ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನ ಗುರುತು ಪತ್ತೆಯಾಗಿದೆ. ಮಾರ್ಚ್ 1 ರಂದು ನಗರದ ಪ್ರತಿಷ್ಠಿತ ಕೆಫೆಯಲ್ಲಿ ಬಾಂಬ್ ಇಡಲಾಗಿತ್ತು. ಇದು ಇಡೀ ದೇಶದಲ್ಲೇ ಆತಂಕ ಹುಟ್ಟಿಸಿತ್ತು. ಇದೀಗ ಈ ಬಾಂಬ್ ಇಟ್ಟಿದ್ದು ತೀರ್ಥಹಳ್ಳಿಯ ಮುಸಾಬೀರ್ ಹುಸೇನ್ ಶಜೀಬ್ ಎಂದು ಗುರುತ್ತಿಸಲಾಗಿದೆ.
ರಾಮೇಶ್ವರಂ ಕೆಫೆ ಸಿಸಿಟಿವಿ ಕ್ಯಾಮರಾ ಹಾಗೂ ಬಸ್ ಇತರ ಸ್ಥಳಗಳಲ್ಲಿರು ಸಿಸಿಕ್ಯಾಮರಾದಲ್ಲಿರುವ ದೃಶ್ಯಗಳನ್ನು ಆಧರಿಸಿ ಆರೋಪಿಯ ಗುರುತು ಪತ್ತೆ ಮಾಡಲಾಗಿದೆ. 800 ಸಿಸಿ ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಶಜೀಬ್ ಭಾವಚಿತ್ರಕ್ಕೂ ಹೊಂದಾಣಿಕೆಯಾಗುತ್ತಿದೆ.
ಹಲವು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿ :
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಒಬ್ಬ ಶಂಕಿತ ಉಗ್ರನಾಗಿದ್ದು ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿ ಎಂದು ರಾಷ್ಟ್ರೀಯ ತನಿಖಾ ದಳ (NIA)ಪತ್ತೆ ಹಚ್ಚಿದೆ. ಹೀಗಾಗಿ ಈ ಸ್ಪೋಟದ ಹಿಂದೆ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಕೈವಾಡ ಇರುವುದು ಖಚಿತವಾಗಿದೆ.
ಶಂಕಿತ ಆರೋಪಿ ಈ ಹಿಂದೆ ಕೂಡ ಹಲವಾರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಶಾಜಿಬ್ ಕೈವಾಡವಿದೆ ಎನ್ನುವುದು ತಿಳಿದು ಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ನಡೆದ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ, ಮಂಗಳೂರು ಕುಕ್ಕರ್ ಸ್ಪೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಬಾಂಬ್ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಪೋಟ ಹಾಗೂ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಗಳಿಗೆ ನಂಟಿದೆ.
ಯಾಕೆಂದರೆ ಮಂಗಳೂರು ಕುಕ್ಕರ್ ಸ್ಪೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗದಲ್ಲಿ ಪತ್ತೆಯಾಗಿದ್ದ ಸ್ಪೋಟಕ ವಸ್ತುಗಳಿಗೂ ಕೆಫೆ ಸ್ಪೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ.
ತಲೆಮರೆಸಿಕೊಂಡಿದ್ದ ಆರೋಪಿ :
ಜನವರಿ ಮತ್ತು ಫೆಬ್ರವರಿಯಲ್ಲಿ ಚೆನ್ನೈನಲ್ಲಿ ತಂಗಿದ್ದ ಮುಸಾವೀರ್ ಹುಸೇನ್ ಶಜೀಬ್ ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿದ್ದಾನೆ ಎನ್ನಲಾಗಿದೆ. ಆದರೆ, ಇದುವರೆಗೂ ಈತನೇ ಸ್ಫೋಟ ನಡೆಸಿದ್ದಾನೆ ಎಂದು ಖಚಿತವಾಗಿ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಈತ ಮಾಸ್ಟರ್ ಮೈಂಡ್ ಕೂಡ ಆಗಿರಬಹುದು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಈತನ ಜೊತೆ ಅಬ್ದುಲ್ ಮತೀನ್ ತಹಾ ಕೂಡ ಇದ್ದ ಎಂಬುದು ಗೊತ್ತಾಗಿದೆ. ಈ ಇಬ್ಬರು ಕೂಡ ಅಲ್ ಹಿಂದ್ ಮಾಡ್ಯೂಲ್ ಕೇಸ್‌ನಲ್ಲಿ ಎನ್‌ಐಎಗೆ ಬೇಕಾಗಿದ್ದು, 2020ರಿಂದಲೂ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ನಾಪತ್ತೆ ದೂರು :
ಬೆಂಗಳೂರಿನಲ್ಲಿ ರೆಡಿಮೆಡ್ ಗಾರ್ಮೆಂಟ್ಸ್ ವ್ಯವಹಾರವನ್ನು ಮುಸಾವೀರ್ ನಡೆಸುತ್ತಿದ್ದ ಎನ್ನಲಾಗಿದೆ. ಆದರೆ, 2019ರಿಂದ ನಾಪತ್ತೆಯಾಗಿದ್ದಾನೆ ಎಂದು ಅವರ ತಾಯಿ ಕೂಡ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅವರ ದೂರಿನಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಮುಸಾವೀರ್ ಹುಸೇನ್ ಶಜೀಬ್ ಅನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದಾದ ಬಳಿಕ ಆತ ನನ್ನನ್ನು ಸಂಪರ್ಕಿಸಿಲ್ಲ, ನಾಪತ್ತೆಯಾಗಿದ್ದಾನೆ. ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು.