ಬೆಂಗಳೂರು: ರಾತ್ರಿ 11 ಗಂಟೆ ನಂತರ ರಸ್ತೆಯಲ್ಲಿ ಹೋಗುತ್ತಿದ್ದ ದಂಪತಿಗೆ ಹೊಯ್ಸಳ ಪೊಲೀಸರು ದಂಡ ಹಾಕಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರು ನಿವಾಸಿ ಕಾರ್ತಿಕ್ ಪಾತ್ರಿ ಮತ್ತು ಅವರ ಪತ್ನಿ ಸ್ನೇಹಿತರ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆ ಮುಗಿಸಿ ಮನೆಗೆ ಹೋಗುತ್ತಿದ್ದು, ಈ ವೇಳೆ ಹೊಯ್ಸಳ ಗಸ್ತು ವಾಹನದಲ್ಲಿದ್ದವರು ತಡೆದು ಐಡಿ ಕಾರ್ಡ್ ಕೇಳಿದ್ದಾರೆ.
ತಕ್ಷಣ ಮೊಬೈಲ್‍ನಲ್ಲಿದ್ದ ಆಧಾರ್ ಕಾರ್ಡ್ ತೋರಿಸಿದ್ದು,ತಕ್ಷಣ ಪೊಲೀಸರು ಮೊಬೈಲ್ ಫೋನ್ ತೆಗೆದುಕೊಂಡು ನಮ್ಮ ಉದ್ಯೋಗದ ಮಾಹಿತಿ, ಸಂಬಂಧ, ಹೆತ್ತವರ ಬಗ್ಗೆ ಮಾಹಿತಿ ಕೇಳಿದ್ದಾರೆ.
ಎಲ್ಲಾ ಮಾಹಿತಿಯನ್ನು ಕೊಟ್ಟ ಮೇಲೆ ಚಲನ್ ಪುಸ್ತಕದಲ್ಲಿ ಎಲ್ಲಾ ಬರೆದುಕೊಂಡು 11 ಗಂಟೆ ಮೇಲೆ ಯಾಕೆ ತಿರುಗಾಡುತ್ತಿದ್ದೀರಾ, ತಿರುಗಾಡುವಂತಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಈ ರೀತಿ ರೂಲ್ಸ್ ಇದೆ ಎಂದು ನಮಗೆ ಅರಿವಿರಲಿಲ್ಲ ಎಂದು ದಂಪತಿ ಹೇಳಿದಾಗ ಈ ಹಿನ್ನೆಲೆಯಲ್ಲಿ ಹೊಯ್ಸಳ ವಾಹನದಲ್ಲಿದ್ದ ಪೊಲೀಸರು ಮೂರು ಸಾವಿರ ದಂಡ ಕಟ್ಟಿ ಅಂತಾ ಕೇಳಿದ್ದಾರೆ. ಅಷ್ಟು ದುಡ್ಡಿಲ್ಲ ಅಂದಾಗ ಕೇಸ್ ಹಾಕುತ್ತೇವೆ. ಸುಮ್ನೆ ಬಿಡಲ್ಲ ಅಂತಾ ದಂಪತಿಗೆ ಪೊಲೀಸರು ಅವಾಜ್ ಹಾಕಿದ್ದಾರೆ. ಅಷ್ಟರಲ್ಲಿ ಕಾರ್ತಿಕ್ ಪತ್ನಿ ಕಣ್ಣೀರು ಹಾಕಿ ಬಿಟ್ಟುಬಿಡುವಂತೆ ಕೋರಿದ್ದಾರೆ.
ಕೊನೆಗೆ 1,000 ರೂಪಾಯಿಯ ದಂಡ ಕಟ್ಟುತ್ತೇನೆ ಅಂತಾ ಕಾರ್ತಿಕ್ ಹೇಳಿ ದಂಡ ಕಟ್ಟಿ ಬಂದಿದ್ದಾರೆ ಎನ್ನಲಾಗಿದೆ.
ಈ ರೀತಿ ಪೊಲೀಸರು ವರ್ತಿಸುವುದನ್ನು ಖಂಡಿಸಿ ಕಾರ್ತಿಕ್ ಅವರು ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಉತ್ತರ ಡಿಸಿಪಿ ಅನುಪ್ ಎ ಶೆಟ್ಟಿ, ಕಾರ್ತಿಕ್ ಅವರಿಗೆ ನಿಖರವಾದ ಸ್ಥಳ ಮತ್ತು ಸಂಪೂರ್ಣ ವಿವರಗಳನ್ನು ನೀಡುವಂತೆ ಕೇಳಿಕೊಂಡಿದ್ದು, ಕಾರ್ತಿಕ್ ಅವರ ಸಂಪರ್ಕ ವಿವರಗಳನ್ನು ಕೇಳಿದ ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸರೂ ಪ್ರತಿಕ್ರಿಯಿಸಿದ್ದಾರೆ.
ಕಾರ್ತಿಕ್ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೇರಿದಂತೆ ಅನೇಕರಿಂದ ಕ್ರಮ ಕೈಗೊಳ್ಳುವಂತೆ ಡಿಸಿಪಿಗೆ ಮನವಿ ಮಾಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಡಿಸಿಪಿ ಅನೂಪ್ ಎ ಶೆಟ್ಟಿ, ಮೇಲ್ನೋಟಕ್ಕೆ ಹೊಯ್ಸಳ ಸಿಬ್ಬಂದಿ ಹಣ ಪಡೆದಿರೋದು ಗೊತ್ತಾಗಿದೆ. ಕ್ಯೂ ಆರ್ ಕೋಡ್ ಮೂಲಕ 1 ಸಾವಿರ ರೂ. ಹಣ ಲಂಚ ಪಡೆದಿದ್ದಾರೆ. ಮೊದಲು ಡಾಕ್ಯುಮೆಂಟ್‍ಗಳನ್ನು ಕೇಳಿದ್ದಾರೆ.
ಡಾಕ್ಯುಮೆಂಟ್ ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ ದಂಡ ಹಾಕುವುದಾಗಿ ಬೆದರಿಸಿದ್ದಾರೆ. ಬಳಿಕ 1 ಸಾವಿರ ದಂಡದ ರೂಪದಲ್ಲಿ ಲಂಚ ಪಡೆದಿದ್ದಾರೆ ಎಂದರು.
ಘಟನೆಗೆ ಸಂಬಂಧಿಸಿ ಹೆಚ್.ಸಿ ರಾಜೇಶ್ ಹಾಗೂ ಪಿಸಿ ನಾಗೇಶ್ ಇಬ್ಬರನ್ನು ಅಮಾನತು ಮಾಡಿದ್ದು, ತನಿಖೆ ನಡೆಸುತ್ತಿದ್ದೇವೆ. ತನಿಖೆ ಪೂರ್ಣವಾದ ಬಳಿಕ ಸತ್ಯಾಂಶ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.