ಮಂಗಳೂರು/ಮುಂಬೈ : ನ್ಯೂಝಿಲೆಂಡ್ ವಿರುದ್ದ ಹೀನಾಯ ಸೋಲು, ಆಸ್ಟ್ರೇಲಿಯಾ ವಿರುದ್ದದ ಶೋಚನೀಯ ಸೋಲುಗಳ ಬಳಿಕ ಬಿಸಿಸಿಐ ಎಚ್ಚೆತ್ತುಕೊಂಡಿದೆ.

ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಬಿಸಿಸಿಐ ಪರಿಶೀಲನಾ ಸಭೆ ನಡೆಸಿದೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಟೀಂ ಇಂಡಿಯಾ ಆಟಗಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಪಂದ್ಯವಾಳಿಗಳ ಸಂದರ್ಭಗಳಲ್ಲಿ ಆಟಗಾರರೊಂದಿಗೆ ಕುಟುಂಬ ವರ್ಗದವರಿಗೆ ಎರಡು ವಾರಗಳವರೆಗೆ ಮಾತ್ರ ಇರಲು ಅವಕಾಶವಿರುತ್ತದೆ. ಅಂದರೆ ಒಂದುವರೆ ತಿಂಗಳ ಪ್ರವಾಸದ ಅವಧಿಯಲ್ಲಿ ಆಟಗಾರರ ಪತ್ನಿಯರು ಅಥವಾ ಗೆಳತಿಯರು 2 ವಾರಗಳವರೆಗೆ ಮಾತ್ರ ಆಟಗಾರರೊಂದಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಪಂದ್ಯಾವಳಿಗಳ ಸಮಯದಲ್ಲಿ ಆಟಗಾರರು ಕುಟುಂಬದ ಜೊತೆ ಸಮಯ ಕಳೆಯುವುದನ್ನು ಬಿಸಿಸಿಐ ನಿರ್ಬಂಧಿಸಲಿದೆ.
ಅಲ್ಲದೆ ತಂಡದ ಬಸ್ ಗಳಲ್ಲಿ ಆಟಗಾರರು ಒಟ್ಟಿಗೆ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಟಗಾರರು ಹೆಚ್ಚುವರಿ ಲಗೇಜ್ ಗೆ ಹಣ ನೀಡುವಂತೆಯೂ ಕೇಳಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ 1-3 ಅಂತರದಲ್ಲಿ ಸೋಲನ್ನಪ್ಪಿತ್ತು. ಇದಕ್ಕೆ ಆಸ್ಟ್ರೇಲಿಯಾದ ಮಾಧ್ಯಮಗಳು, ಟೀಮ್ ಇಂಡಿಯಾ ಆಟಗಾರರ ಡ್ರೆಸ್ಸಿಂಗ್ ರೂಮ್ ನಲ್ಲಿ ಆಟಗಾರರ ಮನಸ್ಥಿತಿಯೂ ಆಫ್ ಆಗಿದೆ. ಇದರಿಂದ ರವಿಚಂದ್ರನ್ ಅಶ್ವಿನ್ ನಿವೃತ್ತಿ ತೆಗೆದುಕೊಂಡರು ಎಂದು ಅತಿರೇಕದ ವಿಶ್ಲೇಷಣೆ ಕೊಟ್ಟಿದ್ದವು. ಇದು ಬಿಸಿಸಿಐಗೆ ತೀವ್ರ ಮುಜುಗರ ಉಂಟುಮಾಡಿತ್ತು.
ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್ ಪ್ರೀತ್ ಬುಮ್ರಾ ತಮ್ಮ ಕುಟುಂಬದ ಜೊತೆ ಆಸ್ಟ್ರೇಲಿಯಾ ಪ್ರಮುಖ ನಗರಗಳಲ್ಲಿ ಸುತ್ತಾಡಿದ್ದಾರೆ ಮತ್ತು ಉಳಿದ ಆಟಗಾರರು, ಸಹ ಆಟಗಾರರೊಂದಿಗೆ ಪ್ರಯಾಣಿಸಿದ್ದರು. ಅಲ್ಲದೆ ಭಾರತ ತಂಡವು ಪರ್ತ್ ನಲ್ಲಿ ತಮ್ಮ ಐತಿಹಾಸಿಕ ಗೆಲುವನ್ನು ಕೂಡ ಒಟ್ಟಿಗೆ ಆಚರಿಸಲಿಲ್ಲ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಉಕ್ರೇನ್ ಯುದ್ದದಲ್ಲಿ ರಷ್ಯಾ ಪರ ಹೋರಾಡುತ್ತಿದ್ದ ಕೇರಳದ ವ್ಯಕ್ತಿ ಸಾವು
ಬಿಸಿಸಿಐ ಕೈಗೊಂಡ ನಿಯಮಗಳು
1) ಪಂದ್ಯಾವಳಿಯು 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆಟಗಾರರ ಕುಟುಂಬಗಳು 14 ದಿನಗಳವರೆಗೆ ಮತ್ತು ಕಡಿಮೆ ದಿನಗಳ ಪಂದ್ಯಾವಳಿಗಳಲ್ಲಿ 7 ದಿನಗಳವರೆಗೆ ಮಾತ್ರ ಆಟಗಾರರೊಂದಿಗೆ ಉಳಿಯಲು ಅನುಮತಿ ನೀಡಲಾಗಿದೆ.
2) ಎಲ್ಲಾ ಆಟಗಾರರು ತಂಡದ ಬಸ್ಸ್ ನಲ್ಲೇ ಪ್ರಯಾಣಿಸಬೇಕು.
3) ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ವೈಯಕ್ತಿಕ ಮ್ಯಾನೇಜರ್ ವಿಐಪಿ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಅಥವಾ ತಂಡದ ಬಸ್ಸ್ ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಅಲ್ಲದೆ ಆಟಗಾರರು ಉಳಿದುಕೊಳ್ಳುವ ಹೋಟೆಲ್ ಗಳಲ್ಲಿ ಇರುವಂತಿಲ್ಲ. ಅವರು ಬೇರೆ ಹೋಟೆಲ್ ನಲ್ಲಿ ಉಳಿಯಬೇಕಾಗುತ್ತದೆ.
4) ಆಟಗಾರರ ಲಗೇಜ್ 150 ಕೆಜಿ ಮೀರಿದರೆ, ಬಿಸಿಸಿಐ ಹೆಚ್ಚುವರಿ ಶುಲ್ಕವನ್ನು ಭರಿಸುವುದಿಲ್ಲ, ಬದಲಾಗಿ ಆಟಗಾರರೇ ಅದನ್ನು ಪಾವತಿಸಬೇಕಾಗುತ್ತದೆ.
ಈ ಮೂಲಕ ಆಟಗಾರರನ್ನು ಜವಾಬ್ದಾರಿಯುತ ಸ್ಥಾನದಲ್ಲಿರಿಸಲು ಇಂತಹ ಕಠಿಣ ಕ್ರಮಕೈಗೊಳ್ಳಲು ಬಿಸಿಸಿಐ ಮುಂದಾಗಿದ್ದು, ಈ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ಭಾರತ ತಂಡದ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಚಿಂತಿಸಲಾಗಿದೆ.