ಸ್ಯಾಂಡಲ್ ವುಡ್ : ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಕೇಳ್ಬೇಕಾ? ಅವರ ಸಿನಿಮಾ ನೋಡಲು ಎಲ್ಲರೂ ತುದಿಗಾಲಲ್ಲಿ ಕಾಯುತ್ತಾರೆ. ಅದರಲ್ಲೂ ಅವರ ನಿರ್ದೇಶನ ಅಂದ್ರೆ ಹೇಳೋದೆ ಬೇಡ. ಕುತೂಹಲ ಹೆಚ್ಚಾಗಿರುತ್ತದೆ. ಸದ್ಯ ಉಪ್ಪಿ ‘ಯುಐ’ ಸಿನಿಮಾದಲ್ಲಿ ಬಿಝಿಯಾಗಿರೋದು ಗೊತ್ತಿರುವ ವಿಚಾರ. ಸಿನಿಮಾದ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ರೆ, ಉಪ್ಪಿ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
ಯುಐ ಸಿನಿಮಾ ನಡುವೆ ಗುಡ್ ನ್ಯೂಸ್ ಕೊಟ್ರು ಉಪ್ಪಿ:
ಯುಐ ಉಪ್ಪಿದಾದಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ. ಈಗಾಗಲೇ ಪೋಸ್ಟರ್, ಟೀಸರ್ ನಿಂದ ಭಾರೀ ಸದ್ದು ಮಾಡಿದೆ. ಅಲ್ಲದೇ, ‘ಟ್ರೋಲಾಗುತ್ತೆ’ ಹಾಡಂತೂ ಭಾರೀ ಸದ್ದು ಮಾಡಿದೆ, ಈಗಾಗಲೂ ಜನರ ನಾಲಗೆಯಲ್ಲಿ ನಲಿದಾಡುತ್ತಿದೆ.

ಮನೋಹರ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಯುಐ’ಗೆ ಅಜನೀಶ್ ಲೋಕನಾಥ್ ಸಂಗೀತವಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ಹೊಸ ವಿಚಾರ ಸಿಗಬಹುದಾ ಅಂತ ಕಾದವರಿಗೆ ಈಗ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಉಪ್ಪಿ ಬ್ಲಾಕ್ ಬಾಸ್ಟರ್ ಹಿಟ್ ಚಿತ್ರ ‘ಎ’ ತೆರೆಗೆ ಬರುತ್ತಿದೆ. ಅದೂ ಹೊಸ ರೂಪದಲ್ಲಿ.
ಮತ್ತೆ ಬರುತ್ತಿದೆ ‘ಎ’ :

ಹಳೆ ಚಿತ್ರಗಳು ಮತ್ತೆ ತೆರೆಗೆ ಬರೋದು ಸಾಮಾನ್ಯ. ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ನಟನೆಯ ಪವರ್, ಅಂಜನೀಪುತ್ರ ತೆರೆಗೆ ಬಂದಿದ್ದವು. ಇದೀಗ ಉಪೇಂದ್ರ ಅವರ ‘ಎ’ ಸಿನಿಮಾ ತೆರೆಗೆ ಬರಲಿದೆ. ‘ಎ’ ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಚಿತ್ರ. ಉಪೇಂದ್ರ ನಿರ್ದೇಶಕನಾಗಿ, ಸಹ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದರು. ‘ಎ’ ಚಿತ್ರದ ಮೂಲಕ ಅವರು ನಿರ್ದೇಶನದ ಜೊತೆ ನಾಯಕ ನಟನಾಗಿಯೂ ಕಾಣಿಸಿಕೊಂಡರು. 1998 ರಲ್ಲಿ ಈ ಸಿನಿಮಾ ಬಿಡುಗಡೆಗೊಂಡಿತ್ತು.
‘ಎ’ ಚಿತ್ರ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಚಿತ್ರ ಕನ್ನಡ ಸಿನಿರಂಗದಲ್ಲಿ ಹೊಸ ಅಲೆ ಹುಟ್ಟು ಹಾಕಿತ್ತು. ವಿಭಿನ್ನ ಶೈಲಿಯ ಕಥಾ ನಿರೂಪಣೆ ಜನರಿಗೆ ಇಷ್ಟವಾಗಿತ್ತು. ಸಿನಿಮಾ ನೋಡಿದವರು ಮತ್ತೆ ಮತ್ತೆ ನೋಡಲಾರಂಭಿಸಿದ್ದರು. ಉಪ್ಪಿ ಸಿನಿಮಾವೆಂದರೆ ಒಗಟು…ಅರ್ಥೈಯಿಸಿಕೊಂಡರೆ ಅದರಾಳದ ಜೀವಂತ ಬೇರು ಗೋಚರಿಸುವುದು. ಈ ಚಿತ್ರ ನೋಡಿದವರು ಮತ್ತೆ ಉಪ್ಪಿ ಸಿನಿಮಾಗಳಿಗಾಗಿ ಕಾಯಲಾರಂಭಿಸಿದರು. ಅಷ್ಟರ ಮಟ್ಟಿಗೆ ಸೌಂಡ್ ಮಾಡಿತ್ತು ‘ಎ’.
ಗುರುಕಿರಣ್ ಸಂಗೀತವೂ ಮೋಡಿ ಮಾಡಿತ್ತು. ಚಾಂದಿನೀ…ಎಂದು, ಸುಮ್ ಸುಮ್ನೇ ನಗ್ತಾಳೆ ಎನ್ನುತ್ತಾ…ಮಾರಿ ಕಣ್ಣು ಹೋರಿ ಮ್ಯಾಕೆ ಎಂದು ಜನ ನಲಿದರು. ಹೇಳ್ಕೊಳಕ್ಕೊಂದೂರು ತಲೆ ಮ್ಯಾಗೆ ಒಂದ್ಸೂರು ಎಂದವರು ಇದು ಒನ್ ಡೇ ಮ್ಯಾಚು ಕಣೋ…ಡೆರೆಂಡ್ಯಾವ್..ಡ್ಯಾವ್..ಡ್ಯಾವ್ ಎನ್ನುತ್ತಾ ಮ್ಯೂಸಿಕ್ ನ್ನೂ ಬಾಯಲ್ಲಿ ನುಡಿಸುವ ಮಟ್ಟಿಗೆ ಹಾಡುಗಳು ಕ್ಲಿಕ್
ಆಗಿದ್ದವು. ಈಗಲೂ ಆಗುತ್ತಿದೆ. ಇದು ಎವರ್ ಗ್ರೀನ್ ಸಿನಿಮಾ…ನಿತ್ಯಹರಿದ್ವರ್ಣ ಗೀತೆಗಳ ಚಿತ್ರ.
ಇದನ್ನೂ ಓದಿ : ಬದುಕುಳಿವ ಛಾನ್ಸ್ ಇದ್ದಿದ್ದು ಕೇವಲ ಶೇ. 30 ರಷ್ಟು…ನಿತ್ಯ ಜಗಳ…ಗಾಬರಿ; ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ಗೆದ್ದ ಕಥೆ ಇಲ್ಲಿದೆ
ಯಾವಾಗ ತೆರೆಗೆ?
ಎ ಚಿತ್ರವನ್ನು 1.2 5 ಕೋಟಿಯಲ್ಲಿ ತಯಾರಿಸಲಾಗಿದ್ದು, 20 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.(ಗೂಗಲ್ ಮಾಹಿತಿ) ಇದೀಗ ಮತ್ತೆ ಚಿತ್ರ ಬಿಡುಗಡೆಯಾಗುತ್ತಿದೆ. ಮೇ 17 ರಂದು ತೆರೆಗೆ ಬರಲಿದೆ. ಇವತ್ತಿನ ಕಾಲಕ್ಕೆ ತಕ್ಕ ಹಾಗೆ ಚಿತ್ರವನ್ನು ತಯಾರು ಮಾಡಲಾಗಿದೆ. ಡಿಜಿಟಲ್ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಮತ್ತೆ ಹೇಗೆ ಉಪ್ಪಿ ‘ಎ’ ಸದ್ದು ಮಾಡಲಿದೆ? ಎಷ್ಟು ಕಲೆಕ್ಷನ್ ಮಾಡಲಿದೆ? ಎಂದು ಕಾದು ನೋಡಬೇಕಿದೆ.