ತುಳುನಾಡಿನಲ್ಲಿ ಆಚರಿಸುವ ಅರ್ಥಪೂರ್ಣ ಹಬ್ಬ “ಕೆಡ್ಡಸ”. ಮಾತೃ ಭೂಮಿಯನ್ನು ಪೂಜಿಸುವ ಉತ್ಸವ ಇದಾಗಿದ್ದು, ದಕ್ಷಿಣ ಭಾರತದ ತುಳುನಾಡಿನ ಪ್ರದೇಶದಲ್ಲಿ ಭೂಮಿ ಪೂಜೆಯೆಂದೇ ಜನಪ್ರಿಯವಾಗಿದೆ. ಫೆಬ್ರುವರಿ ಮುಕ್ತಾಯದ ದಿನಗಳಲ್ಲಿ ಆಚರಿಸಲಾಗುವ ಪ್ರಮುಖ ಮೂರು ದಿನಗಳ ಉತ್ಸವ ಇದಾಗಿದ್ದು, ತುಳುನಾಡಿನಲ್ಲಿ ವಾಸಿಸುವ ಜನರಲ್ಲಿ ಪ್ರಕೃತಿಯ ಅರಿವು ಮೂಡಿಸುತ್ತದೆ. ಕೆಡ್ಡಸ ಎಂದರೆ ಕೇಟ. ಅಂದರೆ ಬೇಟೆ ಎಂಬ ಅರ್ಥವನ್ನು ನೀಡುತ್ತದೆ. ಇದರಲ್ಲಿ ಮೂರು ವಿಧ ಇದ್ದು, ಕೆಡ್ಡಸ, ನಡು ಕೆಡ್ಡಸ, ಕಡೆ ಕೆಡ್ಡಸ ಎಂದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.

ಕುಟುಂಬದ ಓರ್ವ ವಯಸ್ಸಾದ ಮಹಿಳೆ ಕಡೆ ಕೆಡ್ಡಸದ ಸಮಯದಲ್ಲಿ ಈ ಆಚರಣೆ ಮಾಡಬೇಕು. ಕಡೆ ಕೆಡ್ಡಸದ ದಿನದಂದು ‘ಸಾರ್ನಡ್ಡೆ’ (ತುಳುನಾಡಿನ ಖಾದ್ಯ) ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತುಳಸಿ ಕಟ್ಟೆಯ ಮುಂದೆ ಇಡಬೇಕು. ಮುಂಜಾನೆ ತುಳಸಿ ಕಟ್ಟೆಯ ಸುತ್ತ ಹಸುವಿನ ಸಗಣಿಯನ್ನು ಸಾರಿಸಿ ಸುತ್ತಲು ದೀಪ ಬೆಳಗಬೇಕು. ಜೊತೆಗೆ ಕುಂಕುಮ, ಸೀಗೆ ಕಾಯಿಯನ್ನು ಕಟ್ಟೆಯ ಮುಂದೆ ಬಾಳೆ ಎಲೆಯಲ್ಲಿ ಬಡಿಸುತ್ತಾರೆ. ನಂತರ ತೆಂಗಿನ ಎಣ್ಣೆಯನ್ನು ಮಣ್ಣಿಗೆ ಸುರಿಯಬೇಕು (ಇದು ಭೂಮಿತಾಯಿಗೆ ಮಾಡುವ ಅಭಿಷೇಕ ಎಂಬ ನಂಬಿಕೆ). ಬಳಿಕ ಆ ಹಿರಿ ಮಹಿಳೆ ಸ್ನಾನ ಮಾಡಿ ಬರಬೇಕು.
ಕೆಡ್ಡಸ ಆಚರಣೆ ವಿಧಾನ :
ಕೃಷಿ ಸಂಬಂಧಿಯಾಗಿ ಈ ಕೆಡ್ಡಸ ಹಬ್ಬವನ್ನು ತುಳುವರು ಆಚರಿಸುತ್ತಾರೆ. ಕೃಷಿಯಲ್ಲಿ ಸಮೃದ್ಧಿ ಮತ್ತು ಫಲಾಪೇಕ್ಷೆಯ ಆಶಯದಿಂದ ಈ ಹಬ್ಬದ ಆಚರಣೆ ಮಾಡಲಾಗಿದ್ದು, ಇದನ್ನು ಭೂಮಿ ತಾಯಿಯ ‘ಮಿಯಾದ ಹಬ್ಬ’ ವೆಂದು ಕರೆಯಲಾಗುತ್ತದೆ. ಭೂಮಿಯನ್ನು ಸಾಮಾನ್ಯ ಸ್ತ್ರೀ ಎಂಬಂತ ಪರಿಭಾವಿಸಿ ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಯೋಚಿಸಿ, ಅದರ ಪ್ರಕಾರ ಅವಳನ್ನು ಮಡಿಗೊಳಿಸುವ ದಿನ ಎಂಬುವುದಾಗಿ ಆಚರಿಸಲಾಗುತ್ತದೆ. ಕೆಡ್ಡಸದ ಮೂರು ದಿನ ಕೊಡಲಿ ಏಟು, ಹಾರೆ, ಪಿಕ್ಕಾಸಿಗಳಲ್ಲಿ ಭಅಗೆಯುವಂತಿಲ್ಲ. ಮನೆಯ ಆವರಣವನ್ನು ಸ್ವಚ್ಛ ಮಾಡಿ 7 ಬಗೆಯ ಧಾನ್ಯಗಳನ್ನು ಬೆರೆಸಿ ಬೂತಾಯಿಗೆ ಬಾಳೆಲೆಯಲ್ಲಿ ಇಡುವುದು ಕ್ರಮ. ಭೂದೇವಿಗೆ ವಸ್ತ್ರ, ಗೆಜ್ಜೆ, ಕತ್ತಿ, ಕಲಶ, ಅರಶಿನ, ಕುಂಕುಮ ಇತ್ಯಾದಿಯನ್ನು ಸಾಮಾನ್ಯವಾಗಿ ಇಡಬೇಕೆಂದು ವಾಡಿಕೆ.
ನಲಿಕೆ ಜನಾಂಗದವರ ಕರೆಯೋಲೆ :
“ಸೋಮವಾರ ಕೆಡ್ಡಸ, ಮುಟ್ಟುನೆ ಅಂಗಾರ ನಡು ಕೆಡ್ಡಸ ಬುಧವಾರ ಬಿರಿಪುನೆಪಜಿ ಕಡ್ಪರೆ ಬಲ್ಲಿ ಉನುಂಗೆಲ್ ಪೊಲಿಪ್ಯರೆ ಬಲ್ಲಿ, ಅರಸುಲೆ ಬೋಟೆಂಗ್ಸರ್ವೆರ್ ಉಲ್ಲಾಯನಕುಲು ಪೋವೋಡುಗೆ. ವಲಸಾರಿ ಮಜಲ್ಡ್ ಕೂಡ್ದುವಲಸರಿ ದೇರ್ದ್ದ್ ಪಾಲೆಜ್ಜಾರ್ ಜಪ್ಪುನಗ ಉಳ್ಳಾಲ್ದಿನಕುಲು ಕಡಿಪಿ ಕಂಜಿನ್ ನೀರ್ಡ್ ಪಾಡೋದು. ಓಡುಡ್ ಕಡೆವೊಡು, ಕಲ್ಲ್ ಡ್ ರೊಟ್ಟಿ ಪತ್ತವೊಡು. ಮಲ್ಲ ಮಲ್ಲ ಮೃರ್ಗೊಲು ಜತ್ತ್ದ್ ಬರ್ಪ. ಕಟ್ಟ ಇಜ್ಜಾಂದಿ ಬೆಡಿ, ಕದಿ ಕಟ್ಟಂದಿನ ಪಗರಿ, ಕೈಲ ಕಡೆಲ ಪತ್ತ್ದ್ಉಜ್ಜೆರ್ಗೊಂಜಿ ಎರ್ಪು ಏರ್ಪಾದ್ಇಲ್ಲ ಬೇತ್ತಡಿತ್ ಉಂತೊಂದು ಮುರ್ಗೊಲೆಗ್ ತಾಂಟಾವೊಡು. ಮಲ್ಲ ಮಲ್ಲ ಮುರ್ಗೊಲೆನ್ ಜಯಿಪೊಡು.ಎಂಕ್ ಅಯಿತ ಕೆಬಿ, ಕಾರ್, ಕೈ,ಉಪ್ಪು, ಮುಂಚಿ, ಪುಳಿ ಕೊರೊಡು” ಎಂದು ಕರಾವಳಿಯ ನಲಿಕೆ ಜನಾಂಗದವರು ಮನೆಮನೆಗೆ ತೆರಳಿ ಕರೆ ನೀಡುತ್ತಾರೆ.
ಕೆಡ್ಡಸ ವಿಶೇಷ ಆಹಾರ :
ಕುಡು ಅರಿ (ನನ್ಯೆರಿ) ಕೆಡ್ಡಸ ಸಮಯದಲ್ಲಿ ಕುಡು ಅರಿ (ಹುರುಳಿ, ಹೆಸರು ಕಾಳು, ಒಣಗಿದ ತೆಂಗಿನಕಾಯಿ, ಕುಚ್ಚುಲಕ್ಕಿ), ಬೆಲ್ಲ ಮತ್ತು ಕಡಲೆಕಾಯಿಗಳ ಮಿಶ್ರಣವನ್ನು ಎಲ್ಲರಿಗೂ ಹಂಚಲಾಗುತ್ತದೆ. ಏಕೆಂದರೆ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಬಹಳಷ್ಟು ಪೌಷ್ಟಿಕಾಂಶಗಳನ್ನು ಮತ್ತು ಎಣ್ಣೆ ಅಂಶಗಳನ್ನು ಇದು ಒದಗಿಸುತ್ತದೆ. ಈ ಮಿಶ್ರಣವು ದೇಹವು ಚಟುವಟಿಕೆಯಿಂದ ಇರಲು ಸಹಾಯವಾಗುತ್ತದೆ. ಕೋಟಿ-ಚೆನ್ನಯ, ಮುಗೇರ್ಲು, ಉಳ್ಳಾಕುಲು ಈ ದೈವಗಳನ್ನು ಮನಸಾರೆ ನೆನೆದುಕೊಂಡು ಆಚರಿಸಲಾಗುತ್ತದೆ.