ಮಸ್ಕತ್/ಮಂಗಳೂರು: 2016 ರಲ್ಲಿ ಸೇವಾ ಮನೋಭಾವದ ಸಮಾನಾಸಕ್ತದಿಂದ ಮೈದಳೆದ ಬಿರುವ ವಾಟ್ಸಾಪ್ ಗ್ರೂಪ್ ನ ಜವನೆರ್ ಸಂಘಟನೆ ಹಾಗೂ ಇವೆಂಟ್ ಸಂಸ್ಥೆ ಇನ್ಸ್ಪಿರೇಷನ್ ಡಿಸೈನ್ ನ ನೆರಳಲ್ಲಿ ಮಸ್ಕತ್ ನಲ್ಲಿ ಶ್ರೀ ಕಟೀಲು 6 ಮೇಳಗಳ ಆಯ್ದ ಕಲಾವಿದರಿಂದ ಮೇ. 31 ರಂದು ಪ್ರದರ್ಶನಗೊಂಡ ” ಶ್ರೀ ದೇವೀ ಮಹಾತ್ಮೆ” ಯಕ್ಷಗಾನವು ಅಪೂರ್ವ ಯಶಸ್ಸನ್ನು ಕಂಡಿತು.

ಬಯಲಾಟದ ಸಂಪ್ರದಾಯಿಕ ರಂಗಸ್ಥಳ, ಸಂಘಟಕರೇ ಅಣಿಗೊಳಿಸಿದ ರಥ ಪೀಠ, ಉಯ್ಯಾಲೆ, ಪುಷ್ಪ ಅಲಂಕಾರ, ಬ್ಯಾಂಡ್ ಗರ್ನಲ್, ಹಗಲು ಬತ್ತಿ, ಸುಡುಮದ್ದು ಬಳಸದೆ ತಾಂತ್ರಿಕ ನೈಪುಣ್ಯತೆಯಿಂದ ಗೌಜಿಯ ಬಯಲಾಟ ಸಂಪನ್ನಗೊಂಡಿತು.
ಮೂರು ದೀಪ ಬೆಳಗಿ ಉದ್ಘಾಟನೆ
ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಪುಷ್ಪ ಅಲಂಕಾರದ ಸುಂದರ ಚಿತ್ರವನ್ನು ಚೌಕಿ ಪೂಜೆಗೆ ಅಣಿಗೊಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ” ಅಬ್ಬರ ತಾಳ ” ದೊಂದಿಗೆ ಸಭಾಂಗಣವನ್ನು ಮುಂಗಡ ಉಚಿತ ಪಾಸ್ ಪಡೆದು, ಪ್ರಸಾದ ಭೋಜನ ಸ್ವೀಕರಿಸಿ ಬರುವ ಯಕ್ಷಗಾನ ಆಸಕ್ತರಿಗೆ ಮುಕ್ತಗೊಳಿಸಲಾಯಿತು. ‘ಕೇಳಿ ಬಡಿಯುವ’ ಸಮಯದಲ್ಲಿ ಮುಕ್ಕಾಲು ಸಭಾಂಗಣ ತುಂಬಿತ್ತು.
ಸಂಘಟಕ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ಸ್ವಾಗತಿಸಿದರು. ಅಕ್ಷತಾ ರಿಷಿಕೇಶ್ ಪ್ರಸ್ತಾವನೆ ಗೈದರು. ಶಾಂತ ರಾಮ ಅಮೀನ್ ನಾನಿಲ್, ಲೀಲಾ ಶೇಖರ್ ಸಾಲಿಯಾನ್, ಸುಚೇತನಾ ಕೆ. ಅಂಚನ್ ಹಾಗೂ ಅತಿಥಿಗಳು ಮೂರು ದೀಪಗಳನ್ನು ಏಕಕಾಲದಲ್ಲಿ ಪ್ರಜ್ವಲಿಸಿದರು.

ಬಿರುವ ಜವಾನೆರ್‌ನ ಎಂಟು ವರ್ಷ ಗಳ ಸೇವಾಯಾನ ಹಾಗೂ ಸಂಘಟಿಸಿದ ಕಲಾ ಕಾರ್ಯಕ್ರಮ ಗಳ ಮಾಹಿತಿಯನ್ನು ಒಳಗೊಂಡ ” ಮೆಮರೀಸ್ ” ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕಾಗಿ ಭಾರತದಿಂದ ಬಂದ ಮುಂಬೈಯ ಸೂರ್ಯ ಪ್ರಕಾಶ್ ಜಯಸುವರ್ಣ, ಮಿತ್ರ ಹೆರಾಜೆ, ಗಂಗಾಧರ್ ಪೂಜಾರಿ, ಅನಂದ ಸನಿಲ್, ನಮ್ಮ ಕುಡ್ಲ ಲೀಲಾಕ್ಷ ಬಿ ಕರ್ಕೇರ ಇವರನ್ನು ಓಮಾನ್ ಲಾಂಛನ ಪ್ರತಿಕೃತಿ ನೀಡಿ ಗೌರವಿಸಲಾಯಿತು.

ಮಂಗಳೂರು ಕುದ್ರೋಳಿ ದೇವಸ್ಥಾನ ದ ಸಮೀಪ ನಿರ್ಮಾಣ ಆಗಲಿರುವ ಶ್ರೀನಾಥ್ ಹೆಬ್ಬಾರ್ ಅವರ ಲ್ಯಾಂಡ್ ಟ್ರೇಡರ್ಸ್ ನ 33 ಮಹಡಿಗಳ ” ಮಹಾಲಕ್ಷ್ಮಿ” ವಸತಿ ಸಮುಚ್ಚಯದ ಬಗ್ಗೆ ಮೋಹನ್ ದಾಸ್ ಸಾಲಿಯಾನ್ ಪಚ್ಚನಾಡಿ ಮಾಹಿತಿ ನೀಡಿದರು. ಅರ್ಥ ಶಾಸ್ತ್ರಜ್ಞ ಡಾ. ಅಂಚನ್ ಉದ್ಯಮಿ ಗಳಾದ ಸಿ. ಕೆ, ಉಮೇಶ್ ಬಂಟ್ವಾಳ್, ನರೇಶ್ ಪೈ ಶುಭ ಹಾರೈಕೆ ಮಾಡಿದರು. ಸುರೇಶ ಭಟ್, ವಾಲ್ಟರ್ ಎಮ್ ಪಿರೇರಾ, ಅಚಲ್ ಮಹಾಬಲ ಶೆಟ್ಟಿ, ದಿನೇಶ್ ಲೋಕನಾಥ್ ಪೂಜಾರಿ, ಶಿವಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.
ಇನ್ಸ್ಪಿರೇಷನ್ ಡಿಸೈನ್ ನ ಉತ್ತಮ್ ಕೋಟ್ಯಾನ್ ಧನ್ಯವಾದ ಸಮಾರ್ಪಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಅಗರಿ ಶ್ರೀನಿವಾಸ ಭಾಗವತ ವಿರಚಿತ “ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಬಯಲಾಟವು ಬಲಿಪ ಪ್ರಸಾದ ಭಾಗವತ ಹಾಗೂ ದೇವೀ ಪ್ರಸಾದ ಆಳ್ವ ತಲಪಾಡಿ ಇವರು ಭಾಗವತಿಕೆಯಲ್ಲಿ ಜನರನ್ನು ಮನರಂಜಿಸಿದರು.


ನಿತಿನ್ ಹುನ್ಸೆಕಟ್ಟೆ ಅವರು ಆಯ್ಕೆ ಮಾಡಿದ್ದ ಕಟೀಲು 6 ಮೇಳಗಳ 30 ಕಲಾವಿದರನ್ನು ಒಳಗೊಂಡ ತಂಡದ ಪ್ರಸ್ತುತಿ ಸರ್ವತ್ರ ಶ್ಲಾಘನೆಗೆ ಪಾತ್ರವಾಯಿತು. ಈ ವರ್ಷದ ತಿರುಗಾಟದಲ್ಲಿ ಶ್ರೀ ದೇವಿಯ ಪಾತ್ರ ನಿರ್ವಹಿಸಿದ್ದ ಮೂವರು, ನಾಲ್ವರು ರಕ್ತ ಬೀಜಾಸುರ ಮತ್ತು ಇಬ್ಬರು ಮಹಿಷಾಸುರ ಹಾಗೂ ಚಂಡ ಮುಂಡ ಪಾತ್ರ ನಿರ್ವಹಿಸುವ ನಾಲ್ವರು ಈ ಪ್ರಸಂಗದಲ್ಲಿ ವೇಷಧಾರಿಗಳಾಗಿ ಮಿಂಚಿದ್ದಾರೆ.
ಉದ್ಯಮಿಗಳ ಮನದ ಮಾತು:
ಒಮಾನ್ ನ ಪ್ರಸಿದ್ದ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಮಲ್ಲಾರ್ ಹಾಗೂ ದಿವಾಕರ ಶೆಟ್ಟಿ ಇವರು ಸುಮಾರು 9 ಗಂಟೆಗಳ ಕಾಲ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮನದಾಳದ ಮಾತು ಹಂಚಿಕೊಂಡಿರುವ ಇವರು ಬಿರುವ ಜವನೆರ್ ಸಂಘಟನೆ ಮಸ್ಕತ್ ನಲ್ಲಿ ನಡೆಸಿದ್ದ ಎಲ್ಲಾ ಕಾರ್ಯಕ್ರಮಗಳೂ ಯಶಸ್ಸು ಕಂಡಿದೆ. ಇಂದು ಪ್ರದರ್ಶನಗೊಂಡ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಮಸ್ಕತ್ ನ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಪೂರ್ವ ದಾಖಲೆ ನಿರ್ಮಿಸಿದೆ ಎಂದು ಹೇಳಿದ್ದಾರೆ.

ಒಮಾನ್ ಮಸ್ಕತ್ ನ ರೂಯಿಯ ಆಫಲಾಜ್ ಹೋಟೆಲ್‌ನ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದ ಪ್ರೇಕ್ಷಕರು ಮೂಕ ವಿಸ್ಮಿತ ರಾಗಿ ಕರುನಾಡಿನ ಹೆಮ್ಮೆಯ ತೆಂಕುತಿಟ್ಟು ಯಕ್ಷಗಾನದ ಸವಿಯನ್ನು ಸವಿದಿದ್ದಾರೆ. ಸಭಾ ಕಲಾಪದಿಂದ ತೊಡಗಿ ಮಂಗಳ ಪದ್ಯ ಆದ ನಂತರ ನಡೆದ ಕಲಾವಿದರ ಗೌರವ, ಸನ್ಮಾನವನ್ನೂ ಅಸ್ಥೆಯಿಂದ ವೀಕ್ಷಿಸಿದ ವಿದೇಶದಲ್ಲಿ ನೆಲೆಸಿರುವ ಬಂಧುಗಳ ಕಲಾಸಕ್ತಿ ಕಲಾವಿದರನ್ನೂ ಭಾವುಕರನ್ನಾಗಿಸಿತು.