ ಕಾಣುತ್ತಿಲ್ಲ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ವಿಷಯದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಸೋನು ನಿಗಮ್ ಮಾಡಿದ ಟ್ವೀಟ್ ಒಂದು ವೈರಲ್ ಆಗಿದೆ.
ಇದನ್ನೂ ಓದಿ: ಕನ್ನಡ ಮಾತನಾಡುವುದಿಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ರಾತ್ರೋರಾತ್ರಿ ಎತ್ತಂಗಡಿ
ತೇಜಸ್ವಿ ಸೂರ್ಯ ಹೇಳಿದ್ದೇನು?
‘ಎಸ್ಬಿಐ ಬ್ಯಾಂಕ್ನ ಬ್ರ್ಯಾಂಚ್ ಮ್ಯಾನೇಜರ್ ಅವರ ಈ ರೀತಿಯ ದುಂಡಾವರ್ತನೆ ಸಹಿಸಲು ಆಗದು. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಅದರಲ್ಲಿಯೂ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರು ಮಾತನಾಡುವ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸತಕ್ಕದ್ದು. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಕನ್ನಡಿಗರನ್ನು ಪರಿಗಣಿಸುವಂತೆ ನಾನು ಸಂಸತ್ತಿನ ಒಳಗೆ ಮತ್ತು ಹೊರಗೆ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಇತ್ತೀಚೆಗಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆಯೂ ನಾನು ಇದನ್ನೇ ಪುನರುಚ್ಚರಿಸಿ, ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದು, ಈ ಕುರಿತಂತೆ DFS ನೀತಿಯಡಿಯಲ್ಲಿಯೇ ನೇಮಕಾತಿ ಕೈಗೊಳ್ಳುವಂತೆ ಎಸ್ಬಿಐ ಬಳಿ ವಿನಂತಿಸುತ್ತೇನೆ. ಈ ರೀತಿಯ ವರ್ತನೆ ತೋರಿರುವ ಬ್ಯಾಂಕ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರ ಬಳಿ ನಾನು ಒತ್ತಾಯಿಸಿದ್ದು, ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಬ್ಯಾಂಕಿಂಗ್ ವಲಯ ಸಿಬ್ಬಂದಿಗಳು ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಅಗತ್ಯತೆ ಇದೆ’ ಎಂದಿದ್ದರು.

ಕನ್ನಡ ಸಿನಿಮಾ ಹಿಂದಿಗೆ ಡಬ್ ಮಾಡಬೇಡಿ: ಸೋನು ನಿಗಮ್
ಸಂಸದ ತೇಜಸ್ವಿ ಸೂರ್ಯರ ಈ ಟ್ವೀಟ್ಗೆ ಸೋನು ನಿಗಮ್ ಕಿಡಿಕಾರಿದ್ದು,‘ಕನ್ನಡ ಸಿನಿಮಾ ಹಿಂದಿಗೆ ಡಬ್ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ. ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೋಬ್ಬ ಭಾಷಾ ಹೋರಾಟಗಾರ ಅಷ್ಟೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಸೋನು ನಿಗಮ್ ಹೀಗೆ ಹೇಳಿದ್ರಾ?
ಅಷ್ಟಕ್ಕೂ, ಸೋನು ನಿಗಮ್ ಹೆಸರಿನ ಟ್ವಿಟರ್ ಖಾತೆಯಿಂದ ಮಾಡಿದ ಟ್ವಿಟ್ ಗಾಯಕ ಸೋನು ನಿಗಮ್ ಅವರದಲ್ಲ. ಸೋನು ನಿಗಮ್ ಟ್ವಿಟರ್ ಬಳಕೆ ಮಾಡೋದು ಬಿಟ್ಟು 7 ವರ್ಷಗಳೇ ಆಗಿವೆ. ಆದರೆ, ಅವರ ಹೆಸರಲ್ಲಿ ಬೇರೊಬ್ಬರು ಖಾತೆ ತೆರೆದಿದ್ದಾರೆ. ಈ ಬಗ್ಗೆ ಸೋನು ನಿಗಮ್ ಪ್ರಶ್ನೆ ಮಾಡಿದ್ದರು. ಆದರೆ, ಆ ವ್ಯಕ್ತಿ ನನ್ನ ಹೆಸರು ಸೋನು ನಿಗಮ್ ಎಂದು ದಾಖಲೆ ನೀಡಿದ್ದರು. ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸೋನು ನಿಗಮ್ಗೆ ಬೈಯ್ಯುತ್ತಿದ್ದಾರೆ.