Connect with us

LATEST NEWS

ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ʼಡಿಜಿಟಲ್‌ ಕಾಂಡೋಮ್‌ʼ !! ಬಳಕೆ ಹೇಗೆ ?

Published

on

ಮಂಗಳೂರು: ತಂತ್ರಜ್ಞಾನವು ಭಾರೀ ಎತ್ತರಕ್ಕೆ ಏರುತ್ತಿದ್ದು, ಇದೀಗ ಕಾಂಡೋಮ್‌ಗಳಿಗೆ ಸಂಬಂಧಿಸಿದಂತೆ ಜರ್ಮನಿ ಮೂಲದ ಕಂಪೆನಿಯೊಂದು ವಿಶಿಷ್ಟ ಆವಿಷ್ಕಾರವೊಂದನ್ನು ನಡೆಸಿ, ಸಂಗಾತಿಗಳ ನಡುವಿನ ಖಾಸಗಿ ಕ್ಷಣಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವಂತಹ ‘ಡಿಜಿಟಲ್‌ ಕಾಂಡೋಮ್‌’ ಅನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಸಂಚಲನ ಸೃಷ್ಠಿಸಿದೆ.

 

ಪ್ರಸ್ತುತ ಎಲ್ಲವೂ ಡಿಜಿಟಲೀಕರಣವಾಗಿದ್ದು, ಡಿಜಿಟಲ್‌ ಕಾಂಡೋಮ್‌ ಸಹ ಬಿಡುಗಡೆಯಾಗಿದೆ. ವಿಚಿತ್ರವಾದರೂ ಇದು ಸತ್ಯ. ಕೆಲವೊಂದು ಬಾರಿ ಕೆಲವರು ತಮ್ಮ ಸಂಗಾತಿಯೊಂದಿಗೆ ಕಳೆಯುವ ಖಾಸಗಿ ಕ್ಷಣಗಳನ್ನು ಅನುಮತಿಯಿಲ್ಲದೆ ವಿಡಿಯೋ ಮಾಡಿ ಅಥವಾ ಫೋಟೋ ಕ್ಲಿಕ್ಕಿಸಿ ಯಾವುದೋ ಸಂದರ್ಭದಲ್ಲಿ ಆ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಾರೆ. ಇಂತಹ ದುರುದ್ದೇಶಗಳನ್ನು ತಪ್ಪಿಸುವ ಉದ್ದೇಶದಿಂದ ಜರ್ಮನ್‌ ಮೂಲದ ಕಂಪೆನಿಯೊಂದು ಡಿಜಿಟಲ್‌ ಕಾಂಡೋಮ್‌ ಅನ್ನು ಬಿಡುಗಡೆ ಮಾಡಿದೆ.

ಡಿಜಿಟಲ್ ಕಾಂಡೋಮ್ ಗೌಪ್ಯತೆಯನ್ನು ಹೇಗೆ ಕಾಪಾಡುತ್ತದೆ ಗೊತ್ತಾ ?

ಇದು ಸಾಮಾನ್ಯ ಕಾಂಡೋಮ್‌ ಅಲ್ಲ. ಬದಲಿಗೆ ಇದೊಂದು ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌‌ ಹೆಸರು “ಕ್ಯಾಮ್ಡೋಮ್‌”. ಇದು ನೀವು ನಿಮ್ಮ ಸಂಗಾತಿಯೊಂದಿಗೆ ಖಾಸಗಿ ಸಮಯವನ್ನು ಕಳೆಯುವಾಗ ನಿಮ್ಮ ಫೋನ್‌ ಅನ್ನು ರಹಸ್ಯ ಮೋಡ್‌ನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಅಂದರೆ ಈ ಸಂದರ್ಭದಲ್ಲಿ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾ ಅಥವಾ ಮೈಕ್ರೋಫೋನ್‌ ರೆಕಾರ್ಡಿಂಗ್‌ ಮಾಡಲು ಆಗುವುದಿಲ್ಲ. ಈ ಮೂಲಕ ಸಂಗಾತಿ ಜೊತೆ ಕಳೆಯುವ ಖಾಸಗಿ ಕ್ಷಣದ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡಲಿದೆ. ಈ ವಿಶಿಷ್ಟ ಕಾನ್ಸೆಪ್ಟ್‌ ಅನ್ನು ಜರ್ಮನಿಯ ಸೆಕ್ಶುವಲ್‌ ಹೆಲ್ತ್‌ ಕಂಪೆನಿಯಾದ “ಬಿಲ್ಲಿ ಬಾಯ್”‌ ಕಂಪೆನಿ ಇನ್ನೋಸಿಯನ್‌ ಬರ್ಲಿನ್ ಸಂಸ್ಥೆಯ ಸಹಯೋಗದೊಂದಿಗೆ “CAMDOM” ಆಪ್ಲಿಕೇಶನ್‌ ಅನ್ನು ಬಿಡುಗಡೆಗೊಳಿಸಿದೆ.

ಡಿಜಿಟಲ್ ಕಾಂಡೋಮ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ ?

ಈ ಅಪ್ಲಿಕೇಶನ್‌ ಅನ್ನು ಬಳಸಲು ತುಂಬಾ ಸುಲಭ ಮತ್ತು ಇದು ಜನರ ಗೌಪ್ಯತೆಯನ್ನು ಕಾಪಾಡುತ್ತದೆ ಎಂದು ಬಿಲ್ಲಿ ಬಾಯ್‌ ಕಂಪೆನಿ ಹೇಳಿದೆ. ಇದನ್ನು ಬಳಸಲು ಮೊದಲು ಬಳಕೆದಾರರು ಅಪ್ಲಿಕೇಶನ್‌ ಅನ್ನು ತೆರೆದು ನಂತರ ಅದರಲ್ಲಿ ವರ್ಚುವಲ್‌ ಬಟನ್‌ ಅನ್ನು ಸ್ವೈಪ್‌ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಫೋನಿನ ಮೈಕ್ರೋಫೋನ್‌ ಮತ್ತು ಕ್ಯಾಮೆರಾ ಆಫ್‌ ಆಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ಏನಾದರೂ ಕ್ಯಾಮೆರಾ ಆನ್‌ ಮಾಡಲು ಪ್ರಯತ್ನಿಸಿದರೆ ಈ ಅಪ್ಲಿಕೇಷನ್‌ ಎಚ್ಚರಿಕೆಯನ್ನು ಕಳುಹಿಸಲು ಅಲಾರಾಂ ಅನ್ನು ಧ್ವನಿಸುತ್ತದೆ. ಅಷ್ಟೇ ಅಲ್ಲದೆ ಈ ಆಪ್‌ ತನ್ನ ಬ್ಲೂಟೂತ್‌ ವ್ಯಾಪ್ತಿಯಲ್ಲಿ ಯಾವುದಾದರೂ ಕ್ಯಾಮೆರಾ ಆನ್‌ ಆಗಿದ್ದರೆ ಆ ಬಗ್ಗೆಯೂ ಎಚ್ಚರಿಕೆಯನ್ನು ನೀಡುತ್ತದೆ. ಈ ಅಪ್ಲಿಕೇಶನ್‌ ಅನ್ನು 30 ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಬಿಲ್ಲಿ ಬಾಯ್‌ ಕಂಪೆನಿ ಹೇಳಿದೆ. ಈ ಅಪ್ಲಿಕೇಶನ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಐಒಎಸ್‌ ಸಾಧನಗಳಲ್ಲೂ ಲಭ್ಯವಾಗಲಿದೆ.

 

DAKSHINA KANNADA

ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿ ಭೇಟಿ ಪೂರ್ವ ನಿಯೋಜಿತ: ಸಚಿವ ದಿನೇಶ್‌ ಗುಂಡೂರಾವ್

Published

on

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿ ಭೇಟಿ ಪೂರ್ವ ನಿಯೋಜಿತ. ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಈ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಚುನಾವಣೆಗಳಿಗೆ ವ್ಯತ್ಯಾಸವಿದೆ. ಉತ್ತರ ಭಾರತದಲ್ಲಿ ಬಿಜೆಪಿ ಹಿಂದೂತ್ವದ ಹೆಸರಿನಲ್ಲಿ ವಿಭಜನೆ ಮಾಡಿ ಅದನ್ನು ಚುನಾವಣೆಗೆ ಬಳಸಿಕೊಳ್ಳುತ್ತದೆ.

ಆದರೆ ದಕ್ಷಿಣ ಭಾರತದಲ್ಲಿ ಈ ವಿಭಜನೆ ನಡೆಯುವುದಿಲ್ಲ. ಕರ್ನಾಟಕದಲ್ಲೂ ಬಿಜೆಪಿಗೆ ಈ ವಿಚಾರ ಇಟ್ಟುಕೊಂಡು ಚುನಾವಣೆ ಗೆಲ್ಲಲು ಆಗಲಿಲ್ಲ. ಬಿಜೆಪಿ ಇಲ್ಲಿ ಯಾವತ್ತು ಗೆದ್ದಿಲ್ಲ. ಆದರೆ ಒಳ್ಳೆ ಫಲಿತಾಂಶ ಪಡೆದುಕೊಂಡಿದ್ದಾರೆ ಎಂದರು.

ಉತ್ತರ ಭಾರತದಲ್ಲಿ ಬೇರೆ ಬೇರೆ ವಿಷಯಗಳ ಮೂಲಕ ಜನರ ದಾರಿ ತಪ್ಪಿಸಿದ ಕಾರಣ ಯಶಸ್ಸು ಸಿಕ್ಕಿರಬಹುದು. ಚುನಾವಣೆ ಸಮೀಪವಿರುವಾಗ ಮಹಿಳೆಯರ ಖಾತೆಗೆ 10 ಸಾವಿರ ರೂಪಾಯಿ ಹಾಕಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೆ ಹೋದರೆ ಮುಂದೆ ಎಲ್ಲಾ ಸರಕಾರಗಳು ಇದನ್ನು ಅನುಸರಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ನ.16ರಂದು ಕರಾವಳಿ ಮೈದಾನದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ

ಕುಂಪಲದಲ್ಲಿ ನಾಯಿ ದಾಳಿಗೆ ವ್ಯಕ್ತಿ ಬಲಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಬೀದಿ ನಾಯಿ ಹಾವಳಿ ತಡೆಗಟ್ಟಲು ಸುಪ್ರೀಂ ಕೋರ್ಟ್ ಹೊಸ ಕಾನೂನು ಘೋಷಣೆ ಮಾಡಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಗಮನಿಸಿ ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಇದರ ಅನುಷ್ಠಾನ ಬಗ್ಗೆ ನಗರ ಪಾಲಿಕೆ, ಸಂಬಂಧ ಪಟ್ಟ ಇಲಾಖೆಗಳು ಚಿಂತನೆ ನಡೆಸುತ್ತವೆ ಎಂದರು.

Continue Reading

DAKSHINA KANNADA

ಕಟೀಲು ಸಪ್ತ ಮೇಳಗಳ ತಿರುಗಾಟ ಆರಂಭೋತ್ಸವ; ವೈಭವದ ಮೆರವಣಿಗೆ

Published

on

ಕಿನ್ನಿಗೋಳಿ : ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳದ ಆರಂಭಕ್ಕೆ ಪೂರ್ವಭಾವಿಯಾಗಿ ಇಂದು(ನ.15) ಬಜಪೆಯಿಂದ ಕಟೀಲಿಗೆ ಏಳೂ ಮೇಳಗಳ ದೇವರ ವೈಭವದ ಮೆರವಣಿಗೆ ನಡೆಯಿತು.

ಮೆರವಣಿಗೆಗೆ ಕೇಂದ್ರ ಸಚಿವರು, ಸ್ವಾಮೀಜಿಗಳು, ಗಣ್ಯರು ಚಾಲನೆ ನೀಡಿದರು. ಬಜಪೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಸೇರಿದಂತೆ ಹಲವು ಮಂದಿ ಗಣ್ಯರು, ಕ್ಷೇತ್ರದ ಆಸ್ರಣ್ಣರು ಉಪಸ್ಥಿತರಿದ್ದರು.

ಮಧ್ಯಾಹ್ನ ಬಜಪೆ ಬಸ್ಸು ನಿಲ್ದಾಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದ್ದ ಮೆರವಣಿಗೆ ವೈವಿಧ್ಯಮಯ ಕಲಾ ಪ್ರಕಾರಗಳ ವೈಭವದೊಂದಿಗೆ ಕಟೀಲು ತಲುಪಿತು.

ಬಜಪೆಯಿಂದ ಚರ್ಚ್‌ವರೆಗೆ ಕಾಲ್ನಡಿಗೆ , ಅಲ್ಲಿಂದ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದವರೆಗೆ ವಾಹನ ಜಾಥಾ ನಡೆದು ಬಳಿಕ ಮತ್ತೆ ಕಟೀಲು ದೇವಳದವರೆಗೆ ಪಾದಯಾತ್ರೆ ನಡೆಯಿತು. ಕಟೀಲು ಮೇಳದ ಏಳೂ ಮೇಳಗಳ ದೇವರ ಕಿರೀಟ ಮತ್ತು ಪೂಜಾ ಸಾಮಗ್ರಿಗಳನ್ನು ಮೆರವಣಿಗೆಯಲ್ಲಿ ಒಯ್ಯಲಾಯಿತು. ಡೋಲು, ಚೆಂಡೆ, ತಾಸೆ, ಕೊಳಲು ವಾದ್ಯ, ಹುಲಿ ವೇಷ, ಕೊಂಬು, ನಾಗಸ್ವರಗಳು ಸಾಥ್ ನೀಡಿದವು.

ಕಲಶವನ್ನು ಹಿಡಿದು ಮಹಿಳಾ ತಂಡಗಳು, ಸಾಲಿಗ್ರಾಮ ಬ್ಯಾಂಡ್, ಹುಲಿ ವೇಷಗಳು, ಉಡುಪಿ ಚೆಂಡೆ, ಶೆಟ್ಟಿಗಾರ್ ಚೆಂಡೆ, ಕೊಂಬುಗಳು, ಶಂಖನಾದ, ಸಣ್ಣ ನಾಗಸ್ವರ ಹಾಗೂ ತಾಸೆ, ಶಿಬರೂರಿನ ಬೆಳ್ಳಿಯ ಕೊಂಬುಗಳು, ಸ್ಯಾಕ್ಸೋಪೋನ್ ಮತ್ತು ಡೋಲಕ್ ತಂಡ, ಕಟೀಲು ಲಿಂಗಪ್ಪ ಸೇರಿಗಾರ ಅವರ ವಾದ್ಯ ಬಳಿಕ ಕಟೀಲು ಮೇಳದ ದೇವರ 8 ಟ್ಯಾಬ್ಲೋಗಳು ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ : ನ.16 ರಿಂದ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ

16 ಭಜನಾ ತಂಡಗಳ 1500ರಷ್ಟು ಭಕ್ತರು ಭಜನೆಯಲ್ಲಿ ಪಾಲ್ಗೊಂಡರು. ಕಲಶ ಹಿಡಿದ ಮಹಿಳೆಯರ ತಂಡಗಳು,  ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿದರು.

Continue Reading

DAKSHINA KANNADA

ನ.16ರಂದು ಕರಾವಳಿ ಮೈದಾನದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ

Published

on

ಮಂಗಳೂರು: ರಾಜ್ಯಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್‌ ಅವರು ಕರಾವಳಿ ಉತ್ಸವ ಮೈದಾನದಲ್ಲಿ ಸಿದ್ಧತೆಗಳನ್ನು ವೀಕ್ಷಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಶುಕ್ರವಾರದಂದು ಬೆಂಗಳೂರಿನಲ್ಲಿ ಸಹಕಾರ ಮಂತ್ರಿ ಹಾಗೂ ಮುಖ್ಯಮಂತ್ರಿಗಳೂ ಆಗಿರುವ ಸಿದ್ಧರಾಮಯ್ಯನವರು ರಾಜ್ಯ ಸಹಕಾರ ಸಪ್ತಾಹ ಉದ್ಘಾಟನೆ ನೆರವೇರಿಸಿದ್ದಾರೆ. ಮೂರನೇ ದಿನದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಸಹಕಾರಿಗಳಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳೆಯರ ಅಭಿವೃದ್ಧಿ ನಿಟ್ಟಿನಲ್ಲಿ ಇಲ್ಲೇ ಕಾರ್ಯಕ್ರಮ ನಡೆಸಲು ಒಪ್ಪಿಕೊಂಡಿದ್ದೇವೆ. ರಾಜ್ಯಮಾತ್ರವಲ್ಲದೇ ದೇಶೀಯ ಮಟ್ಟದಲ್ಲಿ ಜನರಿಗೆ ಮುಟ್ಟುವಂತೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆ ನಡೆಯಲಿದ್ದು, 45 ಸಹಕಾರಿ ಟ್ಯಾಬ್ಲೋ ಪಾಲ್ಗೊಳ್ಳಲಿವೆ. ಬೇರೆ ಬೇರೆ ಜನಪದ ಉತ್ಸವ ತಂಡಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ನಾವು ಕಳೆದ ವರ್ಷಗಳಿಂದ ಸಹಕಾರಿ ಮಾಣಿಕ್ಯ ಪ್ರಶಸ್ತಿ ನೀಡುತ್ತಿದ್ದೇವೆ. 2 ಸಹಕಾರಿ ಸಂಸ್ಥೆ ಮತ್ತು ಒಂದು ಕ್ರೆಡಿಟ್ ಸಹಕಾರಿ ಸಂಸ್ಥೆ ಹೀಗೆ ಮೂರು ಸಂಸ್ಥೆಗಳಿಗೆ ನೀಡುತ್ತಿದ್ದೇವೆ. ಮಹಿಳೆಯರ ಸ್ವಸಹಾಯ ಸಂಘಗಳನ್ನು ಗುರುತಿಸಲಿದ್ದೇವೆ.

ಕೆಎಂಎಫ್‌ 2 ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವರು. ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ಆರಂಭಗೊಂಡು 9.30ಕ್ಕೆ ಬಾವುಟ ಏರಿಸಲಾಗುವುದು. ಒಟ್ಟು 15,000ಕ್ಕೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. 10.30ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ರಾಜೇಂದ್ರ ಕುಮಾರ್ ವಿವರಿಸಿದರು.

ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಶಶಿಕುಮಾರ್ ರೈ ಬಾಲ್ಯೊಟ್ಟು , ದೇವಿಪ್ರಸಾದ್ ಶೆಟ್ಟಿ, ಭಾಸ್ಕರ ಎಸ್ ಕೋಟ್ಯಾನ್, ರವಿರಾಜ್ ಹೆಗ್ಡೆ, ರವೀಂದ್ರ ಕಂಬಳಿ, ಗೋಪಾಲಕೃಷ್ಣ ಭಟ್, ರಮೇಶ್, ವಿ ಆರ್ ರಘು, ಮೋನಪ್ಪ ಶೆಟ್ಟಿ, ಜೈರಾಜ್ ಬಿ ರೈ ಮೊದಲಾದವರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page